CinemaLatest

ಕನ್ನಡದ ಮನೆ- ಮನದಲ್ಲಿ ಶಾಶ್ವತವಾಗಿ ನೆಲೆಸಿರುವ ಮಹಾಗಾಯಕ ಡಾ. ಪಿ ಬಿ ಶ್ರೀನಿವಾಸ್… ಇಲ್ಲಿದೆ ಸಂಪೂರ್ಣ ಮಾಹಿತಿ!

(ಏಪ್ರಿಲ್ 14, ಪಿ ಬಿ ಶ್ರೀನಿವಾಸ್ ರವರ ಸಂಸ್ಮರಣಾ ದಿನ)

ಹಳೆಯ ಚಿತ್ರಗೀತೆ ಕೇಳುವಾಗಲೆಲ್ಲ ಪಿ.ಬಿ.ಶ್ರೀನಿವಾಸ್ ನೆನಪಾಗುತ್ತಾರೆ.. ಅವರ ಕಂಠದಿಂದ ಹೊರ ಬಂದ ಹಾಡುಗಳು ತಲೆದೂಗುವಂತೆ ಮಾಡುತ್ತವೆ.. ಇಂತಹ ಮಹಾಗಾಯಕನನ್ನು ನೆನಪು ಮಾಡಿಕೊಳ್ಳುತ್ತಾ ಅವರ ಕುರಿತ ಹತ್ತು ಹಲವು ವಿಚಾರಗಳನ್ನು ಬರಹಗಾರರಾದ  ಕಾಳಿಹುಂಡಿ ಶಿವಕುಮಾರ್ ಅವರು ತೆರೆದಿಟ್ಟಿದ್ದಾರೆ… ಓದಿ ಬಿಡಿ…

ಒಂದು ಚಿತ್ರ ಯಶಸ್ವಿಯಾಗಬೇಕಾದರೆ ಹಾಡುಗಳು ಕೂಡ ಮುಖ್ಯವಾಗುತ್ತವೆ. ಅರ್ಥಪೂರ್ಣ ಸಾಹಿತ್ಯ ಮತ್ತು ಅಷ್ಟೇ ನವಿರಾದ ಸಂಗೀತ ಬೇಕಾಗುತ್ತದೆ. ಇವೆಲ್ಲ ಇದ್ದರೆ ಸಾಕೇ?!. ಶ್ರೇಷ್ಠ ಗಾಯಕರು ಬೇಕು. ಕನ್ನಡ ಚಿತ್ರ ರಸಿಕರ ಪಾಲಿಗೆ ಇವರು ತಮ್ಮದೇ ಆದ ಸಿರಿಕಂಠದ ಮೂಲಕ ಎಲ್ಲರಿಗೂ ಕೂಡ ಚಿರಪರಿಚಿತರಾದ ಹೆಸರು ಡಾ ಪಿ.ಬಿ.ಶ್ರೀನಿವಾಸ್. ಇವರು ಹಾಡಿರುವ ಪ್ರತಿಯೊಂದು ಗೀತೆಗಳನ್ನು ಕೂಡ ಕೇಳುತ್ತಾ ಹೋದರೆ ಮೈ-ಮನಗಳು ರೋಮಾಂಚನಗೊಳ್ಳುತ್ತವೆ!.

ಅದ್ಭುತ ಸಿರಿಕಂಠದೊಂದಿಗೆ  ನಮ್ಮ ಮನೆ- ಮನದಲ್ಲಿ ಶಾಶ್ವತವಾಗಿ ನೆಲೆಸಿದ್ದಾರೆ. ಅಂತಹ ಪಿ ಬಿ ಎಸ್ ರವರ ಸಂಸ್ಮರಣೆ ದಿನ. ಈ ಸಂದರ್ಭದಲ್ಲಿ ಅವರ ವ್ಯಕ್ತಿತ್ವದ ಬಗ್ಗೆ, ಅವರ ಸಿನಿ ಪಯಣದ ಬಗ್ಗೆ, ಹಾಡುಗಳ ಲೋಕದ ಬಗ್ಗೆ ಒಂದಿಷ್ಟು ಮಾಹಿತಿಯನ್ನು ತಿಳಿದುಕೊಳ್ಳೋಣ.

ಇವರು ಗಾಯಕರಾಗಿ ಅಲ್ಲದೆ ಸಂಯೋಜಕರಾಗಿ, ಹಾರ್ಮೋನಿಯಂ ವಾದಕರಾಗಿ, ಗೀತರಚನಾಕಾರರಾಗಿ ಮತ್ತು ಕವಿಯಾಗಿ ದಕ್ಷಿಣದ ಚಿತ್ರರಂಗ ಮತ್ತು ಬಾಲಿವುಡ್ ನಲ್ಲಿ ತಮ್ಮ ಶೈಲಿಯ ಕೃತಿಗಳಿಗೆ ಹೆಸರುವಾಸಿಯಾದವರು. ಅವರ ಪ್ರಮುಖ ಕೃತಿಗಳು ಕನ್ನಡ, ತಮಿಳು ಮತ್ತು ತೆಲುಗು ಭಾಷೆಗಳಲ್ಲಿ ಇಂದಿಗೂ ಕೂಡ ಇವೆ. ಎಂಟು ಭಾಷೆಗಳಲ್ಲೂ ಕೂಡ ಸಂಪೂರ್ಣ ಪಾಂಡಿತ್ಯವೊಂದಿದ್ದ ಅಪರೂಪದ ವ್ಯಕ್ತಿತ್ವ ಇವರದು.

ಇವರು ಸೆಪ್ಟಂಬರ್- 22, 1928 ರಂದು ಆಂಧ್ರ ಪ್ರದೇಶದ ಪೂರ್ವ ಗೋದಾವರಿ ಜಿಲ್ಲೆಯ ಕಾಕಿನಾಡದಲ್ಲಿ ತೆಲುಗು ಮಾತನಾಡುವ ವೈಷ್ಣವ ಬ್ರಾಹ್ಮಣ ಸಂಗೀತ ಕುಟುಂಬದಲ್ಲಿ ಜನಿಸಿದರು.  ಇವರ ಚಿಕ್ಕಪ್ಪ ಕಿಡಂಬಿ ಕೃಷ್ಣಸ್ವಾಮಿ ರವರು ನಾಟಕ ಕಲಾವಿದರು ಮತ್ತು ಗಾಯಕರಾಗಿದ್ದರು ಶ್ರೀನಿವಾಸರವರು 12 ವರ್ಷದವರಾಗಿದ್ದಾಗ ಕೃಷ್ಣ ಸ್ವಾಮಿ ಅವರಿಗೆ ನಾಟಕವೊಂದರಲ್ಲಿ ಹಾಡಲು ಅವಕಾಶ ನೀಡಿದರು. ನಂತರ ತರಬೇತಿಯನ್ನ ಪಡೆದು ಹಾರ್ಮೋನಿಯಂ ವಾದಕ ಮತ್ತು ಗಾಯಕರದ ಶ್ರೀನಿವಾಸ್ ರವರು ಮದ್ರಾಸ್ನ ಜೈಮಿನಿ ಸ್ಟುಡಿಯೋ ದಲ್ಲಿ ತಮ್ಮ ಅಭ್ಯಾಸ ಮುಂದುವರಿಸಿದರು. ಅವರು ಮೊದಲು ತಮ್ಮ ನೆಚ್ಚಿನ ಗಾಯಕರದ ಮಹಮದ್ ರಫಿ ಹಾಡಿದ ಹಾಡನ್ನು ಹಾಡಿದರು.

ನೌಶಾದ್ ಅಲಿ ಸಂಯೋಜಿಸಿದ ದೀದಾರ್ 1951 ಚಿತ್ರದ “ಹುಯೆ  ಹಮ್ ಜಿಂಕೆ ಲಿಯೆ  ಬರ್ಬಾದ್”-  ಹೀಗಿದೆಯು ಇನ್ನಲೇ ಗಾಯಕರಾಗಲು ಮೊದಲ ವೇದಿಕೆಯಾಯಿತು. ನಂತರದಲ್ಲಿ ಅವರು ಹಾಡಿದ ಮೊದಲ ಕನ್ನಡದ ಹಾಡು ಜಾತಕ ಫಲ ಚಿತ್ರದ್ದಾಗಿದೆ.

ಸಂದರ್ಶನವೊಂದರಲ್ಲಿ ಪಿ ಬಿ ಶ್ರೀನಿವಾಸ್ ರವರು ತಮ್ಮ ಜೇಬಿನಲ್ಲಿನ ಹಲವು ಪೆನ್ನುಗಳು ಅವರೊಂದಿಗಿದ್ದ ಹಲವು ಪುಸ್ತಕಗಳು ಹಾಗೂ ಅವರು ರಚಿಸಿದ ಹಾಡುಗಳ ಬಗ್ಗೆ ಮಾತನಾಡಿ ಪಿಬಿಎಸ್ ಎಂದರೆ “ಪ್ಲೇ ಬ್ಯಾಕ್ ಸಿಂಗರ್”- ಅಲ್ಲದೆ “ಪೆನ್ಸ್ ಬುಕ್ಸ್ ಹ್ಯಾಂಡ್ ಸಾಂಗ್ಸ್” (ಪೆನ್ನುಗಳು ಪುಸ್ತಕಗಳು ಮತ್ತು ಹಾಡುಗಳು) ಎಂದು ಅರ್ಥ ನೀಡಬಲ್ಲದು ಎಂದು ಹೇಳಿದ್ದರು.

