ಕೆ.ಆರ್.ನಗರ(ಜಿಟೆಕ್ ಶಂಕರ್): ತಾಲ್ಲೂಕಿಗೆ ಸಾಕಷ್ಟು ಕೊಡುಗೆ ನೀಡಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಭವನ ತಾಲ್ಲೂಕಿನಲ್ಲಿ ನಿರ್ಮಾಣವಾಗದೇ ಇರುವುದು ಬೇಸರ ತಂದಿದೆ ಎಂದು ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷ ಜಿ.ಡಿಂಡಿಮ ಶಂಕರ್ ಅಸಮಾಧಾನ ವ್ಯಕ್ತಪಡಿಸಿದರು.
ಪಟ್ಟಣದ ರೋಟರಿ ಭವನದಲ್ಲಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ ವತಿಯಿಂದ ನಡೆದ 112ನೇ ಸಂಸ್ಥಾಪನಾ ದಿನಾಚರಣೆಯಲ್ಲಿ ಮಾತನಾಡಿದ ಅವರು ಪ್ರತಿವರ್ಷ ಕಸಾಪ ಸಂಸ್ಥಾಪನಾ ದಿನದಂದು ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಸೇವೆಯನ್ನು ನೆನೆಯುವ ಬದಲು ಸದಾ ನೆನಪಿಸಿಕೊಳ್ಳುವಂತಾಗಬೇಕು ಎಂದರು.
ಕಾವೇರಿ ನದಿ ನೀರು ಪಡೆಯಲು ನಮಗೆ ಚೋಳರ ಕಾಲದಿಂದಲೂ ಅಡ್ಡಗಾಲು ಇತ್ತು ಎಂದು ಹೇಳಿದ ಅವರು, ಅರಮನೆ ವೈಭವಕ್ಕಿಂತ ಜನರ ಸಮಸ್ಯೆಯೇ ಮುಖ್ಯ ಎಂದು ಒಡೆಯರ್ ಅವರು ವಿಶೇಷ ತಂತ್ರಜ್ಞಾನ ಬಳಸಿ ಕಾವೇರಿ ನದಿಗೆ ಅಡ್ಡಲಾಗಿ ಕನ್ನಂಬಾಡಿ ಕಟ್ಟೆ ನಿರ್ಮಿಸಿದರು ಎಂದರು.
ಬೇಸಿಗೆ ಸಂದರ್ಭದಲ್ಲಿ ರಾಯಚೂರು, ಗುಲಬರ್ಗಾ, ಬಳ್ಳಾರಿ ಸೇರಿದಂತೆ ಹಲವು ಜಿಲ್ಲೆಗಳಲ್ಲಿನ ಜನರು ಕಿ.ಮೀ ಗಟ್ಟಲೆ ಸಾಗಿ ಕುಡಿಯುವ ನೀರು ತರುತ್ತಿದ್ದದನ್ನ ಅರಿತ ಒಡೆಯರ್ ಅವರು ಈ ಭಾಗದ ಜನರು ಆ ರೀತಿಯ ಸಮಸ್ಯೆಗೆ ಸಿಲುಕಬಾರದೆಂದು ಕನ್ನಂಬಾಡಿ ಕಟ್ಟೆ ನಿರ್ಮಿಸಿದ್ದರಿಂದ ಕೃಷಿ ಚಟುವಟಿಕೆಯ ಜೊತೆಗೆ ಕೈಗಾರಿಕೆಗಳು ಸ್ಥಾಪನೆಗೂ ಅನುಕೂಲವಾಗಿ ಜನರ ಬದುಕಿಗೆ ದಾರಿ ದೀಪವಾಗಿದ್ದಾರೆ ಎಂದು ಬಣ್ಣಿಸಿದರು.

ಹಳೇ ಮೈಸೂರು ಭಾಗದಲ್ಲಿನ ಜನ ನೆಮ್ಮದಿಯಾಗಿ ಬದುಕಲು ಅಡಿಗಲ್ಲು ಹಾಕಿದ ನಾಲ್ವಡಿ ಕೃಷ್ಣರಾಜ ಒಡೆಯರ್ ಕಾರಣರಾಗಿದ್ದು ದುರಂತ ಎಂಬಂತೆ ಅವರ ಹೆಸರಿನಲ್ಲಿ ತಾಲ್ಲೂಕಿನಲ್ಲಿ ಸಾಹಿತ್ಯ ಭವನ ನಿರ್ಮಿಸಲು ಸಾಧ್ಯವಾಗುತ್ತಿಲ್ಲ ಎಂದು ಅಸಮಧಾನ ವ್ಯಕ್ತಪಡಿಸಿದ ಅವರು ತಾವುಗಳು ಈ ಬಗ್ಗೆ ಜನಪ್ರತಿನಿಧಿಗಳಲ್ಲಿ ಹಲವು ಬಾರಿ ಮನವಿ ಸಲ್ಲಿಸಿದ್ದರೂ ಯಾವುದೇ ಪ್ರಯೋಜನವಾಗುತ್ತಿಲ್ಲ ಎಂದು ಹೇಳಿದರು.
ಗೌರವ ಅಧ್ಯಕ್ಷ ಡಾ.ಡಿ.ನಟರಾಜ್, ನಗರ ಅಧ್ಯಕ್ಷ ಸಿ.ವಿ.ಮೋಹನಕುಮಾರ್, ಸಮಾಜ ಸೇವಕ ಜಿ ಶೇಷಾದ್ರಿ, ಚುಟುಕು ಸಾಹಿತಿ ಹೆಗ್ಗಂದೂರು ಪ್ರಭಾಕರ್, ನಿವೃತ್ತ ಪ್ರಾಂಶುಪಾಲ ಕೃಷ್ಣ, ಗೌರವ ಕಾರ್ಯದರ್ಶಿ ಸಿ.ಆರ್.ಉದಯಕುಮಾರ್, ಉಪಾಧ್ಯಕ್ಷ ರಾಮಕೃಷ್ಣ ಕೋಶಾಧ್ಯಕ್ಷ ಕೆ.ಎಲ್.ಭಾಸ್ಕರ್ ಮಾತನಾಡಿದರು.
ಮಹಿಳಾ ಪ್ರತಿನಿಧಿ ಕೆ.ಪಿ.ಭಾರತಿ, ರೋಟರಿ ಕಾರ್ಯದರ್ಶಿ ಪುರುಷೋತ್ತಮ್, ಖಜಾಂಚಿ ಅಶೋಕ್, ಆರೋಗ್ಯ ಇಲಾಖೆಯ ಕೆ.ವಿ.ರಮೇಶ್, ನಿವೃತ್ತ ಶಿಕ್ಷಕ ಚಂದ್ರಶೇಖರ್, ರಾಮಶೆಟ್ಟಿ, ಗೋಪಾಲ್ ರಾಜ್, ಮಹದೇವ್, ಯೋಗೇಶ್ ಕುಮಾರ್ ಸೇರಿದಂತೆ ಇನ್ನಿತರರು ಹಾಜರಿದ್ದರು.








