ನಾಡಪ್ರಭು ಕೆಂಪೇಗೌಡರ ರೋಚಕ ಚರಿತ್ರೆ… ಪಾಳೇಗಾರನಿಂದ ಚಕ್ರಾಧಿಪತ್ಯದವರೆಗೆ….
ಜೂನ್ 27 ಕೆಂಪೇಗೌಡರ ಜಯಂತ್ಯುತ್ಸವ.. ಆ ಕುರಿತ ವಿಶೇಷ ಲೇಖನ

ನಾಡಪ್ರಭು ಕೆಂಪೇಗೌಡ ದೊರೆ (ಜನನ 27.6.1510 – ಮರಣ 7.3.1570)
ಇವತ್ತು ವಿಶ್ವದಲ್ಲಿಯೇ ತನ್ನದೇ ಆದ ಖ್ಯಾತಿಯನ್ನು ಹೊಂದಿ ಗಮನಸೆಳೆಯುತ್ತಿರುವ ಬೆಂಗಳೂರಿನ ನಿರ್ಮಾತೃ ಕೆಂಪೇಗೌಡರು… ಅವರನ್ನು ನೆನಪಿಸಿಕೊಳ್ಳುತ್ತಾ ಅವರ ಕುರಿತಂತೆ ಇತಿಹಾಸದಲ್ಲಿ ದಾಖಲೆಯಾಗಿರುವ ಆಡಳಿತ ವೈಖರಿಯ ಬಗ್ಗೆ ಬರಹಗಾರರಾದ ಕುಮಾರಕವಿ ನಟರಾಜ್ ಇಲ್ಲಿ ಬರೆದಿದ್ದಾರೆ.
16ನೇ ಶತಮಾನದಲ್ಲಿ ದಕ್ಷಿಣ ಭಾರತ ಚಕ್ರಾಧಿಪತಿ ಆಗಿ ಮೆರೆದ ಕನ್ನಡ ರಮಾರಮಣ ವಿಜಯನಗರ ಸಾಮ್ರಾಜ್ಯದ ಚಕ್ರವರ್ತಿ ಶ್ರೀಕೃಷ್ಣದೇವರಾಯರ ಭವಿತವ್ಯ ಆಡಳಿತ ವಿಜೃಂಭಿಸಿತ್ತು. ನಾಡುನುಡಿ, ನೆಲಜಲ, ಜನಮನ, ಕವಿಕಲಾವಿದ, ಮಹಿಳೆ ಮಕ್ಕಳು, ಬೆಳೆ ಬಂಗಾರ ಸಮೃದ್ಧಿಯಿಂದ ಇಡೀ ಸಾಮ್ರಾಜ್ಯವೇ ಶಾಂತಿ ನೆಮ್ಮದಿ ಹಾಗೂ ಸಂಪತ್ತು ಸಂತೋಷದಿಂದ ತುಂಬಿತುಳುಕಿತ್ತು.

ದೇಶ-ವಿದೇಶದ ಪ್ರವಾಸಿಗರು ವರ್ತಕರು ಅತಿಥಿಗಳು ಸಾಮಂತರು ಮೊದಲ್ಗೊಂಡು ಪ್ರತಿಯೊಬ್ಬರೂ ವಿಜಯನಗರ ಅರಸರ ಆಡಳಿತದ ಪರಿಣಾಮವಾಗಿ ಫಲಿಸಿದ್ದ ಸರ್ವಾಂಗೀಣ ಅಭಿವೃದ್ಧಿಯ ಸುಭಿಕ್ಷ ಅಸ್ಮಿತೆಯನ್ನು ಕಂಡು ಬೆರಗಾಗುತ್ತಿದ್ದರು. ಸಕಲ ಲೋಕವು ಹೊಗಳುವಂಥ ಹೃದಯ ಶ್ರೀಮಂತಿಕೆಯ ಸುಭದ್ರ ನೆಲೆಬೀಡು ಪ್ರಬುದ್ಧ ಕನ್ನಡನಾಡು ಮಹಾರಾಜ ಶ್ರೀ ಕೃಷ್ಣದೇವರಾಯರ ಆಳ್ವಿಕೆಯಲ್ಲಿ ಅದ್ಭುತ ಎನಿಸಿತ್ತು! ಹಲವಾರು ಸಾಮಂತ ರಾಜ ಮಹಾರಾಜ ಪಾಳೇಗಾರರು ತಂತಮ್ಮ ಸಣ್ಣಪುಟ್ಟ ಪ್ರದೇಶ ರಾಜ್ಯ ಪ್ರಾಂತ್ಯಗಳ ಆಡಳಿತವನ್ನು ನಿಶ್ಚಿಂತೆಯಿಂದ ನಡೆಸುತ್ತಿದ್ದರು. ಇವರೆಲ್ಲರ ಪೈಕಿ ಅಗ್ರಗಣ್ಯ ರಾಗಿದ್ದವರು ಸಾಮಂತರಾಜ ಪಾಳೇಗಾರ್ ಕೆಂಪೇಗೌಡರು.
