ರಾಜ್ಯದಲ್ಲಿ ಅಭಿವೃದ್ದಿಯೋಜನೆಗಳು ಕುಂಠಿತವಾಗಿವೆ.. ಮಾನವೀಯತೆ ಮಾಯಾವಾಗಿದೆ.. ಹೆಚ್.ಡಿ.ಕುಮಾರಸ್ವಾಮಿ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ರಾಜ್ಯದಲ್ಲಿ ಅಭಿವೃದ್ದಿಯೋಜನೆಗಳು ಕುಂಠಿತವಾಗಿದ್ದು ಮಾನವೀಯತೆ ಮಾಯಾವಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಪಟ್ಟಣದ ತಾಲೂಕು ಪಂಚಾಯಿತಿ ಕಚೇರಿ ಆವರಣದಲ್ಲಿ ಭಾರತ ಸರಕಾರದ ಅಡಿಪ್ ಯೋಜನೆಯಡಿಯಲ್ಲಿ ದಿವ್ಯಾಂಗರಿಗೆ ವಿವಿಧ ಸಲಕರಣೆಗಳನ್ನು ವಿತರಣೆ ಮಾಡಿ ಮಾತನಾಡಿದರು. ರಾಜ್ಯದಲ್ಲಿ ಅಭಿವೃದ್ದಿ ಎಂಬುದು ಕಾಣದಾಗಿದ್ದು ಮಾನವೀಯತೆ ಎಂಬುದು ಕಾಣದಾಗಿದೆ ಎಲ್ಲೆಡೆ ಸಾವು ನೋವು ಕುಟುಂಬಗಳ ನಡುವೆ ಸಂಘರ್ಷಗಳಿಗೆ ಕಾರಣವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಕ್ರಮ ಸಂಬಂಧ, ಆಸ್ತಿಗಾಗಿ ಜಗಳ ನಡೆಯುತ್ತಿದ್ದು ಸಾವು ನೋವು ನಡೆಯುತ್ತಿರುವುದು ನಮ್ಮ ದೇಶದ ಸಂಸ್ಕೃತಿಗೆ ತಕ್ಕುದಲ್ಲ ಬೆಳಿಗ್ಗೆ ಎದ್ದರೆ ವಾಹಿನಿಗಳಲ್ಲಿ ಟಿವಿ ಹಾಕಿದರೆ ಬರೀ ಕೆಟ್ಟ ವಿಚಾರಗಳೇ ಬರುವ ಸ್ಥಿತಿ ನಿರ್ಮಾಣವಾಗಿರುವುದು ಸರಿಯಲ್ಲ. ಇಂತಹ ವಾತಾವರಣದಿಂದ ದೂರವಾಗಿ ನೆಮ್ಮದಿಯ ಬದುಕು ನಡೆಸುವ ವಾತಾವರಣ ನಿರ್ಮಾಣ ಮಾಡುವಂತೆ ಮನವಿ ಮಾಡಿದರು.
ತಾಲೂಕಿನ ಎರಡು ಶಾಲಾಕಟ್ಟಡ ನಿರ್ಮಾಣಕ್ಕೆ 65ಲಕ್ಷ, ಕೇಂದ್ರ ಸರಕಾರದ ಆಶ್ರಯದಲ್ಲಿ ರಸ್ತೆ ನಿರ್ಮಾಣ ಸೇರಿದಂತೆ ಒಟ್ಟು 20ಕೋಟಿ ರೂಪಾಯಿಗಳ ವಿವಿಧ ಅಭಿವೃದ್ದಿ ಕಾರ್ಯಕ್ರಮಗಳಿಗೆ ಚಾಲನೆ ನೀಡಿರುವುದಾಗಿ ಹೇಳಿದರು. ಮುಂದಿನ ದಿನಗಳಲ್ಲಿ ಇನ್ನೂ ಹೆಚ್ಚಿನರೀತಿಯಲ್ಲಿ ಕೃಷ್ಣರಾಜನಗರ ತಾಲೂಕು ಮತ್ತು ಮಂಡ್ಯಲೋಕಸಭಾ ಕ್ಷೇತ್ರ ಸೇರಿದಂತೆ ರಾಜ್ಯದ ಅಭಿವೃದ್ದಿಯ ಬಗ್ಗೆ ನನ್ನದೆ ಆದರೆ ಚಿಂತನೆಯನ್ನು ಹೊಂದಿದ್ದು ಜನತೆಯ ಕಷ್ಟುಸುಖಕ್ಕೆ ಭಾಗಿಯಾಗಿ ಕೆಲಸ ಮಾಡುವುದಾಗಿ ಹೇಳಿದರು.

