ಹಿರಿಯೂರು ಉಪ ಕದನ.. ಬರೀ ಚುನಾವಣೆ ಅಲ್ಲ ರಾಜಕೀಯ ಪ್ರತಿಷ್ಠೆಯ ಬಡಿದಾಟ!
ಎನ್ ಡಿಎ ಅಭ್ಯರ್ಥಿ ಘೋಷಣೆ ಯಾವಾಗ?

ಸಚಿವ ಸುಧಾಕರ್ ಅವರ ನಿಧನದಿಂದ ತೆರವಾದ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ನಡೆಯಲಿರುವ ಉಪಚುನಾವಣೆ ಪ್ರತಿಷ್ಠೆಯ ಕಣವಾಗಿ ಮಾರ್ಪಟ್ಟಿದೆ. ಕಾಂಗ್ರೆಸ್ ಇಲ್ಲಿ ಗೆಲ್ಲದೆ ಹೋದರೆ ರಾಜ್ಯದಲ್ಲಿ ಸರ್ಕಾರದ ವಿರುದ್ಧ ಜನಾಕ್ರೋಶ ವ್ಯಕ್ತವಾಗಿದೆ ಎಂಬರ್ಥ ಬರುತ್ತದೆ. ಅತ್ತ ವಿರೋಧಪಕ್ಷವಾಗಿರುವ ಜೆಡಿಎಸ್ ಮತ್ತು ಬಿಜೆಪಿ ನಾವು ಒಗ್ಗಟ್ಟಾಗಿದ್ದೇವೆ.. ಒಗ್ಗಟ್ಟಾಗಿಯೇ ಮುಂದಿನ ಚುನಾವಣೆಯನ್ನು ಎದುರಿಸುತ್ತೇವೆ ಎಂಬುದನ್ನು ಜನತೆ ತೋರಿಸಬೇಕಾಗಿದೆ. ಹೀಗಾಗಿ ಮೂರು ಪಕ್ಷಗಳಲ್ಲಿ ಸಂಚಲನ ಶುರುವಾಗಿದೆ. ಅದಕ್ಕಿಂತ ಹೆಚ್ಚಾಗಿ ಮೈತ್ರಿ(ಎನ್ ಡಿಎ) ಅಭ್ಯರ್ಥಿ ಯಾರಾಗುತ್ತಾರೆ ಯಾವ ಪಕ್ಷಕ್ಕೆ ಟಿಕೆಟ್ ಕೊಡಲಾಗುತ್ತದೆ ಎಂಬುದೇ ಚರ್ಚೆಯಾಗುತ್ತಿದೆ.

ಕಾಂಗ್ರೆಸ್ ನ್ನು ಸೋಲಿಸುವುದು ವಿರೋಧಪಕ್ಷಗಳ ಗುರಿಯಾಗಿದ್ದರೂ ಆ ಗುರಿ ಈಡೇರಬೇಕಾದರೆ ಎರಡು ಪಕ್ಷದಿಂದ ಒಮ್ಮತದ ಅಭ್ಯರ್ಥಿಯನ್ನು ಕಣಕ್ಕಿಸಬೇಕಾಗಿದೆ. ಆದರೆ ಎರಡು ಪಕ್ಷದ ನಾಯಕರು ತಮ್ಮ ಪಕ್ಷದಿಂದಲೇ ಅಭ್ಯರ್ಥಿ ಕಣಕ್ಕಿಯಬೇಕೆಂಬ ಹಠಕ್ಕೆ ಬಿದ್ದಿರುವುದರಿಂದ ಮೈತ್ರಿ ಅಭ್ಯರ್ಥಿ ಯಾರು? ಎಂಬುದೇ ಸದ್ಯಕ್ಕೆ ಕಗ್ಗಂಟಾಗಿದೆ. ನಿಜ ಹೇಳಬೇಕೆಂದರೆ ಉಪಚುನಾವಣೆಗೆ ದಿನಾಂಕ ಘೋಷಣೆ ಆಗಿಲ್ಲ. ಆದರೆ ಚುನಾವಣೆಗೆ ಸಿದ್ಧತೆ ಮಾತ್ರ ರಾಜಕೀಯ ಪಕ್ಷಗಳಲ್ಲಿ ಅದರಲ್ಲೂ ಆಡಳಿತ ಪಕ್ಷವಾಗಿರುವ ಕಾಂಗ್ರೆಸ್ ಮತದಾರರನ್ನು ಸೆಳೆದು ಸ್ಥಾನವನ್ನು ಉಳಿಸಿಕೊಳ್ಳಲು ಇನ್ನಿಲ್ಲದ ಪ್ರಯತ್ನ ಮಾಡುತ್ತಿದ್ದಾರೆ. ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾದ ಬಳಿಕ ಮೇಲ್ಮ ನೆಗೆ ನಡೆದ ಪದವಿ ಕ್ಷೇತ್ರಗಳ ಚುನಾವಣೆಯಲ್ಲಿ ಕಾಂಗ್ರೆಸ್ ಮುಖಭಂಗ ಅನುಭವಿಸಿದೆ. ಇದೀಗ ಉಪಚುನಾವಣೆಯಲ್ಲಿ ಗೆಲ್ಲದೆ ಹೋದರೆ ಸೋಲಿನ ಹೊಣೆಯನ್ನು ಡಿ.ಕೆ.ಶಿವಕುಮಾರ್ ತಲೆಗೆ ಕಟ್ಟುವುದಂತು ನಿಜ.
ಕಾಂಗ್ರೆಸ್ ಸರ್ಕಾರ ಆಡಳಿತಕ್ಕೆ ಬಂದಿದ್ದು ಗ್ಯಾರಂಟಿ ಯೋಜನೆಯಿಂದ ನಾಳೆ ಸಮಸ್ಯೆಯಾದರೂ ಅದೇ ಗ್ಯಾರಂಟಿಯಿಂದಲೇ ಎನ್ನುವುದನ್ನು ಒಪ್ಪಿಕೊಳ್ಳಬೇಕಾಗಿದೆ. ಗ್ಯಾರಂಟಿ ಯೋಜನೆಗಳಿಗಾಗಿ ಸರ್ಕಾರ ಅಗತ್ಯ ವಸ್ತುಗಳ ಬೆಲೆಯನ್ನು ಏರಿಸುತ್ತಿದೆ ಎಂಬ ಜನಾಕ್ರೋಶ ಸಾರ್ವಜನಿಕ ವಲಯದಲ್ಲಿದೆ. ಒಂದು ವೇಳೆ ನಿಜಕ್ಕೂ ಅಂಥದೊಂದು ಆಕ್ರೋಶ ಸಾಬೀತಾಗಬೇಕಾದರೆ ವಿಧಾನಸಭಾ ಉಪಚುನಾವಣೆ ನಡೆಯಬೇಕಾಗಿದೆ. ಅಲ್ಲಿ ಜನ ಕೊಡುವ ತೀರ್ಫು ಮುಂದಿನ 2028 ಚುನಾವಣೆ ಮೇಲೆ ಒಂದಷ್ಟು ಪರಿಣಾಮ ಬೀರಬಹುದು. ಅದನ್ನೇ ಮುಂದಿಟ್ಟುಕೊಂಡು ಕಾಂಗ್ರೆಸ್ ವಿರುದ್ಧ ಮೈತ್ರಿ ಪಕ್ಷಗಳಿಗೆ ಹೋರಾಟ ಮಾಡಲು ಅನುಕೂಲವಾಗಲಿದೆ.