ರಾಜ್ ಕುಮಾರ್ ಅವರಿಗೆ ಹೊಂದಿದ್ದ ಧ್ವನಿ ಬದಲಾಯಿಸಿ ಕನ್ನಡದ ಮುಖ್ಯ ನಾಯಕ ನಟರಾಗಿದ್ದ ಡಾ.ರಾಜ್‍ಕುಮಾರ್ ಅವರಿಗೆ ಪಿ.ಬಿ. ಶ್ರೀನಿವಾಸ್ ಅವರ ಕಂಠ ಬಹಳ ಸೂಕ್ತವಾಗಿ ಹೊಂದುತ್ತಿತ್ತು. ಡಾ.ರಾಜಕುಮಾರ್ ಸ್ವತ: ಹಾಡಲು ಪ್ರಾರಂಭಿಸುವವರೆಗೆ, ಅವರ ಬಹುತೇಕ ಚಿತ್ರಗಳಿಗೆ ಪಿ.ಬಿ.ಶ್ರೀನಿವಾಸ್ ಧ್ವನಿ ನೀಡಿದ್ದರು ಎನ್ನುವುದು ಇತಿಹಾಸ.

ಒಮ್ಮೆ ರಾಜ್‌ಕುಮಾರ್ ಹೀಗೆ ಹೇಳಿದ್ದರು.. “ಪಿ.ಬಿ. ಶ್ರೀನಿವಾಸ್ ಧ್ವನಿ ನನಗೆ ಆತ್ಮವಿದ್ದಂತೆ”. ಸುಮಾರು ಇನ್ನೂರಕ್ಕೂ ಹೆಚ್ಚು ಹಾಡುಗಳನ್ನು ರಾಜ್ ಕುಮಾರ್ ಅವರಿಗೆ ಹಿನ್ನೆಲೆ ಗಾಯಕರಾಗಿ ಹಾಡಿದ್ದಾರೆ.    ಪಿ.ಬಿ.ಶ್ರೀನಿವಾಸ್ ಹಾಡಿರುವ ಕೆಲವು ಮಧುರ ಗೀತೆಗಳ ಪ್ರಾರಂಭದ ಸಾಲುಗಳನ್ನು ಕೇಳುತ್ತಾ ಹೋದರೆ ನಮ್ಮ ಮೈಮನ ಒಂದು ಕ್ಷಣದಲ್ಲಿ ಎಲ್ಲೂ ಕಳೆದು ಹೋದಂತಹ ಅನುಭವವಾಗುತ್ತದೆ.

“ನಾವಾಡುವ ನುಡಿಯೇ ಕನ್ನಡನುಡಿ” – ಗಂಧದ ಗುಡಿ, “ನಗು ನಗುತ ನಲಿ ನಲಿ” – ಬಂಗಾರದ ಮನುಷ್ಯ  “ವೈದೇಹಿ ಏನಾದಳು?” – ದಶಾವತಾರ, “ಇಳಿದು ಬಾ ತಾಯೆ ಇಳಿದು ಬಾ” – ಅರಿಶಿನ ಕುಂಕುಮ, “ಕಲ್ಲಾದೆ ಏಕೆಂದು ಬಲ್ಲೆ, ಶಿವನೇ” – ಭಲೇ ಹುಚ್ಚ, “ಹಾರುತಿರುವ ಹಕ್ಕಿಗಳೇ” – ಪ್ರತಿಧ್ವನಿ, “ಇವಳು ಯಾರು ಬಲ್ಲೆರೇನು?” – ಗೌರಿ, “ಒಲವಿನ ಪ್ರಿಯಲತೆ ಅವಳದೆ ಚಿಂತೆ” – ಕುಲವಧು, “ಹಾಡೊಂದ ಹಾಡುವೆ ನೀ ಕೇಳು” – ನಾಂದಿ, “ಬಾರೆ ಬಾರೆ ಚಂದದ ಚೆಲುವಿನ ತಾರೆ” – ನಾಗರಹಾವು, “ನೀ ಬಂದು ನಿಂತಾಗ, ನಿಂತು ನೀ ನಕ್ಕಾಗ” – ಕಸ್ತೂರಿ ನಿವಾಸ, “ಆಡಿಸಿ ನೋಡು ಬೀಳಿಸಿ ನೋಡು ಉರುಳಿ ಹೋಗದು” – ಕಸ್ತೂರಿ ನಿವಾಸ.

