LatestMysore

ಡಾ. ಫ. ಗು. ಹಳಕಟ್ಟಿ ಜಯಂತಿ ಅಂಗವಾಗಿ ವಚನ ಕುಮಾರಸ್ವಾಮಿ, ರೂಪಾ ಕುಮಾರಸ್ವಾಮಿ ದಂಪತಿಗೆ “ವಚನ ಕುಸುಮಗಳು” ಪ್ರಶಸ್ತಿ ಪ್ರದಾನ

ಮೈಸೂರು: ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ವತಿಯಿಂದ ಅರಮನೆ  ಜಪದಕಟ್ಟೆ ಮಠದಲ್ಲಿ ಆಯೋಜಿಸಿದ್ದ ಡಾ. ಫ. ಗು. ಹಳಕಟ್ಟಿ ಅವರ ಜಯಂತಿ ಅಂಗವಾಗಿ ಮೈಸೂರಿನ  ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕರಾದ ವಚನ ಕುಮಾರಸ್ವಾಮಿ ಹಾಗೂ  ರೂಪಾ ಕುಮಾರಸ್ವಾಮಿ ದಂಪತಿಗಳಿಗೆ ವಚನ ಸಾಹಿತ್ಯದ ಪ್ರಸಾರ, ಪ್ರಚಾರ ಮತ್ತು ಬಸವತತ್ತ್ವದ ಸೇವೆಯನ್ನು ಗುರುತಿಸಿ ವಚನ ಕುಸುಮಗಳು ಪ್ರಶಸ್ತಿಯನ್ನು ಪ್ರದಾನಿಸಿ ಗೌರವಿಸಲಾಯಿತು.

ಪ್ರಶಸ್ತಿಯನ್ನು ಸ್ವೀಕರಿಸಿ ಮಾತನಾಡಿದ ರೂಪಾ ಕುಮಾರಸ್ವಾಮಿ ಅವರಯ ಡಾ. ಫ. ಗು. ಹಳಕಟ್ಟಿ ಅವರು ವಚನ ಸಾಹಿತ್ಯದ ಸಂಗ್ರಹಕ್ಕಾಗಿ ತಮ್ಮ ಇಡೀ ಜೀವನವನ್ನೇ ಮುಡಿಪಾಗಿಟ್ಟ ಮಹನೀಯರು. ಬಡತನವನ್ನು ಲೆಕ್ಕಿಸದೆ, ತಮ್ಮ ಮನೆಯನ್ನೇ ಮಾರಿ ಮುದ್ರಣಾಲಯ ಸ್ಥಾಪಿಸಿ ವಚನಗಳ ಪ್ರಕಟಣೆಗೆ ಶ್ರಮಿಸಿದರು. ಅನೇಕ ಕಷ್ಟ–ನಷ್ಟಗಳನ್ನು ಎದುರಿಸಿದರೂ ಸಮಾಜಕ್ಕೆ ವಚನ ಸಾಹಿತ್ಯದ ಅಮೂಲ್ಯ ಸಂಪತ್ತನ್ನು ನೀಡಿದ್ದಾರೆ.

ಅವರ ತ್ಯಾಗ ಮತ್ತು ಪರಿಶ್ರಮದ ಫಲವೇ ಇಂದು ವಚನ ಸಾಹಿತ್ಯ ನಮ್ಮೆಲ್ಲರ ಕೈ ಸೇರಿದೆ.  ಒಮ್ಮೆ ರಾಷ್ಟ್ರಕವಿ ಡಾ. ಬಿ. ಎಂ. ಶ್ರೀ ಅವರು ವಿಜಯಪುರಕ್ಕೆ ಬಂದಾಗ, ನೀವು ಗೋಳಗುಮ್ಮಟ ನೋಡಲು ಬಂದಿದ್ದೀರಾ?’ ಎಂದು ಕೇಳಿದಾಗ, ಇಲ್ಲ, ನಾನು ವಚನ ಗುಮ್ಮಟ ನೋಡಲು ಬಂದಿದ್ದೇನೆ ಎಂದು ಡಾ. ಫ. ಗು. ಹಳಕಟ್ಟಿ ಅವರನ್ನು ಉಲ್ಲೇಖಿಸಿ ಹೇಳಿದ ಮಾತು ಅವರ ಅಪೂರ್ವ ಸಾಹಿತ್ಯಸೇವೆಗೆ ಸಂದ ಅತ್ಯುನ್ನತ ಗೌರವವಾಗಿದೆ. ಅವರ ಪರಿಶ್ರಮವನ್ನು ಪ್ರತಿಯೊಬ್ಬರೂ ಅರಿತು ಗೌರವಿಸಬೇಕು” ಎಂದು ತಿಳಿಸಿದರು.

