DasaraLatest

ಮೈಸೂರು ದಸರಾ ವಿಶ್ವವಿಖ್ಯಾತಿಯಾಗಿದ್ದು ಹೇಗೆ? ಇದು ದಸರಾ ಇತಿಹಾಸದ ಮೆಲುಕು

ಕಳೆದ  ನಾಲ್ಕು ಶತಮಾನಗಳಿಂದ ನಡೆದುಕೊಂಡು ಬರುತ್ತಿರುವ ಮೈಸೂರು ದಸರಾ ಭಾರತದ ಸಂಸ್ಕೃತಿಯ ಚರಿತ್ರೆಯಲ್ಲೇ  ದಾಖಲೆ ಬರೆದ ಆಚರಣೆಯಾಗಿದೆ.. ಇವತ್ತಿಗೂ ದೇಶ ವಿದೇಶಗಳಿಂದ ಮೈಸೂರು ದಸರಾವನ್ನು ವೀಕ್ಷಿಸಲು ಪ್ರವಾಸಿಗರು ಬರುತ್ತಾರೆಂದರೆ ಅದರ ಹಿರಿಮೆ ಏನೆಂಬುದು ಸುಲಭವಾಗಿ ಗೊತ್ತಾಗಿ ಬಿಡುತ್ತದೆ

ಆಳರಸರ ಮಹೋತ್ಸವವಾಗಿ ಮೆರೆದು ಬದಲಾದ ಕಾಲಘಟ್ಟದಲ್ಲಿ ಒಂದಷ್ಟು ಬದಲಾವಣೆಯೊಂದಿಗೆ ನಾಡಹಬ್ಬವಾಗಿ ಆಚರಿಸಲ್ಪಡುತ್ತಿರುವ ಮೈಸೂರು ದಸರಾ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆಗೆ ಸಾಕ್ಷಿಯಾಗಿದೆ.

ನಾಲ್ಕು ಶತಮಾನಗಳಿಂದ ಸುದೀರ್ಘವಾಗಿ ನಡೆದು ಬರುತ್ತಿರುವ ಮೈಸೂರು ದಸರಾದಂತಹ ಆಚರಣೆಯನ್ನು ಬೇರೆಡೆ ಕಾಣುವುದು ಸಾಧ್ಯವಿಲ್ಲ. ಹೀಗಾಗಿಯೇ ಮೈಸೂರು ದಸರಾ ವಿಭಿನ್ನ ಮತ್ತು ವಿಶಿಷ್ಟವಾಗಿ ಗೋಚರಿಸುತ್ತದೆ.

ಮೈಸೂರಿನ ಅಧಿದೇವತೆ ಶ್ರೀ ಚಾಮುಂಡೇಶ್ವರಿಯ ಆರಾಧನೆಯೊಡನೆ ಮೈಸೂರು ದಸರಾ ಆರಂಭವಾಗುತ್ತದೆ. ಜತೆಗೆ ನವರಾತ್ರಿ ವೈಭವದ ಜತೆಗೆ ಐತಿಹಾಸಿಕ ಪರಂಪರೆ ಹಾಗೂ ಸಾಂಸ್ಕೃತಿಕ ಹಿರಿಮೆಯೊಂದಿಗೆ ಮೇಳೈಸುತ್ತದೆ. ಮೈಸೂರು ದಸರಾದ ಇತಿಹಾಸವನ್ನು ಕೆದಕುತ್ತಾ ಹೋದರೆ ಕರ್ನಾಟಕದ ಇತಿಹಾಸದಲ್ಲಿ ಸುವರ್ಣ ಯುಗವನ್ನು ಸೃಷ್ಟಿಸಿ ವಿಜಯನಗರ ಸಾಮ್ರಾಜ್ಯ ಕಟ್ಟಿ ವೈಭವದಿಂದ ಮೆರೆದವರು ವಿಜಯನಗರ ಅರಸರು ಎಂಬುದನ್ನು ಅಲ್ಲಗಳೆಯಲಾಗದು..