“ಕನ್ನಡ ನಾಡಿನ ವೀರ ರಮಣಿಯ ಗಂಡು ಭೂಮಿಯ ವೀರ ನಾರಿಯ” -ನಾಗರಹಾವು, “ಸಂಗಮ ಸಂಗಮ ಅನುರಾಗ ತಂದ ಸಂಗಮ” – ನಾಗರಹಾವು, “ಕಮಲದ ಹೂವಿಂದ ಕೆನ್ನೆಯ ಮಾಡಿದನು” – ಬಾಳು ಬೆಳಗಿತು, “ಉತ್ತರ ಧ್ರುವದಿಂ ದಕ್ಶಿಣ ಧ್ರುವಕೂ” – ಶರಪಂಜರ, “ತಂ ನಂ ತಂ ನಂ ನನ್ನೀ ಮನಸು ಮಿಡಿಯುತಿದೆ” – ಎರಡು ಕನಸು, “ಎಂದೆಂದೂ ನಿನ್ನನು ಮರೆತು ಬದುಕಿರಲಾರೆ” – ಎರಡು ಕನಸು, “ಬಾಡಿ ಹೋದ ಬಳ್ಳಿಯಿಂದ ಹೂವು ಅರಳ ಬಲ್ಲದೆ” – ಎರಡು ಕನಸು, “ಎಂದು ನಿನ್ನ ನೋಡುವೆ…” – ಎರಡು ಕನಸು, “ಬಿಂಕದ ಸಿಂಗಾರಿ ಮೈ ಡೊಂಕಿನ ವಯ್ಯಾರಿ” – ಕನ್ಯಾರತ್ನ, “ನೀ ಮುಡಿದಾ ಮಲ್ಲಿಗೆ ಹೂವಿನ ಮಾಲೆ” – ಗಾಂಧಿ ನಗರ, “ಪ್ರೀತಿನೆ ಆ ದ್ಯಾವ್ರು ತಂದ ಆಸ್ತಿ ನಮ್ಮ ಬಾಳ್ವಿಗೆ” – ದೂರದ ಬೆಟ್ಟ,

“ಕಣ್ಣಂಚಿನ ಈ ಮಾತಲಿ ಏನೇನು ತುಂಬಿದೆ” – ದಾರಿತಪ್ಪಿದ ಮಗ, “ಆಕಾಶವೆ ಬೀಳಲಿ ಮೇಲೆ ನಾ ನಿನ್ನ ಕೈ ಬಿಡೆನು” – ನ್ಯಾಯವೇ ದೇವರು, “ಗೋಧೋಳಿ ಹಾರುವ ಹೊತ್ತು, ಹೆಗಲಲ್ಲಿ ನೇಗಿಲ ಹೊತ್ತು” – ಪುನರ್ ಜನ್ಮ, “ಕನ್ನಡತಿ ನಮ್ಮೊಡತಿ, ನೀ ಕಣ್ಣು ತೆರೆದು ನೋಡಿ” – ಪುನರ್ ಜನ್ಮ, “ಒಲಮೆಯ ಹೂವೇ ನೀ ಎಲ್ಲಿ ಹೋದೆ” – ಪುನರ್ ಜನ್ಮ, “ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ” – ಭಕ್ತ ಕನಕದಾಸ, “ಕುಲ ಕುಲ ಕುಲವೆಂದು ಹೊಡೆದಾಡದಿರಿ”- ಭಕ್ತ ಕನಕದಾಸ, “ನಿನ್ನ ಕಣ್ಣ ಕನ್ನಡಿಯಲ್ಲಿ ಕಂಡೆ ನನ್ನ ರೂಪ” – ಸ್ವಯಂವರ, “ನಿಲ್ಲು ನೀ ನಿಲ್ಲು ನೀ ನೀಲವೇಣಿ” – ಅಮರಶಿಲ್ಪಿ ಜಕ್ಕಣಾಚಾರಿ, “ಕಣ್ಣು ರೆಪ್ಪೆ ಒಂದನೊಂದು ಮರೆವುದೆ, –

“ಆಗದು ಎಂದು ಕೈಲಾಗದು ಎಂದು ಕೈಕಟ್ಡಿ ಕುಳಿತರೆ” -ಬಂಗಾರದ ಮನುಷ್ಯ,”ಆಹಾ ಮೈಸೂರು ಮಲ್ಲಿಗೆ ದುಂಡು ಮಲ್ಲಿಗೆ” -ಬಂಗಾರದ ಮನುಷ್ಯ, “ಮೈಸೂರು ದಸರಾ ಎಷ್ಟೊಂದು ಸುಂದರ” – ಕರುಳಿನಕರೆ,”ಯಾರು ಏನು ಮಾಡುವರು ನನಗೇನು ಕೇಡು ಮಾಡುವರು” – ಕ್ರಾಂತಿವೀರ, “ನಿದಿರೆಯು ಸದಾ ಏಕೊ ದೂರ” – ಸಿಪಾಯಿರಾಮು, “ಆಡುತಿರುವ ಮೋಡಗಳೆ ಹಾರುತಿರುವ ಹಕ್ಕಿಗಳೆ” – ಬೆಟ್ಟದ ಹುಲಿ, “ವೇದಾಂತಿ ಹೇಳಿದನು ಮಣ್ಣೆಲ್ಲ ಹೊನ್ನು ಹೊನ್ನು” – ಮಾನಸ ಸರೋವರ, “ದೀನ ನಾ ಬಂದಿರುವೆ ಬಾಗಿಲಲಿ ನಿಂದಿರುವೆ” – ಸಂಧ್ಯಾರಾಗ, ಒಂದೇ ಎರಡೇ?.   ಪಿ ಬಿ ಶ್ರೀನಿವಾಸ್ ರವರ ಬಗ್ಗೆ ಇನ್ನೊಂದಿಷ್ಟು ಸಂಗ್ರಹ ಮಾಹಿತಿಗಳು…..

