ಬಿ.ವಿ.ರಾಧಾ ಕನ್ನಡ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು.. ಚಿಕ್ಕಪುಟ್ಟ ಪಾತ್ರಗಳ ಮೂಲಕ ನಟನೆ ಆರಂಭಿಸಿ, ನಾಯಕಿಯಾಗಿ, ನಿರ್ಮಾಪಕಿಯಾಗಿ ಚಂದನವನದಲ್ಲಿ ತನ್ನ ಛಾಪು ಮೂಡಿಸಿದ ಕಲಾವಿದೆ. ಇವರ ಕುರಿತಂತೆ ಹಿರಿಯಬರಹಗಾರರಾದ ಕುಮಾರಕವಿ ನಟರಾಜ್ ಅವರು ಬರೆದಿದ್ದಾರೆ.. ಓದಿ ಅಭಿಪ್ರಾಯ ತಿಳಿಸಿ…
ಇದನ್ನೂ ಓದಿ: ಕನ್ನಡ ಚಿತ್ರರಂಗದ ಚೊಚ್ಚಲ ಹೀರೊ ಎಂ.ವಿ.ಸುಬ್ಬಯ್ಯನಾಯ್ಡು
ಬೆಂಗಳೂರು ಬಳಿಯಿದ್ದ ಪುಟ್ಟದಾದ ಹಳ್ಳಿಯ ಬಡರೈತ ಕುಟುಂಬದಲ್ಲಿ 15.8.1948 ರಂದು ಜನಿಸಿದ ಮುದ್ದಿನ ಹೆಣ್ಣುಮಗುವಿಗೆ ಪೋಷಕರಿಟ್ಟ ಹೆಸರು ರಾಜಲಕ್ಷ್ಮಿ. ಚಿತ್ರರಂಗಕ್ಕೆ ಸೇರಿದ ಮೇಲೆ ಬೆಂಗಳೂರು ವಿಜಯ ರಾಧಾ @ ಬಿ.ವಿ.ರಾಧಾ ಎಂದು ಹೆಸರು ಬದಲಾಯಿಸಿಕೊಂಡರು. ಬಾಲ್ಯದಲ್ಲೇ ಮಾತಿನಮಲ್ಲಿ ಆಗಿದ್ದ ಈಕೆ ಪ್ರೌಢಶಾಲೆ ವಿದ್ಯಾರ್ಥಿನಿಯಾಗಿದ್ದಾಗ ನಟಿಸುವ ಗೀಳು ಹಿಡಿಸಿಕೊಂಡ ಕಾರಣ ವಿದ್ಯಾಭ್ಯಾಸಕ್ಕೆ ತಿಲಾಂಜಲಿಯಿತ್ತು ಹಾಗೂ ಹೀಗೂ ಮಾಡಿ ಒಂದೆರಡು ಹಳ್ಳಿನಾಟಕದಲ್ಲಿ ಪಾತ್ರಗಿಟ್ಟಿಸಿದ ವಾಚಾಳಿ. ಕಾಲಕ್ರಮೇಣ ತನ್ನ ಕಿಲಾಡಿತನ ಮತ್ತು ಧೈರ್ಯದಿಂದ ಮನೆಯವರಿಗೆ ಸಬೂಬು ಹೇಳಿ ಎಲ್ಲರ ಮನವೊಲಿಸಿ ಸೋದರನ ಜತೆಗೂಡಿ ಮೈಸೂರು ನಗರ ತಲುಪಿದರು.

