ಕೇರಳ: ಯುವಕನೊಬ್ಬ ತನ್ನ ತಾಯಿಯ ಸಹೋದರಿ(ಚಿಕ್ಕಮ್ಮ) ಮಗಳ ಕತ್ತು ಹಿಸುಕಿ ಪ್ರಾಣ ತೆಗೆದು ಬಳಿಕ ತಾನು ಸಾವಿಗೆ ಶರಣಾಗಿರುವ ಘಟನೆ ಕೋಳಿಕ್ಕೋಡ್ ನ ಮೂಝಿಕ್ಕಲ್ ನಲ್ಲಿ ಮಂಗಳವಾರ ಬೆಳಗ್ಗಿನ 6 ಗಂಟೆಯ ಸಮಯದಲ್ಲಿ ನಡೆದಿದೆ.
ಮೃತರನ್ನು ನಸ್ರೀನಾ ಮತ್ತು ಅದಿನನ್ ಎಂದು ಗುರುತಿಸಲಾಗಿದೆ. ನಸ್ರೀನಾಳು ನಿಸಾರ್ ಮತ್ತು ರಾಮ್ಜಿನಾ ದಂಪತಿ ಅವರ ಪುತ್ರಿಯಾಗಿದ್ದರೆ, ಅದಿನನ್ ಹಮ್ಜಾ ಮತ್ತು ಹಸೀನಾ ಅವರ ಪುತ್ರನಾಗಿದ್ದಾನೆ. ರಾಮ್ಜಿನಾ ಮತ್ತು ಹಸೀನಾ ಸಹೋದರಿಯರಾಗಿದ್ದಾರೆ. ಅದಿನನ್ ಮನೆ ಪುಣೆಯಲ್ಲಿದ್ದು, ತಂದೆ ಹಮ್ಜಾ ಕಣ್ಣೂರಿನಲ್ಲಿ ಕೆಲಸ ಮಾಡುತ್ತಿದ್ದರು. ಇನ್ನು ನಸ್ರೀನಾ ತಂದೆ ನಿಸಾರ್ ವಿದೇಶದಲ್ಲಿದ್ದಾರೆ.
ನಸ್ರೀನಾ ಮತ್ತು ಅದಿನನ್ ಮಾಝಿಕಲ್ ನಲ್ಲಿರುವ ಅಜ್ಜನ ಮನೆಯಲ್ಲಿ ವಾಸವಾಗಿದ್ದರು ಎನ್ನಲಾಗಿದೆ. ಆದರೆ ಕೆಲವೊಂದು ಕಾರಣದಿಂದ ಅದಿನನ್ ಅಜ್ಜನ ಮನೆಯನ್ನು ಬಿಟ್ಟು ಸಮೀಪದ ಬೇರೆ ಮನೆಗೆ ಸ್ಥಳಾಂತರಗೊಂಡಿದ್ದನು. ನಸ್ರೀನಾ ಮಾತ್ರ ಅಜ್ಜನ ಮನೆಯಲ್ಲಿಯೇ ಉಳಿದುಕೊಂಡಿದ್ದಳು ಎಂದು ಹೇಳಲಾಗಿದೆ.
ಇವರ ನಡುವೆ ಅದೇನು ಜಗಳವಾಗಿತ್ತೋ ಗೊತ್ತಿಲ್ಲ. ಅಜ್ಜನ ಮನೆಯಿಂದ ಹೊರ ಹೋದ ಅದಿನನ್ ಮಂಗಳವಾರ ಬೆಳಿಗ್ಗೆ ನಕಲಿ ಬಂದೂಕು ಹಿಡಿದುಕೊಂಡು ಅಜ್ಜನ ಮನೆಯೊಳಗೆ ನುಗ್ಗಿ ಗಲಾಟೆ ಮಾಡಿದ್ದಲ್ಲದೆ, ನಸ್ರೀನಾ ಮೇಲೆ ಹಲ್ಲೆ ಮಾಡಿದ್ದು ಆಕೆಯ ಕತ್ತು ಹಿಸುಕಿ ಕೊಲೆ ಮಾಡಿದ್ದಾನೆ. ಇದಾದ ನಂತರ ಆತನೂ ಸಾವನ್ನಪ್ಪಿದ್ದಾನೆ. ಇದೀಗ ಆತನ ಸಾವು ಆತ್ಮಹತ್ಯೆನಾ ಎಂಬುದು ಗೊತ್ತಾಗಬೇಕಾಗಿದೆ.
ಏಕೆಂದರೆ ಸ್ಥಳೀಯರು ಘಟನೆಯ ಬಗ್ಗೆ ಅನುಮಾನ ವ್ಯಕ್ತಪಡಿಸಿದ್ದಾರೆ. ಅದಿನನ್ ಅವರ ಬಾಯಿಯನ್ನು ಸೆಲ್ಲೋ ಟೇಪ್ ನಿಂದ ಮುಚ್ಚಲಾಗಿತ್ತು ಎಂಬ ಆರೋಪವನ್ನು ಮಾಡಿದ್ದಾರೆ. ಈ ಸಂಬಂಧ ಪ್ರಕರಣ ದಾಖಲಿಸಿಕೊಂಡಿರುವ ಪೊಲೀಸರು ಮುಂದಿನ ಕ್ರಮ ಕೈಗೊಂಡಿದ್ದಾರೆ. ಪೊಲೀಸರ ತನಿಖೆಯಿಂದ ನೈಜ ವಿಷಯವೇನು ಎಂಬುದು ಗೊತ್ತಾಗಬೇಕಿದೆ.








