ಮೈಸೂರು: ವಿಶ್ವವಿಖ್ಯಾತ ನಾಡಹಬ್ಬ ದಸರಾ ಮಹೋತ್ಸವದ ಭಾಗವಾಗಿ ಈ ಬಾರಿ ಕರಾವಳಿ ಭಾಗದ ಜನಪ್ರಿಯ ಕ್ರೀಡೆ ಕಂಬಳ ಆಯೋಜಿಸಲು ಸರ್ಕಾರ ಮುಂದಾಗಿರುವುದು ಹೊಸ ಚರ್ಚೆಯೊಂದನ್ನು ಹುಟ್ಟುಹಾಕಿದೆ. ನಾಡಹಬ್ಬದ ವೇದಿಕೆಯಲ್ಲಿ ಕರ್ನಾಟಕದ ವೈವಿಧ್ಯಮಯ ಸಂಸ್ಕೃತಿಯ ಅನಾವರಣಕ್ಕೆ ಇದು ಪೂರಕ ಎಂಬ ವಾದ ಕೇಳಿಬರುತ್ತಿದ್ದರೆ, ಮತ್ತೊಂದೆಡೆ ದಸರಾದ ಸಾಂಪ್ರದಾಯಿಕ ಚೌಕಟ್ಟು ಮೀರಿ, ಜನರ ವಿರೋಧದ ನಡುವೆಯೂ ಬಲವಂತವಾಗಿ ಆಯೋಜನೆ ಮಾಡುವುದು ಬೇಡ ಎಂಬ ವಾದವೂ ವ್ಯಕ್ತವಾಗುತ್ತಿದೆ.
ಮೈಸೂರು ದಸರಾ ಕೇವಲ ಒಂದು ಪ್ರಾಂತ್ಯಕ್ಕೆ ಸೀಮಿತವಾಗದೆ, ಇಡೀ ಕರ್ನಾಟಕದ ಹಬ್ಬವಾಗಬೇಕು. ಕರಾವಳಿಯ ಹೆಮ್ಮೆಯ ಕಂಬಳವನ್ನು ಮೈಸೂರಿನ ಜನತೆಗೆ ಪರಿಚಯಿಸುವುದು ಸಾಂಸ್ಕöÈತಿಕ ವಿನಿಮಯಕ್ಕೆ ಮತ್ತು ಪ್ರವಾಸೋದ್ಯಮದ ಬೆಳವಣಿಗೆಗೆ ಸಹಕಾರಿ ಎಂಬುದು ಕಂಬಳ ಬೆಂಬಲಿಗರ ನಿಲುವು. ದಸರಾ ಹಬ್ಬಕ್ಕೆ ತನ್ನದೇ ಆದ ಐತಿಹಾಸಿಕ ಮತ್ತು ರಾಜಮನೆತನದ ಹಿನ್ನೆಲೆಯಿದೆ. ಅದರ ಸಾಂಪ್ರದಾಯಿಕ ಸ್ವರೂಪಕ್ಕೆ ಧಕ್ಕೆ ಬರಬಾರದು ಎಂಬುದು ಕೆಲವರ ವಾದವಾದರೆ, ಸುಪ್ರೀಂ ಕೋರ್ಟ್ನ ನಿಯಮಾವಳಿಗಳ ನಡುವೆಯೂ ಕಂಬಳದಲ್ಲಿ ಕೋಣಗಳನ್ನು ಓಡಿಸುವುದು ಪ್ರಾಣಿ ಹಿಂಸೆಯ ವ್ಯಾಪ್ತಿಗೆ ಬರುತ್ತದೆ ಎಂದು ಪ್ರಾಣಿ ದಯಾ ಸಂಘಟನೆಗಳು ಆಕ್ಷೇಪ ವ್ಯಕ್ತಪಡಿಸುತ್ತಿವೆ.

ಹೀಗಾಗಿ ಈ ಸಾರಿಯ ದಸರಾ ಸಮಿತಿಯ ಸಭೆಗಳಲ್ಲಿ ಈ ವಿಷಯ ಸಂಚಲನ ಮೂಡಿಸಿದ್ದು, ಸಾಂಸ್ಕöÈತಿಕ ವೈವಿಧ್ಯತೆ ಮತ್ತು ಸಂಪ್ರದಾಯದ ರಕ್ಷಣೆಯ ನಡುವಿನ ಈ ಸಮರ ಈಗ ಸಾರ್ವಜನಿಕ ವಲಯದಲ್ಲಿ ದೊಡ್ಡ ಚರ್ಚಾ ವಿಷಯವಾಗಿದೆ.
