ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ): ವಿಬಿ ಜಿ ರಾಮ್ ಜಿ ಯೋಜನೆಯಡಿ ಮಾನವ ದಿನಗಳನ್ನು 125 ದಿನಗಳಿಗೆ ಏರಿಕೆ ಹಾಗೂ ಕೂಲಿ ಮೊತ್ತ 382 ರೂ.ಗಳಿಗೆ ಏರಿಸಿದ್ದು, ಕೂಲಿ ಕಾರ್ಮಿಕರು ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಬಿಳಿಗೆರೆ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಶೀಲಾ ಹೇಳಿದರು.

ಹುಣಸೂರು ತಾಲೂಕಿನ ಗಾವಡಗೆರೆ ಹೋಬಳಿಯ ಬಿಳಿಗೆರೆ ಗ್ರಾಮ ಪಂಚಾಯಿತಿಯ ಮಾರಗೌಡನಹಳ್ಳಿ ಗ್ರಾಮದಲ್ಲಿ ವಿಬಿ ಜಿ ರಾಮ್ಜಿ ಯೋಜನೆಗೆ ಚಾಲನೆ ನೀಡಿದ ನಂತರ ಕಾಮಗಾರಿ ಅನುಷ್ಠಾನವಾಗಲಿರುವ ಸ್ಥಳ ಪರಿಶೀಲಿಸಿ ಮಾತನಾಡಿ, ಪ್ರಸ್ತುತ ಮಹಾತ್ಮಗಾಂಧಿ ನರೇಗಾ ಯೋಜನೆ ಬದಲಿಗೆ ವಿಬಿ ಜಿ ರಾಮ್ ಜಿ ಯೋಜನೆ ಚಾಲ್ತಿಯಲ್ಲಿದೆ. ಸಂಪೂರ್ಣ ಪಾರದರ್ಶಕತೆ ಮತ್ತು ತಂತ್ರಜ್ಞಾನದೊಂದಿಗೆ ಈ ಕಾಯ್ದೆ ಜಾರಿಯಾಗಿದೆ. ಗ್ರಾಮೀಣ ಭಾಗದ ಕೂಲಿ ಕಾರ್ಮಿಕರು ಈ ಯೋಜನೆಯನ್ನು ಸದ್ಬಳಕೆ ಮಾಡಿಕೊಳ್ಳುವಂತೆ ತಿಳಿಸಿದರು.

ತಾಲೂಕು ಐಇಸಿ ಸಂಯೋಜಕ ಪುಷ್ಪಾವತಿ ಮಾತನಾಡಿ, ಕೂಲಿ ಕಾರ್ಮಿಕರಿಗೆ 100 ರಿಂದ 125 ಮಾನವ ದಿನ ಸೃಜನೆಗೆ ಅವಕಾಶ ಕಲ್ಪಿಸಲಾಗಿದೆ. 370ರಿಂದ 382ಕ್ಕೆ ಕೂಲಿ ಮೊತ್ತ ಹೆಚ್ಚಳಗೊಂಡಿದೆ. ನಿರಂತರ ಕೆಲಸದಿಂದ ಸುಮಾರು 47,750 ರೂ. ಗಳಿಸಬಹುದಾಗಿದೆ. ಯೋಜನೆಯಲ್ಲಿ 318ರೀತಿಯ ಕಾಮಗಾರಿಗಳಿವೆ. ವೈಯಕ್ತಿಕವಾಗಿಯೂ ಗ್ರಾಮೀಣ ಭಾಗದ ರೈತರು ಇದರ ಸದುಪಯೋಗ ಪಡೆದುಕೊಳ್ಳಬಹುದೆಂದು ತಿಳಿಸಿದರು.
ರೈತರಿಗೆ ಅನುಕೂಲವಾಗಲೆಂದು ಬಿತ್ತನೆ ಮತ್ತು ಕಟಾವು ಸಮಯದಲ್ಲಿ 60 ದಿನಗಳ ಬಿಡುವು ನೀಡಿದ್ದು, ರೈತರು ಆ ಸಮಯದಲ್ಲಿ ವಿಬಿ ಜಿ ರಾಮ್ ಜಿ ಯೋಜನೆಗೆ ವಿರಾಮ ನೀಡಿ ತಮ್ಮ ಸ್ವಂತ ಕೆಲಸದಲ್ಲಿ ತೊಡಗಿ ಕೊಳ್ಳಬಹುದಾಗಿದೆ. ಹೆಚ್ಚಿನ ಮಾಹಿತಿಗಾಗಿ ಗ್ರಾಮ ಪಂಚಾಯಿತಿ ಸಂಪರ್ಕಿಸಬಹುದಾಗಿದೆ. ವಿಬಿ ಜಿ ರಾಮ್ ಜಿ ನಲ್ಲಿ ಉದ್ಯೋಗ ಕೋರಲು ನಮೂನೆ 6ರ ಮೂಲಕ ಅರ್ಜಿ ಸಲ್ಲಿಸಬಹುದಾಗಿದೆ ಎಂದರು.

ಜಾಬ್ ಕಾರ್ಡ್ ಹೊಂದಿರುವ ರೈತ ಮಹಿಳೆ ಶಶಿಕಲಾ ಮಾತನಾಡಿ, ವಿಬಿ ಜಿ ರಾಮ್ ಜಿ ಯೋಜನೆಯಡಿ ದಿನವೊಂದರ ಕೂಲಿ ಮೊತ್ತ 382 ರೂ.ಗೆ ಹೆಚ್ಚಳಗೊಂಡಿದೆ. 125ದಿನ ಕೆಲಸಕ್ಕೆ 47ಸಾವಿರ ದೊರೆಯಲಿದೆ. ಇದರಿಂದಾಗಿ ಬಿತ್ತನೆ ಬೀಜ, ಗೊಬರ ಅಥವಾ ಮನೆಯ ನಿರ್ವಹಣೆಗೆ ಅನುಕೂಲವಾಗಲಿದೆ ಎಂದರು.
ಗ್ರಾ.ಪಂ.ಕಾರ್ಯದರ್ಶಿ ಆನಂದ್, ಕಾಯಕ, ಕರ ವಸಲಿಗಾರ ರಘು, ಮಿತ್ರರಾದ ಸುಮಾ, ಕುಮಾರ್ ಸೇರಿದಂತೆ ಗ್ರಾಮ ಪಂಚಾಯಿತಿ ಸಿಬ್ಬಂದಿ ಹಾಗೂ ಕೂಲಿ ಕಾರ್ಮಿಕರು ಉಪಸ್ಥಿತರಿದ್ದರು








