ಮೈಸೂರಿನ ಅಶ್ವರೋಹಿ ದಳಕ್ಕಿದೆ ಮಹಾರಾಜರ ನಂಟು.. ಗತ್ತು, ಗೈರತ್ತು, ಉಡುಗೆ ತೊಡುಗೆ ಸ್ಪೆಷಲ್!

ಮೈಸೂರು ದಸರಾದಲ್ಲಿ ಚಿನ್ನದ ಅಂಬಾರಿ ಹೊತ್ತು ಸಾಗುವ ಗಜಪಡೆ ಒಂದು ಕಡೆಯಾದರೆ ಮತ್ತೊಂದು ಕಡೆ ವಿವಿಧ ಸ್ತಬ್ದ ಚಿತ್ರಗಳು, ಜನಪದವನ್ನು ಮೇಳೈಸುವ ವಿವಿಧ ಕಲಾ ತಂಡಗಳು, ಪೊಲೀಸ್ ತುಕಡಿಗಳು ಇವುಗಳೆಲ್ಲದರ ನಡುವೆಯೂ ನಮ್ಮನ್ನು ಆಕರ್ಷಿಸುವ ಮತ್ತೊಂದು ವಿಶೇಷವೇ ಅಶ್ವರೋಹಿ ಪೊಲೀಸ್ ದಳ
ಮೈಸೂರು ದಸರಾ ಸಂಬಂಧಿಸಿದ ವಿಶೇಷ ಲೇಖನಗಳಿಗಾಗಿ ಓದಿ
ದಸರಾ ಜಂಬೂ ಸವಾರಿಯಲ್ಲಿ ಕುದುರೆ ಮೇಲೆ ಶಿಷ್ಠಾಚಾರದ ಉಡುಗೆ ಧರಿಸಿ ಶಿಸ್ತಿನಿಂದ ಸಾಗುವ ಅಶ್ವರೋಹಿ ಪೊಲೀಸ್ ದಳವನ್ನು ನೋಡುವುದೇ ಕಣ್ಣಿಗೆ ಆನಂದ. ಗತ್ತು ಗೈರತ್ತು ಉಡುಗೆ ತೊಡುಗೆ ಎಲ್ಲವೂ ಮತ್ತೊಮ್ಮೆ ನೋಡುವಂತೆ ಮಾಡುತ್ತವೆ.

ಇನ್ನು ನಾವು ಮೈಸೂರಿನ ಅಶ್ವರೋಹಿ ಪೊಲೀಸ್ ದಳದ ಇತಿಹಾಸವನ್ನು ಕೆದಕಿ ನೋಡಿದರೆ ಮೈಸೂರು ಒಡೆಯರ್ ಕಾಲದಲ್ಲಿಯೇ ಈ ದಳವಿತ್ತು ಅದನ್ನು ಹೆಚ್.ಹೆಚ್.ಎಂ.ಎಂ.ಬಿ.ಜಿ ಅಥವಾ ಮೈಸೂರು ಮಹಾರಾಜರ ಅಶ್ವರೋಹಿ ಅಂಗರಕ್ಷಕ ಪಡೆ ಎಂದು ಕರೆಯಲಾಗುತ್ತಿತ್ತು. ಈ ಪಡೆಗೆ ಒಡೆಯರ್ ಕುಟುಂಬದ ರಕ್ಷಣೆಯ ಜವಬ್ದಾರಿಯನ್ನು ವಹಿಸಿಕೊಡಲಾಗಿತ್ತು.

ಸ್ವಾತಂತ್ರ್ಯ ಪೂರ್ವದಲ್ಲಿ ಒಡೆಯರ್ ಅಧೀನದಲ್ಲಿದ್ದ ಅಶ್ವಾರೋಹಿ ಅಂಗ ರಕ್ಷಕ ತಂಡವು ಸ್ವಾತಂತ್ರ್ಯ ಬಳಿಕ ಮೈಸೂರು ರಾಜ್ಯ ಪೊಲೀಸ್ ಸಂಸ್ಥೆಗೆ ಸೇರ್ಪಡೆಗೊಂಡು ಆಧುನಿಕ ಪ್ರಜಾಪ್ರಭುತ್ವದ ಅಶ್ವರೋಹಿ ಪೊಲೀಸ್ ತಂಡವಾಗಿ ಹೊಸ ರೂಪ ತಾಳಿತು.

ನಂತರದ ಕಾಲಘಟ್ಟದಲ್ಲಿ ಕಾನೂನು ಮತ್ತು ಸುವ್ಯವಸ್ಥೆಯ ಹೊಣೆ ಹೊತ್ತು ಗುಂಪು ನಿಯಂತ್ರಣ, ಸಾರಿಗೆ ನಿಯಂತ್ರಣ, ಸಮೂಹ ನಿಯಂತ್ರಣ, ಕೂಚು, ಶಿಷ್ಟಾಚಾರದ ಬೆಂಗಾವಲು, ಕಾವಲು ಕರ್ತವ್ಯ ಮತ್ತು ರಾತ್ರಿ ಗಸ್ತು ಮುಂತಾದ ಕರ್ತವ್ಯ ನಿರ್ವಹಣೆ ಜವಬ್ದಾರಿಯನ್ನು ಮಾಡುತ್ತಾ ಬರುತ್ತಿವೆ.

ಅಶ್ವರೋಹಿ ತಂಡದ ಸಿಪಾಯಿಗಳ ಪೋಷಾಕು ಆತ್ಯಕರ್ಷಕವಾಗಿದೆ. ಅವರ ಶಿಷ್ಟಾಚಾರದ ಸಮವಸ್ತ್ರದ ತೊಡುಗೆಯ ಬಣ್ಣ, ಮಾದರಿ, ವಿನ್ಯಾಸ ಮತ್ತು ಅದರೊಡನೆ ಇರುವ ಅಸಂಖ್ಯ ಸಣ್ಣ ಸಣ್ಣ ಅಂಶಗಳು ಗಮನಾರ್ಹವಾಗಿವೆ. ಮೈಸೂರಿನ ಅಂದಿನ ಒಡೆಯರ್ಗಳು ಸಿಬ್ಬಂದಿಯ ಪೋಷಾಕುಗಳ ಕುರಿತು ವಹಿಸುತ್ತಿದ್ದ ವೈಯಕ್ತಿಕ ಕಾಳಜಿ ಮತ್ತು ಅದಕ್ಕೆ ಪೂರಕವಾಗಿದ್ದ ಕಲಾವಂತಿಕೆ ಎದ್ದು ಕಾಣುತ್ತದೆ.

ಹೀಗಾಗಿಯೇ ದಸರಾ ಜಂಬೂ ಸವಾರಿಯಲ್ಲಿ ಅಶ್ವಾರೋಹಿ ತಂಡದ ಶಿಷ್ಟಾಚಾರದ ಸಮವಸ್ತ್ರ ಕಡು ನೀಲಿಯ ಬಣ್ಣದ್ದಾಗಿದ್ದು ಅವರ ಪೇಟಾಕ್ಕೆ ನೀಲಿ ಮತ್ತು ಬಂಗಾರದ ಬಣ್ಣದ ಮೆರುಗು ಸೇರಿಕೊಂಡಿದೆ. ಇದನ್ನು ಧರಿಸಿ ಕುದುರೆ ಮೇಲೆ ಸಾಗುತ್ತಿದ್ದರೆ ನೋಡುವುದೇ ಅದೊಂದು ರೀತಿಯ ಮಜಾ..