ಸಿಎಂ ಡಿಕೆ ಶಿವಕುಮಾರ್ ಗೆ ಪತ್ರ
ಈ ಬಾರಿಯ ದಸರಾ ಮಹೋತ್ಸವದಲ್ಲಿ ಆಯೋಜಿಸಲು ಉದ್ದೇಶಿಸಿರುವ ಕಂಬಳ ಕ್ರೀಡೆಯನ್ನು ಕೈ ಬಿಡಬೇಕೆಂದು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಅವರಿಗೆ ಪರಿಸರಕ್ಕಾಗಿ ನಾವು ಸಂಘಟನೆ ಪತ್ರದ ಮೂಲಕ ಒತ್ತಾಯಿಸಿದೆ. ವಿಶ್ವ ವಿಖ್ಯಾತ ದಸರಾ ಹಬ್ಬ ಐತಿಹಾಸಿಕ ಹಿನ್ನೆಲೆ, ಭವ್ಯ ಪರಂಪರೆ, ಸಾಂಸ್ಕೃತಿಕ ವೈಶಿಷ್ಟ್ಯಗಳು ಮತ್ತು ಧಾರ್ಮಿಕ ಆಚರಣೆ ಹೊಂದಿದೆ. ಪ್ರತಿ ವರ್ಷ ನವರಾತ್ರಿ ಸಮಯದಲ್ಲಿ ನಡೆಯುವ ಈ ವೈಭವದ ಹಬ್ಬಕ್ಕೆ ದೇಶ ವಿದೇಶಗಳಿಂದ ಪ್ರವಾಸಿಗರು ಬರುತ್ತಾರೆ.
ಯುವ ದಸರಾದಂತಹ ಹೊಸ ಕಾರ್ಯಕ್ರಮಗಳ ಸೇರ್ಪಡೆಯಾಗಿ ದಸರಾ ಸಮಯದಲ್ಲಿ ವಿಪರೀತ ಜನಜಂಗುಳಿ, ವಾಹನ ಸಂಚಾರ ದಟ್ಟಣೆ, ವಾಯು ಮಾಲಿನ್ಯ, ಶಬ್ದ ಮಾಲಿನ್ಯ, ಕಸದ ರಾಶಿಗಳು ಜನರಲ್ಲಿ ರೇಜಿಗೆ ಹುಟ್ಟಿಸುತ್ತಿವೆ ಮತ್ತು ಬಸವಳಿಯುವಂತೆ ಮಾಡುತ್ತಿವೆ. ಗದ್ದಲ, ಆಡಂಬರದ ಅಬ್ಬರದಲ್ಲಿ ದಸರಾ ಹಬ್ಬದ ಅನನ್ಯ ಲಕ್ಷಣಗಳ ಆಚರಣೆಗಳು ಮಸುಕಾಗುತ್ತಿದ್ದು ದಸರಾ ಹಬ್ಬದ ವೈಭವಕ್ಕೆ ಮತ್ತು ಹಿರಿಮೆಗರಿಮೆಗೆ ಕುಂದು ಬರುತ್ತಿದೆ. ಈಗ ಅಪಾರ ಸಂಖ್ಯೆಯ ಜನರು ಸೇರುವ ಕಂಬಳ ಕ್ರೀಡೆಯ ಆಯೋಜನೆ ಮೈಸೂರಿನ ಲಕ್ಷಾಂತರ ಜನರಲ್ಲಿ ತೀವ್ರ ಅಸಮಾಧಾನ ಮತ್ತು ಆಕ್ರೋಶ ಮೂಡಿಸಲು ಕಾರಣವಾಗುತ್ತದೆಂದು ಪತ್ರದಲ್ಲಿ ಒತ್ತಾಯಿಸಿದ್ದಾರೆ.

ದಸರಾದಲ್ಲಿ ಕಂಬಳ ನಡೆಸುವುದಕ್ಕೆ ಜನರ ಅಭಿಪ್ರಾಯಗಳೇನು?
