LatestNews

ಅಂಕೇಗೌಡರ ಪುಸ್ತಕ ಮನೆಯನ್ನು ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸಬೇಕು: ಸಾಹಿತಿ ಟಿ. ಸತೀಶ್ ಜವರೇಗೌಡ

 ಶ್ರೀರಂಗಪಟ್ಟಣ: ಮೌಲಿಕವೂ ಅಮೂಲ್ಯವೂ ಆದಂತಹ ಅಪಾರ ಪುಸ್ತಕಗಳನ್ನು ಸಂಗ್ರಹಿಸುವ ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡರ ಪುಸ್ತಕ ಮನೆಯನ್ನು ಒಂದು ಕ್ರಿಯಾಶೀಲ ಸಾಂಸ್ಕೃತಿಕ ಕೇಂದ್ರವಾಗಿ ರೂಪಿಸುವ ಅಗತ್ಯವಿದೆ. ಜೊತೆಗೆ ಅಲ್ಲಿನ ಅಸಂಖ್ಯಾತ ಪುಸ್ತಕಗಳನ್ನು ಗಣಕೀಕರಣಗೊಳಿಸುವ ಕಾರ್ಯ ತುರ್ತಾಗಿ ಆಗಬೇಕಿದೆ  ಎಂದು ಸಾಹಿತಿ ಟಿ. ಸತೀಶ್ ಜವರೇಗೌಡ ಸಲಹೆ ನೀಡಿದರು.

ಪಟ್ಟಣದಲ್ಲಿ ಸಂಜಯ ಪ್ರಕಾಶನದ ವತಿಯಿಂದ ಆಯೋಜಿಸಿದ್ದ ‘ಪದ್ಮಶ್ರೀ ಪ್ರಶಸ್ತಿ ಪುರಸ್ಕೃತ ಅಂಕೇಗೌಡರ ಅಭಿನಂದನ ಸಮಾರಂಭ’ದಲ್ಲಿ ಭಾಗವಹಿಸಿ ಮಾತನಾಡಿದ ಅವರು ತಲೆಮಾರಿನಿಂದ ತಲೆಮಾರಿಗೆ ಜ್ಞಾನ, ಅನುಭವ, ಮಾಹಿತಿಗಳನ್ನು ರವಾನಿಸುವಂತಹ ಅಸಂಖ್ಯಾತ ಅಮೂಲ್ಯ ಪುಸ್ತಕಗಳನ್ನು ಸಂರಕ್ಷಣೆ ಮಾಡುವ ದಿಕ್ಕಿನಲ್ಲಿ ಕ್ರಿಯಾತ್ಮಕವಾದ ಯೋಜನೆ ರೂಪಿಸುವ ಅಗತ್ಯವಿದೆ ಎಂದರು.

ಅಂಕೇಗೌಡರು ತಮ್ಮ ಸಂಪಾದನೆಯ ಬಹುತೇಕ ಭಾಗವನ್ನು ಪುಸ್ತಕಗಳನ್ನು ಖರೀದಿಸಲು ವಿನಿಯೋಗಿಸಿದ್ದು ನಿಜಕ್ಕೂ ಮಾದರಿ ಮತ್ತು ಪ್ರೇರಣಾದಾಯಕ ಕಾರ್ಯ. ಪುಸ್ತಕಗಳ ಜೊತೆಗೆ ಅಮೂಲ್ಯವಾದ ನೋಟುಗಳು, ನಾಣ್ಯಗಳು, ಅಂಚೆ ಚೀಟಿಗಳು ಹಾಗೂ ವಿವಿಧ ಪತ್ರಿಕೆಗಳು ಮತ್ತು ಸ್ಮರಣ ಸಂಚಿಕೆಗಳನ್ನು ಸಂಗ್ರಹಿಸಿಟ್ಟಿದ್ದಾರೆ. ಈ ಹಿನ್ನೆಲೆಯಲ್ಲಿ ಪುಸ್ತಕ ಮನೆಯನ್ನು ಸಂಗ್ರಹಾಲಯವಾಗಿಯೂ ರೂಪಿಸುವ ಅವಕಾಶಗಳಿವೆ ಎಂದು ಪ್ರತಿಪಾದಿಸಿದರು.

ಪುಸ್ತಕಗಳವ ರಾಶಿ ಮಿತಿ ಮೀರಿ ಬೆಳೆದಿರುವುದರಿಂದ, ಓದುಗರು ಕೂತು ಓದಲಾಗದ ಪತಿರಿಸ್ಥಿಯಿದೆ. ಅಗಾಧವಾದ ರಾಶಿಯ ನಡುವೆ ಇಷ್ಟದ ಅಥವಾ ಅಗತ್ಯದ ಪುಸ್ತಕ ಹುಡುಕಾಟ ಕಷ್ಟವಾಗಿದೆ. ಪುಸ್ತಕ ಮನೆ ಗೋದಾಮು ಆಗಿ ಬದಲಾಗುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ ಸತೀಶ್ ಜವರೇಗೌಡ ಅವರು, ಇದೊಂದು ಪ್ರತ್ಯೇಕ ಸ್ವಾಯತ್ತ ಸಂಸ್ಥೆಯಾಗಿ ರೂಪುಗೊಂಡು ವಿದ್ಯಾರ್ಥಿಗಳಿಗೆ, ಯುವಜನರಿಗೆ, ಸಾರ್ವಜನಿಕರಿಗೆ ಉಪಯುಕ್ತವಾಗುವ ವಾತಾವರಣ ಹೊಂದಬೇಕಿದೆ ಎಂದರು.