ಪಡುವಾರಳ್ಳಿಯಲ್ಲಿ ಬಾಡಿಗೆಮನೆ ಪಡೆದು ಅವರಿವರ ನೆರವಿನಿಂದ ಅದು ಹೇಗೋ ಪ್ರೀಮಿಯರ್ ಫಿಲಂ ಸ್ಟುಡಿಯೊ ಸೇರಿಕೊಂಡು ನಿಟ್ಟುಸಿರು ಬಿಟ್ಟರು. ನಂತರ 1964ರಲ್ಲಿ ಬಿಡುಗಡೆಯಾದ “ನವಕೋಟಿ ನಾರಾಯಣ” ಫಿಲಂ ಮೂಲಕ ಕನ್ನಡ ಚಿತ್ರರಂಗಕ್ಕೆ ಪಾದಾರ್ಪಣೆ ಮಾಡಿದ ದುಂಡುಮೊಗದ ಚೆಲುವೆ. ಪ್ರಾರಂಭದಲ್ಲಿ ಸಖಿ, ನೃತ್ಯಗಾರ್ತಿ, ಮುಂತಾದ ಸಣ್ಣಪುಟ್ಟ ಪಾತ್ರದಲ್ಲಿ ಕಾಣಿಸಿ ಕೊಂಡು ಬಹುಬೇಗ ಡಿಕ್ಕಿಮಾಧವರಾವ್, ಬಾಲಕೃಷ್ಣ, ನರಸಿಂಹರಾಜು, ದ್ವಾರಕೀಶ್ ಮುಂತಾದ ಪ್ರಮುಖ ಹಾಸ್ಯನಟರ ಜೊತೆ ಹಾಸ್ಯನಟಿಯಾಗಿ ಅವಕಾಶ ಪಡೆದರು. ಪ್ರೀಮಿಯರ್ ಸ್ಟುಡಿಯೊ ಮಾಲೀಕ ಬಸವರಾಜಯ್ಯನವರ ಸಹಾಯದಿಂದ ಮುಖ್ಯ ಪಾತ್ರಗಳಲ್ಲಿ ನಟಿಸಿ ಸೈ ಎನಿಸಿಕೊಂಡರು. ಕೆ.ಶಂಕರಸಿಂಗ್, ಕೆ.ಎಸ್.ಅಶ್ವಥ್ ಮುಂತಾದವರ ಅನುಕಂಪಕ್ಕೆ ಗುರಿಯಾಗಿ ಕೆಲವು ನಿರ್ಮಾಪಕ, ನಿರ್ದೇಶಕರ ಕೃಪಾ ಕಟಾಕ್ಷದಿಂದ ಶೀಘ್ರ ಅವಧಿಯಲ್ಲಿ ಬಡ್ತಿ ಪಡೆದು ದಿಗ್ಗಜರೊಡನೆ ನಾಯಕಿಯಾಗಿ ಮಿಂಚಿದರು.
ಇದನ್ನೂ ಓದಿ: ನಟನೆಯಿಂದ ನಿಬ್ಬೆರಗಾಗಿಸಿದ್ದ ಸಿಂಗಾನಲ್ಲೂರು ಪುಟ್ಟಸ್ವಾಮಯ್ಯ..
ರಾಜಕುಮಾರ್ ಜತೆ ಹೀರೋಯಿನ್ ಮತ್ತು ತಂಗಿ ಎರಡೂ ಪಾತ್ರಗಳನ್ನು ನಿರ್ವಹಿಸಿ ಎಲ್ಲರಿಂದ ಶಹಬ್ಬಾಶ್ ಗಿರಿ ಪಡೆದರು. ಭಲೇಜೋಡಿ ಚಿತ್ರದಲ್ಲಿ ಡಾ.ರಾಜ್ ಎದುರು ನಾಯಕಿಪಾತ್ರದಲ್ಲಿ ನಟಿಸಿದ್ದರು, ವಿಶೇಷವಾಗಿ “ಆಲಿಸು ಓ ಇನಿಯಾ…ನನ್ನೆದೆಯ ಕರೆಯ…” ಎಂದು ಹಾಡುವ ಮೋಹಿನಿ ಪಾತ್ರದಲ್ಲಿ ಅಮೋಘವಾಗಿ ನಟಿಸಿ ಭೇಷ್ ಎನಿಸಿಕೊಂಡರು. ದೇವರು ಕೊಟ್ಟ ತಂಗಿ ಮುಂತಾದ ಅನೇಕ ಚಿತ್ರಗಳಲ್ಲಿ ತಂಗಿಯ ಪಾತ್ರದಲ್ಲಿ ಮನೋಜ್ಞವಾಗಿ ನಟಿಸಿದರು. ಬಂಗಾರದ ಮನುಷ್ಯ, ಬಂಗಾರದ ಪಂಜರ ಮುಂತಾದ ಪ್ರಶಸ್ತಿ ವಿಜೇತ ಸಿನಿಮಾಗಳಲ್ಲಿ ನಟಿಸಿ ಕನ್ನಡ ನಾಡಿನ ಮನೆಮಾತಾದರು.

