ArticlesLatest

ತಲೆ ಸುಡುವ ಬಿಸಿಲಲ್ಲಿ ಆರೋಗ್ಯ ಕಾಪಾಡಲು ಏನೇನು ಮಾಡಬೇಕು? ಇಲ್ಲಿದೆ ಒಂದಷ್ಟು ಸಲಹೆ..

ದಿನದಿಂದ ದಿನಕ್ಕೆ ಬಿಸಿಲಿನ ಪ್ರಖರತೆ ಮತ್ತು ತೀವ್ರತೆ ಏರುತ್ತಿರುವ ಹಿನ್ನೆಲೆಯಲ್ಲಿ, ಸಾರ್ವಜನಿಕರು ತಮ್ಮ ಆರೋಗ್ಯದ ಬಗ್ಗೆ ಹೆಚ್ಚಿನ ಮುನ್ನೆಚ್ಚರಿಕೆ ವಹಿಸುವುದು ಅಗತ್ಯವಾಗಿದೆ  ಅಲ್ಲದೆ ಆರೋಗ್ಯವನ್ನು ಕಾಪಾಡಿಕೊಳ್ಳಲು ಬೇಕಾದ ಕೆಲವೊಂದು ಮುಂಜಾಗ್ರತಾ ಕ್ರಮಗಳನ್ನು ನಿತ್ಯದ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಜಾಣತನವಾಗಿದೆ.

ಮಳೆ ಸುರಿದು ವಾತಾವರಣ ತಂಪಾಗುವ ತನಕ ವಿಶೇಷವಾಗಿ ಗರ್ಭಿಣಿಯರು, ಬಾಣಂತಿಯರು, ಮಕ್ಕಳು ಹಾಗೂ ವಯೋವೃದ್ದರು ಬಿಸಿಲಿನಿಂದ ಉಂಟಾಗುವ ಆರೋಗ್ಯ ಸಮಸ್ಯೆಗಳಿಂದ ತಮ್ಮನ್ನು ರಕ್ಷಿಸಿಕೊಳ್ಳಬೇಕು ಬಹುಮುಖ್ಯವಾಗಿದೆ. ಹಾಗಾದರೆ ಏನೇನು ಮಾಡಬೇಕು? ಎಂಬುದರ ಬಗ್ಗೆ ಆರೋಗ್ಯಾಧಿಕಾರಿಗಳು ಒಂದಷ್ಟು ಸಲಹೆಗಳನ್ನು ನೀಡಿದ್ದು ಅದನ್ನು ಚಾಚು ತಪ್ಪದೆ ಪಾಲಿಸಿದರೆ ಆರೋಗ್ಯ ಕಾಪಾಡಿಕೊಳ್ಳಲು ಸಾಧ್ಯವಾಗಲಿದೆ.

ಸಾಕಷ್ಟು ನೀರು ಕುಡಿಯಿರಿ..  ಬಾಯಾರಿಕೆ ಇಲ್ಲದಿದ್ದರೂ ದಿನವಿಡೀ ಅತಿ ಹೆಚ್ಚು ನೀರನ್ನು ಕುಡಿಯುತ್ತಿರಬೇಕು. ನಿರ್ಜಲೀಕರಣ ತಡೆಯಲು ಇದು ಅತಿ ಮುಖ್ಯವಾಗಿದೆ.

ನೈಸರ್ಗಿಕ ಪಾನೀಯಗಳ ಬಳಕೆ ಮಾಡಿ..  ಅಂಗಡಿಯ ಕೃತಕ ಪಾನೀಯಗಳ ಬದಲು ಮನೆಯಲ್ಲಿ ತಯಾರಿಸಿದ ನಿಂಬೆ ಹಣ್ಣಿನ ರಸ, ಮಜ್ಜಿಗೆ ಹಾಗೂ ನೈಸರ್ಗಿಕ ಎಳೆನೀರನ್ನು ಹೆಚ್ಚಾಗಿ ಸೇವಿಸುವುದು ಒಳ್ಳೆಯದು.

ಆಹಾರ ಕ್ರಮದತ್ತ ನಿಗಾವಿರಲಿ.. ಸೌತೆಕಾಯಿ, ಕಲ್ಲಂಗಡಿ, ಕಿತ್ತಳೆ ಹಾಗೂ ದ್ರಾಕ್ಷಿಯಂತಹ ನೀರಿನ ಅಂಶ ಹೆಚ್ಚಿರುವ ಹಣ್ಣು ಮತ್ತು ತರಕಾರಿಗಳನ್ನು ದಿನನಿತ್ಯದ ಆಹಾರದಲ್ಲಿ ಸೇರಿಸಿಕೊಳ್ಳಬೇಕು.