ಕ್ರಿ.ಶ.1510ನೇ ಜೂನ್ 27ರಂದು ಶ್ರೀಮತಿ ಲಿಂಗಾಂಬೆ ಮತ್ತು ಪಾಳೇಗಾರ ಕೆಂಪನಂಜೇಗೌಡ ದಂಪತಿಯ ಜೇಷ್ಠ ಪುತ್ರ ರತ್ನನಾಗಿ ಕೆಂಪಯ್ಯನವರ ಜನನ. 1515ರಲ್ಲಿ ಐದು ವರ್ಷ ದವನಿದ್ದಾಗ ತಂದೆಯೊಡನೆ ಹಂಪಿಯಲ್ಲಿ ಆ ವರ್ಷದಿಂದ ಪ್ರಾರಂಭವಾದ ಮೊಟ್ಟಮೊದಲ ವಿಜಯದಶಮಿ ಉತ್ಸವವನ್ನು ಕಣ್ಣಾರೆ ಕಂಡ ಬಾಲಕ ಕೆಂಪಯ್ಯನ ಮನದಲ್ಲಿ ಆಗ ಮೂಡಿದ್ದು: “ಭವಿಷ್ಯದಲ್ಲಿ ತಾನೂ ಸಹ ಕೆಂಪರಾಯ ಎಂಬ ಹೆಸರಿನೊಡನೆ ರಾಜ್ಯವನ್ನು ವಿಸ್ತರಿಸಿ ಉತ್ತಮ ಆಳ್ವಿಕೆ ನಡೆಸಬೇಕೆಂಬ ಹೆಬ್ಬಯಕೆ!” ದೈವಲೀಲೆ ಎಂಬಂತೆ ಪ್ರಕೃತಿದತ್ತವಾಗಿ ಬೆಳೆದಂತೆ ಬಾಲಕ-ಯುವಕ ಕೆಂಪೇಗೌಡ ಕ್ಷಾತ್ರಗುಣದಂತೆ ಗುರುಕುಲದಲ್ಲಿ ಶಸ್ತ್ರಾಸ್ತ್ರ ವಿದ್ಯೆ ಮತ್ತು ಸಕಲ ವಿದ್ಯಾ ಪಾರಂಗತರಾದರು.
1528 ರಲ್ಲಿ ತಮ್ಮ ಸೋದರಮಾವನ ಮಗಳು ಚೆನ್ನಾಂಬೆ @ ಚೆನ್ನಮ್ಮ ಎಂಬ ಕನ್ಯೆಯೊಡನೆ ವಿವಾಹ. ಇದೇ ಸಂದರ್ಭದ ಸುಮುಹೂರ್ತದಲ್ಲಿ ಕೆಂಪೇಗೌಡರಿಗೆ ಯುವರಾಜನಾಗಿ ಪಟ್ಟಾಭಿಷೇಕ. 1529 ರಲ್ಲಿ ಶ್ರೀಕೃಷ್ಣದೇವರಾಯ ನಿಧನರಾದ ಬಳಿಕ ಆವರೆಗೂ ಸಾಮಂತ ರಾಜನಾಗಿದ್ದ ಕೆಂಪನಂಜೇಗೌಡರ ಪುತ್ರ ಮೊದಲನೇ ಕೆಂಪೇಗೌಡರು ಸ್ವತಂತ್ರ ಮಹಾರಾಜನಾಗಿ 1530ರಿಂದ 1569ರವರೆಗೆ 39ವರ್ಷ ನಿರಂತರ ಆಳ್ವಿಕೆ ನಡೆಸಿ ಸ್ತ್ಯುತ್ಯಾರ್ಹ ರೀತಿಯಲ್ಲಿ ನಿರಂಕುಶ ಪ್ರಭುವಾಗಿ ಮೆರೆದರು.