ಈ ಬಾರಿಯ ದಸರಾ ಮಹೋತ್ಸವದಲ್ಲಿ ಕರಾವಳಿಯ ಕಂಬಳ ಕ್ರೀಡೆ ಆಯೋಜನೆಗೆ ಪರ-ವಿರೋಧ ಚರ್ಚೆ ನಡೆಯುತ್ತಿದೆ. ಆಯೋಜನೆಗೂ ಮೊದಲು ಜನಾಭಿಪ್ರಾಯ ರೂಪಿಸಬೇಕು. ಕಂಬಳ ಆಯೋಜನೆಯಿಂದಾಗುವ ಸಾಧಕ-ಬಾಧಕಗಳ ಕುರಿತು ¸ ರಾಜ್ಯ ಸರ್ಕಾರಕ್ಕೆ ಮನವರಿಕೆ ಮಾಡಿಕೊಡಬೇಕು. ಈ ಮೂಲಕ ಕಂಬಳ ಹೆಸರಿನಲ್ಲಿ ಆಗುವ ದುಂದುವೆಚ್ಚಕ್ಕೆ ಕಡಿವಾಣ ಹಾಕಬೇಕಿದೆ.
–ಸುಧೀರ್ ಒಂಬತ್ಕೆರೆ, ನಿವೃತ್ತ ಮೇಜರ್
ಕಂಬಳ ಆಯೋಜನೆಗೆ ವಿಶಾಲ ಪ್ರದೇಶ ಬೇಕು. ಅದಕ್ಕಾಗಿ ಮರ ಕಡಿಯಬೇಕು. ಅಪಾರ ಪ್ರಮಾಣದ ನೀರು ಪೋಲಾಗುತ್ತದೆ. ಮೊದಲೇ ಮಳೆಯಾಗದೆ ಬರದ ಛಾಯೆ ಆವರಿಸಿದೆ. ರಾಜ್ಯದ ಬಹುತೇಕ ಜಲಾಶಯಗಳಲ್ಲಿ ನೀರಿಲ್ಲ. ಇಂತಹ ಸಂದರ್ಭದಲ್ಲಿ ಕಂಬಳ ಆಯೋಜಿಸುವುದು ಸರಿಯಲ್ಲ. ಮೈಸೂರಿನ ಎಲ್ಲ ಸಂಘ-ಸAಸ್ಥೆಗಳು, ಪರಂಪರೆ ಮತ್ತು ಪರಿಸರ ಉಳಿಸಲು ಒಗ್ಗೂಡಿ ಹೋರಾಡಬೇಕಿದೆ. ಬರದ ಪರಿಸ್ಥಿತಿಯಲ್ಲಿ ಅದ್ದೂರಿ ದಸರಾ ಬದಲಿಗೆ ಸರಳ ದಸರಾ ಆಚರಣೆಯೇ ಸೂಕ್ತ.
–ಪರಶುರಾಮೇಗೌಡ, ಪರಿಸರಕ್ಕಾಗಿ ನಾವು ಸಂಘಟನೆ

ವಿಜಯನಗರ ಸಾಮ್ರಾಜ್ಯದ ಕೃಷ್ಣದೇವ ರಾಯನ ಕಾಲದಿಂದ ನಡೆಯುತ್ತಿರುವ ನಾಡಹಬ್ಬ ದಸರಾ ಮಹೋತ್ಸವಕ್ಕೆ ತನ್ನದೇ ಆದ ವೈಭವದ ಪರಂಪರೆ ಇದೆ. 400ಕ್ಕೂ ಹೆಚ್ಚು ವರ್ಷಗಳ ದಸರಾ ಇತಿಹಾಸದಲ್ಲಿ ಉತ್ಸವದಲ್ಲಿ ಕಂಬಳ ನಡೆಸಿರುವ ದಾಖಲೆಯೇ ಇಲ್ಲ. ಹೀಗಿರುವಾಗ ಹೊಸದಾಗಿ ಸೇರ್ಪಡೆ ಮಾಡುವ ಅಗತ್ಯ ಏನಿದೆ? ಅಲ್ಲದೆ ಕಂಬಳ ಆಯೋಜನೆಯಿಂದ ಹೆಚ್ಚು ಹಣ ವ್ಯಯಿಸಬೇಕು. ಪರಿಸರಕ್ಕೂ ಹಾನಿಯಾಗುತ್ತಿದೆ. ಹೀಗಾಗಿ. ಮೈಸೂರು ದಸರೆಯ ಪರಂಪರೆ, ಹಿರಿಮೆ-ಗರಿಮೆಗೆ ಧಕ್ಕೆ ತರುವ ಇಂತಹ ಕ್ರೀಡೆ ಆಯೋಜನೆ ಮಾಡುವುದು ಬೇಡ.
