CrimeMysore

ಅರಣ್ಯ ಸಿಬ್ಬಂದಿ ದಾಳಿ ವೇಳೆ ತಲೆಮರೆಸಿಕೊಂಡಿದ್ದ ಬೇಟೆಗಾರನ ಬಂಧನ… ಜಿಂಕೆಕೊಂಬುಗಳು ವಶ

ಹುಣಸೂರು(ಹಿರೀಕ್ಯಾತನಹಳ್ಳಿಸ್ವಾಮಿಗೌಡ): ನಾಗರಹೊಳೆ ಉದ್ಯಾನವನದಲ್ಲಿ ವನ್ಯ ಜೀವಿಯನ್ನು ಬೇಟೆಯಾಡಲು ಹೊಂಚು ಹಾಕುತ್ತಿದ್ದ ಬೇಟೆಗಾರರ ಮೇಲೆ ಅರಣ್ಯ ಸಿಬ್ಬಂದಿ ದಾಳಿ ನಡೆಸಿದ ವೇಳೆ ಪರಾರಿಯಾಗಿದ್ದ ಆರೋಪಿಯನ್ನು ಕೊನೆಗೂ ಅರಣ್ಯಾಧಿಕಾರಿಗಳು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ.

ಹುಣಸೂರು ತಾಲೂಕಿನ ಶೀಡೇನಹಳ್ಳಿ ಗ್ರಾಮದ ಮಂಜೇಗೌಡರ ಪುತ್ರ ಶ್ರೀನಿವಾಸ ಉರುಫ್ ದಾಸ ಬಂಧಿತ ಆರೋಪಿ. ಈತ ತನ್ನ ಸ್ನೇಹಿತರೊಂದಿಗೆ ಏ.11ರಂದು ರಾತ್ರಿ ನಾಗರಹೊಳೆ ಉದ್ಯಾನವನದ ವೀರನಹೊಸಹಳ್ಳಿ ವಲಯದಲ್ಲಿ ವನ್ಯಪ್ರಾಣಿ ಬೇಟೆಯಾ ಡಲು ತೆರಳಿದ್ದನು. ಇವರು ವನ್ಯ ಪ್ರಾಣಿಗಳನ್ನು ಬೇಟೆಯಾಡಲು ಹೊಂಚು ಹಾಕುತ್ತಿರುವ ಬಗ್ಗೆ ಬಂದ ಖಚಿತ ಮಾಹಿತಿ ಮೇರೆಗೆ ಅರಣ್ಯ ಇಲಾಖೆ ಅಧಿಕಾರಿಗಳು ದಾಳಿ ನಡೆಸಿದ್ದರು.

ಈ ಸಂದರ್ಭ  ರಾಮೇಗೌಡ ಅಲಿಯಾಸ್ ಪಿಟೀಲು ರಾಮ ಸಿಕ್ಕಿ ಬಿದ್ದಿದ್ದ. ಆತನನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಿದಾಗ ತಮ್ಮೊಂದಿಗೆ ಬೇಟೆಗೆ ಬಂದಿದ್ದವರ ಬಗ್ಗೆ ಮಾಹಿತಿ ನೀಡಿದ್ದನು. ಹೀಗಾಗಿ ಪರಾರಿಯಾಗಿದ್ದ ಆರೋಪಿಗಳಿಗೆ ಅರಣ್ಯಾಧಿಕಾರಿಗಳು ಬಲೆ ಬೀಸಿದ್ದರು. ಅದರಂತೆ  ಆರೋಪಿ ಶ್ರೀನಿವಾಸ್‌ ಗಾಗಿ ಹುಡುಕಾಟ ನಡೆದಿತ್ತು. ಆತ ಹೊನ್ನೇನಹಳ್ಳಿ ಯಲ್ಲಿರುವ ಬಗ್ಗೆ ಸುಳಿವರಿತ ಅರಣ್ಯಾ ಧಿಕಾರಿಗಳು ನಾಗರಹೊಳೆ ಹುಲಿ ಯೋಜನೆ ನಿರ್ದೇಶಕಿ ಪಿ.ಎ.ಸೀಮಾ, ಎಸಿಎಫ್ ಲಕ್ಷ್ಮಿಕಾಂತ್ ಅವರ ಮಾರ್ಗ ದರ್ಶನದಲ್ಲಿ ದಾಳಿ ನಡೆಸಿದ ವೇಳೆ ಸಿಕ್ಕಿಬಿದ್ದಿದ್ದಾನೆ.

ಆರೋಪಿ ಶ್ರೀನಿವಾಸನನ್ನು ವಶಕ್ಕೆ ಪಡೆದು ಆತನ ಮನೆಯಲ್ಲಿ ಶೋಧ ನಡೆಸಿದಾಗ 5 ಜಿಂಕೆ ಕೊಂಬುಗಳು, 1 ಕಾಡು ಕುರಿ ಕೊಂಬು ಹಾಗೂ ಒಂದು ಕಾಡು ಹಂದಿ ದವಡೆ ಮೂಳೆ ಪತ್ತೆ ಯಾಗಿದ್ದು, ಶ್ರೀನಿವಾಸನನ್ನು ನ್ಯಾಯಾಂಗ ಬಂಧನಕ್ಕೊಪ್ಪಿಸಿದ್ದಾರೆ. ಇನ್ನು ತಲೆಮರೆಸಿ ಕೊಂಡಿರುವ ಶೀಡೇನಹಳ್ಳಿಯ ಯಶ್ವಂತ್, ನೇಗತ್ತೂರಿನ ಸತೀಶ್ ಪತ್ತೆಗೆ ಕ್ರಮ ವಹಿಸ ಲಾಗಿದೆ ಎಂದು ಎಸಿಎಫ್ ಲಕ್ಷ್ಮಿಕಾಂತ್ ತಿಳಿಸಿದ್ದಾರೆ.

ಕಾರ್ಯಾಚರಣೆಯಲ್ಲಿ ಆರ್‌ಎಫ್‌ಓ ವಿನೋದ್‌ಗೌಡ.ಎಸ್, ಉಪವಲಯ ಅರಣ್ಯಾಧಿಕಾರಿಗಳಾದ ನವೀನ್ ಕುಮಾರ್, ಸಹನ ಎಸ್. ಪಾಟೀಲ್, ಶಿಲ್ಪ, ನವೀನ್ ಕುಮಾರ್, ಗಸ್ತು ಅರಣ್ಯಪಾಲಕರಾದ ವೆಂಕಟೇಶ್, ನಾರಾಯಣ್ ರಾವ್, ಶಮಂತ, ಅವಿನಾಶ್, ಶಿಲ್ಪ, ಅರಣ್ಯ ವೀಕ್ಷಕರಾದ ಗಾಯತ್ರಿ, ಶಾಂತ ಕುಮಾ‌ರ್ ಇದ್ದರು.

admin
the authoradmin

Leave a Reply

Translate to any language you want