14.10 ಲಕ್ಷ ರೂ ವೆಚ್ಚದಲ್ಲಿ 126 ವಿಕಲಚೇತನರಿಗೆ ವ್ಹೀಲ್‌ಛೇರ್, ಬ್ಯಾಟರಿಚಾಲಿತ ತ್ರಿಚಕ್ರ ವಾಹನ, ವಾಕಿಂಗ್‌ಸ್ಟಿಕ್, ಶ್ರವಣಸಾಧನ, ಸೇರಿದಂತೆ 155 ಅಗತ್ಯ ಸಾಧನ ಸಲಕರಣೇಗಳನ್ನು ವಿತರಣೆ ಮಾಡಿರುವುದಾಗಿ ಹೇಳಿದ ಅವರು, ಈಗಾಗಲೆ ಮಂಡ್ಯದಲ್ಲಿ ನಡೆದ ಕಾರ್ಯಕ್ರಮದಲ್ಲಿ ಅವಳಿ ತಾಲೂಕಿನ 40ಜನ ವಿಕಲಚೇತನರಿಗೆ 1.80ಲಕ್ಷ ಬೆಲೆಯ 40 ತ್ರಿಚಕ್ರ ವಾಹನಗಳನ್ನು ವಿತರಣೆ ಮಾಡಲಾಗಿದೆ ಎಂದರು.
ಸಂಸದರ ಸಿಎಸ್‌ಆರ್ ಯೋಜನೆಯಡಿ 44ಲಕ್ಷ ರೂಪಾಯಿಗಳಲ್ಲಿ ವಿವಿಧ ಗ್ರಾಮಗಳಿಗೆ ಹೈಮಾಸ್ಕ್ ಬೀದಿದೀಪ, 88ಲಕ್ಷ ರೂಪಾಯಿಗಳಲ್ಲಿ ವಿವಿಧ ಬಸ್‌ಶೆಲ್ಟರ್ ಗಳ ನಿರ್ಮಾಣ, ಸಂಸದರ ಎಂಪಿಲ್ಯಾಡ್ಸ್ ಅನುದಾನದಲ್ಲಿ ವಿವಿಧ ಸಮುದಾಯಭವನಗಳಿಗೆ 1.15ಕೋಟಿ, ಆಯುಷ್ಮಾನ್ ಆರೋಗ್ಯ ಮಂದಿರ ಕಟ್ಟಡ ನಿರ್ಮಾಣ ಕಾಮಗಾರಿಗೆ 3.25ಕೋಟಿ ಸೇರಿದಂತೆ ಇನ್ನೂ ವಿವಿಧ ಕಾಮಗಾರಿಗಳಿಗೆ ಅನುದಾನ ನೀಡಿರುವುದಾಗಿ ಹೇಳಿದರು.

ಕಾರ್ಯಕ್ರಮದಲ್ಲಿ ಮಾಜಿ ಸಚಿವ ಸಾ.ರಾ.ಮಹೇಶ್, ವಿಧಾನಪರಿಷತ್ ಸದಸ್ಯ ಸಿ.ಎನ್.ಮಂಜೇಗೌಡ, ವಿವೇಕಾನಂದ, ಮಾಜಿ ಶಾಸಕ ಮಹದೇವ್, ಅಶ್ವಿನ್‌ಕುಮಾರ್, ಜಿ.ಪಂ.ಮಾಜಿ ಸದಸ್ಯ ಅಚ್ಚುತಾನಂದ, ಅಮಿತ್ ದೇವರಹಟ್ಟಿ ನವನಗರ ಹರ್ಬನ್ ಬ್ಯಾಂಕ್ ಅಧ್ಯಕ್ಷ ಅಧ್ಯಕ್ಷ ಕೆ ಎನ್ ಬಸಂತ್, ಚಂದ್ರಶೇಖರ್, ಜಾ.ದಳ ವಕ್ತಾರ ಕೆ.ಎಲ್.ರಮೇಶ್, ವಿಕಲಚೇತನರ ಮತ್ತು ಹಿರಿಯ ನಾಗರೀಕರ ಸಬಲೀಕರಣ ಇಲಾಖೆ ತಾಲೂಕು ಸಂಯೋಜಕ ಕಾಟ್ನಾಳು ಎಲ್.ಹೇಮಂತ್‌ಕುಮಾರ್, ಜಿಲ್ಲಾ ಅಂಗವಿಕಲ ಕಲ್ಯಾಣಧಿಕಾರಿ ಕೆ.ಎಸ್.ರಾಘವೇಂದ್ರ, ತಾ.ಪಂ.ಕಾರ್ಯನಿರ್ವಾಹಣಾಧಿಕಾರಿ ವಿ.ಪಿ.ಕುಲದೀಪ್, ಮತ್ತಿತರ ಮುಖಂಡರು, ಕಾರ್ಯಕರ್ತರು ಅಧಿಕಾರಿಗಳು ಹಾಜರಿದ್ದರು.