ಬೆಂಗಳೂರುಮೈಲ್, ಜೇಡರಬಲೆ, ಮುಂತಾದ ಹಲವಾರು ಸಿನಿಮಾಗಳಲ್ಲಿ ಐಟಂ/ಕ್ಯಾಬರೆ ಡ್ಯಾನ್ಸರ್ ಪಾತ್ರದಲ್ಲೂ ಕಾಣಿಸಿಕೊಂಡು ಯುವಕರ ತನುಮನ ಗೆದ್ದರು. ತಮಗೆ ದೊರೆತ ಯಾವುದೇ ಪಾತ್ರವಿರಲಿ ಲೀಲಾಜಾಲವಾಗಿ ಪ್ರಾಮಾಣಿಕತೆ ಮತ್ತು ಶ್ರದ್ಧೆಯಿಂದ ಅಭಿನಯಿಸಿ ಪ್ರತಿಯೊಬ್ಬರಿಗೂ ನ್ಯಾಯ ದೊರಕಿಸಿಕೊಡುವ ವಿಶಾಲ ಹೃದಯವಂತಿಕೆ ಇದ್ದ ಸರಳ ಸಜ್ಜನಿಕೆಯ ನಟಿ.

ಇದನ್ನೂ ಓದಿ: ಸಕಲಕಲಾವಲ್ಲಭ ಅಚ್ಚಕನ್ನಡಿಗ ಹೊನ್ನಪ್ಪ ಭಾಗವತರ್
ರಾಜ್ ಕಲ್ಯಾಣ್ ಉದಯ್ ಕುಮಾರತ್ರಯರು ಸೇರಿದಂತೆ ರಾಜೇಶ್ ರಮೇಶ್ ರಾಜಾಶಂಕರ್ ಶಿವಾಜಿಗಣೇಶನ್, ಜೆಮಿನಿಗಣೇಶನ್, ಎಂ.ಜಿ.ಆರ್, ಜೈಶಂಕರ್, ಎನ್.ಟಿ.ರಾಮರಾವ್, ಎ.ನಾಗೇಶ್ವರರಾವ್, ಮುಂತಾದ ಅತಿರಥ ಮಹಾರಥ ನಾಯಕನಟರ ಚಿತ್ರಗಳಲ್ಲಿ ತಂಗಿಯಪಾತ್ರ, ಬಜಾರಿಪಾತ್ರ, ಸೌಮ್ಯಪಾತ್ರ, ಹಾಸ್ಯಪಾತ್ರ, ಖಳನಾಯಕಿಪಾತ್ರ, ಯಾವುದೇ ಇರಲಿ ಪ್ರತಿಯೊಂದನ್ನು ಚೆನ್ನಾಗಿ ಅರಿತು ನಡೆದು ಅರೆದು ಕುಡಿದು ಲೀಲಾಜಾಲವಾಗಿ ಅಭಿನಯಿಸುತ್ತಿದ್ದ ಪ್ರತಿಭಾವಂತೆ.

