ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಕೆರೆಗೆ ಕ್ರಿಮಿನಾಶಕ ಹಾಕಿ ಮೀನುಗಳ ಮಾರಣಹೋಮ ಮಾಡಿದವರ ವಿರುದ್ಧ ಕ್ರಮ ಕೈಗೊಳ್ಳುವುದರ ಜತೆಗೆ ಪರಿಹಾರ ನೀಡುವಂತೆ ಬೀರತಮ್ಮನಹಳ್ಳಿ ಶಿವಣ್ಣ ಒತ್ತಾಯಿಸಿದ್ದಾರೆ.
ಹುಣಸೂರು ತಾಲೂಕಿನ ಕಡೆಮನುಗನಹಳ್ಳಿ ಗ್ರಾಮ ಪಂಚಾಯ್ತಿ ವ್ಯಾಪ್ತಿಯ ಬೀರತಮ್ಮನಹಳ್ಳಿ ಶಿವಣ್ಣ ತಮ್ಮ ಪುತ್ರನ ಹೆಸರಿನಲ್ಲಿ ಕೆರೆ ಮೀನು ಹಿಡಿಯುವ ಗುತ್ತಿಗೆ ಪಡೆದಿದ್ದು, ಐದು ಲಕ್ಷ ರೂ ಖರ್ಚು ಮಾಡಿ ಮೀನು ಮರಿಗಳನ್ನು ಕೆರೆಗೆ ಬಿಟ್ಟಿದ್ದರು. ಕೆರೆಯಲ್ಲಿ ನೀರು ಕಡಿಮೆಯಾಗಿದ್ದರಿಂದ ಮೀನು ಹಿಡಿಯಲು ಹೋದ ವೇಳೆ ಕ್ರಿಮಿನಾಶಕದಿಂದ ಮೀನುಗಳು ಸಾವನ್ನಪ್ಪಿರುವ ವಿಚಾರ ಬೆಳಕಿಗೆ ಬಂದಿದೆ.
ಕಿಡಿಗೇಡಿಗಳು ಕೆರೆಗೆ ಕಳೆ ನಾಶಕ ಹಾಕಿದ್ದರಿಂದ ಮೀನುಗಳು ಸಾವನ್ನಪ್ಪುತ್ತಿದ್ದು ಮೀನು ಸಾಕಾಣಿಕೆಗಾಗಿ ಲಕ್ಷಾಂತರ ರೂ ಸಾಲ ಮಾಡಿ ಕೊಂಡಿದ್ದು. ಲಕ್ಷಾಂತರ ರೂ ಕಟ್ಟಿಸಿಕೊಂಡು ಗುತ್ತಿಗೆ ನೀಡಿರುವ ಗ್ರಾಮ ಪಂಚಾಯ್ತಿ ಅಧಿಕಾರಿಗಳು ಸೂಕ್ತ ಪರಿಹಾರ ಕೊಡಿಸುವಂತೆ ಸಂಕಷ್ಟಕ್ಕೊಳಗಾಗಿರುವ ಶಿವಣ್ಣ ಮನವಿ ಮಾಡಿದ್ದಾರೆ.
ಇನ್ನು ಇನ್ಸ್ ಪೆಕ್ಟರ್ ಸಂತೋಷ್ ಕಶ್ಯಪ್ ಮಾತನಾಡಿ ಇದು ಕಿಡಿಗೇಡಿಗಳ ಕೃತ್ಯವೋ ಅಥವಾ ಕೆರೆ ಸುತ್ತಮುತ್ತಲ ಜಮೀನಿಗೆ ಸಿಂಪಡಿಸಿದ್ದ ಕ್ರಿಮಿನಾಶಕ ಕೆರೆ ನೀರಿಗೆ ಸೇರಿ ಮೀನುಗಳು ಸಾವನ್ನಪ್ಪಿದೆಯೋ ಎಂಬುದರ ಬಗ್ಗೆ ತನಿಖೆ ನಡೆಸಲಾಗುತ್ತಿದೆ ಎಂದು ತಿಳಿಸಿದ್ದಾರೆ.