ನಮಗೆ ದೊರೆತಿರುವ ವಚನ ಸಾಹಿತ್ಯವನ್ನು ಕೇವಲ ಓದುವುದಷ್ಟೇ ಅಲ್ಲ, ಅದರ ಜೀವನಮೌಲ್ಯಗಳನ್ನು ನಮ್ಮ ಬದುಕಿನಲ್ಲಿ ಅಳವಡಿಸಿಕೊಂಡು ಸಾರ್ಥಕ ಬದುಕನ್ನು ಕಟ್ಟಿಕೊಳ್ಳೋಣ” ಎಂದು  ಕರೆ ನೀಡಿದರು.

ಶರಣು ವಿಶ್ವವಚನ ಫೌಂಡೇಷನ್ ಸಂಸ್ಥಾಪಕ ವಚನ ಕುಮಾರಸ್ವಾಮಿ ಅವರು ಮಾತನಾಡಿ ಇಂದು ವಚನ ಸಾಹಿತ್ಯವು ಜನಮಾನಸಕ್ಕೆ ತಲುಪಿ ವಿಶ್ವದಾದ್ಯಂತ ಪ್ರಚಾರವಾಗಲು ಮೂರು ಮಹನೀಯರ ಅಪಾರ ಪರಿಶ್ರಮವೇ ಪ್ರಮುಖ ಕಾರಣವಾಗಿದೆ. ಶರಣ ಸಂಸ್ಕೃತಿಯಲ್ಲಿ ಅವರನ್ನು ಗುರು–ಲಿಂಗ–ಜಂಗಮ ಸ್ವರೂಪಗಳಾಗಿ ಕಾಣಬಹುದು. ಡಾ. ಫ. ಗು. ಹಳಕಟ್ಟಿ ಅವರು ವಚನ ಸಾಹಿತ್ಯವನ್ನು ಸಂಗ್ರಹಿಸುವ ಸಲುವಾಗಿ ತಡಕಾಡದ ಕೇರಿಗಳಿಲ್ಲ, ಹುಡುಕಾಡದ ಊರುಗಳಿಲ್ಲ, ಅನ್ವೇಷಿಸದ ದೇವಾಲಯಗಳಿಲ್ಲ, ಸಂಶೋಧಿಸದ ಸ್ಥಳಗಳಿಲ್ಲ. ತಮ್ಮ ಇಡೀ ಬದುಕನ್ನೇ ವಚನ ಸಾಹಿತ್ಯದ ಸಂಗ್ರಹ, ಸಂಪಾದನೆ ಮತ್ತು ಪ್ರಕಟಣೆಗೆ ಮುಡಿಪಾಗಿಟ್ಟ ಅವರು ಶರಣ ಸಂಸ್ಕೃತಿಯಲ್ಲಿ ಗುರುಸ್ವರೂಪರು.