–ಪ್ರೊ.ಎನ್.ಎಸ್.ರಂಗರಾಜು, ಇತಿಹಾಸ ತಜ್ಞ
ಸರ್ಕಾರ ಸ್ಥಳೀಯರ ಅಭಿಪ್ರಾಯ ಕೇಳದೇ ಕಂಬಳ ಕ್ರೀಡೆಯನ್ನು ಆಯೋಜನೆ ಮಾಡಲು ಮುಂದಾಗಿರುವುದು ಸರಿಯಲ್ಲ. ಇದು ಕರಾವಳಿ ಭಾಗದ ಜನಪ್ರಿಯ ಗ್ರಾಮೀಣ ಕ್ರೀಡೆಯಾಗಿದೆ. ಇದಕ್ಕೆ ಆ ನೆಲದ ಪ್ರಾದೇಶಿಕ ವೈಶಿಷ್ಟ್ಯತೆಯೂ ಇದೆ. ಅದನ್ನು ವಾಣಿಜ್ಯದ ಉದ್ದೇಶದಿಂದ ಮೈಸೂರಿನಲ್ಲಿ, ಅದರಲ್ಲೂ ದಸರಾ ಸಂದರ್ಭದಲ್ಲಿ ನಡೆಸುವುದು ಬೇಡ. ಬರಗಾಲ ಬರುವ ಸಾಧ್ಯತೆ ಇರುವುದರಿಂದ ಈ ಬಾರಿಯ ದಸರಾವನ್ನು ಸರಳ, ಸಾಂಪ್ರದಾಯಿಕವಾಗಿ ಆಚರಿಸಲಿ.
–ಬಡಗಲಪುರ ನಾಗೇಂದ್ರ ಕರ್ನಾಟಕ ರಾಜ್ಯ ರೈತ ಸಂಘದ ಅಧ್ಯಕ್ಷ

ದಸರಾದಲ್ಲಿ ಸ್ಥಳೀಯ ಕಲಾವಿದರಿಗೆ ಆದ್ಯತೆ ನೀಡುವುದಿಲ್ಲ ಎಂಬ ಆರೋಪವಿದೆ. ಯುವ ದಸರಾದಲ್ಲಿ ಬೇರೆ ರಾಜ್ಯಗಳ ಕಲಾವಿದರಿಗೆ ಅವಕಾಶ ನೀಡುತ್ತಾರೆ. ಇದೀಗ ಕಂಬಳಕ್ಕೆ ಹೆಚ್ಚಿನ ಆದ್ಯತೆ ಕೊಟ್ಟು ಸ್ಥಳೀಯ ಕಲೆ, ಕಲಾವಿದರನ್ನು ಕಡೆಗಣಿಸಲಾಗುತ್ತಿದೆ. ಬೇರೆ ಜಿಲ್ಲೆಯ ಕ್ರೀಡೆಯಾದ ಕಂಬಳವನ್ನು ಮೈಸೂರು ದಸರಾ ಮಹೋತ್ಸವದ ಸಂದರ್ಭದಲ್ಲಿ ಆಯೋಜಿಸಬಾರದರು. ಇದಕ್ಕೆ ಸ್ಥಳೀಯರಾದ ನಮ್ಮ ವಿರೋಧವಿದೆ.
–ಭಾನು ಮೋಹನ್, ಪರಿಸರ ಹೋರಾಟಗಾರ್ತಿ
ದಸರಾ ವೇಳೆ ಕಂಬಳ ಬೇಡ ಎಂದು ಬಿಜೆಪಿ ನಾಯಕರು ವಿರೋಧ ವ್ಯಕ್ತಪಡಿಸುತ್ತಿರುವುದು ರಾಜ್ಯದ ಜನತೆಯನ್ನು ಭಾಷೆ, ಕಲೆ, ಸಂಸ್ಕೃತಿ ಕ್ರೀಡೆ ಹೆಸರಿನಲ್ಲಿ ಒಡೆದು ಆಳುವ ನೀತಿಯಾಗಿದೆ. ಇತರೆ ರಾಜ್ಯಗಳ ಕಥಕ್, ಕೂಚಿಪುಡಿ, ಚಂಬಾಳೆ ವಾದ್ಯಗಳನ್ನು ದಸರಾ ವೇಳೆ ಪ್ರದರ್ಶಿಸಲಾಗುತ್ತಿದೆ. ಹೀಗಿರುವಾಗ ಕಂಬಳ ಏಕೆ ಬೇಡ. ಕಂಬಳದಿAದ ಸಹಬಾಳ್ವೆ, ಸಹಮತ, ಕ್ರೀಡಾ ಮನೋಭಾವ ಹೆಚ್ಚುತ್ತದೆ