ಕನ್ನಡಿಗರ ಹೃದಯ ನಿವಾಸಿ; ಪಿ.ಬಿ.ಎಸ್. ಅವರು ಭಾರತದ ಚಿತ್ರರಂಗದ ಹಿನ್ನೆಲೆ ಗಾಯನ ಕ್ಷೇತ್ರದ ದಿಗ್ಗಜರಲ್ಲಿ ಒಬ್ಬರು. ಕನ್ನಡ ಚಿತ್ರರಂಗದ ಜೊತೆಗೆ ಅತ್ಯಂತ ಆಪ್ತ ಸಂಬಂಧ ಹೊಂದಿದ್ದ ಶ್ರೀನಿವಾಸ್ ಅವರು ಎಲ್ಲ ಕನ್ನಡಿಗರ ಮನಸ್ಸಿನಲ್ಲಿ ಚಿರಸ್ಥಾಯಿಯಾಗಿ ನಿಂತವರು. ಅದು ಭಕ್ತಿ ಗೀತೆಯಿರಲಿ, ಪ್ರೇಮ ಗೀತೆಯಾಗಲಿ ಅಥವ ಶೋಕರಸದಿಂದ ಕೂಡಿದ ಹಾಡಾಗಿರಲಿ, ಎಲ್ಲ ಭಾವಗಳನ್ನೂ ಅತ್ಯದ್ಭುತವಾಗಿ ಹೊಮ್ಮಿಸುತ್ತಿದ್ದ ಇವರು ಹಾಡಿರುವ ಗೀತೆಗಳು, ಇಂದಿಗೂ ಎಂದೆಂದಿಗೂ ಅಮರ. ಬಾಲಕನಾಗಿದ್ದಾಗಿನಿಂದಲೂ ರೇಡಿಯೋ ಕೇಳುವ ಅಭ್ಯಾಸವಿದ್ದ ಶ್ರೀನಿವಾಸ್ ಅವರು ಅಮರ ಗಾಯಕ ಮೊಹಮದ್ ರಫಿ ಅವರ ಹಾಡುಗಳನ್ನು ಕೇಳಿ ಆನಂದಿಸುತ್ತಿದ್ದರು ಮತ್ತು ತಾವೂ ಕೂಡ ಹಾಡುವ ಅಭ್ಯಾಸ ಮಾಡುತ್ತಿದ್ದರು.

ಶ್ರೀನಿವಾಸ್ ಅವರು 1956ರಲ್ಲಿ ‘ಓಹಿಲೇಶ್ವರ’ ಸಿನೆಮಾದಲ್ಲಿ ಮೊದಲ ಬಾರಿಗೆ ಡಾ.ರಾಜ್ ಕುಮಾರ್ ಅವರಿಗಾಗಿ ಹಾಡಿದರು. ಆ ನಂತರ ಅವರದ್ದೇ ನಟನೆಯ ‘ಭಕ್ತ ಕನಕದಾಸ’ ಸಿನೆಮಾದಲ್ಲಿ ಹಾಡಿದ ‘ಬಾಗಿಲನು ತೆರೆದು ಸೇವೆಯನು ಕೊಡು ಹರಿಯೇ’ ಎಂಬ ಹಾಡು ಅಪಾರ ಜನಪ್ರಿಯತೆ ಪಡೆಯಿತು. ಅಲ್ಲಿಂದಾಚೆಗೆ ಡಾ.ರಾಜ್ ಕುಮಾರ್ ಅವರ ಬಹುತೇಕ ಸಿನೆಮಾಗಳಲ್ಲಿ ಹಾಡಿದ ಶ್ರೀನಿವಾಸ್ ಅವರೂ ಕೂಡ ಡಾ.ರಾಜ್ ಅವರಂತೆಯೇ ಕನ್ನಡದಲ್ಲಿ ಪ್ರಸಿದ್ಧರಾದರು.