ಸಿಎಂ ಡಿ.ಕೆ.ಶಿವಕುಮಾರ್ ಪ್ರಜಾಂದೋಲನ ಕಾರ್ಯಕ್ರಮದ ಮೂಲಕ ಕ್ಷೇತ್ರದ ಮತದಾರರನ್ನು ಸೆಳೆಯುವ ಪ್ರಯತ್ನ ಮಾಡಿದ್ದಾರೆ. ಮೇಲಿಂದ ಮೇಲೆ ಕ್ಷೇತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲದೆ ಕಾಂಗ್ರೆಸ್ ಟಿಕೆಟ್ ಸುಧಾಕರ್ ಪುತ್ರ ಸುಹಾಸ್ ಅವರಿಗೆ ನೀಡುವ ಮೂಲಕ ಅನುಕಂಪದ ತಂತ್ರ ಅನುಸರಿಸಲಿದೆ. ಅದರಾಚೆಗೆ ಪಕ್ಷ ಮತ್ತು ಸರ್ಕಾರದ ಮಟ್ಟದಲ್ಲಿ ಕ್ಷೇತ್ರದ ಮತದಾರರನ್ನು ಸೆಳೆಯಲು ಏನೆಲ್ಲ ಮಾಡಬಹುದೋ ಅದೆಲ್ಲವನ್ನು ಮಾಡಲು ಕಾಂಗ್ರೆಸ್ ರಣತಂತ್ರ ರೂಪಿಸುತ್ತಿದೆ. ಈ ಕ್ಷೇತ್ರವನ್ನು ಯಾವುದೇ ಕಾರಣಕ್ಕೂ ಬಿಟ್ಟುಕೊಡಬಾರದು ಎಂಬ ತೀರ್ಮಾನಕ್ಕೆ ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ಬಂದಿದ್ದಾರೆ. ಮತ್ತು ಇದು ಅವರಿಗೆ ಅನಿವಾರ್ಯವೂ ಆಗಿದೆ.
ರಾಜ್ಯದಲ್ಲಿ ಬೆಲೆ ಏರಿಕೆ ಆಕ್ರೋಶ ಒಂದೆಡೆಯಾದರೆ, ರೈತರು, ಬೆಳೆಗಾರರು, ಆಶಾ ಕಾರ್ಯಕರ್ತೆಯರು, ಈಗಾಗಲೇ ಬೀದಿಗಿಳಿದು ಸರ್ಕಾರದ ವಿರುದ್ಧ ಹೋರಾಡುತ್ತಿದ್ದಾರೆ. ಜನ ಸಾಮಾನ್ಯರು ಬೆಲೆ ಏರಿಕೆಗೆ ಹಿಡಿಶಾಪ ಹಾಕುತ್ತಿದ್ದಾರೆ. ಆದರೆ ಈ ಆಕ್ರೋಶಗಳು ಚುನಾವಣೆಯಲ್ಲಿ ವ್ಯಕ್ತವಾಗದಂತೆ ನೋಡಿಕೊಳ್ಳುವುದು ಸರ್ಕಾರದ ಉದ್ದೇಶವಾಗಿದ್ದು, ಪ್ರಜಾಂದೋಲನದ ಮೂಲಕ ಖುದ್ದು ಸಿಎಂ ಕ್ಷೇತ್ರಕ್ಕೆ ಹೋಗಿ ಜನರ ಮನವೊಲಿಸುವ ಪ್ರಯತ್ನನಡೆಸುತ್ತಿದ್ದಾರೆ. ಆದರೆ ಇದು ಸಕ್ಸಸ್ ಆಗುತ್ತೋ ಬಿಡುತ್ತೋ ಗೊತ್ತಿಲ್ಲ ಅತ್ತ ಮೈತ್ರಿಪಕ್ಷದಲ್ಲಿ ಜೆಡಿಎಸ್ ಮತ್ತು ಬಿಜೆಪಿ ನಡುವೆ ಅಭ್ಯರ್ಥಿ ವಿಚಾರದಲ್ಲಿ ಜಟಾಪಟಿಯಾದರೆ ಕಾಂಗ್ರೆಸ್ ಸುಲಭವಾಗಿ ಗೆಲ್ಲುವುದಂತು ಖಚಿತ.