ಕೆಂಪೇಗೌಡರ ಆಡಳಿತ ಅವಧಿಯಲ್ಲಿ ಜೈತ್ರ ಯಾತ್ರೆ ಮೂಲಕ ಆವತಿಯಿಂದ ಮೊದಲ್ಗೊಂಡು ಜಿಗಣಿ ಬಾಣಾವರ ಕೋರ ಮಂಗಲ ನೆಲಮಂಗಲ ತಲಘಟ್ಟಪುರ ಹಲಸೂರು ಹೊಸೂರು ಕೋಲಾರ ಶಿವಗಂಗೆ ಸಿದ್ಧಗಂಗೆ ಕುಣಿಗಲ್ ಹುಲಿಯೂರುದುರ್ಗ. ಹುಲಿಕಲ್ ಹುತ್ತರಿದುರ್ಗ ಸಾವನದುರ್ಗ ದೇವನಹಳ್ಳಿ ಗಂಗೇನಹಳ್ಳಿ ಹೊಸಹಳ್ಳಿ ಸಾತನೂರು ರಾಗಿಮುದ್ದನಹಳ್ಳಿ ಕಾನಕಾನಹಳ್ಳಿ ಮುದ್ದಗೆರೆ ಮಾಗಡಿ ಹಾಗೂ ರಾಮನಗರ ಸುತ್ತಮುತ್ತಲವರೆಗೆ ಹಬ್ಬಿಸಿದ್ದರು. ವಿಜಯನಗರ ಸಾಮ್ರಾಜ್ಯದ ಪ್ರತಿರೂಪದಂತಿದೆ ಎಂದು ಪ್ರಸಿದ್ಧಿ ಪಡೆದು ಸಾಂಗವಾಗಿ ಸಾಗಿತ್ತು ಕೆಂಪರಾಯ ಉರುಫ್ ಮೊದಲನೇ ಕೆಂಪೇಗೌಡರ ದರ್ಬಾರ್!
ಚಕ್ರವರ್ತಿ ಅಚ್ಯುತರಾಯನಿಂದಲೇ ಅನುಮತಿ ಪಡೆದು ಸರ್ವತಂತ್ರ ಸ್ವತಂತ್ರನಾಗಿ ಸಾರ್ವತ್ರಿಕ ಮೆಚ್ಚುಗೆ ಗಳಿಸಿದರು. ಅಪರಿಚಿತರು ಆಗಂತುಕರು ಆಶ್ಚರ್ಯಚಕಿತರಾಗುವಂತೆ ಸಕಲಗುಣ ಸಂಪನ್ನನಾಗಿ ವಿಜಯನಗರ ಆಳರಸರಿಂದ ಶಹಬ್ಬಾಸ್‍ಗಿರಿ ಪಡೆದು ಸಮರ್ಥ ಆಡಳಿತಗಾರನಾಗಿ ಶ್ರೇಷ್ಠ ರಾಜ್ಯಭಾರ ನಡೆಸುತ್ತಿದ್ದ ಏಕೈಕ ಸಾಮಂತನೆಂದು ಹೆಸರುವಾಸಿ ಪಡೆದರು. ಯಲಹಂಕ-ಮಾಗಡಿ ಜೋಡಿ ಸಂಸ್ಥಾನದ ಯಶಸ್ವಿ ದೊರೆ ಎಂದೂಸಹ ಅಪಾರ ಕೀರ್ತಿ ಗಳಿಸಿದರು ಬೆಂಗಳೂರು ನಗರದ ನಿರ್ಮಾತೃ ಯಲಹಂಕದ ಪ್ರಭು ಮೊದಲನೆಯ ಕೆಂಪೇಗೌಡರು!
ಒಂದು ದಿನ ಹುಣ್ಣಿಮೆ ರಾತ್ರಿಯಲ್ಲಿ ಅರಮನೆ ಸುಪ್ಪತ್ತಿಗೆಯಲ್ಲಿ ರಾಜಾ ಕೆಂಪೇಗೌಡರು ನಿದ್ರಾವಸ್ಥೆಯಲ್ಲಿದ್ದಾಗ ಬೆಳಗಿನ ಅಭಿಜಿನ್ ಮುಹೂರ್ತಕ್ಕೆ ಮುನ್ನ ಕೆಂಪೇಗೌಡರ ಕನಸಲ್ಲಿ ಕಾಣಿಸಿಕೊಂಡ ನಾಡದೇವತೆ ಅಣ್ಣಮ್ಮದೇವಿ ಪ್ರಸ್ತುತ ಪಡಿಸಿದ್ದೇನೆಂದರೆ.. ಮಗೂ ಕೆಂಪೇಗೌಡ ಸಕಲಜೀವಿಯ ಕಲ್ಯಾಣಾರ್ಥಕ್ಕಾಗಿ ನೀನೊಂದು ನವನಗರ ನಿರ್ಮಾಣ ಮಾಡುವಂತವನಾಗು, ನಿನ್ನ ಕಾರ್ಯವು ಶೀಘ್ರವೇ ಕೈಗೊಳ್ಳುವಂತಾಗಲಿ ಸಂಪೂರ್ಣ ಯಶಸ್ವಿಯಾಗಲಿ” ಎಂದು ಆಶೀರ್ವದಿಸಿದಳು.

