ದಲಿತ ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರ ಎಸಗಿದವರ ವಿರುದ್ಧ ಕ್ರಮಕ್ಕೆ ಆಗ್ರಹ
ಕೆ.ಆರ್.ನಗರದಲ್ಲಿ ಪ್ರತಿಭಟನೆ ನಡೆಸಿ ತಹಸೀಲ್ದಾರ್ ಗೆ ಮನವಿ ಸಲ್ಲಿಕೆ

ಕೆ.ಆರ್.ನಗರ(ಸಂಘಟನೆ ಮಂಜುನಾಥ್): ಪಟ್ಟಣದ ಮಧುವನಹಳ್ಳಿ ಬಡಾವಣೆಯ ಮಹಿಳೆ ಮೇಲೆ ಸಾಮೂಹಿಕವಾಗಿ ಅತ್ಯಾಚಾರವೆಸಗಿರುವ ಆರೋಪಿಗಳನ್ನು ಕೂಡಲೆ ಬಂಧಿಸಬೇಕು ಹಾಗೂ ಪ್ರಕರಣದಲ್ಲಿ ನಿರ್ಲಕ್ಷ್ಯ ವಹಿಸಿರುವ ಪೊಲೀಸ್ ಅಧಿಕಾರಿಗಳನ್ನು ಸೇವೆಯಿಂದ ವಜಾಗೊಳಿಸಿ ಸಂತ್ರಸ್ತೆಗೆ ನ್ಯಾಯ ದೊರಕಿಸಿಕೊಡುವಂತೆ ಒತ್ತಾಯಿಸಿ ತಾಲೂಕು ಆದಿಜಾಂಬವ ಸಂಘದ ವತಿಯಿಂದ ತಾಲೂಕುಕಛೇರಿ ಮುಂದೆ ಪ್ರತಿಭಟನೆ ನಡೆಸಿ ತಹಸೀಲ್ದಾರರಿಗೆ ಮನವಿ ಸಲ್ಲಿಸಲಾಯಿತು.
ಈ ಸಂಧರ್ಭದಲ್ಲಿ ಸಂಘದ ತಾಲೂಕು ಅಧ್ಯಕ್ಷ ಮಧುವನಹಳ್ಳಿಲೋಕೇಶ್, ಪುರಸಭೆ ಮಾಜಿ ಅಧ್ಯಕ್ಷ ಡಿ.ಕಾಂತರಾಜ್, ರಾಜ್ಯ ವಿಭಾಗೀಯ ಅಧ್ಯಕ್ಷ ಎಡತೊರೆ ಎಂ.ನಾಗರಾಜ್ ಮತ್ತಿತರರು ಮಾತನಾಡಿ ಪಟ್ಟಣದ ಮಧುವನಹಳ್ಳಿಬಡಾವಣೆಯ ಪರಿಶಿಷ್ಟ ಮಾದಿಗೆ ಸಮಾಜದ ಮಹಿಳೆಯಮೇಲೆ ಕೆಲವು ಕಾಮುಕರು ಅತ್ಯಂತ ಕ್ರೂರವಾಗಿ ಸಾಮೂಹಿಕವಾಗಿ ಅತ್ಯಾಚಾರವೆಸಗಿದ್ದು ಆಕೆ ಪ್ರಜ್ಞೆತಪ್ಪಿ ಆಸ್ಪತ್ರೆಗೆ ದಾಖಲಾಗಿ ಜೀವನ್ಮರಣ ರೀತಿಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪ್ರಕರಣಕ್ಕೆ ಸಂಬಂಧಪಟ್ಟಂತೆ ದೂರು ದಾಖಲಿಸಲಾಗಿದ್ದರೂ ಪೊಲೀಸರ ಕರ್ತವ್ಯನಿರ್ಲಕ್ಷ್ಯದಿಂದ ಆರೋಪಿಗಳು ರಾಜಾರೋಷವಾಗಿ ಓಡಾಡಿಕೊಂಡಿದ್ಧಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಏ.14ರ ರಾತ್ರಿ 11ಗಂಟೆ ಸಮಯದಲ್ಲಿ ಬಡಾವಣೆಯ ನಿವಾಸಿ ಮಹಿಳೆಯೊಬ್ಬರ ಕರೆಯ ಮೇರೆಗೆ ಅವರ ಜತೆಯಲ್ಲಿ ಸಂತ್ರಸ್ತೆ ಹೊರಹೋಗಿದ್ದಾರೆ. ನಂತರ ಬಸವರಾಜು ಅಲಿಯಾಸ್ ಬಸ್ಯ, ಶಿವ ಅಲಿಯಾಸ್ ಕಣಿಯಾ, ಚಂದ್ರಶೇಖರ ಮತ್ತಿತರರು ಆಕೆಯ ಮೇಲೆ ಬಲವಂತವಾಗಿ ರಾತ್ರಿಯಿಡೀ ಸಾಮೂಹಿಕವಾಗಿ ಅತ್ಯಾಚಾರವೆಸಗಿ ಪೈಶಾಚಿಕ ಕೃತ್ಯವೆಸಗಿದ್ದಾರೆ ಎಂದು ಆರೋಪಿಸಿದರು.