ಕರ್ನಾಟಕದ ಗಾಂಧಿ ಹರ್ಡೇಕರ್ ಮಂಜಪ್ಪ ಅವರು ದಾವಣಗೆರೆಯಲ್ಲಿ ಶ್ರೀ ಮೃತ್ಯುಂಜಯ ಮಹಾಸ್ವಾಮಿಗಳೊಂದಿಗೆ ಸೇರಿ ವಿಶ್ವದಲ್ಲೇ ಮೊದಲ ಬಾರಿಗೆ ಬಸವ ಜಯಂತಿಯನ್ನು ಆಚರಿಸಿದರು. ಅಲ್ಲದೆ, ಬಸವಣ್ಣನವರ ತತ್ವವನ್ನು ಮಹಾತ್ಮ ಗಾಂಧೀಜಿಯವರಿಗೆ ಪರಿಚಯಿಸುವಲ್ಲಿ ಮಹತ್ವದ ಪಾತ್ರ ವಹಿಸಿದರು. ಆದ್ದರಿಂದ ಅವರನ್ನು ಲಿಂಗಸ್ವರೂಪ ಎಂದು ಗೌರವಿಸಲಾಗುತ್ತದೆ. ರೆವರೆಂಡ್ ಉತ್ತಂಗಿ ಚೆನ್ನಪ್ಪ ಅವರು ಅನುಭವ ಮಂಟಪದ ಕುರಿತು ಇಂಗ್ಲಿಷ್ ಭಾಷೆಯಲ್ಲಿ ಕೃತಿ ರಚಿಸಿ ವಿದೇಶಗಳಲ್ಲಿಯೂ ಬಸವತತ್ತ್ವ ಮತ್ತು ವಚನ ಸಾಹಿತ್ಯವನ್ನು ಪರಿಚಯಿಸಿದರು. ಈ ಅಪೂರ್ವ ಸೇವೆಯ ಕಾರಣ ಅವರನ್ನು ಜಂಗಮಸ್ವರೂಪ ಎಂದು ಕರೆಯಬಹುದು ಎಂದು ಹೇಳಿದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಅಧ್ಯಕ್ಷೆ ಧನ್ಯ ಸತ್ಯೇಂದ್ರಮೂರ್ತಿ ಮಾತನಾಡಿ, ಜೀವನದ ಮೊದಲ ಪುಟ ಹುಟ್ಟು, ಕೊನೆಯ ಪುಟ ಸಾವು. ಈ ಎರಡರ ಮಧ್ಯೆ ದೊರೆತಿರುವ ಅಮೂಲ್ಯ ಜೀವನವನ್ನು ಸತ್ಸಂಗ, ಸತ್ಕಾರ್ಯ ಮತ್ತು ಮೌಲ್ಯಯುತ ಸೇವೆಯ ಮೂಲಕ ಸಾರ್ಥಕಪಡಿಸಿಕೊಳ್ಳಬೇಕು. ವಚನ ಸಾಹಿತ್ಯದ ಪ್ರಸಾರ ಮತ್ತು ಪ್ರಚಾರಕ್ಕಾಗಿ ನಿರಂತರವಾಗಿ ಶ್ರಮಿಸುತ್ತಿರುವ ಶರಣು ವಿಶ್ವವಚನ ಫೌಂಡೇಶನ್ ಡಾ. ಫ. ಗು. ಹಳಕಟ್ಟಿಯವರ ಆದರ್ಶದ ಮಾರ್ಗದಲ್ಲಿ ಸಾಗುತ್ತಿದ್ದು, ವಚನ ಸೇವೆಯನ್ನು ಮನೆಮನೆಗೂ ತಲುಪಿಸುವ ಮಹತ್ತರ ಕಾರ್ಯವನ್ನು ಮಾಡುತ್ತಿದೆ.

ಈ ಅಮೂಲ್ಯ ಸೇವೆಯನ್ನು ಗುರುತಿಸಿ “ವಚನ ಕುಸುಮಗಳು” ಪ್ರಶಸ್ತಿಯನ್ನು ನೀಡಿ ಗೌರವಿಸಿರುವುದು ಕೇವಲ ವ್ಯಕ್ತಿಗಲ್ಲ, ವಚನ ಸಾಹಿತ್ಯದ ಪ್ರಸಾರ-ಪ್ರಚಾರದ ಸೇವೆಗೆ ಸಂದ ಗೌರವವಾಗಿದೆ ಎಂದರು.

