ಬನ್ನಿಕುಪ್ಪೆ ಜಿ.ಪಂ. ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗೆ ಅವಕಾಶ ತಪ್ಪಿದ್ದು, ಸರಿಪಡಿಸಿ: ಎಚ್.ಪಿ. ಮಂಜುನಾಥ್ ಮನವಿ

ಹುಣಸೂರು(ಮನುಕುಮಾರ್): ತಾಲ್ಲೂಕಿನ ಬನ್ನಿಕುಪ್ಪೆ ಜಿಲ್ಲಾ ಪಂಚಾಯಿತಿ ಕ್ಷೇತ್ರದಲ್ಲಿ ಪರಿಶಿಷ್ಟ ಜಾತಿಗೆ ದೊರೆಯಬೇಕಿದ್ದ ಅವಕಾಶವು ಕ್ಷೇತ್ರಗಳ ಮೀಸಲಾತಿ ಹಂಚಿಕೆ ಪ್ರಕ್ರಿಯೆಯಲ್ಲಿನ ಕೆಲವು ಲೋಪದೋಷಗಳಿಂದ ಕೈತಪ್ಪಿದೆ. ಈ ವಿಚಾರವನ್ನು ಈಗಾಗಲೇ ಸರ್ಕಾರದ ಗಮನಕ್ಕೆ ತಂದಿದ್ದು, ಸಂಬಂಧಪಟ್ಟ ಸಚಿವರೊಂದಿಗೆ ಚರ್ಚಿಸಿದ್ದೇನೆ. ಲೋಪವನ್ನು ಸರಿಪಡಿಸಿ ಪರಿಶಿಷ್ಟ ಜಾತಿಗೆ ನ್ಯಾಯ ಒದಗಿಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದ್ದೇನೆ ಎಂದು ಮಾಜಿ ಶಾಸಕ ಎಚ್.ಪಿ. ಮಂಜುನಾಥ್ ತಿಳಿಸಿದರು.
ತಾಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ನಗರದ ಪತ್ರಕರ್ತರ ಭವನದಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ರಾಜ್ಯ ಸರ್ಕಾರ ಎಲ್ಲ ಸಮಾಜಗಳಿಗೂ ಸಾಮಾಜಿಕ ನ್ಯಾಯ ಕಲ್ಪಿಸಬೇಕು ಎಂಬ ಸಿದ್ಧಾಂತದಡಿ ಕಾರ್ಯನಿರ್ವಹಿಸುತ್ತಿದೆ. ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ಎಲ್ಲ ಸಮುದಾಯಗಳಿಗೂ ಸಮಾನ ರಾಜಕೀಯ ಪ್ರಾತಿನಿಧ್ಯ ದೊರೆಯುವುದು ಅತ್ಯಗತ್ಯ. ಯಾವುದೇ ಸಮಾಜಕ್ಕೆ ಅನ್ಯಾಯವಾಗದಂತೆ ಮೀಸಲಾತಿ ಹಾಗೂ ಕ್ಷೇತ್ರಗಳ ಹಂಚಿಕೆ ಪ್ರಕ್ರಿಯೆ ನಡೆಯಬೇಕು ಎಂಬುದು ನನ್ನ ಆಶಯವಾಗಿದೆ ಎಂದರು.
ಹುಣಸೂರು ತಾಲ್ಲೂಕಿನ ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿ ಹಂಚಿಕೆಯಲ್ಲಿ ಪರಿಶಿಷ್ಟ ಜಾತಿಗೆ ಅವಕಾಶ ದೊರೆಯಬೇಕಿದ್ದರೂ, ಕೆಲವು ಲೋಪದೋಷಗಳಿಂದಾಗಿ ಅದು ತಪ್ಪಿರುವುದು ಗಮನಕ್ಕೆ ಬಂದಿದೆ. ಈ ಹಿನ್ನೆಲೆಯಲ್ಲಿ ತಾಲ್ಲೂಕಿನ ವಿವಿಧ ರಾಜಕೀಯ ಪಕ್ಷಗಳ ಪರಿಶಿಷ್ಟ ಜಾತಿಯ ಮುಖಂಡರು ನನ್ನನ್ನು ಭೇಟಿ ಮಾಡಿ, ಸಮುದಾಯಕ್ಕೆ ಅನ್ಯಾಯವಾಗಿರುವ ಕುರಿತು ಲಿಖಿತ ಮನವಿ ಸಲ್ಲಿಸಿದ್ದಾರೆ. ಈ ಸಮಸ್ಯೆಯನ್ನು ಗಂಭೀರವಾಗಿ ಪರಿಗಣಿಸಿ, ಕಾನೂನುಬದ್ಧವಾಗಿ ಪರಿಹಾರ ಕಂಡುಕೊಳ್ಳಲು ಮುಂದಾಗಿದ್ದೇನೆ ಎಂದು ಹೇಳಿದರು.