–ರಾಜೇಶ್.ಎಸ್, ನಗರ ಕಾಂಗ್ರೆಸ್ ವಕ್ತಾರ

ಈ ಬಾರಿಯ ದಸರಾದಲ್ಲಿ ಕಂಬಳ ಆಯೋಜಿಸಲು ಸರ್ಕಾರ ಮುಂದಾಗಿದೆ. ಆದರೆ, ಪರಿಸರಕ್ಕೆ ಹಾನಿ ಮಾಡಿ ಕಂಬಳ ಆಯೋಜಿಸುವುದು ಬೇಡ. ಬದಲಿಗೆ ಮರಗಿಡಗಳಿಲ್ಲದ ಖಾಲಿ ಜಾಗದಲ್ಲಿ ಮಾಡಲಿ. ಪ್ರಸ್ತುತ ಗುರುತಿಸಿರುವ ಸಾತಗಳ್ಳಿ ಬಳಿಯ ಜಾಗದಲ್ಲಿ ಮಾಡುವುದು ಬೇಡ. ಹುಣಸೂರು ರಸ್ತೆಯಲ್ಲಿರುವ ಸುಮಾರು ಜಾಗಗಳಿದ್ದು, ಅಲ್ಲಿ ಬೇಕಾದರೆ ಆಯೋಜನೆ ಮಾಡಲಿ.
–ಎಸ್.ಬಾಲಕೃಷ್ಣ, ಮೈಸೂರು ಕನ್ನಡ ವೇದಿಕೆ ಅಧ್ಯಕ್ಷ
ದಸರಾದಲ್ಲಿ ಕಂಬಳ ಆಯೋಜಿಸಿರುವುದು ಯಾರಿಗೆ? ಯಾಕೆ? ಬಲವಂತವಾಗಿ ಹೇರುವ ಪ್ರಯತ್ನ ಮಾಡುತ್ತಿರುವುದೇಕೆ? ಈ ಕುರಿತು ಶಾಸಕ ಅಶೋಕ್ ರೈಗೆ ಪತ್ರ ಬರೆದಿದ್ದೇನೆ. ಕಂಬಳವನ್ನು ಪ್ರತಿ ವರ್ಷವೂ ಮಾಡುತ್ತೀರಾ? ಕಂಬಳದಿಂದಾಗುವ ಅನುಕೂಲ, ಅನಾನುಕೂಲಗಳೇನು ಎಂದು ಕೇಳಿದ್ದೇನೆ. 7 ದಿನಗಳಲ್ಲಿ ಉತ್ತರ ಕೊಡದಿದ್ದರೆ ಹೈ ಕೋರ್ಟ್ನಲ್ಲಿ ಅರ್ಜಿ ಸಲ್ಲಿಸುತ್ತೇನೆ.
–ಸ್ನೇಹಮಯಿ ಕೃಷ್ಣ, ಸಾಮಾಜಿಕ ಹೋರಾಟಗಾರ

ದಸರಾ ನಾಡಹಬ್ಬ. ರಾಜ್ಯದ ಎಲ್ಲಾ ಜಿಲ್ಲೆಗಳ ಸಂಸ್ಕೃತಿ, ಸಂಪ್ರದಾಯಗಳನ್ನು ಪ್ರದರ್ಶಿಸಲಾಗುತ್ತದೆ. ಕಂಬಳ ಕರಾವಳಿ ಭಾಗದ ಜನಪ್ರಿಯೆ ಕ್ರೀಡೆ. ಮೈಸೂರಿನ ಬಹುತೇಕರು ಕಂಬಳ ನೋಡಿಲ್ಲ. ಅಲ್ಲದೆ, ದಸರಾಗೆ ದೇಶ ವಿದೇಶದ ಲಕ್ಷಾಂತರ ಪ್ರವಾಸಿಗರು ಬರುತ್ತಾರೆ. ಅವರಿಗೆ ನಮ್ಮ ಭವ್ಯ ಪರಂಪರೆ ಪರಿಚಯಿಸಬಹುದು. ಹೀಗಾಗಿ ಸರ್ಕಾರ ದಸರಾ ಆಯೋಜನೆ ಮಾಡಿರುವುದರಲ್ಲಿ ಯಾವುದೇ ತಪ್ಪಿಲ್ಲ.
–ಕೆ.ಮಹೇಶ್, ಕಾಂಗ್ರೆಸ್ ವಕ್ತಾರ