ಅರಮನೆ ಜಪದಕಟ್ಟೆ ಮಠದ ಪರಮಪೂಜ್ಯ ಶ್ರೀ ಮುಮ್ಮಡಿ ಚಂದ್ರಶೇಖರ ಶಿವಾಚಾರ್ಯ ಸ್ವಾಮೀಜಿಗಳು ಮಾತನಾಡಿ, ಹೊಟ್ಟೆಯ ಹಸಿವನ್ನು ಯಾವಾಗ ಬೇಕಾದರೂ ಆಹಾರದ ಮೂಲಕ ನೀಗಿಸಬಹುದು. ಆದರೆ ಜ್ಞಾನದ ಹಸಿವನ್ನು ನೀಗಿಸಿಕೊಳ್ಳಲು ಸತ್ಸಂಗ, ಸದುಪದೇಶ ಹಾಗೂ ವಚನ ಸಾಹಿತ್ಯದಂತಹ ಜ್ಞಾನಮಾರ್ಗಗಳೇ ಸಾಧನವಾಗುತ್ತವೆ.

ಡಾ. ಫ. ಗು. ಹಳಕಟ್ಟಿಯವರು ವಚನಗಳನ್ನು ಸಂಗ್ರಹಿಸಿ, ಪ್ರಕಟಿಸಿ, ಸಮಾಜಕ್ಕೆ ತಲುಪಿಸಿದ ಪರಿಣಾಮ ಅನೇಕ ಜನರ ಜ್ಞಾನದ ಹಸಿವು ನೀಗುವಂತಾಯಿತು. ಅವರ ಈ ಮಹತ್ತರ ಸೇವೆ ಕನ್ನಡ ನಾಡಿನ ಸಾಂಸ್ಕೃತಿಕ ಮತ್ತು ಆಧ್ಯಾತ್ಮಿಕ ಪರಂಪರೆಗೆ ಅಮೂಲ್ಯ ಕೊಡುಗೆಯಾಗಿದೆ. ಲಿಂಗದೇಹಿ ಸದಾ ಶುದ್ಧಿಲ ಎಂಬ ವಚನದ ಆಶಯವನ್ನು ಉಲ್ಲೇಖಿಸಿದ ಸ್ವಾಮೀಜಿಗಳು, ಇಷ್ಟಲಿಂಗವನ್ನು ಅಷ್ಟಾವರಣ, ನಿಷ್ಠೆ ಮತ್ತು ಅಚಲ ಭಕ್ತಿಯಿಂದ ಪೂಜಿಸುವವರ ಮನಸ್ಸು ಹಾಗೂ ತನುವು ಶುದ್ಧವಾಗಿರುತ್ತದೆ. ವ್ಯಕ್ತಿಯ ಆಂತರಿಕ ಶುದ್ಧಿಯೇ ನಿಜವಾದ ಧರ್ಮಾಚರಣೆಯ ಮೂಲವಾಗಿದ್ದು, ಸಮಾಜದಲ್ಲಿ ಶಾಂತಿ, ಸೌಹಾರ್ದ ಮತ್ತು ಸದ್ಭಾವನೆ ಬೆಳೆಯಲು ಮನಸ್ಸಿನ ಶುದ್ಧತೆ ಅತ್ಯಂತ ಮುಖ್ಯವಾಗಿದೆ ಎಂದರು.

ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ದೂರ ಶಿವಕುಮಾರ್  ಮಾತನಾಡಿ, ಯಾವುದೇ ಸಂಘ-ಸಂಸ್ಥೆಯ ಯಶಸ್ಸು ಅದರ ನಿರಂತರ ಚಟುವಟಿಕೆಗಳು ಮತ್ತು ಸಮಾಜಮುಖಿ ಕಾರ್ಯಗಳಿಂದಲೇ ಅಳೆಯಲ್ಪಡುತ್ತದೆ. ಮಹಿಳಾ ಘಟಕವು ಕಳೆದ ಹಲವು ವರ್ಷಗಳಿಂದ ವಿವಿಧ ಸಾಮಾಜಿಕ, ಸಾಂಸ್ಕೃತಿಕ ಹಾಗೂ ಧಾರ್ಮಿಕ ಚಟುವಟಿಕೆಗಳನ್ನು ಯಶಸ್ವಿಯಾಗಿ ನಡೆಸಿಕೊಂಡು ಬರುತ್ತಿದ್ದು, ಇದೀಗ ಒಂದು ವಿಶೇಷ ಹಾಗೂ ಅರ್ಥಪೂರ್ಣ ಕಾರ್ಯಕ್ರಮವನ್ನು ಆಯೋಜಿಸಿರುವುದು ಸಂತೋಷದ ವಿಷಯವಾಗಿದೆ. ಇಂತಹ ಕಾರ್ಯಕ್ರಮಗಳು ಸಮಾಜದಲ್ಲಿ ಉತ್ತಮ ಮೌಲ್ಯಗಳನ್ನು ಬೆಳೆಸುವುದರ ಜೊತೆಗೆ ಸಂಘಟನೆಯ ಕಾರ್ಯವೈಖರಿಗೆ ಇನ್ನಷ್ಟು ಬಲ ತುಂಬುತ್ತವೆ ಎಂದರು.