ನಾನು ಸಣ್ಣ ಸಮುದಾಯದಿಂದ ಬಂದು ಶಾಸಕನಾಗಿ ಕಾರ್ಯನಿರ್ವಹಿಸಿದ್ದೇನೆ. ಹೀಗಾಗಿ ಸಾಮಾಜಿಕ ನ್ಯಾಯದ ಮಹತ್ವ ಮತ್ತು ಸಮುದಾಯಗಳು ಎದುರಿಸುವ ಸಮಸ್ಯೆಗಳ ಬಗ್ಗೆ ನನಗೆ ಅರಿವಿದೆ. ನನ್ನ ಶಾಸಕತ್ವದ ಅವಧಿಯಲ್ಲಿ ದಲಿತ ಸಮುದಾಯಕ್ಕೆ ಅನ್ಯಾಯವಾಗದಂತೆ ನೋಡಿಕೊಂಡಿದ್ದೇನೆ. ಈಗಲೂ ಸಮುದಾಯಕ್ಕೆ ಅನ್ಯಾಯವಾಗಿದ್ದರೆ ಅದನ್ನು ಸರಿಪಡಿಸುವ ನಿಟ್ಟಿನಲ್ಲಿ ಪ್ರಾಮಾಣಿಕ ಪ್ರಯತ್ನ ಮಾಡುವುದು ಮಾಜಿ ಶಾಸಕನಾಗಿ ನನ್ನ ಜವಾಬ್ದಾರಿಯಾಗಿದೆ ಎಂದು ತಿಳಿಸಿದರು.

ಅ.19ರೊಳಗೆ ಆಕ್ಷೇಪಣೆ ಸಲ್ಲಿಕೆ: ಜಿಲ್ಲಾ ಪಂಚಾಯಿತಿ ಕ್ಷೇತ್ರಗಳ ಮೀಸಲಾತಿಗೆ ಸಂಬಂಧಿಸಿದಂತೆ ಸರ್ಕಾರದ ತಾತ್ಕಾಲಿಕ ಕರಡು ಪಟ್ಟಿ ಪ್ರಕಟವಾದ ಬಳಿಕ ಈ ಗೊಂದಲ ಉಂಟಾಗಿದೆ. ಕರಡು ಪಟ್ಟಿಯಲ್ಲಿನ ನ್ಯೂನತೆಗಳನ್ನು ಪರಿಶೀಲಿಸಿ, ಕಾನೂನುಬದ್ಧವಾಗಿ ಆಕ್ಷೇಪಣೆ ಸಲ್ಲಿಸಲು ಅಗತ್ಯವಾದ ಅಂಶಗಳನ್ನು ಗುರುತಿಸಿದ್ದೇನೆ. ಅಕ್ಟೋಬರ್ 19ರವರೆಗೆ ಲಿಖಿತ ಆಕ್ಷೇಪಣೆ ಸಲ್ಲಿಸಲು ಅವಕಾಶವಿದ್ದು, ನಿಗದಿತ ಅವಧಿಯೊಳಗೆ ಸರ್ಕಾರಕ್ಕೆ ಆಕ್ಷೇಪಣೆ ಸಲ್ಲಿಸಲಾಗುವುದು ಎಂದರು.