ಆರೋಪಿಗಳ ಕ್ರೌರ್ಯದಿಂದ ಗಾಯಗಳಾಗಿದ್ದಲ್ಲದೆ, ರಕ್ತಸ್ರಾವವಾಗಿದ್ದು ಆರೋಪಿಗಳ ದೌರ್ಜನ್ಯದಿಂದ ಸಂತ್ರಸ್ತೆ ನಿತ್ರಾಣಳಾಗಿ ಪ್ರಜ್ಞೆತಪ್ಪಿ ಮೈಸೂರಿನ ಕೆ.ಆರ್.ಆಸ್ಪತ್ರೆಯಲ್ಲಿ ತೀವೃನಿಗಾ ಘಟಕದಲ್ಲಿ ದಾಖಲಾಗಿ ಚಿಕಿತ್ಸೆ ಪಡೆಯುತ್ತಾ ಜೀವನ್ಮರಣದ ನಡುವೆ ಹೋರಾಟ ನಡೆಸುತ್ತಿದ್ದಾರೆ ಎಂದರು.
ಈ ಬಗ್ಗೆ ಸಂತ್ರಸ್ತೆ ತಾಯಿ ಏ.19ರಂದು ಪೋಲೀಸರಿಗೆ ದೂರು ನೀಡಿದಾಗ ಏ.21ರಂದು ಪೊಲೀಸರು ಕೇವಲ ಎನ್‌ಸಿಆರ್ ನೀಡಿ ಆಕೆಯನ್ನು ಸಾಗಹಾಕಿದ್ಧಾರೆ. ಏ.24ರಂದು ಮತ್ತೆ ದೂರುನೀಡಿದಾಗ ಎಫ್‌ಐಆರ್ ದಾಖಲಿಸಿ ಆರೋಪಿಗಳನ್ನು ಠಾಣೆಗೆ ಕರೆಸಿ ನೆಪಮಾತ್ರಕ್ಕೆ ವಿಚಾರಣೆ ನಡೆಸಿಬಿಟ್ಟು ಕಳುಹಿಸಿದ್ಧಾರೆ. ಆರೋಪಿಗಳನ್ನು ರಕ್ಷಿಸಲು ಕಾಣದ ಕೈಗಳು ಪೊಲೀಸರಮೇಲೆ ಒತ್ತಡ ಹಾಕಿರುವ ಬಲವಾದ ಅನುಮಾನಗಳಿದ್ದು ಪೊಲೀಸ್ ಅಧಿಕಾರಿಗಳ ನಿರ್ಲಕ್ಷ್ಯ ಎದ್ದು ಕಾಣುತ್ತಿದೆ ಎಂದು ಅಸಮಾಧಾನ ವ್ಯಕ್ತಪಡಿಸಿದರು.

ಅಲ್ಲದೆ ಮೇಲಿನವರಲ್ಲದೆ ಮತ್ತೆ ಯರ‍್ಯಾರು ಪ್ರಕರಣದಲ್ಲಿ ಭಾಗಿಯಾಗಿದ್ಧಾರೆ ಎಂದು ತನಿಖೆ ನಡೆಸಿ ಕಠಿಣ ಕಾನೂನುಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ ಅವರು, ಆಕೆಗೆ ಉತ್ತಮ ಚಿಕಿತ್ಸೆ ನೀಡಬೇಕು ಮನೆಯ ದುಡಿಮೆಗೆ ಆಧಾರವಾಗಿದ್ದ ಆಕೆಯ ಕುಟುಂಬಕ್ಕೆ ಸರಕಾರ 50ಲಕ್ಷ ಪರಿಹಾರ ನೀಡಬೇಕು, ಈಕೆಯ ಮಗನಿಗೆ ತುರ್ತಾಗಿ ಸರಕಾರಿ ನೌಕರಿ ನೀಡಬೇಕು, ಸಂತ್ರಸ್ತೆಯ ಕುಟುಂಬಕ್ಕೆ ನಿವೇಶನ ನೀಡಿ ವ್ಯವಸ್ಥಿತ ಮನೆನಿರ್ಮಾಣ ಮಾಡಿಕೊಡುವಂತೆ ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ಡಿಎಸ್‌ಎಸ್ ಸಂಚಾಲಕ ಎಂ.ಎಸ್.ಮಲ್ಲೇಶ್, ಪುರಸಭೆ ಮಾಜಿ ಸದಸ್ಯ ಶಂಕರ್, ಮುಖಂಡರಾದ ಎಂ.ಎಸ್.ರಮೇಶ್, ಸಿದ್ದಾಪುರ ರಮೇಶ್, ಬೆಟ್ಟುಮಹದೇವ, ಪಿ.ಕುಮಾರ್, ಬಿ.ಮಂಜುನಾಥ್, ಸಣ್ಣತಾಯಮ್ಮ, ಮತ್ತಿತರ ದಲಿತ ಮುಖಂಡರು, ಸಂಘದ ಪದಾಧಿಕಾರಿಗಳು ಪಾಲ್ಗೊಂಡಿದ್ದರು.
ಇದೇ ಸಂಧರ್ಭದಲ್ಲಿ ಲಿಖಿತವಾದ ಮನವಿಯನ್ನು ತಹಸೀಲ್ದಾರ್‌ಗೆ ಸಲ್ಲಿಸಿ ತಮ್ಮ ಸಮಸ್ಯೆಗೆ ಪರಿಹಾರ ನೀಡುವಂತೆ ಒತ್ತಾಯಿಸಿ ಸರ್ಕಾರಕ್ಕೆ ಮನವಿ ಮಾಡಿದರು.