ಆ ಮುಂದಿನ ದಿನಗಳಲ್ಲಿ  ಕಲ್ಯಾಣ್ ಕುಮಾರ್, ಉದಯ್ ಕುಮಾರ್, ಆರ್.ಎನ್.ಸುದರ್ಶನ್ ರಾಜೇಶ್, ಗಂಗಾಧರ್, ಶ್ರೀನಾಥ್, ಅಶೋಕ್, ವಿಷ್ಣುವರ್ದನ್ ಸೇರಿದಂತೆ ಎಲ್ಲ ಪ್ರಮುಖ ನಟರ ಸಿನೆಮಾಗಳಲ್ಲೂ ಹಾಡಿ ಹೆಸರಾದರು. ಇದೇ ರೀತಿ ತಮಿಳು ಚಿತ್ರರಂಗದಲ್ಲೂ ಹೆಸರಾದ ಪಿ.ಬಿ.ಶ್ರೀನಿವಾಸ್ ಅವರು, ಜೆಮಿನಿ ಗಣೇಶನ್ ಅವರಿಗಾಗಿ ಅತಿ ಹೆಚ್ಚು ಹಾಡುಗಳನ್ನು ಹಾಡಿದ್ದಾರೆ.

ಲತಾ ಮಂಗೇಶ್ಕರ್ ಅವರ ಜೊತೆ ‘ಮೈ ಭಿ ಲಡ್ಕಿ ಹೂಂ’(1964) ಚಿತ್ರಕ್ಕಾಗಿ ಹಾಡಿರುವ ‘ಚಂದಾ ಸೆ ಹೋಗಾ ವೊ ಪ್ಯಾರಾ’ ಹಾಡು ಇವತ್ತಿಗೂ ರಸಿಕರ ಮನಕ್ಕೆ ತಂಪೆರೆಯುತ್ತದೆ. ದಕ್ಷಿಣದ ಎಲ್ಲ ಭಾಷೆಗಳಲ್ಲೂ ಹಾಡಿದ್ದರೂ ಕೂಡ ಪಿ.ಬಿ.ಶ್ರೀನಿವಾಸ್ ಅವರಿಗೆ ಭದ್ರ ನೆಲೆ ಒದಗಿಸಿದ್ದು ಕನ್ನಡ ಚಿತ್ರರಂಗ. ಕನ್ನಡ ಭಾಷೆಯಲ್ಲಿ ಅವರು ಹಾಡಿದ ಬಹುತೇಕ  ಹಾಡುಗಳು  ಸೂಪರ್ ಹಿಟ್ ಸಾಂಗ್ಸ್ ಅನ್ನಿಸಿಕೊಂಡಿವೆ.

ಸುಮಾರು 30 ವರ್ಷಗಳ ಕಾಲ ಕನ್ನಡ ಚಿತ್ರರಂಗದಲ್ಲಿ ಶ್ರೀನಿವಾಸ್ ಅವರ ಧ್ವನಿಯೇ ಪ್ರಧಾನವಾಗಿ ಕೇಳಿಸುತ್ತಿತ್ತು. ಶ್ರೀನಿವಾಸ್ ಅವರು, ಡಾ.ರಾಜ್ ಕುಮಾರ್ ಅವರಿಗಾಗಿ ಹಾಡಿದ ಬಹುತೇಕ ಹಾಡುಗಳು, ಇವತ್ತಿಗೂ ಕನ್ನಡಿಗರಿಗೆ ಅತ್ಯಂತ ಪ್ರಿಯವಾದ ಹಾಡುಗಳಾಗಿವೆ. ಈ ಕಾರಣಕ್ಕಾಗಿಯೇ ಡಾ.ರಾಜ್ ಕುಮಾರ್ ಅವರು, ‘ನಾನು ಕೇವಲ ಶರೀರ’, ಪಿ.ಬಿ.ಶ್ರೀನಿವಾಸ್ ಅವರು ‘ನನ್ನ ಶಾರೀರ’ ಎಂದೇ ಗೌರವಿಸಿ ಮಾತನಾಡುತ್ತಿದ್ದರು.

1950ರ ದಶಕದಿಂದ 1970ರ ದಶಕದ ವರೆಗೆ ರಾಜ್ ಕುಮಾರ್ ಸಿನೆಮಾ ಅಂದ್ರೆ ಪಿ.ಬಿ.ಶ್ರೀನಿವಾಸ್ ಅವರು ಹಾಡುತ್ತಾರೆ ಅನ್ನುವುದೇ ಖಾಯಂ ಆಗಿತ್ತು. ಆದರೆ, 1974ರಲ್ಲಿ ‘ಸಂಪತ್ತಿಗೆ ಸವಾಲ್’ ಸಿನೆಮಾ ತಯಾರಿಕೆ ವೇಳೆ ಶ್ರೀನಿವಾಸ್ ಅವರು ಲಭ್ಯವಿಲ್ಲದ ಕಾರಣ, ಸಂಗೀತ ನಿರ್ದೇಶಕ ಜಿ.ಕೆ.ವೆಂಕಟೇಶ್ ಅವರು, ರಾಜ್ ಅವರನ್ನು ಹಾಡುವಂತೆ ಉತ್ತೇಜಿಸಿದರು. ‘ಓಹಿಲೇಶ್ವರ’ ಸಿನೆಮಾ ನಂತರ ಹಾಡುವುದನ್ನು ನಿಲ್ಲಿಸಿದ್ದ ರಾಜ್ ಕುಮಾರ್, ಸಂಪತ್ತಿಗೆ ಸವಾಲ್ ಚಿತ್ರದ ‘ಯಾರೇ ಕೂಗಾಡಲಿ, ಊರೇ ಹೋರಾಡಲಿ’ ಹಾಡಿನ ಮೂಲಕ ಮತ್ತೊಮ್ಮೆ ಹಾಡಲು ಆರಂಭಿಸಿದರು. ಭಾರತ ಸಿನೆಮಾ ರಂಗದ ಅತ್ಯಂತ ಜನಪ್ರಿಯ ನಟ ಮತ್ತು ಗಾಯಕ ಎಂದು ಹೆಸರಾದರು. ಆದರೆ, ಪಿ.ಬಿ.ಶ್ರೀನಿವಾಸ್ ಮತ್ತು ಡಾ.ರಾಜ್ ಅವರ ನಡುವಿನ ಪರಸ್ಪರ ಗೌರವ ಮತ್ತು ವಿಶ್ವಾಸ ಯಾವಾಗಲು ಇದ್ದೇ ಇರುತ್ತಿತ್ತು.

