ಪಿರಿಯಾಪಟ್ಟಣ(ರವಿಚಂದ್ರಬೂದಿತಿಟ್ಟು): ಚಿರತೆ ಎಂದಾಕ್ಷಣ ಬೆಚ್ಚಿ ಬೀಳುವ ಸರದಿ ಜನರದ್ದಾಗಿದೆ.. ಈಗಾಗಲೇ ಮಹದೇಶ್ವರಬೆಟ್ಟದ ಬಳಿ ಚಿರತೆ ಬಾಲಕನ ಮೇಲೆ ದಾಳಿ ಮಾಡಿ ಪ್ರಾಣ ತೆಗೆದ ಘಟನೆ ಇನ್ನೂ ಕಣ್ಣಮುಂದೆಯೇ ಹಸಿರಾಗಿದೆ. ಇದೀಗ ಗ್ರಾಮೀಣ ಪ್ರದೇಶದಲ್ಲಿ ಚಿರತೆ ಇರಲಿ ಅದರ ಹೆಜ್ಜೆ ಕಂಡರೂ ಜನ ಹೆದರಿ ಮನೆಯೊಳಗೆ ಸೇರಿಕೊಳ್ಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಹೀಗಿರುವಾಗ ಜಮೀನುಗಳಲ್ಲಿ ಚಿರತೆ ಹೆಜ್ಜೆ ಕಂಡ ರೈತರ ಪರಿಸ್ಥಿತಿ ಏನಾಗಬಹುದು ಎಂಬುದನ್ನು ಒಮ್ಮೆ ಊಹೆ ಮಾಡಿ…
ಹಾಗೆನೋಡಿದರೆ ಕಾಡಂಚಿನ ಗ್ರಾಮಗಳಲ್ಲಿ ಚಿರತೆ ಕಾಣಿಸುವುದು ಹೊಸತೇನಲ್ಲ. ಆದರೆ ಒಮ್ಮೆ ಜಮೀನಿನಲ್ಲಿ ಕಾಣಿಸಿಕೊಂಡರೆ ಅದರಿಂದ ರೈತರ ಮೇಲೆ ಹಲವು ರೀತಿಯ ಪರಿಣಾಮ ಬೀರುತ್ತದೆ. ಇದೀಗ ತಾಲೂಕಿನ ಮಾಲಂಗಿ ಗ್ರಾಮದ ಸುತ್ತಮುತ್ತಲಿನ ಪ್ರದೇಶಗಳಲ್ಲಿ ಚಿರತೆಯ ಹೆಜ್ಜೆ ಗುರುತುಗಳು ಪತ್ತೆಯಾಗಿದ್ದು, ಗ್ರಾಮಸ್ಥರು ತೀವ್ರ ಭೀತಿಗೊಳಗಾಗಿದ್ದಾರೆ.

ಕಳೆದ ಎರಡು ದಿನಗಳಿಂದ ಗ್ರಾಮದ ಹೊರವಲಯದ ಜಮೀನುಗಳಲ್ಲಿ ಚಿರತೆಯ ಸಂಚಾರ ದೃಢಪಟ್ಟಿದ್ದು, ರೈತರು ಹೊಲ-ಗದ್ದೆಗಳಿಗೆ ತೆರಳಲು ಭಯಪಡುವಂತಾಗಿದೆ. ಗ್ರಾಮದ ರೈತರೊಬ್ಬರು ತಮ್ಮ ಜಮೀನಿಗೆ ಹೋದ ಸಂದರ್ಭದಲ್ಲಿ ದೊಡ್ಡ ಗಾತ್ರದ ಹೆಜ್ಜೆ ಗುರುತುಗಳನ್ನು ಗಮನಿಸಿದ್ದಾರೆ. ಈ ವಿಷಯ ಗ್ರಾಮದಾದ್ಯಂತ ಹರಡುತ್ತಿದಂತೆ ಆತಂಕ ಹೆಚ್ಚಾಗಿದೆ. ಗ್ರಾಮದ ಹೊರವಲಯದಲ್ಲಿ ಚಿರತೆಯು ಓಡಾಡುತ್ತಿರುವುದನ್ನು ಕೆಲವರು ಗಮನಿಸಿದ್ದು, ಜಾನುವಾರುಗಳ ಮೇಲೂ ದಾಳಿ ನಡೆಸುವ ಸಂಭವವಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

ಈ ಸಮಯ ಕೃಷಿ ಚಟುವಟಿಕೆಯ ಆರಂಭದ ಸಮಯವಾಗಿದೆ. ಹೀಗಾಗಿ ರೈತರು ಜಮೀನಿನತ್ತ ಧಾವಿಸುವುದು ಮಾಮೂಲಿಯಾಗಿದ್ದು, ಚಿರತೆಯ ಹೆಜ್ಜೆ ರೈತರಲ್ಲಿ ಭಯಹುಟ್ಟಿಸಿದೆ. ಜತೆಗೆ ಗ್ರಾಮದಲ್ಲಿ ಸಂಜೆ ವೇಳೆ ಮಕ್ಕಳು ಮತ್ತು ವೃದ್ಧರು ಮನೆಯಿಂದ ಹೊರಬರಲು ಭಯಪಡುವಂತಾಗಿದೆ. ಆದ್ದರಿಂದ ಅರಣ್ಯ ಇಲಾಖೆಯವರು ಕೂಡಲೇ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಬೇಕು ಮತ್ತು ಚಿರತೆಯನ್ನು ಸೆರೆಹಿಡಿಯಲು ಬೋನು ಅಳವಡಿಸಬೇಕು ಎಂದು ಮಾಲಂಗಿ ಗ್ರಾಮದ ನಿವಾಸಿಗಳು ಒತ್ತಾಯಿಸಿದ್ದಾರೆ.
ಅರಣ್ಯ ಇಲಾಖೆ ಅಧಿಕಾರಿಗಳು ಯಾವ ರೀತಿಯ ಕ್ರಮ ಕೈಗೊಳ್ಳುತ್ತಾರೆ ಎಂಬುದನ್ನು ಕಾದು ನೋಡಬೇಕಾಗಿದೆ.