ಸದ್ಯದ ರಾಜಕೀಯ ಪರಿಸ್ಥಿತಿಯನ್ನು ಗಮನಿಸಿದರೆ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಒಮ್ಮತಕ್ಕೆ ಬಂದು ಎನ್ ಡಿಎ ಅಭ್ಯರ್ಥಿಯನ್ನು ಯಾವುದೇ ಅಸಮಾಧಾನಗಳಿಲ್ಲದೆ ಒಮ್ಮತದಿಂದ ಆಯ್ಕೆ ಮಾಡುತ್ತಾರೆ ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟವೇ.. ಇಲ್ಲಿ ಕಾಂಗ್ರೆಸ್ ನಂತರದ ಹೆಚ್ಚು ಮತಗಳನ್ನು ಬಿಜೆಪಿ ಪಡೆದಿದೆ. ಜೆಡಿಎಸ್ ಮೂರನೇ ಸ್ಥಾನದಲ್ಲಿದೆ. ಆದರೆ ಕಳೆದ ಬಾರಿ ಸುಧಾಕರ್ ಅವರ ವಿರುದ್ಧ ಸ್ಪರ್ಧಿಸಿದ್ದ 2023 ಚುನಾವಣೆಯಲ್ಲಿದ್ದ ಅಭ್ಯರ್ಥಿ ಇವತ್ತು ಕಾಂಗ್ರೆಸ್ ನಲ್ಲಿದ್ದಾರೆ. ಹೀಗಾಗಿ ನಮಗೆ ಟಿಕೆಟ್ ಕೊಡಿ ನಾವು ಗೆಲ್ಲುತ್ತೇವೆ ಎಂದು ಜೆಡಿಎಸ್ ನಾಯಕರು ಹೇಳುತ್ತಿದ್ದಾರೆ. ಈಗಾಗಲೇ ಜೆಡಿಎಸ್ ಮತ್ತು ಬಿಜೆಪಿ ನಾಯಕರು ಅಭ್ಯರ್ಥಿಗಳನ್ನು ಕಣಕ್ಕಿಳಿಸುವ ವಿಚಾರದಲ್ಲಿ ತಮ್ಮ ವಾದವನ್ನು ಮಂಡಿಸಿದ್ದಾರೆ.
ಇಲ್ಲಿ ಏನೇ ಚರ್ಚೆ ಆದರೂ ಕೊನೆಯದಾಗಿ ತೀರ್ಮಾನ ಕೈಗೊಳ್ಳುವವರು ವರಿಷ್ಠರೇ ಆಗಿರುವುದರಿಂದ ಈಗಾಗಲೇ ಅಭ್ಯರ್ಥಿ ಆಯ್ಕೆ ಚೆಂಡು ಅಮಿತ್ ಶಾ ಅಂಗಳಕ್ಕೆ ಹೋಗಿ ಬಿದ್ದಿದೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ.ವಿಜಯೇಂದ್ರ ಮತ್ತು ಜೆಡಿಎಸ್ ನ ಹೆಚ್.ಡಿ.ಕುಮಾರಸ್ವಾಮಿ ಅವರು ಗೃಹಸಚಿವ ಅಮಿತ್ ಶಾ ಅವರನ್ನು ಭೇಟಿ ಮಾಡಿ ಬಂದಿದ್ದಾರೆ. ಒಂದಷ್ಟು ಮಾತುಕತೆಗಳು ನಡೆದಿವೆ ಅಂತಿಮ ತೀರ್ಮಾನ ಏನು ಎಂಬುದು ನಿಗೂಢವಾಗಿದೆ. ಆದರೆ ಇಬ್ಬರು ನಾಯಕರಿಗೂ ಒಗ್ಗಟ್ಟಿನಿಂದ ಕೆಲಸ ಮಾಡಿಕೊಂಡು ಹೋಗುವಂತೆ ಸಲಹೆ ನೀಡಿರುವುದಂತು ನಿಜ.