ಉಡುಪು ಧರಿಸುವಾಗ ಎಚ್ಚರವಿರಲಿ.. ಬಿಗಿಯಾದ ಅಥವಾ ಗಾಢ ಬಣ್ಣದ ಅದರಲ್ಲೂ ಕಪ್ಪು ಬಣ್ಣದ ಬಿಗಿಯಾದ ಉಡುಪು ಧರಿಸುವ ಬದಲಿಗೆ ಹಗುರವಾದ, ತಿಳಿ ಬಣ್ಣದ ಸಡಿಲವಾದ ಹತ್ತಿ ಬಟ್ಟೆಗಳನ್ನು ಧರಿಸುವುದು ದೇಹವನ್ನು ತಂಪಾಗಿರಿಸಲು ಸಹಕಾರಿಯಾಗಲಿದೆ.

ಬಿಸಿಲಿಗೆ ಓಡಾಡುವುದು ಕಡಿಮೆ ಮಾಡಿ.. ಮಧ್ಯಾಹ್ನ 12 ರಿಂದ 3 ಗಂಟೆಯವರೆಗೆ ಬಿಸಿಲಿನ ತೀವ್ರತೆ ಹೆಚ್ಚಿರುವುದರಿಂದ ಆ ಸಮಯದಲ್ಲಿ ಹೊರಗೆ ಹೋಗುವುದನ್ನು ಸಾಧ್ಯವಾದಷ್ಟು ತಪ್ಪಿಸಿ. ಅನಿವಾರ್ಯವಿದ್ದಲ್ಲಿ ಛತ್ರಿ, ಟೋಪಿ, ಕಪ್ಪು ಕನ್ನಡಕ ಹಾಗೂ ಚಪ್ಪಲಿಗಳನ್ನು ಕಡ್ಡಾಯವಾಗಿ ಬಳಸಿ. ಸಭೆ-ಸಮಾರಂಭಗಳನ್ನು ನಡೆಸುವವರು ಜನರಿಗೆ ನೆರಳು ಮತ್ತು ಕುಡಿಯುವ ನೀರಿನ ವ್ಯವಸ್ಥೆ ಕಲ್ಪಿಸಬೇಕು.

ಬಿಸಿಲಿನ ಆಘಾತಕ್ಕೆ ಏನು ಮಾಡುವುದು… ಬಿಸಿಲಿನಿಂದ ಯಾರಾದರೂ ಪ್ರಜ್ಞೆ ತಪ್ಪಿ ಬಿದ್ದರೆ, ಕೂಡಲೇ ಅವರನ್ನು ತಂಪಾದ ಸ್ಥಳಕ್ಕೆ ಸ್ಥಳಾಂತರಿಸಬೇಕು. ಒದ್ದೆ ಬಟ್ಟೆಯಿಂದ ಮೈ ಒರೆಸಿ, ತಕ್ಷಣವೇ ವೈದ್ಯಕೀಯ ಚಿಕಿತ್ಸೆಗೆ ವ್ಯವಸ್ಥೆ ಮಾಡಬೇಕು.

ಪ್ರಾಣಿಗಳತ್ತ ಗಮನಹರಿಸಿ… ಮನುಷ್ಯರಷ್ಟೇ ಅಲ್ಲದೆ ಸಾಕು ಪ್ರಾಣಿಗಳ ಬಗ್ಗೆಯೂ ಕಾಳಜಿ ವಹಿಸಬೇಕು. ಅವುಗಳನ್ನು ನೆರಳಿನಲ್ಲಿರಿಸಿ, ಕುಡಿಯಲು ಸಾಕಷ್ಟು ನೀರಿನ ವ್ಯವಸ್ಥೆ ಮಾಡಬೇಕು. ನಿಲ್ಲಿಸಿದ ವಾಹನಗಳಲ್ಲಿ ಮಕ್ಕಳನ್ನು ಅಥವಾ ಸಾಕು ಪ್ರಾಣಿಗಳನ್ನು ಒಂಟಿಯಾಗಿ ಬಿಟ್ಟು ಹೋಗಬಾರದು.

ಇದನ್ನು ಮಾಡಲೇ ಬೇಡಿ.. ಆಲ್ಕೋಹಾಲ್, ಅತಿಯಾದ ಚಹಾ, ಕಾಫಿ ಮತ್ತು ಕಾರ್ಬೊನೇಟೆಡ್ (ತಂಪು ಪಾನೀಯ) ಪಾನೀಯಗಳು ದೇಹವನ್ನು ಶೀಘ್ರವಾಗಿ ನಿರ್ಜಲೀಕರಣಗೊಳಿಸುವುದರಿಂದ ಅವುಗಳ ಸೇವನೆಯನ್ನು ಆದಷ್ಟು ಕಡಿಮೆ ಮಾಡಬೇಕು.  ವಿಶೇಷವಾಗಿ ಕೆರೆ, ಬಾವಿ ಅಥವಾ ಕಾಲುವೆಗಳ ಹತ್ತಿರ ಮಕ್ಕಳು ಹೋಗದಂತೆ ಪೋಷಕರು ಹೆಚ್ಚಿನ ನಿಗಾ ವಹಿಸುವುದನ್ನು ಮರೆಯದಿರಿ.

admin
the authoradmin

Leave a Reply

Translate to any language you want