ಈ ಸಂಬಂಧ ಜಿಲ್ಲಾ ಉಸ್ತುವಾರಿ ಸಚಿವ ಡಾ. ಯತೀಂದ್ರ ಸಿದ್ದರಾಮಯ್ಯ ಹಾಗೂ ಪಂಚಾಯತ್ ರಾಜ್ ಸಚಿವ ಈಶ್ವರ ಖಂಡ್ರೆ ಅವರೊಂದಿಗೆ ದೂರವಾಣಿ ಮೂಲಕ ಮಾತನಾಡಿ ಸಮಸ್ಯೆಯ ಬಗ್ಗೆ ಗಮನ ಸೆಳೆದಿದ್ದೇನೆ. ಮುಂದಿನ ಹಂತವಾಗಿ ರಾಜ್ಯದ ಮುಖ್ಯ ಚುನಾವಣಾಧಿಕಾರಿಯನ್ನು ಭೇಟಿ ಮಾಡಿ, ಮೀಸಲಾತಿ ಹಂಚಿಕೆಯಲ್ಲಿನ ಲೋಪದೋಷಗಳ ಕುರಿತು ಆಕ್ಷೇಪಣೆ ಸಲ್ಲಿಸಲಿದ್ದೇನೆ. ಪರಿಶಿಷ್ಟ ಜಾತಿಗೆ ನ್ಯಾಯ ದೊರೆಯುವವರೆಗೆ ಈ ವಿಚಾರವನ್ನು ಸಂಬಂಧಪಟ್ಟ ಅಧಿಕಾರಿಗಳು ಮತ್ತು ಸರ್ಕಾರದ ಗಮನಕ್ಕೆ ತಂದು ಸಮಸ್ಯೆ ಪರಿಹರಿಸಲು ಪ್ರಯತ್ನಿಸುತ್ತೇನೆ ಎಂದು ಎಚ್.ಪಿ. ಮಂಜುನಾಥ್ ಹೇಳಿದರು.
ತಾಲ್ಲೂಕಿನ ಸಮಸ್ಯೆಗಳನ್ನು ಕೇಳುವವರಿಲ್ಲ: ತಾಲ್ಲೂಕಿನಲ್ಲಿ ಸಾಕಷ್ಟು ಸಮಸ್ಯೆಗಳಿದ್ದರೂ ಹೇಳುವವರು ಯಾರು ಇಲ್ಲದಂತಾಗಿದೆ. ನಾಗರಹೊಳೆ ಕಡಂಚಿನ ಪ್ರದೇಶಗಳಲ್ಲಿ ವನ್ಯಪ್ರಾಣಿ ಅವಳಿಗೆ ಸಾಕಷ್ಟು ಜನ ತಮ್ಮ ಹಸು ಕರುಗಳನ್ನ ಕಳೆದುಕೊಂಡಿದ್ದು, ಸ್ಪಂದಿಸುವವರು ಯಾರು ಇಲ್ಲ ಎಂದು ತಿಳಿದ ಸಂದರ್ಭದಲ್ಲಿ ನಾನೇ 44 ಹಸು, 29 ಕುರಿ, 41 ಮೇಕೆಗಳು ಮೃತವಾಗಿದ್ದು ಒಟ್ಟು 114 ರೈತರಿಗೆ ವೈಯಕ್ತಿಕ ಅರ್ಥಿಕ ನೆರವು ನೀಡಿದ್ದೇನೆ. ಇದು ಬೇರೆಯವರಿಗೆ ಬಾಡಿಗೆ ಮನೆ ನನಗೆ ಸ್ವಂತ ಮನೆ ಆದ್ದರಿಂದ ಸೋತರು ಪ್ರತಿಯೊಬ್ಬರಿಗೂ ಸ್ಪಂದಿಸುವ ಕೆಲಸ ಮಾಡುತ್ತಿದ್ದೇನೆ ಎಂದರು.
ಸುದ್ದಿಗೋಷ್ಠಿಯಲ್ಲಿ ಮಾಜಿ ಬಿಳಿಕೆರೆ ಬ್ಲಾಕ್ ಕಾಂಗ್ರೆಸ್ ಅದ್ಯಕ್ಷ ಬಸವರಾಜು, ನಗರ ಕಾರ್ಯಧ್ಯಕ್ಷ ವಕೀಲ ಪುಟ್ಟರಾಜು, ಅಕ್ರಮ- ಸಕ್ರಮ ಮಾಜಿ ಸದಸ್ಯ ಚಿಕ್ಕಸ್ವಾಮಿ, ಮುಖಂಡ ಹನಗೋಡು ಕಾರ್ತಿಕ್ ಹಾಜರಿದ್ದರು