ಮೈತ್ರಿ ಅಭ್ಯರ್ಥಿ ಆಯ್ಕೆ 2028ರ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಮತ್ತು ಜೆಡಿಎಸ್ ನಡುವಿನ ಕ್ಷೇತ್ರ ಹಂಚಿಕೆ ಮೇಲೂ ಪರಿಣಾಮ ಬೀರುವ ಸಾಧ್ಯತೆಯಿದೆ. ಒಂದು ಕ್ಷೇತ್ರದ ಆಯ್ಕೆ ಕಠಿಣವಾಗಿರುವಾಗ ಮುಂದಿ ವಿಧಾನಸಭಾ ಚುನಾವಣೆಯಲ್ಲಿ ಮೈತ್ರಿ ಅಭ್ಯರ್ಥಿಗಳ ಆಯ್ಕೆ ಇನ್ನೆಷ್ಟು ಕಠಿಣವಾಗಿರಬಹುದು ಎಂಬುದನ್ನು ಊಹಿಸಬಹುದಾಗಿದೆ. ವಿಜಯೇಂದ್ರ ಅವರಿಗಿಂತ ಎರಡು ದಿನ ಮೊದಲು ಅಮಿತ್ ಶಾ ಅವರನ್ನು ಭೇಟಿ ಮಾಡಿದ್ದ ಕುಮಾರಸ್ವಾಮಿ, ಕರ್ನಾಟಕದ ರಾಜಕೀಯ ಬೆಳವಣಿಗೆಗಳು ಹಾಗೂ ಹಿರಿಯೂರು ಉಪಚುನಾವಣೆ ಕುರಿತು ಮಾಹಿತಿ ನೀಡಿದ್ದಾರೆಂದೂ ಅದೇ ರೀತಿ ವಿಜಯೇಂದ್ರ ಕೂಡ ಹಿರಿಯೂರು ಕ್ಷೇತ್ರದ ರಾಜಕೀಯ ಪರಿಸ್ಥಿತಿಯ ಬಗ್ಗೆ ಅಮಿತ್ ಶಾ ಅವರಿಗೆ ಮನವರಿಕೆ ಮಾಡಿಕೊಟ್ಟಿದ್ದಾರೆ.
ಅಷ್ಟೇ ಅಲ್ಲದೆ ಚುನಾವಣೆಯಲ್ಲಿ ಗೆಲ್ಲುವುದೇ ನಮ್ಮ ಸಂಕಲ್ಪ. ಟಿಕೆಟ್ ವಿಚಾರದಲ್ಲಿ ಯಾವುದೇ ಪ್ರತಿಷ್ಠೆಯ ಪ್ರಶ್ನೆಯಿಲ್ಲ. ಈ ಚುನಾವಣೆ ನಮಗೆ ಪ್ರತಿಷ್ಠೆಯ ಹೋರಾಟವಾಗಿದೆ. ಚರ್ಚೆ ನಡೆಸಿದ ಬಳಿಕ ಹೈಕಮಾಂಡ್ ಅಂತಿಮ ನಿರ್ಧಾರ ಕೈಗೊಳ್ಳಲಿದೆ ಎಂದು ಹೇಳಿದ್ದಾರೆ. ಆದರೆ ಇದು ವಿಜಯೇಂದ್ರ ಅವರು ಹೇಳಿದಷ್ಟು ಸುಲಭವಾಗಿ ಪ್ರಕ್ರಿಯೆ ನಡೆದುಬಿಡುತ್ತದೆ ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟವೇ….

ಈಗಾಗಲೇ ಬಿಜೆಪಿ ನಾಯಕರು ನಮ್ಮ ಪಕ್ಷದಿಂದಲೇ ಅಭ್ಯರ್ಥಿ ಕಣಕ್ಕಿಳಿಯುತ್ತಾರೆ ಎಂದು ಹೇಳುತ್ತಾ ಬಂದಿರುವುದು ಎಚ್ ಡಿ ಕುಮಾರಸ್ವಾಮಿ ಅವರ ಅಸಮಾಧಾನಕ್ಕೂ ಕಾರಣವಾಗಿದೆ. ಹೀಗಾಗಿಯೇ ಅವರು ಬಿಡದಿ ಟೌನ್ಶಿಪ್, ನೈಸ್ ಹಗರಣ, ಕೆಪಿಎಸ್ಸಿ ಹಾಗೂ ಸ್ಟಿಂಗ್ ಆಪರೇಷನ್ ಸೇರಿ ಅನೇಕ ವಿಚಾರಗಳ ಬಗ್ಗೆ ರಾಜ್ಯ ಕಾಂಗ್ರೆಸ್ ಸರ್ಕಾರದ ವಿರುದ್ಧ ಹೋರಾಟ ಮಾಡಿದವನು ನಾನೇ. ಅತ್ಯಂತ ಕಟುವಾಗಿ ಸರ್ಕಾರವನ್ನು ಟೀಕಿಸಿ ಅದಕ್ಕೆ ಪ್ರತಿಫಲವಾಗಿ ಅತ್ಯಂತ ಕೆಟ್ಟದಾಗಿ ಬೈಸಿಕೊಂಡವನೂ ನಾನೇ. ಇದೆಲ್ಲ ಮಾಹಿತಿ ಅಮಿತ್ ಶಾ ಅವರಿಗೂ ಇದೆ ಎಂದು ಹೇಳುವ ಮೂಲಕ ತಮ್ಮ ಪಕ್ಷದ ಅಭ್ಯರ್ಥಿಗೆ ಟಿಕೆಟ್ ಕೊಡಿ ಎಂಬುದನ್ನು ಮನದಟ್ಟು ಮಾಡಿದ್ದಾರೆ.
