LatestMysore

ಮಕ್ಕಳು ಮೊಬೈಲ್ ನ್ನು ಹೆಚ್ಚು ಬಳಸಿದರೆ ಗೀಳಾಗಬಹುದು ಹುಷಾರ್!

ಹಿರಿಯ ಲೇಖಕಿ ಯಶೋಧ ರಾಮಕೃಷ್ಣ ಕಿವಿಮಾತು

ಮೈಸೂರು: ಅತಿಯಾದರೆ, ಅಮೃತವೂ ವಿಷವಾಗುತ್ತದೆ. ಹಾಗೆಯೇ ಮಕ್ಕಳು ಮೊಬೈಲ್ ಸಾಧನವನ್ನು ಹೆಚ್ಚು ಬಳಸಿದರೆ, ಅದು ಗೀಳಾಗಿ ಬದುಕು ಹಾಳಾಗುತ್ತದೆ. ಆದ್ದರಿಂದ ಮಕ್ಕಳು ಮೊಬೈಲ್ ಸಹವಾಸ ತೊರೆದು ಪುಸ್ತಕ ಓದುವ ಸಂಸ್ಕೃತಿಯ ಬೆಳೆಸಿಕೊಳ್ಳಬೇಕು’ ಎಂದು ಹಿರಿಯ ಲೇಖಕಿ ಯಶೋಧ ರಾಮಕೃಷ್ಣ ಕರೆ ನೀಡಿದರು.

ಅದಮ್ಯ ರಂಗಶಾಲೆಯ ವತಿಯಿಂದ ನಗರದ ವಿಜಯನಗರದ ಮೂರನೇ ಹಂತದಲ್ಲಿರುವ ವಿ.ಕೆ. ಪಬ್ಲಿಕ್ ಸ್ಕೂಲ್ ನಲ್ಲಿ ನಡೆದ ‘ವಿಶ್ವ ಪುಸ್ತಕ ದಿನಾಚರಣೆ’ ಸಮಾರಂಭದಲ್ಲಿ ಮಕ್ಕಳಿಗೆ ಸಾಹಿತ್ಯ ಪುಸ್ತಕಗಳನ್ನು ಉಚಿತವಾಗಿ ವಿತರಿಸಿ ಅವರು ಮಾತನಾಡಿದರು.

ಮೊಬೈಲಿನಿಂದ ಮಕ್ಕಳು ದೂರವಿದ್ದಷ್ಟು ಒಳ್ಳೆಯದು. ಇದರಿಂದ ಅಪಾರ ಸಮಯ ಉಳಿತಾಯವಾಗುತ್ತದೆ. ಹೀಗೆ ಉಳಿದ ಸಮಯವನ್ನು ಪುಸ್ತಕ ಓದಲ ಓದಲು, ಆಟ‌ ಆಡಲು, ಸ್ನೇಹಿತರ ಜೊತೆ ಬೆರೆಯಲು  ಬಳಸಬಹುದು. ಆದ್ದರಿಂದ, ‘ಪುಸ್ತಕಂ ಹಸ್ತಂ ಭೂಷಣಂ’ ಎಂಬಂತೆ ಮಕ್ಕಳು  ಕೈಯಲ್ಲಿ ಪುಸ್ತಕ ಹಿಡಿಯಬೇಕು ಎಂದರು.

