ArticlesLatest

ವಸಂತ ಕಾಲದ ವಸಂತ ಗಾನಕ್ಕೆ ತಲೆದೂಗುವ ನಿಸರ್ಗಕ್ಕೆ ಕವಿಯಿಂದ ಅಕ್ಷರಗಳ ನಮನ..

ವಸಂತ ಕಾಲವೆಂದರೆ ನಿಸರ್ಗಕ್ಕೆ ಮರುಹುಟ್ಟಿನ ಅನುಭವ… ಸುಡುವ ಬಿಸಿಲ ನಡುವೆ ಎಲೆಯುದುರಿಸಿ, ಚಿಗುರಿ ಹಸಿರಾಗಿ, ಹೂಬಿಟ್ಟು ನಳನಳಿಸುತ್ತಾ ವರುಣನೆಡೆಗೆ ಆಸೆಗಣ್ಣಿನಿಂದ ಕಾಯುವ ತವಕ.. ವಸಂತಕಾಲದಲ್ಲಿ ನಿಸರ್ಗವನ್ನು ವರ್ಣಿಸಿದಷ್ಟೂ ಮುಗಿಯುವುದೇ ಇಲ್ಲ… ವಸಂತ ಕಾಲದಲ್ಲಿ ನಿಸರ್ಗವನ್ನು ವರ್ಣಿಸುತ್ತಾ ಕುಮಾರಕವಿ ನಟರಾಜರವರು ಕವನವೊಂದನ್ನು ನಿಮಗಾಗಿ ತೇಲಿ ಬಿಟ್ಟಿದ್ದಾರೆ ಓದಿ ಬಿಡಿ..

 

ಅನೇಕ ಅನಂತ

ಆಕಾಶ ಗಂಗೆಯಿಂದ

ಇಬ್ಬನಿ ಹನಿಹನಿ

ಇಳೆಗೆ ಇಳಿಯುತ್ತದೆ

ಮಂಜು ಮೋಡ

ಮಬ್ಬು ತಬ್ಬುತ್ತದೆ

ಹೆಣ್ಣೆಲೆ ಹಣ್ಣೆಲೆ

ಉದುರುವಿಕೆ ನಿಲ್ಲುತ್ತದೆ

ಮರ ಗಿಡ

ಬಳ್ಳಿ ಚಿಗುರುತ್ತದೆ!

 

ನಿಸರ್ಗದೇವಿ ಮೈತುಂಬಿಸಲು

ತಮ್ಮದೇ ಸಾಮ್ರಾಜ್ಯ ಸ್ಥಾಪಿಸಲು

ಹಸಿರು ಉಸಿರಿನ ಪಚ್ಚೆಪೈರು

ತೆನೆಗೊನೆ ಬಸಿರಿನ ಹೊನ್ನತೇರು

ನಳನಳಿಸೊ ನಂದನವನ…

 

ನಯನ ಮನೋಹರ ವರ್ಣಾನಂದ

ಪಕ್ಷಿಸಂಕುಲ ಆಲಾಪನೆ ಕರ್ಣಾನಂದ

ರಮಣೀಯ ನೆಮ್ಮದಿ ಆಹ್ಲಾದ

ಇಂದ್ರಲೋಕ ಸ್ವರ್ಗಸುಖದ ಆನಂದ

ಮುಂತಾದ ಅಂದಾಚೆಂದದ

 

ವಸಂತ ಋತು…….

ಬಂದು ಹೋದ ಮೇಲೂ

ಅನಿವಾರ್ಯವೇನೊ ಎಂಬಂತೆ

ಅನಿಷ್ಟ ಸ್ವಾರ್ಥ ಲೋಭ ಅಹಂ

ವಿ-ದ್ರೋಹಿಗಳ ಶಿಷ್ಯ ಪಟಾಲಂ

ಅನಗತ್ಯ ಅಸಹ್ಯ ಪಾರ್ಥೇನಿಯಂ

ಅಲ್ಲಲ್ಲೆ ಆಗಾಗ್ಗೆ ಹುಟ್ಟಿಕೊಳ್ಳುತ್ತಲಿವೆ

ಹಾಳಾಗಿಹೋಗದೆ ಉಳಿದೇಬಿಡುತ್ತವೆ!

 

ಹೇಗೆಂದರೆ…..

ಕುಂತೀ ಏಳಿಗೆ ಸಹಿಸದೆ

ಗಾಂಧಾರಿ ಶಾಪಹಾಕೋದು

ಕೋಗಿಲೆ ಹಾಡಿಗೆ ಸಾಟಿಯಾಗದೆ

ಕಾಗೆ ಸ್ಫರ್ಧಿಸೋದು

ನವಿಲ ನರ್ತನ ಕಂಡು

ಕೆಂಬೂತ ಮುಗ್ಗರಿಸೋದು

ಉತ್ತಮ ಪ್ರಜೆಯನ್ನ ಕಂಡು

ಅಧಮ ಅಸೂಯೆಪಡೋದು

 

ಇತ್ಯಾದಿ ಅಗಣಿತ ದಂಡಪಿಂಡಗಳ

ದಂಡುದಾಳಿ ಕಂಡುಬರುತ್ತವೆ

ಭಂಡರಾಗಿ ಇದ್ದೇಇರುತ್ತವೆ….!

ಇಂಥದ್ದೆಲ್ಲ ಎಲ್ಲಿವರೆಗೆ ಗೊತ್ತೇನು?

ಹೇಳದೇ ಕೇಳದೇ ಜವರಾಯ

ಬಂದು ಕರೆದೊಯ್ಯೊವರೆಗೆ..!

admin
the authoradmin

5 ಪ್ರತಿಕ್ರಿಯೆಗಳು

ನಿಮ್ಮದೊಂದು ಉತ್ತರ