ರಾಜ್ಯದಲ್ಲಿ ಎನ್ಡಿಎ ಮೈತ್ರಿಕೂಟ ಗಟ್ಟಿಯಾಗಿದೆ. ಕಾಂಗ್ರೆಸ್ ಸರ್ಕಾರದ ದುರಾಡಳಿತ ವಿರುದ್ಧ ಹೋರಾಟ ಮಾಡುತ್ತಿದ್ದೇವೆ. ಪ್ರತಿಪಕ್ಷ ನಾಯಕ ಆರ್.ಅಶೋಕ್ ಅವರೇನು ನನ್ನ ವೈರಿಯಲ್ಲ. ನಾವಿಬ್ಬರೂ ಆತ್ಮೀಯ ಸ್ನೇಹಿತರೇ. ಹಿರಿಯೂರು ಉಪ ಚುನಾವಣೆ ಸಂಬಂಧ ಉಭಯ ಪಕ್ಷಗಳ ರಾಜ್ಯ ನಾಯಕರು ನಾಲ್ಕು ಗೋಡೆಗಳ ಮಧ್ಯೆ ಕುಳಿತು ಚರ್ಚಿಸುವುದಾಗಿ ಹೇಳಿದ್ದಾರೆ. ಒಂದು ವೇಳೆ ಹಾಗೇನಾದರೂ ಮಾಡಿದರೆ ಅನುಕೂಲವಾಗಬಹುದು ಎಂದು ಹೇಳಬಹುದಾದರೂ ಅಸಮಾಧಾನ ಇಲ್ಲವೇ ಇಲ್ಲ ಎನ್ನಲು ಸಾಧ್ಯವಿಲ್ಲ.

ಬಿಜೆಪಿಯಿಂದ ರಾಜಣ್ಣ ಅಭಿನಂದನ್ ಹಾಗೂ ಮುರುಳಿ ಟಿಕೆಟ್ ಆಕಾಂಕ್ಷಿಗಳಾಗಿದ್ದರೆ ಇತ್ತ ಜೆಡಿಎಸ್ನಿಂದ ನಿವೃತ್ತ ಭದ್ರಾ ಎಂಜಿನಿಯರ್ ಸಣ್ಣ ಚಿತ್ತಯ್ಯ ಹಾಗೂ 2023ರ ಪರಾಜಿತ ಅಭ್ಯರ್ಥಿ ರವೀಂದ್ರಪ್ಪ ಆಕಾಂಕ್ಷಿಗಳಾಗಿದ್ದಾರೆ. ಮೈತ್ರಿಪಕ್ಷದಲ್ಲಿ ನಾಲ್ಕೈದು ಮಂದಿ ಆಕಾಂಕ್ಷಿಗಳಿದ್ದಾರೆ. ಸದ್ಯಕ್ಕೆ ವರಿಷ್ಠರು ಆಯ್ಕೆ ಮಾಡುವ ಅಭ್ಯರ್ಥಿ ಯಾರು? ಮತ್ತು ಅವರನ್ನು ಒಮ್ಮತದಿಂದ ಎರಡು ಪಕ್ಷಗಳ ಮುಖಂಡರು ಒಪ್ಪಿಕೊಳ್ಳುತ್ತಾರಾ ಎನ್ನುವುದೇ ಮಿಲಿಯನ್ ಡಾಲರ್ ಪ್ರಶ್ನೆಯಾಗಿದೆ.