ನವರಾತ್ರಿ ಉತ್ಸವದ ವಿಜಯ ದಶಮಿಯ ಆಚರಣೆಯ ಮೂಲಕ ದಸರಾ ಹಬ್ಬಕ್ಕೆ ಹೆಚ್ಚಿನ ವೈಭವದ ವರ್ಣಮಯ ಕಳೆ ತಂದುಕೊಟ್ಟವರು ವಿಜಯನಗರ ಅರಸರಲ್ಲೇ ಅತ್ಯಂತ ಪ್ರಖ್ಯಾತರಾಗಿದ್ದ ಶ್ರೀ ಕೃಷ್ಣದೇವರಾಯರು.  ಅವರ ಕಾಲದಲ್ಲಿ  ಹಂಪೆಯಲ್ಲಿರುವ ಮಹಾನವಮಿ ದಿಬ್ಬ ಮತ್ತು ವಿಜಯ ವಿಠಲ ದೇವಾಲಯಗಳು ಈ ಮಹೋತ್ಸವದ ಕೇಂದ್ರಗಳಾಗಿದ್ದವು.

ತಮ್ಮ ಸಾಮ್ರಾಜ್ಯದ ಶಕ್ತಿ-ಸಾಮರ್ಥ್ಯ, ಸಂಪತ್ತು-ಸಮೃದ್ಧಿ, ವೈಭವ-ವೈಭೋಗ, ವೀರತ್ವ-ಧೀರತ್ವ, ಕಲೆ-ಸಾಹಿತ್ಯ, ಸಂಗೀತ-ನೃತ್ಯ, ಸಂಸ್ಕೃತಿ-ಸಂಪನ್ನತೆ.. ಹೀಗೆ ಸಕಲ ವಿಧಗಳಲ್ಲೂ ತಮ್ಮ ಹಿರಿಮೆ-ಗರಿಮೆಗಳನ್ನು ತೋರ್ಪಡಿಸಿಕೊಳ್ಳುವ ಹಿನ್ನೆಲೆಯಲ್ಲಿ ದಸರಾ ಆಚರಣೆಯನ್ನು ಮಾಡಲಾಗುತ್ತಿತ್ತು.

ಅವತ್ತಿನ ಅವರ ಕಾಲದ ದಸರಾ ಆಚರಣೆಯನ್ನು ವೀಕ್ಷಿಸಲು ದೇಶ-ವಿದೇಶಗಳ ಗಣ್ಯಾತಿಗಣ್ಯರು, ಪ್ರವಾಸಿಗರು ಇಲ್ಲಿಗೆ ಭೇಟಿ ನೀಡಿದ ದಾಖಲೆಗಳಿವೆ. 11ನೇ ಶತಮಾನದಲ್ಲಿ ಇಲ್ಲಿಗೆ ಭೇಟಿ ನೀಡಿದ್ದ ವಿದೇಶಿ ಪ್ರವಾಸಿಗರಾದ ಅಲ್ಬೆರೋನಿ, 15-16ನೇ ಶತಮಾನದಲ್ಲಿ ಬಂದಿದ್ದ ಪರ್ಷಿಯಾದ ಅಬ್ದುಲ್ ರಜಾಕ್, ಇಟಲಿಯ ನಿಕೋಲಕೊಂಟಿ, ಪೋರ್ಚುಗೀಸಿನ ಡೊಮಿಂಗೋಪಾಯಸ್ ಮೊದಲಾದವರು ದಸರಾ ವೈಭವವನ್ನು ಪ್ರವಾಸ ಕಥನದಲ್ಲಿ ವಿವರಿಸಿದ್ದಾರೆ.