‘ವಿಜಯನಗರದ ವೀರಪುತ್ರ’ ಸಿನೆಮಾಗಾಗಿ ಆರ್.ಎನ್.ಜಯಗೋಪಾಲ್ ಅವರು ಬರೆದು ಆರ್.ಎನ್.ಸುದರ್ಶನ್ ಅವರು ನಟಿಸಿದ್ದ ‘ಅಪಾರ ಕೀರ್ತಿ ಗಳಿಸಿ ಮೆರೆವ ಭವ್ಯ ನಾಡಿದು’ ಹಾಡು ಪಿ.ಬಿ. ಶ್ರೀನಿವಾಸ್ ಅವರ ಅತ್ಯಂತ ಅಚ್ಚು ಮೆಚ್ಚಿನ ಹಾಡುಗಳಲ್ಲಿ ಒಂದಾಗಿತ್ತು.

ಶ್ರೀನಿವಾಸ್ ಅವರ ಮಾತೃ ಭಾಷೆ ತೆಲುಗು ಆಗಿದ್ದರೂ ಕೂಡ ಅವರು ಬಹುಭಾಷಿಕರಾಗಿದ್ದರು. ಸಂಸ್ಕೃತ ಮತ್ತು ಉರ್ದು ಭಾಷೆಯೂ ಸೇರಿದಂತೆ 8 ಭಾಷೆಗಳಲ್ಲಿ ನಿರರ್ಗಳವಾಗಿ ಮಾತನಾಡುವ ಸಾಮರ್ಥ್ಯ ಹೊಂದಿದ್ದರು. ಉತ್ತಮ ಕವಿಯೂ ಆಗಿದ್ದ ಪಿ.ಬಿ.ಶ್ರೀನಿವಾಸ್ ಅವರು ಕನ್ನಡ, ಇಂಗ್ಲಿಷ್ ಸೇರಿದಂತೆ ಹಲವು ಭಾಷೆಗಳಲ್ಲಿ ಕವಿತೆಗಳನ್ನು ರಚಿಸುತ್ತಿದ್ದರು ಮತ್ತು ಹಲವಾರು ಕಾರ್ಯಕ್ರಮಗಳಲ್ಲಿ ಅವುಗಳನ್ನು ಹಾಡಿ ರಂಜಿಸಿಸುತ್ತಿದ್ದರು.

ಅವರು ಹಾಡಿರುವ ಮುಕುಂದ ಮಾಲ, ಲಕ್ಷ್ಮಿ ಸ್ತ್ರೋತ್ರ, ಶಾರದಾ ಭುಜಂಗ ಸ್ತೋತ್ರ, ಶನೇಶ್ವರ ಸ್ತೋತ್ರ, ಶಿವ ಪರಿವಾರ ಸ್ತ್ರೋತ್ರ, ಹನುಮಾನ್ ಚಾಲೀಸ ಮತ್ತು ಮಲ್ಲಿಕಾರ್ಜುನ ಸ್ತೋತ್ರಗಳು ಇವತ್ತಿಗೂ ಮನೆ-ಮನಗಳಲ್ಲಿ ಮೊಳಗುತ್ತಿವೆ. ಕನ್ನಡದಲ್ಲಿ ಅವರು ಹಾಡಿರುವ ‘ಶರಣು ಶರಣಯ್ಯ ಶರಣು ಬೆನಕ’ ಮತ್ತು ‘ಭಾದ್ರಪದ ಶುಕ್ಲದ ಚೌತಿಯಂದು’ ಎಂಬ ಹಾಡುಗಳಿಲ್ಲದೆ ಗಣೇಶನ ಹಬ್ಬ ಮಾತ್ರವಲ್ಲ ಯಾವುದೇ ಶುಭ ಕಾರ್ಯವೂ ಆರಂಭವಾಗುವುದಿಲ್ಲ. ಪಿ.ಬಿ.ಶ್ರೀನಿವಾಸ್ ಅವರು ಹಾಡಿರುವ ಎದ್ದೇಳು ‘ಎದ್ದೇಳು ಮಂಜುನಾಥ…ಏಳು ಬೆಳಗಾಯಿತು’ ಎಂಬ ಭಕ್ತಿಗೀತೆ,  ಭಕ್ತಿಮಯ ಮತ್ತು ಪ್ರಸಿದ್ಧವಾಗಿದೆ.

