LatestNews

ಮೇ 1, ಆಲ್ ಇಂಡಿಯಾ ಬೈಕ್ ಮೆಕ್ಯಾನಿಕಲ್ ಅಸೋಸಿಯೇಷನ್ ನಿಂದ ಬೃಹತ್ ಸಮಾವೇಶ

 12,500ಕ್ಕೂ ಹೆಚ್ಚು ಮೆಕ್ಯಾನಿಕ್‌ಗಳು ಭಾಗವಹಿಸುವ ನಿರೀಕ್ಷೆ

 ಬೆಂಗಳೂರು: ಕರ್ನಾಟಕ ದ್ವಿಚಕ್ರ ವಾಹನ ಕಾರ್ಯಗಾರ ಮಾಲೀಕರು ಮತ್ತು ತಂತ್ರಜ್ಞರ ಸಂಘದಿಂದ ಮೇ 1ರಂದು ಕಾರ್ಮಿಕ ದಿನಾಚರಣೆಯ ಅಂಗವಾಗಿ ಬೆಂಗಳೂರಿನ ಅರಮನೆ ಮೈದಾನದಲ್ಲಿ ಆಲ್ ಇಂಡಿಯಾ ಬೈಕ್ ಮೆಕ್ಯಾನಿಕಲ್ ಅಸೋಸಿಯೇಷನ್ ಬೃಹತ್ ಸಮಾವೇಶ ಆಯೋಜಿಸಲಾಗಿದೆ ಎಂದು ಸಂಘದ ರಾಜ್ಯಾಧ್ಯಕ್ಷ ಕೆ.ಎಸ್. ಪ್ರಸನ್ನ ಕುಮಾರ್ ಗೌಡ ಹೇಳಿದ್ದಾರೆ.

ದೇಶದ ವಿವಿಧ ಭಾಗಗಳಿಂದ 12,500ಕ್ಕೂ ಅಧಿಕ ಮ್ಯಾಕಾನಿಕ್ ಗಳು ಭಾಗವಹಿಸುವ ನಿರೀಕ್ಷೆಯಿದ್ದು, ಅರಮನೆ ಮೈದಾನದ ಗೇಟ್ ನಂ.5ರ ಕಿಂಗ್ಸ್ ಕೋರ್ಟ್ ಪ್ಯಾಲೆಸ್ನಲ್ಲಿ ಮೊದಲು ಆಗಮಿಸುವ 500 ಮಂದಿಗೆ ಉಚಿತವಾಗಿ ಬೈಕ್ ಜನರಲ್ ಸರ್ವೀಸ್ ಮತ್ತು ಆಯಿಲ್ ಚೇಂಜ್ ಮಾಡಿಕೊಡಲಾಗುವುದು. ಜೊತೆಗೆ ದ್ವಿಚಕ್ರ ವಾಹನಗಳ ಅತ್ಯಾಧುನಿಕ ಬಿಡಿ ಪರಿಕರಗಳ ವೈವಿಧ್ಯಮಯ ಪ್ರದರ್ಶನ ಏರ್ಪಡಿಸಲಾಗಿದೆ ಎಂದರು.

