CrimeMysore

ಮಹಿಳೆಯರನ್ನು ಟಾರ್ಗೆಟ್ ಮಾಡಿ ಮಾಂಗಲ್ಯ ಸರ ಎಗರಿಸುತ್ತಿದ್ದ ಮೂವರು ಸರಗಳ್ಳರು ಅರೆಸ್ಟ್.. 152 ಗ್ರಾಂ.ಚಿನ್ನ ವಶ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಒಂಟಿ ಮಹಿಳೆಯರನ್ನು ಟಾರ್ಗೆಟ್ ಮಾಡಿ ಅವರ ಕತ್ತಿಗೆ ಕೈ ಹಾಕಿ ಮಾಂಗಲ್ಯ ಸರ ಸೇರಿದಂತೆ ಚಿನ್ನದ ಸರಗಳನ್ನು  ಎಗರಿಸಿ ಪರಾರಿಯಾಗುತ್ತಿದ್ದ ಮೂವರು ಸರಗಳ್ಳರನ್ನು ಕೆ.ಆರ್.ನಗರ ಠಾಣೆ ಪೋಲೀಸರು ಬಂಧಿಸಿದ್ದು, ಬಂಧಿತರಿಂದ 21.28ಲಕ್ಷ ರೂಪಾಯಿ ಮೌಲ್ಯದ 152 ಗ್ರಾಂ.ಚಿನ್ನ ಹಾಗೂ 3 ಬೈಕ್‌ಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ.

ಮಂಡ್ಯ ಜಿಲ್ಲೆಯ ಅಗಸರಹಳ್ಳಿ ಗ್ರಾಮದ ನಿವಾಸಿ ದಿವಂಗರ ವೆಂಕಟರಾಮೇಗೌಡರ ಮಗ ಎ.ವಿ.ಕೃಷ್ಣಕುಮಾರ್(35), ಕೃಷ್ಣರಾಜನಗರ ತಾಲೂಕು ಸಾತಿಗ್ರಾಮದ ರಾಜನಾಯಕ ಎಂಬುವರ ಮಗ ಎಸ್.ಆರ್.ನವೀನ್‌ಕುಮಾರ್(36), ಸಾತಿಗ್ರಾಮದ ಸೈಯ್ಯದ್‌ಖಾಸಿಂ ಎಂಬುವರ ಮಗ ಸೈಯ್ಯದ್‌ ಫರ್ಹಾನ್(26) ಬಂಧಿತರಾಗಿದ್ದಾರೆ.

ತಾಲೂಕಿನ ಲಾಳನಹಳ್ಳಿ ಗ್ರಾಮದ ಅನ್ನಪೂರ್ಣ ಎಂಬುವವರು ಏ.6ರಂದು ಸಂಜೆ 4.30ರ ಸುಮಾರಿಗೆ ಗ್ರಾಮದಿಂದ ಪಟ್ಟಣದ ಕಡೆ ಹೋಗುವಾಗ ದ್ವಿಚಕ್ರವಾಹನದಲ್ಲಿ ಬಂದು ಅನ್ನಪೂರ್ಣನವರ ಕತ್ತಿನಲ್ಲಿದ್ದ ಸುಮಾರು 35ಗ್ರಾಂ ಮಾಂಗಲ್ಯಸರವನ್ನು ಕಸಿದುಕೊಂಡು  ಪರಾರಿಯಾಗಿದ್ದರು.

ಈ ಸಂಬಂಧ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಿದ ಪಟ್ಟಣ ಪೋಲೀಸರು ವಿಶೇಷ ತಂಡವನ್ನು ರಚಿಸಿ ಕಾರ್ಯಾಚರಣೆ ನಡೆಸಿ ಆರೋಪಿಗಳನ್ನು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತರನ್ನು ಹೆಚ್ಚಿನ ವಿಚಾರಣೆಗೆ ಒಳಪಡಿಸಿದಾಗ ನಾಲ್ಕು ಸರಗಳ್ಳತನ ಪ್ರಕರಣ ಹಾಗೂ ಒಂದು ಮನೆಗಳ್ಳತನ ಪ್ರಕರಣಗಳಲ್ಲಿ ಭಾಗಿಯಾಗಿರುವುದು ತಿಳಿದುಬಂದಿದೆ.

ಪ್ರಕರಣದ ಕಾರ್ಯಾಚರಣೆಯಲ್ಲಿ ಸರ್ಕಲ್‌ ಇನ್ಸ್ ಪೆಕ್ಟರ್ ಎಸ್.ಶಿವಪ್ರಕಾಶ್, ಇನ್ಸ್ ಪೆಕ್ಟರ್ ಆರ್.ಸ್ವಾಮಿಗೌಡ, ಸಿಬ್ಬಂದಿ  ಪರಶುರಾಮೇಗೌಡ, ಕೆ.ವಿ.ಗೋವಿಂದರಾಜು, ಗುರುಪ್ರಸಾದ್, ಧರ್ಮ, ಪಿ.ಹೆಚ್.ಕೃಷ್ಣ, ಗಿರೀಶ್, ಅಹಮದ್‌ಅಲಿ, ಅವಿನಾಶ್, ಗಣೇಶ್, ಸುನಿತಾ, ಇಂದಾದ್‌ ಅಲಿ,  ವಸಂತಕುಮಾರ್ ಭಾಗವಹಿಸಿದ್ದರು.

admin
the authoradmin

Leave a Reply

Translate to any language you want