ದಾಸ ಶ್ರೇಷ್ಠರಾದ ಕನಕದಾಸರ ರಚನೆಗಳಾದ ‘ಬದುಕಿದೆನು ಬದುಕಿದೆನು ಭವ ಎನಗೆ ಇಂಗಿತು’, ‘ಬಾಗಿಲನು ತೆರೆದು ಸೇವೆಯನು ಕೊಡೊ ಹರಿಯೆ’, ‘ಕುಲ ಕುಲ ಕುಲವೆಂದು ಹೊಡೆದಾಡದಿರಿ’, ಇತ್ಯಾದಿ ಗೀತೆಗಳು ಹಾಗೂ  ಹುಣಸೂರು ಕೃಷ್ಣಮೂರ್ತಿಯವರು ರಚಿಸಿ, ಜಿ.ಕೆ.ವೆಂಕಟೇಶ್ ಅವರು ಸಂಗೀತ ನೀಡಿರುವ ಭಕ್ತ ಕುಂಬಾರ ಚಿತ್ರದ(1974) ‘ಹರಿನಾಮವೇ ಚಂದ’, ‘ಎಲ್ಲಿ ಮರೆಯಾದೆ ವಿಠ್ಠಲ ಏಕೆ ದೂರಾದೆ’, ‘ಕಂಡೇ ಹರಿಯ ಕಂಡೇ’, ‘ವಿಠಲಾ ವಿಠಲಾ ಪಾಂಡುರಂಗ ವಿಠಲಾ, ನಾನು ನೀನು ನೆಂಟರಯ್ಯ’, ‘ಮಾನವ ದೇಹವೂ, ಮೂಳೆ ಮಾಂಸದ ತಡಿಕೆ’…… ಇತ್ಯಾದಿ ಹಾಡುಗಳು, ಪಿ.ಬಿ. ಶ್ರೀನಿವಾಸ್ ಅವರು ಕನ್ನಡದ ಸಿನೆಮಾಗಳಲ್ಲಿ ಹಾಡಿರುವ ಭಕ್ತಿ-ತತ್ವ ಮತ್ತು ಸಮಾನತೆ ಸಾರುವ ಹಾಡುಗಳು.

ಪಿ.ಬಿ.ಶ್ರೀನಿವಾಸ್ ಅವರು ಹಲವಾರು ಪ್ರಶಸ್ತಿ ಮತ್ತು ಗೌರವಗಳಿಗೆ ಪಾತ್ರರಾಗಿದ್ದರು. ಅವುಗಳಲ್ಲಿ ಕನ್ನಡ ರಾಜ್ಯೋತ್ಸವ ಪ್ರಶಸ್ತಿ, ರಾಜ್ ಕುಟುಂಬದಿಂದ ಕೊಡಮಾಡುವ ‘ಡಾ.ರಾಜ್ ಕುಮಾರ್ ಸೌಹಾರ್ದ ಪ್ರಶಸ್ತಿ’ ಹಾಗೂ ಹಂಪಿ ಕನ್ನಡ ವಿ.ವಿಯ ‘ನಾಡೋಜ’ ಗೌರವ ಸೇರಿದೆ. ತಮಿಳುನಾಡು ಸರ್ಕಾರ ‘ಕಲೈಮಾಮಣಿ’ ಪ್ರಶಸ್ತಿ ನೀಡಿ ಗೌರವಿಸಿದೆ. ಅಮೆರಿಕದ Arizona University ಪಿ.ಬಿ.ಶ್ರೀನಿವಾಸ್ ಅವರಿಗೆ ಗೌರವ ಡಾಕ್ಟರೇಟ್ ನೀಡಿದೆ. ಪಿ ಬಿ ಶ್ರೀನಿವಾಸ್ ರವರು ಇಂದು ನಮ್ಮೊಟ್ಟಿಗೆ ಇಲ್ಲ ಆದರೆ ಚಿತ್ರರಂಗದಲ್ಲಿ ಅವರು ಹಾಡುಗಳ ಮೂಲಕ ಸದಾ ನಮ್ಮಂತರಂಗದಲ್ಲಿ ಅಡಗಿದ್ದಾರೆ.

admin
the authoradmin

Leave a Reply

Translate to any language you want