ಅಣ್ಣಮ್ಮದೇವಿಯ ಆಣತಿಯಂತೆ ಹೊಸದಾದ ಒಂದು ಬೃಹತ್ ನಗರವನ್ನು ನಿರ್ಮಿಸಲು ತಕ್ಕುದಾದ ಶುಭ ಮುಹೂರ್ತದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಿದ ಕೆಂಪೇಗೌಡರು ಸತ್ಕಾರ್ಯವು ಪ್ರಾರಂಭವಾದ ಕ್ಷಣದಿಂದಲೆ ಆಲಸ್ಯ ತೊರೆದರು. ಬೆಂಗಳೂರು ನಗರ ನಿರ್ಮಾಣ ಕಾಮಗಾರಿಯನ್ನು ಸಾಧ್ಯವಾದಷ್ಟು ಶೀಘ್ರವಾಗಿ ಅಚ್ಚುಕಟ್ಟಾಗಿ ಸುಂದರವಾಗಿ ಸಾವಕಾಶವಾಗಿ ಆದರೆ ಪರಿಪೂರ್ಣ ಯಶಸ್ವಿಯಾಗಿ ಮುಕ್ತಾಯಗೊಳಿಸಲು ಪಣತೊಟ್ಟರು.
ತಮ್ಮ ತಾಯಿ ಮತ್ತು ಹೆಂಡ್ತಿ ಇಬ್ಬರೂ ಸಹ ಹಳೇ ಬೆಂದಕಾಳೂರಿನ ತವರಿನವರೇ ಆಗಿದ್ದುದರಿಂದ ಇವರಿಬ್ಬರ ತವರಿನ ಜ್ಞಾಪಕಾರ್ಥ ಮತ್ತು ಒಮ್ಮೆ ತಾವು ಬೇಟೆಯಾಡಲು ಬಂದಿದ್ದಾಗ ಅರ್ಕಾವತಿ ನದಿ ನೀರಿನಿಂದ ಬೇಯೀಸಿದ ಕಾಳು ನೀಡಿ ಹಸಿವು ನೀಗಿಸಿದ್ದ ಅಜ್ಜಿಯ ಮತ್ತು ಬೆಂದಕಾಳಿನ ನೆನಪಿಗೆ ಬೆಂಗಳೂರು ಎಂದೂ ನಾಮಕರಣ ಮಾಡಲು ಯೋಚಿಸಿ ಯೋಜಿಸಿದ್ದರು!
1537ರಲ್ಲಿ ಗುದ್ದಲಿ ಪೂಜೆಯೊಂದಿಗೆ ಪ್ರಾರಂಭವಾಗಿ ಕಾಲ ಕಳೆದಂತೆ ನಗರ ನಿರ್ಮಿತಿ ಕೈಂಕರ್ಯವು ನಿರೀಕ್ಷೆಗಿಂತ ಹೆಚ್ಚಿನ ಶೀಘ್ರಗತಿಯ ಪ್ರಗತಿಯಲ್ಲಿ ನಿರ್ವಿಘ್ನವಾಗಿ ಸಾಗತೊಡಗಿತು. ಇನ್ನೇನು ಕೆಲವೆ ದಿನಗಳಲ್ಲಿ ನವ ನಿರ್ಮಾಣದ ಬೆಂದಕಾಳೂರು ನಗರ ಅಸ್ತಿತ್ವಕ್ಕೆ ಬರುವ ಎಲ್ಲಾ ಲಕ್ಷಣ ಕಂಡುಬಂತು. ನಾಡಪ್ರಭು ಕೆಂಪೇಗೌಡರು ಈ ಹಿಂದೆ ಎಂದೋ ಒಂದು ಘಳಿಗೆ ತಮ್ಮ ಮನಸಲ್ಲಿ ಅಂದುಕೊಂಡಿದ್ದಂತೆ 4 ದಿಕ್ಕುಗಳಲ್ಲಿ ಗಡಿಗೋಪುರ ಇರುವ ಹೊಸ ರಾಜಧಾನಿ ನಿರ್ಮಾಣ ಮಾಡುವ ತಮ್ಮ ಕನಸು ದೇವರ ಕೃಪೆಯಿಂದಾಗಿ ನನಸಾಗುವ ಕಾಲ ಒದಗಿಬಂದ ಕ್ಷಣ ಜ್ಞಾಪಿಸಿಕೊಂಡು ನೆಮ್ಮದಿಯ ನಿಟ್ಟುಸಿರು ಬಿಟ್ಟು ಸಮಾಧಾನ ಗೊಂಡರು.
