ಚಿಕ್ಕಮಗಳೂರು: ಚಿಕ್ಕ ಚಿಕ್ಕ ವಿಚಾರಕ್ಕೆ ಪ್ರಾಣ ಕಳೆದುಕೊಳ್ಳುವ ಘಟನೆಗಳು ನಡೆಯುತ್ತಿದ್ದು, ಇದೀಗ ಚಿಕ್ಕಮಗಳೂರಿನ ಮೂಡಿಗೆರೆ ತಾಲೂಕಿನ ದೇವವೃಂದ ಗ್ರಾಮದ ಯುವತಿಯೊಬ್ಬಳು ತರಕಾರಿ ತಂದಿಟ್ಟರೂ ಸಾಂಬಾರ್ ಏಕೆ ಮಾಡಿಲ್ಲ ಎಂದು ಅಪ್ಪ ಗದರಿದಕ್ಕೆ ಬೇಸರಗೊಂಡು ಪ್ರಾಣ ಕಳೆದು ಕೊಂಡಿರುವ ಘಟನೆ ಬೆಳಕಿಗೆ ಬಂದಿದೆ.
ದೇವವೃಂದ ಗ್ರಾಮದ ನಿವಾಸಿ ಸೌಜನ್ಯ ಪೂಜಾರಿ (22) ಎಂಬಾಕೆಯೇ ಅಪ್ಪ ಬೈದರೆಂದು ಪ್ರಾಣ ಕಳೆದುಕೊಂಡ ಯುವತಿ. ಎಂದಿನಂತೆ ತಂದೆ ತರಕಾರಿಗಳನ್ನು ತಂದಿಟ್ಟು ಊಟಕ್ಕೆ ಸಾಂಬಾರ್ ಮಾಡುವಂತೆ ಹೇಳಿದ್ದರಂತೆ. ಆದರೆ ಸೌಜನ್ಯ ಮಾತ್ರ ಸಾಂಬಾರ್ ಮಾಡದೆ ತೆಪ್ಪಗಿದ್ದಳು. ಊಟಕ್ಕೆ ತಂದೆ ಬಂದಾಗ ಸಾಂಬಾರ್ ಮಾಡದಿರುವುದು ಬೆಳಕಿಗೆ ಬಂದಿದೆ. ಇದರಿಂದ ಕೋಪಗೊಂಡ ತಂದೆ ಮಗಳಿಗೆ ಬೈದಿದ್ದಾರೆ.
ಆ ನಂತರ ಊಟಕ್ಕೆ ಸಾಂಬಾರ್ ಇಲ್ಲದ ಕಾರಣ ಪಕ್ಕದ ಮನೆಯವರ ಬಳಿ ಸಾರು ತೆಗೆದುಕೊಂಡು ಬರಲು ಹೋಗಿದ್ದಾರೆ. ಈ ವೇಳೆ ನೊಂದ ಸೌಜನ್ಯ ನೇಣುಬಿಗಿದುಕೊಂಡು ಪ್ರಾಣಕಳೆದುಕೊಂಡಿದ್ದಾಳೆ.
ಮನೆಗೆ ಹಿಂತಿರುಗಿದ ಅಪ್ಪನಿಗೆ ಮಗಳು ಪ್ರಾಣಕಳೆದುಕೊಂಡಿರುವುದು ಕಾಣಿಸಿದೆ. ಈ ಸಂಬಂಧ ಪೊಲೀಸರಿಗೆ ಮಾಹಿತಿ ನೀಡಿದ ಮೇರೆಗೆ ಸ್ಥಳಕ್ಕೆ ಆಗಮಿಸಿದ ಗೋಣಿಬೀಡು ಪೊಲೀಸರು ಮಹಜರು ನಡೆಸಿದ್ದು, ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ.








