LatestMysore

ಮಹಿಳಾ ಮೀಸಲಾತಿ  ವಿರೋಧಿಸಿದ ಇಂಡಿಕೂಟದ ವಿರುದ್ಧ ಹುಣಸೂರಲ್ಲಿ ಬಿಜೆಪಿ ಪ್ರತಿಭಟನೆ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ):  ಕಾಂಗ್ರೆಸ್ ನೇತೃತ್ವದ ಇಂಡಿಯಾ ಕೂಟವು ಮಹಿಳಾ ಮೀಸಲನ್ನು ವಿರೋಧಿಸಿದೆ ಎಂದು ಆರೋಪಿಸಿ ತಾಲೂಕು ಬಿಜೆಪಿ ಮಹಿಳಾ ಮೋರ್ಚಾ ವತಿಯಿಂದ ನಗರದಲ್ಲಿ ಪ್ರತಿಭಟನೆ ನಡೆಸಲಾಯಿತು.

ನಗರದ ಸಂವಿಧಾನ ವೃತ್ತದಲ್ಲಿ ಜಮಾವಣೆಗೊಂಡ ಬಿಜೆಪಿ ಮಹಿಳಾ ಹಾಗೂ ಇತರೆ ಘಟಕಗಳವರು ಕಾಂಗ್ರೆಸ್ ವಿರುದ್ಧ ಧಿಕ್ಕಾರ ಮೊಳಗಿಸಿದರು. ಪ್ರತಿಭಟನೆ ನೇತೃತ್ವವಹಿಸಿದ್ದರಾಜ್ಯ ಬಿಜೆಪಿ ಮಹಿಳಾ ಮೋರ್ಚಾ ಉಪಾಧ್ಯಕ್ಷೆ ಪ್ರಫುಲ್ಲಾ ಮಲ್ಲಾಡಿ ಮಾತನಾಡಿ, ”ಕೇಂದ್ರ ಸರಕಾರ ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸುವ ಬಿಲ್‌ ಅನ್ನು ವಿರೋಧಿಸುವ ಮೂಲಕ ಮಹಿಳಾ ಮೀಸಲು ವಿರೋಧಿಗಳೆಂದು ಸಾಬೀತುಪಡಿಸಿದ್ದಾರೆ,” ಎಂದು ಆರೋಪಿಸಿದರು.

”ಕೇಂದ್ರ ಎನ್‌ಡಿಎ ಸರಕಾರ ಎಲ್ಲಾ ಕ್ಷೇತ್ರದಲ್ಲೂ ಮಹಿಳೆಯರಿಗೆ ಶೇ.33 ಮೀಸಲು ಕಲ್ಪಿಸಿ, ಪುರುಷರಷ್ಟೇ ಸಮಾನ ಅವಕಾಶ ಕಲ್ಪಿಸಲು ಸಂಸತ್ತಿನಲ್ಲಿ ವಿಶೇಷ ಅಧಿವೇಶನ ಕರೆದು ಬಿಲ್‌ ಮಂಡಿಸಿ ಚರ್ಚೆಗೆ ಅವಕಾಶ ಕಲ್ಪಿಸಿದ್ದರು. ಆದರೆ, ಪ್ರತಿಪಕ್ಷಗಳು ತಮ್ಮ ರಾಜಕೀಯ ಇಚ್ಛಾಶಕ್ತಿಗಾಗಿ ಮಹಿಳಾ ಮೀಸಲು ಕಾಯಿದೆ ವಿರೋಧಿಸಿ ಮಹಿಳೆ ಯರನ್ನು ಅಡುಗೆ ಮನೆಗೆ ಸೀಮಿತಗೊಳಿಸಿ ದ್ದಾರೆ,” ಎಂದು ದೂರಿದರು.