ಸಭಾಧ್ಯಕ್ಷ ಯು.ಟಿ. ಖಾದರ್ ಸಮಾವೇಶ ಉದ್ಘಾಟಿಸಲಿದ್ದು, ಮುಖ್ಯಮಂತ್ರಿ ಸಿದ್ದರಾಮಯ್ಯ, ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಸಾರಿಗೆ ಸಚಿವ ರಾಮಾಲಿಂಗಾ ರೆಡ್ಡಿ, ಕಾರ್ಮಿಕ ಸಚಿವ ಸಂತೋಷ್ ಲಾಡ್ ಮತ್ತಿತರರು ಸಮಾವೇಶದಲ್ಲಿ ಭಾಗವಹಿಸಲಿದ್ದಾರೆ. ಇದು ದ್ವಿಚಕ್ರ ವಾಹನ ತಂತ್ರಜ್ಞರ ಕ್ಷೇತ್ರದಲ್ಲಿ ದೇಶದ ಮಟ್ಟದಲ್ಲಿ ನಡೆಯುವ ಅತಿ ದೊಡ್ಡ ಸಮಾವೇಶಗಳಲ್ಲಿ ಒಂದಾಗಿದೆ. “ಈ ಸಮಾವೇಶವು ಕೇವಲ ಒಂದು ಕಾರ್ಯಕ್ರಮವಲ್ಲ, ದೇಶವನ್ನು ಚಲಿಸುವ ಕೈಗಳ ಸಂಭ್ರಮವಾಗಿದೆ. ತಂತ್ರಜ್ಞರ ಕೌಶಲ್ಯ ವೃದ್ಧಿ, ಜಾಲ ನಿರ್ಮಾಣ ಮತ್ತು ಹೊಸ ತಂತ್ರಜ್ಞಾನವನ್ನು ಪರಿಚಯಿಸಲಾಗುತ್ತಿದೆ ಎಂದರು.

ಸಮಾವೇಶದಲ್ಲಿ ಆಧುನಿಕ ಡಯಾಗ್ನೋಸ್ಟಿಕ್ ಸಾಧನಗಳು, ಬಿಡಿ ಪರಿಕರಗಳು, ತಂತ್ರಜ್ಞಾನ ಪ್ರದರ್ಶನ ಏರ್ಪಡಿಸಲಾಗಿದೆ. ಉಚಿತ ಸೇವಾ ಶಿಬಿರ ಆಯೋಜಿಸಿದ್ದು, ಸಾರ್ವಜನಿಕರಿಗೆ ಉಚಿತ ದ್ವಿಚಕ್ರ ವಾಹನ ತಪಾಸಣೆ ಮತ್ತು ಆಯಿಲ್ ಬದಲಾವಣೆ ಮಾಡಿಕೊಡಲಾಗುವುದು. ಉತ್ಪಾದಕರು, ತಜ್ಞರು ಮತ್ತು ವರ್ಕ್‌ಶಾಪ್ ಮಾಲೀಕರ ನಡುವೆ ನೇರ ಸಂವಾದ ಏರ್ಪಡಿಸಲಾಗಿದೆ.

ಈ ಸಮಾವೇಶವು ತಂತ್ರಜ್ಞರ ವೃತ್ತಿಗೆ ಗೌರವ ಮತ್ತು ಗುರುತನ್ನು ನೀಡುವ ದಿಸೆಯಲ್ಲಿ ಮಹತ್ವದ ಹೆಜ್ಜೆಯಾಗಿದ್ದು, ದೇಶದಾದ್ಯಂತದ ಮೆಕ್ಯಾನಿಕ್ ಸಮುದಾಯವನ್ನು ಒಂದೇ ವೇದಿಕೆಯಲ್ಲಿ ಒಗ್ಗೂಡಿಸುವ ಗುರಿ ಹೊಂದಲಾಗಿದೆ ಎಂದರು. ಸುದ್ದಿಗೋಷ್ಠಿಯಲ್ಲಿ ರಾಜ್ಯ ಕಾರ್ಯದರ್ಶಿ ಭಾಸ್ಕರ್ ಜಿ ನಾಯ್ಡು, ಸಲಹೆಗಾರರಾದ ವೆಂಕಟ್ ಶ್ಯಾಮ್, ತಂಡದ ಉಸ್ತುವಾರಿ ವೆಂಕಟೇಶ್ ಬಾಬು, ಕಾರ್ಯಕಾರಿ ಸದಸ್ಯ ಸಾದಿಕ್ ಪಾಶರ್ ಉಪಸ್ಥಿತರಿದ್ದರು

admin
the authoradmin

Leave a Reply

Translate to any language you want