ತುಳು ಹಿಂದಿ ತೆಲುಗು ತಮಿಳು ಮಲೆಯಾಳಂ ಚಿತ್ರಗಳಲ್ಲು ನಟಿಸಿ ಬಹುಭಾಷಾ ತಾರೆಯಾದರು. ಸುಮಾರು 200 ಕನ್ನಡ ಚಿತ್ರಗಳು ಸೇರಿದಂತೆ ಒಟ್ಟಾರೆ 300ಕ್ಕೂ ಮಿಕ್ಕು ಸಿನಿಮಾಗಳಲ್ಲಿ ನಟಿಸಿದರು. 3 ದಶಕದ ಕಾಲ ಹೀರೋಯಿನ್, ಸೆಕೆಂಡ್ ಹೀರೋಯಿನ್, ಪೋಷಕನಟಿ ಸ್ಥಾನಗಳಲ್ಲಿ ದರ್ಭಾರ್ ನಡೆಸಿದರು. ಹಲವಾರು ಚಿತ್ರಗಳ ಶ್ರೇಷ್ಠ ಅಭಿನಯಕ್ಕೆ ಕರ್ನಾಟಕ ರಾಜ್ಯ ಪ್ರಶಸ್ತಿ, ಫಿಲಂಫೇರ್ ಪ್ರಶಸ್ತಿ, ವಿವಿಧ ರಾಜ್ಯಗಳ ಪ್ರಶಸ್ತಿ ಸೇರಿದಂತೆ ಕಾಗಿನೆಲೆ ಗುರುಪೀಠದ ಕನಕರತ್ನ ಪ್ರಶಸ್ತಿ ಹಾಗೂ ಪ್ರತಿಷ್ಠಿತ ಸಂಘಸಂಸ್ಥೆಗಳ ಬಿರುದು ಬಹುಮಾನ ಗೌರವ ಗಳಿಸಿದ್ದರು.
ಇದನ್ನೂ ಓದಿ: ಭಾರತದ ಚಿತ್ರರಂಗದಲ್ಲಿ ಅಚ್ಚಳಿಯದ ಹೆಸರು ಬಿ.ಆರ್.ಪಂತುಲು..

ಕನ್ನಡ ಚಿತ್ರರಂಗದ ಅತ್ಯಂತ ಕಿರಿಯ ನಿರ್ದೇಶಕ ಕೆ.ಎಸ್.ಎಲ್.ಸ್ವಾಮಿ ಅಲಿಯಾಸ್ ರವಿ ಅವರನ್ನು ವಿವಾಹವಾಗಿ ಚಂದನವನದ ತಾರಾಜೋಡಿಗಳಲ್ಲಿ ಸ್ಥಾನ ಪಡೆದರು. ನಿರೀಕ್ಷೆಗೂ ಮೀರಿದ ಹಣ ಕೀರ್ತಿ ಜನಪ್ರಿಯತೆ ದೊರೆತ ನಂತರ ಮೈಸೂರಿನ ಜಯಲಕ್ಷ್ಮಿಪುರಂ ಕಾಳಿದಾಸ ರಸ್ತೆ ಪಂಚವಟಿ ಸರ್ಕಲ್‍ನ ಎಂ.ಪಿ.ಶಂಕರ್ ಮನೆ ಎದುರು ತಮ್ಮ ಸ್ವಂತಮನೆಯಲ್ಲಿ ರಾಧಾ-ರವಿ ದಂಪತಿ ವಾಸಮಾಡಲು ಪ್ರಾರಂಭಿಸಿದರು. ತಮ್ಮ ಬಹುದಿನಗಳ ಬಯಕೆ ಈಡೇರಿಸಿಕೊಳ್ಳಲು ಹತ್ತಾರು ಚಿತ್ರಗಳ ನಿರ್ಮಾಪಕಿ ಆಗಿಯೂ ಯಶಸ್ಸು ಗಳಿಸಿದರು. 70 ವರ್ಷದ ತುಂಬು ಜೀವನದ ನಂತರ 10.9.2017ರಂದು ತಾವು ಇಚ್ಚೆಪಟ್ಟಂತೆ ಬೆಂಗಳೂರಿನ ಮನೆಯಲ್ಲಿ ಇಹಲೋಕ ತ್ಯಜಿಸಿದರು. ಆದರೆ ಇವರಿಗೂ ಮುನ್ನ ಇವರ ಪತಿಯಾದ ರವಿ ಉರುಫ್ ಕೆ.ಎಸ್.ಎಲ್.ಸ್ವಾಮಿ, ಖ್ಯಾತ ನಿರ್ಮಾಪಕ, ನಿರ್ದೇಶಕ, ದಿನಾಂಕ 20.10.2015 ರಂದು ನಿಧನರಾಗಿದ್ದರು.