ಮಕ್ಕಳು ಇಂಗ್ಲಿಷ್ ಮಾಧ್ಯಮದಲ್ಲಿ ವ್ಯಾಸಂಗ ಮಾಡುತ್ತಿದ್ದರೂ ಕನ್ನಡ ಭಾಷೆಯ ಮರೆಯಬಾರದು. ಮಮ್ಮಿ-ಡ್ಯಾಡಿ ಎನ್ನುವ ಬದಲು ಅಪ್ಪ-ಅಮ್ಮ ಎನ್ನಬೇಕು. ಗ್ರಾಮೀಣ ಕ್ರೀಡೆಗಳ ಸೊಗಡನ್ನು ಸವಿಯಬೇಕು. ವಿದ್ಯೆಯ ಮೂಲಕ ವಿನಯ ಮತ್ತು ವಿವೇಕ ಪಡೆದು ಸಮಾಜಕ್ಕೆ ಮಾದರಿಯಾಗುವ ಸಾಧಕ ವ್ಯಕ್ತಿಗಳಾಗಬೇಕು ಎಂದು ಕಿವಿಮಾತು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ಅದಮ್ಯ ರಂಗಶಾಲೆಯ ಗೌರವ ಕಾರ್ಯದರ್ಶಿ ಹಾಗೂ ಸಾಹಿತಿ ಟಿ. ಸತೀಶ್ ಜವರೇಗೌಡ ಮಾತನಾಡಿ ‘ಕನ್ನಡದಲ್ಲಿ ಮಕ್ಕಳಿಗಾಗಿ ಕವಿಗಳು ಕತೆ, ಕಾವ್ಯ, ನಾಟಕ, ಜೀವನ ಚರಿತ್ರೆಗಳನ್ನು ಬರೆದಿದ್ದಾರೆ. ಅಂತಹ ಸಾಹಿತ್ಯ ಪುಸ್ತಕಗಳನ್ನು ಓದುವ ಹವ್ಯಾಸ ಬೆಳೆಸಿಕೊಂಡರೆ, ಅದರಲ್ಲಿನ ಜ್ಞಾನ, ಅನುಭವ, ರಂಜನೆ ಲಭಿಸುತ್ತದೆ ಎಂದರು.

ತಿಂಡಿ ತಿನಿಸು, ಆಟಿಕೆಗಳು ಹಾಗೂ ಹೊಸ ಬಟ್ಟೆಗಳನ್ನು ಕೊಡಿಸುವಂತೆ ಮಕ್ಕಳು ತಮ್ಮ ಪೋಷಕರನ್ನು ಒತ್ತಾಯ ಮಾಡುವಂತೆ, ಸಾಹಿತ್ಯ ಪುಸ್ತಕಗಳನ್ನು ಕೊಡಿಸುವಂತೆ ಒತ್ತಾಯ ಮಾಡಬೇಕು. ಅಂತಹ ಪುಸ್ತಕಗಳನ್ನು ಬಿಡುವಿನ ಸಮಯದಲ್ಲಿ ಓದಬೇಕು. ತಮ್ಮ ಸ್ನೇಹಿತರಿಗೂ ಓದಲು ಕೊಡಬೇಕು ಎಂದು ಸಲಹೆ ನೀಡಿದರು.

ಓದುವ ಹವ್ಯಾಸದ ಜೊತೆಗೆ ಕ್ರೀಡೆ, ಸಂಗೀತ, ಗಾಯನ, ನಾಟಕ, ಸಾಹಿತ್ಯ ರಚನೆಯ ಹವ್ಯಾಸ ಬೆಳೆಸಿಕೊಳ್ಳಬೇಕು. ಇದರಿಂದ ತುಂಬಾ ಉಲ್ಲಾಸ ಸಿಗುತ್ತದೆ. ಜೊತೆಗೆ ಉತ್ತಮ ಗುಣಗಳನ್ನು ಸಹ ಕಲಿಯಬಹುದು ಎಂದು ತಿಳಿಸಿದರು.

ಕಾರ್ಯಕ್ರಮದಲ್ಲಿ ವಿ.ಕೆ. ಪಬ್ಲಿಕ್ ಶಾಲೆಯ ಮುಖ್ಯ ಶಿಕ್ಷಕಿ ಮೆಹರಿನ್ ತಾಜ್, ನಿವೃತ್ತ ಇಂಜಿನಿಯರ್ ರಾಮಕೃಷ್ಣ, ಯುವ ಕವಿ ಜಿ. ರವೀಂದ್ರ ಕುಮಾರ್, ರಂಗಕರ್ಮಿಗಳಾದ  ವಿನೋದ್ ಮೈಸೂರು ಮತ್ತು ಲೋಕನಾಥ್ ಸೋಗುಂ ಉಪಸ್ಥಿತರಿದ್ದರು. ಇದೇ ಸಂದರ್ಭದಲ್ಲಿ ಮಕ್ಕಳಲ್ಲಿ ಸದಭಿರುಚಿ ಓದನ್ನು ಪ್ರೇರೇಪಿಸುವ ಸಾಹಿತ್ಯದ ಪುಸ್ತಕಗಳನ್ನು ಉಚಿತವಾಗಿ ವಿತರಿಸಲಾಯಿತು.

admin
the authoradmin

Leave a Reply

Translate to any language you want