ಮೈಸೂರು ವಚನಕೋಗಿಲೆ  ಶೈಲಾ ಸಿದ್ದಾರಾಮಪ್ಪ ಅವರ ನೇತೃತ್ವದ ವಚನ ದಾಸೋಹ ತಂಡವು ಸುಮಧುರ ವಚನಗಾಯನದ ಮೂಲಕ ಸಭಿಕರನ್ನು ಆಧ್ಯಾತ್ಮಿಕ ಭಾವಲೋಕಕ್ಕೆ ಕೊಂಡೊಯ್ದಿತು. ಒಂದರ ಹಿಂದೆ ಒಂದಾಗಿ ಗಾಯನಗೊಂಡ ವಚನಗಳು ಸಭಾಂಗಣದಲ್ಲಿ ವಚನದ ಪರಿಮಳವನ್ನೇ ಹರಡಿದಂತಾಗಿ, ಬಸವತತ್ತ್ವದ ಸಂದೇಶವನ್ನು ಹೃದಯಗಳಿಗೆ ತಲುಪಿಸಿದವು. ಅವರ ಭಾವಪೂರ್ಣ ಗಾಯನ, ಸುಶ್ರಾವ್ಯ ಸಂಗೀತ ಮತ್ತು ಸಮನ್ವಯದ ಪ್ರಸ್ತುತಿಯು ಕಾರ್ಯಕ್ರಮಕ್ಕೆ ವಿಶೇಷ ಮೆರುಗು ತಂದಿತು.

ಗೀತ ರಾಜಶೇಖರ್ ಪ್ರಾರ್ಥನೆ ಮಾಡಿದರು, ಸುಜಾತ ಮುಳ್ಳೂರು ಸ್ವಾಗತಿಸಿದರು. ಅತಿಥಿಗಳ ಪರಿಚಯವನ್ನು  ಚಂದ್ರಕಲಾ  ಮತ್ತು ಶೈಲಾ ಸಿದ್ಧರಾಮಪ್ಪ ಮಾಡಿದರು.ರೇಣುಕ ಬಸವಣ್ಣ ವಂದಿಸಿದರು. ಪೂರ್ಣಿಮಾ ನಿರೂಪಿಸಿದರು. ಕಾರ್ಯಕ್ರಮದಲ್ಲಿ ಅಖಿಲ ಭಾರತ ವೀರಶೈವ ಲಿಂಗಾಯತ ಮಹಾಸಭಾ ಮಹಿಳಾ ಘಟಕದ ಕಾರ್ಯದರ್ಶಿ ಮಲ್ಲಿಕಾ ಮಹದೇವಸ್ವಾಮಿ, ಸತ್ಯೇಂದ್ರಮೂರ್ತಿ, ದಾರಿಪುರ ಚಂದ್ರಶೇಖರ್‌, ಶರಣು ವಿಶ್ವವಚನ ಫೌಂಡೇಷನ್‌ ಕೇಂದ್ರೀಯ ಸಂಚಾಲಕ ವಿ. ಲಿಂಗಣ್ಣ ಇತರರು ಉಪಸ್ಥಿತರಿದ್ದರು.

admin
the authoradmin

Leave a Reply