ವಿಜಯದಶಮಿಯ ದಸರಾ ಮಹೋತ್ಸವವನ್ನು ವಿಜಯನಗರ ಸಾಮ್ರಾಜ್ಯದ ಪತನದ ನಂತರ ಮುಂದುವರಿಸಿಕೊಂಡು ಬಂದವರು ಯದುವಂಶದ ಮೈಸೂರು ಒಡೆಯರು. 1578 ರಿಂದ 1617ರವರೆಗೆ ಆಳ್ವಿಕೆ ನಡೆಸಿದ ಯದುವಂಶದ ರಾಜ ಒಡೆಯರು ಅಂದು ತಮ್ಮ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲಿ 1610ರಲ್ಲಿ ವಿಜಯನಗರದ ರಾಜಪರಂಪರೆಯಂತೆ ದಸರಾ ಮಹೋತ್ಸವವನ್ನು ಮೊದಲಿಗೆ ಆರಂಭಿಸಿದರು.

ಥೇಟ್ ವಿಜಯನಗರ ಅರಸರ ಸಂಪ್ರದಾಯದಂತೆಯೇ ದಸರಾಕ್ಕೆ ಸಂಬಂಧಿಸಿದ ಎಲ್ಲಾ ರೀತಿಯ ಶಾಸ್ತ್ರ ಹಾಗೂ ವಿಧಿ-ವಿಧಾನಗಳನ್ನು ಅತ್ಯಂತ ಶ್ರದ್ಧಾ ಭಕ್ತಿಯಿಂದ ಅಳವಡಿಸಿಕೊಂಡರು. ಈ ಪ್ರಕಾರ ಅಶ್ವಯುಜ ಶುದ್ಧ ಪ್ರಥಮೆಯಂದು ನವರಾತ್ರಿ ಉತ್ಸವ ಶುರುವಾಗಿ ಮಹಾನವಮಿಯ ಕಡೇ ದಿನದವರೆವಿಗೂ ಪ್ರತಿನಿತ್ಯ ಪೂಜೆ- ಪುನಸ್ಕಾರ, ಪೂರ್ವಾಹ್ನ ಮತ್ತು ಮಧ್ಯಾಹ್ನ ಸಿಂಹಾಸನಾರೋಹಣ, ಒಡ್ಡೋಲಗ, ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ಜರುಗಬೇಕೆಂದು ಪಕ್ಕಾ ವಿಧೇಯಕವನ್ನೇ ಮಾಡಿದರು.

1799ರವರೆಗೂ ಮೈಸೂರು ರಾಜ್ಯದ ರಾಜಧಾನಿಯಾಗಿದ್ದ ಶ್ರೀರಂಗಪಟ್ಟಣದಲ್ಲೇ ದಸರಾ ನಡೆಯುತ್ತಿತ್ತು.  ಹೈದರಾಲಿ ಮತ್ತು ಟಿಪ್ಪುವಿನ ಆಳ್ವಿಕೆಯ ನಂತರ ಮತ್ತೆ ಅಧಿಕಾರಕ್ಕೆ ಬಂದ ಯದುಕುಲತಿಲಕ ಶ್ರೀ ಮುಮ್ಮಡಿ ಕೃಷ್ಣರಾಜ ಒಡೆಯರ್ ಅವರು ರಾಜ್ಯದ ರಾಜಧಾನಿಯನ್ನು ಶ್ರೀರಂಗಪಟ್ಟಣದಿಂದ ಮೈಸೂರಿಗೆ ಬದಲಾಯಿಸಿದರು.

1

800ರಿಂದ ಮೈಸೂರಿನಲ್ಲಿ ಮುಮ್ಮಡಿ ಕೃಷ್ಣರಾಜ ಒಡೆಯರ್ ದಸರಾವನ್ನು ಮೈಸೂರಿನಲ್ಲಿ ಆರಂಭಿಸಿದರು. ವರ್ಷದಿಂದ ವರ್ಷಕ್ಕೆ ವೈಭವ ಹೆಚ್ಚುತ್ತಾ ಮುಂದೆ ಮೈಸೂರು ದಸರಾವಾಗಿ ವಿಶ್ವವಿಖ್ಯಾತಿಯಾಯಿತು.

