ಮಡಿಕೇರಿ: ದೇವಾಲಯದ ಆವರಣದಲ್ಲಿ ಗೋರಿ ನಿರ್ಮಾಣ ಮಾಡಿದ ಆರೋಪಕ್ಕೆ ಸಂಬಂಧಿಸಿದಂತೆ ಎಂಟು ಮಂದಿಯನ್ನು ಕೊಡಗಿನ ಸಿದ್ದಾಪುರ ಪೊಲೀಸರು ಬಂಧಿಸಿದ್ದಾರೆ.
ಪಿರಿಯಾಪಟ್ಟಣ ತಾಲೂಕಿನ ಆಯಾರಬೀಡು ಗ್ರಾಮದ ನಿವಾಸಿಗಳಾದ ಮುಜಾಮಿಲ್(32) ಅಶ್ವಿಕ್ ಪಾಷ(28) ರಶೀದ್ ಖಾನ್ ( 30) ಸೈಯದ್ ಸಾಧಿಕ್ (34) ಆಲಂ ಶರೀಫ್ (19) ತಂಜೀವ್ ಪಾಷ(30) ಮನ್ಸೂರ್ ಪಾಷ (33) ನಿಸಾರ್ ಅಹ್ಮದ್ (33) ಬಂಧಿತರು.
ಮಾಲ್ದಾರೆ ಸಮೀಪದ ಮೀಸಲು ಅರಣ್ಯ ಪ್ರದೇಶದೊಳಗೆ ಶ್ರೀ ಸಿದ್ದೇಶ್ವರ ದೇವಾಲಯವಿದ್ದು, ಈ ದೇವಾಲಯದ ಆವರಣದಲ್ಲಿ ಜು.26ರಂದು ಇದ್ದಕ್ಕಿದ್ದಂತೆ ಗೋರಿಯೊಂದನ್ನು ರಾತ್ರಿ ಹೊತ್ತು ನಿರ್ಮಾಣ ಮಾಡಲಾಗಿತ್ತು. ಇದು ಭಾರಿ ಆಕ್ರೋಶಕ್ಕೆ ಕಾರಣವಾಗಿತ್ತು.
ಈ ಸಂಬಂಧ ಹಿಂದೂಪರ ಸಂಘಟನೆಗಳು ಮತ್ತು ಗ್ರಾಮಸ್ಥರು ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಲ್ಲದೆ, ಆರೋಪಿಗಳನ್ನು ಬಂಧಿಸುವಂತೆ ಒತ್ತಾಯಿಸಿದ್ದರು. ಅಲ್ಲದೆ ಸಿಸಿ ಟಿವಿ ಅಳವಡಿಸುವಂತೆಯೂ ಒತ್ತಾಯಿಸಿದ್ದರು. ಅಲ್ಲದೆ ಈ ಸಂಬಂಧ ಸಿದ್ದಾಪುರ ಪೊಲೀಸ್ ಠಾಣೆಗೆ ದೂರು ನೀಡಲಾಗಿತ್ತು.

ಈ ಘಟನೆಗೆ ಸಂಬಂಧಿಸಿದಂತೆ ಕೊಡಗು ಎಸ್ಪಿ ಬಿಂದುಮಣಿ ಮತ್ತು ಮಡಿಕೇರಿ ಭಾಗದ ಡಿ.ವೈ.ಎಸ್ಪಿ ಸೂರಜ್ ಮಾರ್ಗದರ್ಶನದಲ್ಲಿ ಸಿ.ಐ. ಚಂದ್ರಶೇಖರ್ ಮತ್ತು ಸಿದ್ದಾಪುರ ಠಾಣಾಧಿಕಾರಿ ಮಂಜುನಾಥ್ ನೇತೃತ್ವದಲ್ಲಿ ತನಿಖಾ ತಂಡವನ್ನು ರಚಿಸಿ ತನಿಖೆ ಆರಂಭಿಸಲಾಗಿತ್ತು.
ತನಿಖೆ ನಡೆಸಿದ ಪೊಲೀಸ್ ತಂಡ ಈ ಕೃತ್ಯದಲ್ಲಿ ಹೊರ ಜಿಲ್ಲೆಯವರ ಕೈವಾಡವಿರುವುದನ್ನು ಪತ್ತೆ ಹಚ್ಚಿದ್ದು, ಆರೋಪಿಗಳಾದ ಪಿರಿಯಾಪಟ್ಟಣ ತಾಲೂಕಿನ ಆಯಾರಬೀಡು ಗ್ರಾಮದ ನಿವಾಸಿಗಳಾದ ಮುಜಾಮಿಲ್, ಅಶ್ವಿಕ್ ಪಾಷ, ರಶೀದ್ ಖಾನ್ , ಸೈಯದ್ ಸಾಧಿಕ್, ಆಲಂ ಶರೀಫ್, ತಂಜೀವ್ ಪಾಷ, ಮನ್ಸೂರ್ ಪಾಷ, ನಿಸಾರ್ ಅಹ್ಮದ್, ಎಂಬವರನ್ನು ಬಂಧಿಸಲಾಗಿದೆ. ಅಲ್ಲದೆ ಅವರಿಂದ ಎರಡು ವಾಹನಗಳನ್ನು ವಶಕ್ಕೆ ಪಡೆಯಲಾಗಿದೆ.
ಸದ್ಯ ಅರಣ್ಯ ಇಲಾಖೆ ದೇವಾಲಯಕ್ಕೆ ತೆರಳುವ ರಸ್ತೆ ಬದಿಯಲ್ಲಿ ಸಿ.ಸಿ. ಕ್ಯಾಮರಾ ಅಳವಡಿಸಿದೆ. ಜತೆಗೆ ಅರಣ್ಯ ಇಲಾಖೆಯ ಎರಡು ಸಿಬ್ಬಂದಿಯನ್ನು ಹಗಲಿನ ವೇಳೆ ಗಸ್ತು ತಿರುಗಲು ಮತ್ತು ಕಾವಲು ಕಾಯಲು ನಿಯೋಜನೆ ಮಾಡಲಾಗಿದೆ. ಇನ್ನು ಮೀಸಲು ಅರಣ್ಯ ಪ್ರದೇಶದೊಳಗೆ ಪ್ರವೇಶ ಮಾಡುವುದನ್ನು ತಡೆಯಲು ಅರಣ್ಯ ಇಲಾಖೆಗೆ ಸೇರಿದ ವಾಹನದಲ್ಲಿ ಗಸ್ತು ತಿರುಗಲು ಎರಡು ಸಿಬ್ಬಂದಿಯನ್ನು ನೇಮಿಸಲಾಗಿದೆ ಎಂದು ತಿಳಿದು ಬಂದಿದೆ.