‘ಕೈ’ನಲ್ಲೂ ಜಟಾಪಟಿ ಖಚಿತ
ಇಷ್ಟಕ್ಕೂ ಕಾಂಗ್ರೆಸ್ ನಲ್ಲಿ ಎಲ್ಲವೂ ಸರಿಯಿದೆ ಎಂದು ಒಪ್ಪಿಕೊಳ್ಳಲು ಸಾಧ್ಯವಿಲ್ಲ. ಏಕೆಂದರೆ ದಿವಂಗತ ಸುಧಾಕರ್ ಅವರು ಡಿ.ಕೆ.ಶಿವಕುಮಾರ್ ಅವರಿಗೆ ಆಪ್ತರಾಗಿದ್ದರು. ಅಲ್ಲದೆ ಪುತ್ರ ಸುಹಾಸ್ ಗೆ ಟಿಕೆಟ್ ನೀಡಿದರೆ ಅನುಕಂಪದಲ್ಲಿ ಸುಲಭವಾಗಿ ಗೆಲ್ಲಬಹುದು ಎಂಬ ಲೆಕ್ಕಾಚಾರವಿದೆ. ಆದರೆ ಇದು ಈ ಬಾರಿ ಸಕ್ಸಸ್ ಆಗುತ್ತದೆ ಎಂದು ಹೇಳುವುದು ಕಷ್ಟವೇ ಕಾಂಗ್ರೆಸ್ ನಲ್ಲಿ ಪಕ್ಷಕ್ಕಾಗಿ ಮಣ್ಣು ಹೊತ್ತವರು ಒಂದು ಕಡೆಯಾದರೆ ಅಧಿಕಾರಕ್ಕಾಗಿ ಬಿಜೆಪಿಯನ್ನು ಬಿಟ್ಟು ಬಂದವರು ಇದ್ದಾರೆ.

ಪಕ್ಷದ ಸಂಪ್ರದಾಯದಂತೆ ಸುಹಾಸ್ ಸುಧಾಕರ್ಗೆ ಟಿಕೆಟ್ ನೀಡಬೇಕೆಂಬ ಒಲವು ಕೆಲನಾಯಕರಲ್ಲಿದೆ. ಆದರೆ ಸಂಘಟನಾತ್ಮಕ ಬೆಂಬಲ ಹಾಗೂ ರಾಜಕೀಯ ಅನುಭವದ ವಿಚಾರದಲ್ಲಿ ಚರ್ಚೆಗಳು ನಡೆಯುತ್ತಿದ್ದು, ಸರ್ಕಾರದ ಸಮೀಕ್ಷೆಯಲ್ಲೂ ಸುಹಾಸ್ ಗೆಲುವಿನ ಬಗ್ಗೆ ಆತಂಕದ ವರದಿ ಬಂದಿದೆ ಎಂಬ ಮಾತುಗಳು ಕೇಳಿಬರುತ್ತಿವೆ. ಇತ್ತೀಚೆಗೆ ಬಿಜೆಪಿಯಿಂದ ಕಾಂಗ್ರೆಸ್ ಸೇರಿರುವ ಮಾಜಿ ಶಾಸಕಿ ಪೂರ್ಣಿಮಾ ಶ್ರೀನಿವಾಸ್ ಅವಕಾಶವನ್ನು ಎದುರು ನೋಡುತ್ತಿದ್ದಾರೆ. ಹೀಗಾಗಿ ಕಾಂಗ್ರೆಸ್ನಲ್ಲಿ ಕೊನೆಗಳಿಗೆಯಲ್ಲಿ ಬದಲಾವಣೆ ಆದರೂ ಅಚ್ಚರಿಯಿಲ್ಲ.
ಎಲ್ಕೆ ಕೊಡಗು







