LatestNews

ಮುಂದಿನ ಎಲ್ಲ ಚುನಾವಣೆ ಸಮರ್ಥವಾಗಿ ಎದುರಿಸಲು ತುಮಕೂರಿನಲ್ಲಿ ಜೆಡಿಎಸ್ ನಿಂದ ಸಂಕಲ್ಪ

ಜೆಡಿಎಸ್ ಮುಖಂಡರ ಸಭೆಯಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳ  ನೇಮಕ

ತುಮಕೂರು: ಮುಂಬರುವ ಎಲ್ಲಾ ಮಾದರಿಯ ಚುನಾವಣೆಗಳನ್ನು ಸಮರ್ಥವಾಗಿ ಎದುರಿಸಲು ಪಕ್ಷವನ್ನು ಸದೃಢವಾಗಿ ಸಂಘಟಿಸಬೇಕು, 2028ರ ವಿಧಾನಸಭಾ ಚುನಾವಣೆಯಲ್ಲಿ ಹೆಚ್.ಡಿ. ಕುಮಾರಸ್ವಾಮಿಯವರು ಮುಖ್ಯಮಂತ್ರಿಯಾಗಬೇಕು ಎಂಬ ಸಂಕಲ್ಪದೊಂದಿಗೆ ಎಲ್ಲಾ ಮುಖಂಡರು, ಕಾರ್ಯಕರ್ತರು ಪಕ್ಷ ಕಟ್ಟುವ ಕೆಲಸ ಮಾಡಬೇಕು ಎಂದು ಜೆಡಿಎಸ್ ಜಿಲ್ಲಾಧ್ಯಕ್ಷ ಹೆಚ್. ನಿಂಗಪ್ಪ ಹೇಳಿದರು.

ಗುರುವಾರ ನಗರದ ಜೆಡಿಎಸ್ ಕಚೇರಿಯಲ್ಲಿ ನಡೆದ ಮುಖಂಡರ ಸಭೆಯಲ್ಲಿ ವಿವಿಧ ಘಟಕಗಳ ಪದಾಧಿಕಾರಿಗಳನ್ನು ನೇಮಕ ಮಾಡಿ ಮಾತನಾಡಿದ ಅವರು, ಪಕ್ಷದಲ್ಲಿ ಸಿಗುವ ಹುದ್ದೆ ಅಧಿಕಾರವಲ್ಲ, ಅದೊಂದು ಜವಾಬ್ದಾರಿ ಎಂದುಕೊಂಡು ಪದಾಧಿಕಾರಿಗಳು ಹಾಗೂ ಹುದ್ದೆ ಸಿಗದಿದ್ದವರೂ ನಿರಾಶರಾಗದೆ ಪಕ್ಷ ಸಂಘಟನೆಯಲ್ಲಿ ಮುಂದೆ ಅವಕಾಶಗಳು ಹುಡುಕಿಕೊಂಡು ಬರುತ್ತವೆ ಎಂದು ಹೇಳಿದರು.

ಈ ವೇಳೆ ನಗರ ಜೆಡಿಎಸ್ ಘಟಕದ ಮಹಾ ಪ್ರಧಾನ ಕಾರ್ಯದರ್ಶಿಯಾಗಿ ಟೂಡಾ ಮಾಜಿ ಅಧ್ಯಕ್ಷ ಟಿ.ಸಿ. ಪ್ರಭಾಕರ್ ಅವರನ್ನು ಜಿಲ್ಲಾಧ್ಯಕ್ಷ ನಿಂಗಪ್ಪ ನೇಮಕ ಮಾಡಿ ನೇಮಕಾತಿ ಪತ್ರ ನೀಡಿ ಸನ್ಮಾನಿಸಿದರು. ನಗರ ಘಟಕ ಉಪಾಧ್ಯಕ್ಷ ಉಮೇಶ್, ಪ್ರಧಾನ ಕಾರ್ಯದರ್ಶಿಗಳಾಗಿ ಉಪ್ಪಾರಹಳ್ಳಿ ಕುಮಾರ್, ನಟರಾಜ್, ಟಿ.ಪಿ.ರಾಜೇಶ್, ಟಿ.ಎ. ಬಾಲಕೃಷ್ಣ, ಸಂಘಟನಾ ಕಾರ್ಯದರ್ಶಿ ನರಸೇಗೌಡ, ವಕ್ತಾರ ವಿನೋದ್ ಅವರನ್ನು ಜಿಲ್ಲಾಧ್ಯಕ್ಷರು ನೇಮಕ ಮಾಡಿದರು.

ನಗರ ಘಟಕ ಅಧ್ಯಕ್ಷ ಟಿ.ಹೆಚ್. ಜಯರಾಮ್ ಮಾತನಾಡಿ, ನಗರದ ಎಲ್ಲಾ 35 ವಾರ್ಡ್‌ಗಳಲ್ಲಿ ಕಾರ್ಯಕರ್ತರ ಸಭೆ ಏರ್ಪಡಿಸಿ ಸಭೆಯ ಅಭಿಪ್ರಾಯ ಪಡೆದು ವಾರ್ಡ್ ಸಮಿತಿಗಳನ್ನು ರಚಿಸಲಾಗುವುದು. ಈ ತಿಂಗಳ  12ರಂದು ಜಿಲ್ಲಾಧ್ಯಕ್ಷ ಹೆಚ್. ನಿಂಗಪ್ಪ ಅವರ ಹುಟ್ಟುಹಬ್ಬವನ್ನು ಪಕ್ಷದ ಕಚೇರಿಯಲ್ಲಿ ವಿಶೇಷವಾಗಿ ಆಚರಿಸಲಾಗುವುದು. ಕಚೇರಿಯಲ್ಲಿ ಹೋಮ, ಹವನ, ಪೂಜೆ ಹಾಗೂ ವಿವಿಧ ಸೇವಾ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗುವುದು ಎಂದು ಹೇಳಿದರು.  ಇದೇ ವೇಳೆ ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ರೇಖಾ ಬಿ.ಆರ್ ಅವರನ್ನು ಗೌರವಿಸಿ ಸನ್ಮಾನಿಸಲಾಯಿತು.

ನಗರ ಘಟಕ ಕಾರ್ಯಾಧ್ಯಕ್ಷ ಟಿ.ಎಸ್. ಮೋಹನ್‌ಕುಮಾರ್, ಮಹಿಳಾ ಘಟಕ ಜಿಲ್ಲಾಧ್ಯಕ್ಷೆ ರೇಖಾ ಬಿ.ಆರ್, ಮುಖಂಡರಾದ ಟಿ.ಎಲ್. ಕುಂಭಯ್ಯ, ಯೋಗಾನಂದಕುಮಾರ್, ನಗರ ಅಧ್ಯಕ್ಷೆ ಲಕ್ಷ್ಮೀ ನಾಯಕ್, ಜಿಲ್ಲಾ ಪ್ರಚಾರ ಸಮಿತಿ ಅಧ್ಯಕ್ಷ ಕೆಂಪರಾಜು, ನಗರಸಭೆ ಮಾಜಿ ಸದಸ್ಯರಾದ ಟಿ.ಜಿ. ನರಸಿಂಹರಾಜು, ಧರಣೇಂದ್ರಕುಮಾರ್, ನಗರ ಯುವ ಘಟಕ ಅಧ್ಯಕ್ಷ ಪ್ರಮೋದ್‌ಗೌಡ ಮೊದಲಾದವರು ಭಾಗವಹಿಸಿದ್ದರು.

admin
the authoradmin

Leave a Reply

Translate to any language you want