ಅಭಿನಂದನೆ ಸ್ವೀಕರಿಸಿದ ಅಂಕೇಗೌಡ ಮಾತನಾಡಿ, ಪ್ರಪಂಚದ ಎಲ್ಲಾ ಜ್ಞಾನವನ್ನು ಒಂದೇ ಸೂರಿನಡಿ ತರುವ ತವಕ ನನ್ನದು. ಅರ್ಧ ಶತಮಾನದ ಪರಿಶ್ರಮದಿಂದ ಪುಸ್ತಕ ಮನೆ ಸ್ಥಾಪನೆಗಾಗಿ ದುಡಿದಿರುವೆ. ಮುಂದೆ ಈ ಪುಸ್ತಕ ಮನೆಯನ್ನು ನಳಂದ ವಿಶ್ವವಿದ್ಯಾಲಯದ ಮಾದರಿಯಲ್ಲಿ ಅಭಿವೃದ್ಧಿಪಡಿಸುವ ಆಸೆ ಇದೆ ಎಂದರು.

ಹಿರಿಯ ಗಾಂಧಿವಾದಿ ಡಾ.ಬಿ. ಸುಜಯ್‌ಕುಮಾರ್ ಮಾತನಾಡಿ, ಸಾಮಾನ್ಯ ರೈತ ಕುಟುಂಬದ ವ್ಯಕ್ತಿ 20 ಲಕ್ಷಕ್ಕೂ ಹೆಚ್ಚು ಪುಸ್ತಕಗಳ ಸಂಗ್ರಹಿಸಿದ್ದು ಸಾಮಾನ್ಯ ಸಾಧನೆಯಲ್ಲ. ಪ್ರಶಸ್ತಿಗಿಂತ ಮುಖ್ಯವಾದದ್ದು ಅವರು ನಿರ್ಮಾಣ ಮಾಡಿದ ಪುಸ್ತಕದ ಮನೆ. ಮಹಾತ್ಮ ಗಾಂಧಿ ಹೇಳಿದ ಹಾಗೆ ‘ಶಿಕ್ಷಣ ಎಂದರೆ ಹೃದಯ ಮತ್ತು ಮನಸ್ಸನ್ನು ಒಟ್ಟಿಗೆ ಕಟ್ಟುವುದು’. ಇಂತಹ ಮಾತಿಗೆ ಜೀವಂತ ರೂಪವನ್ನು ಕೊಟ್ಟ ಅಂಕೇಗೌಡರನ್ನು ಸನ್ಮಾನಿಸುತ್ತಿರುವುದು ನಮ್ಮ ಮಂಡ್ಯ ಜಿಲ್ಲೆಯ ಹಿರಿಮೆಯನ್ನು ಗೌರವಿಸಿದಂತೆ ಎಂದು ಹೇಳಿದರು.

ಕಾರ್ಯಕ್ರಮದಲ್ಲಿ ಸಂಜಯ ಪ್ರಕಾಶನದ ಸಂಸ್ಥಾಪಕ ಎಸ್. ಎಂ. ಶಿವಕುಮಾರ್, ಹಂಪಿ ವಿಶ್ವವಿದ್ಯಾಲಯದ ವಿಶ್ರಾಂತ ಪ್ರಾಧ್ಯಾಪಕ ಪ್ರೊ. ಮಹದೇವ್, ಯುವ ಬರಹಗಾರ ಬಳಗದ ಸಂಸ್ಥಾಪಕ ಅಧ್ಯಕ್ಷ ಟಿ. ಸತೀಶ್ ಜವರೇಗೌಡ, ರಂಗಕರ್ಮಿ ಚಂದ್ರು ಮಂಡ್ಯ, ಮಹಿಳಾ ಸಾಂತ್ವನದ ಸಂಸ್ಥಾಪಕಿ ಶೀಲಾ ನಂಜುಂಡಯ್ಯ, ಸಮರ್ಪಣ ಟ್ರಸ್ಟ್ ಅಧ್ಯಕ್ಷ ಕೆ.ಎಸ್. ಜಯಶಂಕರ್, ಮುಸ್ಲಿಂ ಸೌಹಾರ್ದ ವೇದಿಕೆಯ ಖಜಾಂಚಿ ಆಯೂಬ್, ಶ್ರೀರಂಗನಾಯಕಿ ಸ್ತ್ರೀ ಸಮಾಜದ ಸದಸ್ಯರಾದ ಸುಮಂಗಲ, ಸುಧಾ, ಶಿಕ್ಷಕಿ ಎಚ್.ಜೆ. ಶೀಲಾ, ಕನ್ನಡ ಪ್ರಾಧ್ಯಾಪಕ ಶಿವಕುಮಾರ್ ಕಾರೇಪುರ, ಡಾ.ಬಿ.ಕೆ. ರಾಮು, ಪ್ರಾಧ್ಯಾಪಕ ಬ್ಯಾಡರಹಳ್ಳಿ ಧನಂಜಯ್, ಸಾಹಿತಿ ಕ್ಯಾತನಹಳ್ಳಿ ಚಂದ್ರಣ್ಣ, ಪತ್ರಕರ್ತರಾದ ಗಣಂಗೂರು ನಂಜೇಗೌಡ, ವಕೀಲ ಎಸ್.ಆರ್. ಸಿದ್ದೇಶ್, ಹೋರಾಟಗಾರ ಚಿಕ್ಕತಮ್ಮೆಗೌಡ, ಸದಾನಂದ, ಸುರೇಶ್ ಭಾಗಿಯಾಗಿದ್ದರು.

admin
the authoradmin

Leave a Reply

Translate to any language you want