ಆದರೆ ತಮ್ಮಇಚ್ಚೆ ಮತ್ತು ಅಣ್ಣಮ್ಮ ತಾಯಿ ಇಚ್ಚೆಯಂತೆ ಬೃಹತ್ ನಗರವೊಂದು ಲೋಕಾರ್ಪಣೆ ಆಗುವಕಾಲ ಸನ್ನಿಹಿತ ಆಗುತ್ತಿದ್ದಂತೆ ಅನಿರೀಕ್ಷಿತವಾಗಿ ಸಣ್ಣದೊಂದು ಎಡರುತೊಡರು ಕಾಣಿಸಿಕೊಂಡಿತು. ಇದು ದುರದೃಷ್ಟಕರವೋ ದುರ್ವಿಧಿಯೋ ಎಂಬ ಜಿಜ್ಞಾಸೆಯ ಜೇಡರಬಲೆಗೆ ಸಿಲುಕಿದಂತಾಗಿತ್ತು ನಾಡ ಪ್ರಭುಗಳ ಸ್ಥಿತಿ?
ಯೋಚನೆ-ಯೋಜನೆಯಂತೆ ಒಟ್ಟಾರೆ 9 ದ್ವಾರಗಳ ನಿರ್ಮಾಣ ಕಾರ್ಯ ನಡೆಯುತ್ತಿತ್ತು. 5 ಕಿರಿಯ ರಹಸ್ಯ ದ್ವಾರಗಳ ಮತ್ತು 4 ಬೃಹತ್ ದ್ವಾರಗಳು
*ಪೂರ್ವಕ್ಕೆ ಹಲಸೂರು ದ್ವಾರ
*ಪಶ್ಚಿಮಕ್ಕೆ ಸೊಂಡೆಕೊಪ್ಪ ದ್ವಾರ
*ಉತ್ತರಕ್ಕೆ ಯಲಹಂಕ ದ್ವಾರ *
*ದಕ್ಷಿಣಕ್ಕೆ ಆನೆಕಲ್ ದ್ವಾರ
ನಿರ್ಮಾಣಕಾರ್ಯ ಮುಕ್ತಾಯಗೊಂಡಿತ್ತು. ಇವುಗಳ ಎಲ್ಲೆಯನ್ನು ಗುರುತಿಸುವಂತಹ ನಾಲ್ಕು ದೊಡ್ಡ ಗಡಿ ಗೋಪುರಗಳ ಕಾಮಗಾರಿಯೂ ಮುಗಿದಿತ್ತು.