ಇದನ್ನೂ ಓದಿ: ಕನ್ನಡ ಚಿತ್ರರಂಗ ಎಂದಿಗೂ ಮರೆಯದ ಜಿ.ವಿ.ಅಯ್ಯರ್…

ಇದನ್ನೂ ಓದಿ: ಬಾಲಿವುಡ್ ನಲ್ಲಿ ಕನ್ನಡಬಾವುಟ ಹಾರಿಸಿದ್ದ ಆರ್.ನಾಗೇಂದ್ರರಾವ್…
ಬಿ.ವಿ.ರಾಧಾ ನಟಿಸಿದ ಪ್ರಮುಖ ಸಿನಿಮಾಗಳು… ತೂಗುದೀಪ, ಪ್ರೇಮಮಯಿ, ಕಿಲಾಡಿರಂಗ, ರಾಜದುರ್ಗದರಹಸ್ಯ, ಲಗ್ನಪತ್ರಿಕೆ, ಒಂದೇ ಬಳ್ಳಿಯ ಹೂಗಳು, ಮನಸ್ಸಿದ್ದರೆ ಮಾರ್ಗ, ಸಿಂಹಸ್ವಪ್ನ, ಮಂಕುದಿಣ್ಣೆ, ಮನಸ್ಸಾಕ್ಷಿ, ಹಣ್ಣೆಲೆಚಿಗುರಿದಾಗ, ಭಾಗ್ಯದಬಾಗಿಲು, ಗಾಂಧಿನಗರ, ಬೇಡಿಬಂದವಳು, ಮಕ್ಕಳೇಮನೆಗೆಮಾಣಿಕ್ಯ, ಮುಕುಂದಚಂದ್ರ, ಚೂರಿಚಿಕ್ಕಣ್ಣ, ಭಲೇರಾಜ, ಬೃಂದಾವನ, ಮೇಯರ್ ಮುತ್ತಣ್ಣ, ರಂಗಮಹಲ್ ರಹಸ್ಯ, ಮೊದಲರಾತ್ರಿ, ಮೂರು ಮುತ್ತುಗಳು, ಅನುಗ್ರಹ, ಅನಿರೀಕ್ಷಿತ, ಅತ್ತೆಗೊಂದುಕಾಲ-ಸೊಸೆಗೊಂದುಕಾಲ, ಭಲೇ ಅದೃಷ್ಟವೋ ಅದೃಷ್ಟ, ಎರಡುಮುಖ, ಆರು ಮೂರು ಒಂಭತ್ತು, ಅರಿಶಿನ ಕುಂಕುಮ, ಗೆಜ್ಜೆಪೂಜೆ, ನಗುವ ಹೂವು, ಸಿ.ಐ.ಡಿ.-72, ಯಾವಜನ್ಮದಮೈತ್ರಿ, ಜ್ವಾಲಾಮೋಹಿನಿ, ನಾಗರಹೊಳೆ, ವಂಶಜ್ಯೋತಿ, ಮುತ್ತೈದೆಭಾಗ್ಯ, ಗೌರಿಕಲ್ಯಾಣ, ಕಲಾವಿದ, ಚಿನ್ನಾ, ಸಿಂಹದಮರಿ, ತುತ್ತಾಮುತ್ತಾ, ಹೂಮಳೆ, ಗಡಿಬಿಡಿಕೃಷ್ಣ, ಸ್ನೇಹಲೋಕ, ಪಾರ್ಥ, ಅಜ್ಜು, ತಂದೆಗೆ ತಕ್ಕ ಮಗ(ಅಂತಿಮ ಚಿತ್ರ,2006).









