ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ಅಸ್ಪೃಶ್ಯತೆ, ಜಾತೀಯತೆ ನಿರ್ಮೂಲನೆ ಅಂಗವಾಗಿ ನಗರದ ಬ್ರಾಹ್ಮಣರ ಬಡಾ ವಣೆಯ ಶ್ರೀ ಲಕ್ಷ್ಮೀನರಸಿಂಹಸ್ವಾಮಿ ದೇವಸ್ಥಾನದ ಆವರಣದಲ್ಲಿ ಬ್ರಾಹ್ಮಣ-ದಲಿತ ಸಹಪಂಕ್ತಿ ಭೋಜನ ಗಮನಸೆಳೆಯಿತು.
ಕಾರ್ಯಕ್ರಮಕ್ಕೆ ಚಾಲನೆ ನೀಡಿದ ತಹಸೀಲ್ದಾರ್ ಜೆ.ಮಂಜುನಾಥ್ ಮಾತನಾಡಿ, “12ನೇ ಶತಮಾನದಲ್ಲಿ ಬಸವಣ್ಣ ಅಸಮಾನತೆಗಳ ವಿರುದ್ಧ ಹೋರಾಡಿ ಸಮಾನತೆ ಕಲ್ಪಿಸಿಕೊಟ್ಟು ಸಾಮಾಜಿಕ ಕ್ರಾಂತಿಯನ್ನೇ ನಡೆಸಿದರೂ ಇಂದಿಗೂ ಅಸ್ಪೃಶ್ಯತೆ ಮುಂದುವರಿದಿದೆ. ಇದೊಂದು ಅನಿಷ್ಠ ಪದ್ಧತಿಯಾಗಿದ್ದು, ಈ ಪದ್ಧತಿಯನ್ನು ನಿರ್ಮೂಲನೆ ಮಾಡಲು ನಾಲ್ವಡಿ ಕೃಷ್ಣರಾಜ ಒಡೆಯರ್, ಅಂಬೇಡ್ಕರ್, ಜಗಜೀವನರಾಂ, ಸಾವಿತ್ರಿ ಬಾಯಿ ಫುಲೆ ಸೇರಿದಂತೆ ಅನೇಕರು ಹೋರಾಟ ಮಾಡಿದ್ದಾರೆ. ಈ ನಿಟ್ಟಿನಲ್ಲಿ ಇಲ್ಲಿನ ಬ್ರಾಹ್ಮಣ ಸಮುದಾಯ, ಈ ದೇವಾಲಯದ ಪುರೋಹಿತ ಗುರು ರಾಜರ ಕುಟುಂಬದ ನೇತೃತ್ವ ಸಹಪಂಕ್ತಿ ಭೋಜನ ಏರ್ಪಡಿಸಿ ಸಮ ಸಮಾಜ ನಿರ್ಮಾಣಕ್ಕೆ ಮುಂದಾಗಿರವುದು ಅಭಿನಂದನೀಯ ಎಂದರು.
ಪೌರಾಯುಕ್ತ ಮಾನಸ ಮಾತನಾಡಿ, ಬ್ರಾಹ್ಮಣ ಸಮಾಜದವರು ದಲಿತರನ್ನು ಕರೆದು ಸಹಪಂಕ್ತಿ ಭೋಜನ ಮಾಡುವ ಕಾರ್ಯವು ರಾಜ್ಯಕ್ಕೆ ಮಾದರಿಯಾಗಿದೆ ಎಂದರು.
ಪುರೋಹಿತ ಗುರುರಾಜ್ ಮಾತನಾಡಿ, ಹಿಂದೂ ಸಂಸ್ಕೃತಿ ಉಳಿಯಬೇಕಿದ್ದಲ್ಲಿ ಅಸ್ಪೃಶ್ಯತೆ ನಿರ್ಮೂಲನೆಯಾಗಬೇಕು. ಹಿಂದೂ ಧರ್ಮವನ್ನು ರಕ್ಷಿಸಬೇಕಾದರೆ ದಲಿತರನ್ನು ಒಟ್ಟುಗೂಡಿಸಿ ಕೊಂಡು ಹೋಗಬೇಕು ಎಂದರು.

ರಾಜ್ಯ ದಲಿತ ಸಂಘರ್ಷ ಸಮಿತಿ ಸಂಘಟನಾ ಸಂಚಾಲಕ ನಿಂಗರಾಜ್ ಮಲ್ಲಾಡಿ, ಆದಿಜಾಂಬವ ಮುಖಂಡ ಡಿ.ಕುಮಾರ್ ಮಾತನಾಡಿ, ನೂರಾರು ವರ್ಷಗಳಿಂದ ದಲಿತರು ಜಾತೀಯತೆ, ಅಸ್ಪೃಶ್ಯತೆಯೆಂಬ ಅನಿಷ್ಠ ಪದ್ಧತಿಗಳಿಂದ ನೊಂದಿದ್ದಾರೆ. ಇಂದಿಗೂ ಕೆಲ ಗ್ರಾಮಗಳಲ್ಲಿ ದಲಿತರಿಗೆ ಹೋಟೆಲ್, ದೇವಸ್ಥಾನಗಳಿಗೆ ನಿರ್ಬಂಧ ಹಾಕಲಾಗುತ್ತಿದೆ. ಕಾನೂನುಗಳಿದ್ದರೂ ಏನೂ ಪ್ರಯೋಜನವಾಗುತ್ತಿಲ್ಲ. ಬ್ರಾಹ್ಮಣ ಸಮಾಜವನ್ನು ನಾವು ವಿರೋಧಿಸುವುದಿಲ್ಲ. ಬ್ರಾಹ್ಮಣ್ಯತ್ವವನ್ನು ವಿರೋಧಿಸುತ್ತೇವೆ. ಇಂತಹ ಸಹಪಂಕ್ತಿ ಭೋಜನಗಳು ದಲಿತರಲ್ಲಿ ಆತ್ಮಗೌರವ ಹೆಚ್ಚಿಸಿವೆ ಎಂದರು.
ತಾ.ಪಂ. ಇಒ ಕೆ.ಹೊಂಗಯ್ಯ ಮಾತನಾಡಿದರು. ಸಮಾಜ ಕಲ್ಯಾಣಾಧಿಕಾರಿ ಭರತ್, ಗಿರಿಜನ ಕಲ್ಯಾಣಾಧಿಕಾರಿ ಗಂಗಾಧರ್, ಮಹಾಲಿಂಗಯ್ಯ, ಶ್ರೀಪಾದನಲ್ತ್ ಪಿಎಸ್ಐ ಶಿರಸ್ತೇದಾರ್ ವಾಡ್ಕರ್ ಗಜೇಂದ್ರ, ರವಿಚಂದ್ರ, ಪ್ರಕಾಶ, ಲೋಹಿತ್ ರಾಜೇ ಅರಸ್, ದಲಿತ ಮುಖಂಡರಾದ ಬಸವಲಿಂಗಯ್ಯ, ಬಲ್ಲೇನಹಳ್ಳಿ ಕೆಂಪ ರಾಜು, ನಾಗನಹಳ್ಳಿ ಮಹದೇವ ಚಿಕ್ಕಹುಣಸೂರು ರಾಜು, ಪ್ರಕಾಶ, ಹೊನ್ನಪ್ಪತೊಂಡಾಳು ಇತರರಿದ್ದರು.