“ಮಹಿಳೆ ಪ್ರತಿಯೊಂದು ಕ್ಷೇತ್ರದಲ್ಲೂ ಪುರುಷರಷ್ಟೇ ಸಮನಾಗಿ ತೊಡಗಿಸಿ ಕೊಳ್ಳಬೇಕು’ ಎಂದು ವೇದಿಕೆಯಲ್ಲಿ ಭಾಷಣ ಮಾಡುವ ರಾಹುಲ್ ಗಾಂಧಿ ಸದನದ ಒಳಗೆ ಏಕೆ ವಿರೋಧಿಸಿದರು? ಸದನದಲ್ಲಿ ಇವರ ತಾಯಿ ಸೋನಿಯಾಗಾಂಧಿ, ಸಹೋದರಿ ಪ್ರಿಯಾಂಕಾ ಗಾಂಧಿ ಇವರಿಬ್ಬರು ಮಾತ್ರ ನೇತಾರರಂತೆ ಕಂಗೊಳಿಸಬೇಕೇ? ಸಾಮಾನ್ಯ ಮಹಿಳೆ ಮೀಸಲಾತಿ ಸವಲತ್ತು ಬಳಸಿ ಸದನ, ವಿಧಾನಸಭೆ ಪ್ರವೇಶಿಸುವ ಅವಕಾಶವನ್ನು ಉದ್ದೇಶ ಪೂರ್ವಕವಾಗಿ ಇಂಡಿಯಾ ಮೈತ್ರಿಕೂಟದ ರಾಜಕೀಯ ಪಕ್ಷಗಳು ತಿರಸ್ಕರಿಸಿ ಮಹಿಳೆಯರನ್ನು ಅಗೌರವದಿಂದ ಕಂಡಿರುವುದು ದೇಶದ ನಾರಿಶಕ್ತಿಗೆ ಮಾಡಿದ ಅವಮಾನ. ಈಗ ನಡೆದಿರುವ ಚುನಾವಣಾ ಫಲಿತಾಂಶದಲ್ಲೇ ಜನರು ಕಾಂಗ್ರೆಸ್‌ಗೆ ತಕ್ಕ ಉತ್ತರ ನೀಡುವರು,” ಎಂದರು.

ಜಿಲ್ಲಾ ಗ್ರಾಮಾಂತರ ಅಧ್ಯಕ್ಷ ಗಣೇಶ್ ಕುಮಾರಸ್ವಾಮಿ, ಮಾಜಿ ಅಧ್ಯಕ್ಷ ಹನಗೋಡು ಮಂಜುನಾಥ್, ಮಹಿಳಾ ಮೋರ್ಚಾ ಮಹಿಳಾ ಪ್ರಧಾನ ಕಾರ್ಯದರ್ಶಿ ಸವಿತಾ ಚವ್ಹಾಣ್ ಮಾತನಾಡಿದರು.

ಸಂವಿಧಾನ ಸರ್ಕಲ್‌ನಿಂದ ನಿಲ್ದಾಣದ ಮಾರ್ಗವಾಗಿ ಮೆರವಣಿಗೆಯಲ್ಲಿ ಸಾಗಿ ಬಂದು ಕಲ್ಪತರು ವೃತ್ತದಲ್ಲಿ ಮಾನವ ಸರಪಳಿ ನಿರ್ಮಿಸಿ ಇಂಡಿಯಾ ಕೂಟದ ವಿರುದ್ಧ ಧಿಕ್ಕಾರ ಮೊಳಗಿಸಿ ಸಾರ್ವಜನಿಕರ ಗಮನ ಸೆಳೆದರು.

ನಗರ ಬಿಜೆಪಿ ಅಧ್ಯಕ್ಷ ನಾರಾಯಣ್, ಪ್ರಧಾನ ಕಾರ್ಯದರ್ಶಿಗಳಾದ ನಟರಾಜ್, ಸುರೇಶ್, ಹಿರೀಕ್ಯಾತನಹಳ್ಳಿ ಸತೀಶ್, ತಾಲೂಕು ಗ್ರಾಮಾಂತರ ಘಟಕದ ಅಧ್ಯಕ್ಷೆ ಮಂಜುಳ, ರಾಜ್ಯ ಎಸ್‌ಸಿ ಮೋರ್ಚಾ ಮಾಜಿ ಉಪಾಧ್ಯಕ್ಷ ನಾಗರಾಜ್ ಮಲ್ಲಾಡಿ ಬಿಳಿಕೆರೆ ಪ್ರಸನ್ನ, ಅರುಣ್ ಚವ್ಹಾಣ್, ರಾಘವೇಂದ್ರ ಇತರರಿದ್ದರು

admin
the authoradmin

Leave a Reply

Translate to any language you want