ಅವತ್ತಿನ ದಸರಾ ಆಚರಣೆ ಹೇಗಿತ್ತೆಂದರೆ? ವಿಜಯದಶಮಿಯಂದು ಮಧ್ಯಾಹ್ನ ಮಹಾರಾಜರು ಅಲಂಕೃತ ಆನೆಯ ಮೇಲಿನ ಚಿನ್ನದ ಅಂಬಾರಿಯನ್ನೇರುತ್ತಿದ್ದರು. ಆ ನಂತರ ವೈಭವದ ಜಂಬೂಸವಾರಿಯಲ್ಲಿ ಅಂಬಾ ವಿಲಾಸ ಅರಮನೆಯಿಂದ ಹೊರಟು ಬನ್ನಿಮಂಟಪಕ್ಕೆ ತೆರಳುತ್ತಿದ್ದರು.

ಅಲ್ಲಿ ಬನ್ನಿಪೂಜೆ ಮಾಡಿ ಧ್ವಜ ಹಾರಿಸಿ ಸೈನಿಕರಿಂದ ವಂದನೆ ಸ್ವೀಕರಿಸಿ ನಂತರ ತಾವು ಬಂದ ರಾಜ ಮಾರ್ಗದಲ್ಲೇ ಅರಮನೆಗೆ ವಾಪಸ್ಸಾಗುತ್ತಿದ್ದರು. ಅಲ್ಲಿಗೆ ಜಂಬೂಸವಾರಿ ಮುಗಿಯುತ್ತಿತ್ತು. ಅವತ್ತಿನಿಂದ ಆರಂಭಗೊಂಡ  ಜಂಬೂ ಸವಾರಿ ಇವತ್ತು ಒಂದಷ್ಟು ಬದಲಾವಣೆಯೊಂದಿಗೆ ಇನ್ನಷ್ಟು ಆಕರ್ಷಣೆ ಪಡೆದುಕೊಂಡಿದೆ.

ಸ್ವಾತಂತ್ರ್ಯ ಭಾರತದಲ್ಲಿ ಚಿನ್ನದ ಅಂಬಾರಿಯಲ್ಲಿ ರಾಜರ ಬದಲು ತಾಯಿ  ಚಾಮುಂಡೇಶ್ವರಿಯ ಉತ್ಸವ ಮೂರ್ತಿಯನ್ನಿಟ್ಟು  ಜಂಬೂ ಸವಾರಿ ನಡೆಯುತ್ತಿದೆ. ಜತೆಗೆ ನಾಡಿನ ಹಿರಿಮೆಯನ್ನು ಸಾರುವ ಸ್ತಬ್ದ ಚಿತ್ರಗಳು, ಕಲಾತಂಡಗಳು, ಜನಪದ ನೃತ್ಯಗಳು, ಅಶ್ವದಳ, ಪೊಲೀಸ್ ಬ್ಯಾಂಡ್ ಹೀಗೆ ಹತ್ತು ಹಲವು ಬದಲಾವಣೆಗಳಾಗಿವೆ. ಜತೆಗೆ ಸಂಭ್ರಮವೂ ಇಮ್ಮಡಿಯಾಗಿದೆ. ನೀವು ಇದುವರೆಗೆ ಮೈಸೂರು ದಸರಾದಲ್ಲಿ ಪಾಲ್ಗೊಳ್ಳದೆ ಇದ್ದರೆ ಖಂಡಿತಾ ಬನ್ನಿ…

ಹಿನ್ನಲೆ ಧ್ವನಿ: ಪೃಥ್ವಿ ದೇವರಾಜ್

ಮೈಸೂರಿನ ಕಟ್ಟಿಗೆಯ ಅರಮನೆ ಏನಾಯಿತು?  ಇದು ಅಂಬಾವಿಲಾಸ ಅರಮನೆ ರಹಸ್ಯ!

admin
the authoradmin

Leave a Reply