ಇದು ಲಕ್ಷ್ಮೀದೇವಿ ಬಲಿದಾನದ ಕಥೆ
ನಗರದ ಸುತ್ತಲೂ ಕೋಟೆ ನಿರ್ಮಾಣ ಕಾಮಗಾರಿಗಾಗಿ ಶಾಸ್ತ್ರೋಕ್ತವಾಗಿ ಪೂಜೆ ಸಲ್ಲಿಸಿ ನಿಲ್ಲಿಸಿದ ಕಂಬಗಳು ಮೂರೂ ದಿಕ್ಕಿನಲ್ಲಿ ಯಶಸ್ವಿಯಾಗಿ ನಿಂತವು. ಆದರೆ ದಕ್ಷಿಣ ದಿಕ್ಕಿನ ಹೆಬ್ಬಾಗಿಲ ಕಂಬವು ಮಾತ್ರ ಅದೆಷ್ಟು ಶ್ರಮಪಟ್ಟು ಪದೇಪದೇ ಕಟ್ಟಿದರೂ ಸ್ತಿರವಾಗಿ ನಿಲ್ಲದೆ ಬಿದ್ದುಹೋಗುತ್ತಿತ್ತು?! ಶಿಲ್ಪಿಗಳು ಶಾಸ್ತ್ರಜ್ಞರು ಪ್ರಾಜ್ಞರು ಆದಿಯಾಗಿ ತಿಳಿದವರೆಲ್ಲ ತಲೆ ಕೆರೆದು ಬೈತಲೆ ಕೆಡಿಸಿಕೊಂಡರೂ ಸಾಧ್ಯವಾಗಲಿಲ್ಲ. ಅದ್ಯಾರ್ಯಾರೋ ಎಂತೆಂತದ್ದೊ ಎಷ್ಟೆ (ಕು)ಯುಕ್ತಿ ಖರ್ಚು ಮಾಡಿದರೂ ಸಮಸ್ಯೆ ಬಗೆಹರಿಯದಿದ್ದಾಗ ವಿಧಿಯಿಲ್ಲದೆ ಈ ದುಸ್ಸಂಗತಿಯನ್ನು ದೊರೆಗಳ ಗಮನಕ್ಕೆ ತರುತ್ತಾರೆ. ವಿಷಯ ತಿಳಿದು ಹೌಹಾರಿ ದಿಗ್ಭ್ರಮೆಗೊಂಡ ಕೆಂಪೇಗೌಡರು ಖುದ್ದಾಗಿ ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸುತ್ತಾರೆ.
ಈ ಬಗ್ಗೆ ತಜ್ಞರೊಡನೆ ಕೂಲಂಕಶವಾಗಿ ಚರ್ಚಿಸಿದ ನಂತರ ಒಂದು ಪರಿಹಾರ ದೊರಕಿತು. ಜ್ಯೋತಿಷ್ಯರ ಸಲಹೆ ಪ್ರಕಾರ ಇದೊಂದು ಭೂತಚೇಷ್ಟೆಯಾಗಿದ್ದು ಶಮನಕ್ಕಾಗಿ ತುಂಬುಗರ್ಭಿಣಿಯನ್ನು ಜೀವಸಹಿತ ಬಲಿಕೊಡಬೇಕೆಂದು ತಿಳಿಸುತ್ತಾರೆ. ಇದನ್ನು ಕೇಳಿದ ನಾಡಪ್ರಭುಗಳು ಜರ್ಝರಿತಗೊಂಡು ಚಿಂತಾಕ್ರಾಂತರಾಗಿ ಬಹುಕಾಲ ನಿದ್ರಾಹಾರ ತೊರೆದು ಕೊರಗಿ ಕೃಶರಾಗುತ್ತಾರೆ.
ಕೈಗೆ ಬಂದ ತುತ್ತು ಬಾಯಿಗೆ ಇಲ್ಲವಾಯಿತಲ್ಲ ಎಂದು ಮಮ್ಮಲ ಮರುಗಿದರು. ಹಗಲುರಾತ್ರಿ ತಮ್ಮ ಕುಲದೇವತೆ ಕೆಂಪಮ್ಮನಬಳಿ ಅಲವತ್ತುಕೊಂಡು ಆಕೆಯ ಆಣತಿಗಾಗಿ ಹಪಹಪಿಸುತ್ತಾರೆ. ದಿಕ್ಕು ತೋಚದ ಕೆಂಪೇಗೌಡರು ಸಾಮ್ರಾಟನಿಂದ ಸಲಹೆ ಪಡೆಯಲು ವಿಜಯನಗರಕ್ಕೆ ತೆರಳಿದರು. ಇದೇವೇಳೆ ಪ್ರಜೆಗಳ ಅರಿವಿಗೆ ಬರುವಂತೆ ಹೊರಡಿಸಿದ ಸಾರ್ವಜನಿಕ ಪ್ರಕಟಣೆ:-
ನಗರ ನಿರ್ಮಾಣವು ಪೂರ್ಣವಾಗಲು ಅವಶ್ಯವಾದ ಪ್ರಾಣತ್ಯಾಗ ಮಾಡಲಿಚ್ಚಿಸುವ ಗರ್ಭಿಣಿಯು ಮುಂದೆ ಬರಬಹುದು. ಆಕೆಯ ಕುಟುಂಬಕ್ಕೆ ಜಾಗೇರುಜಾಗ ಚರಸ್ಥಿರಾಸ್ತಿ ನಗನಾಣ್ಯ ಬಿರುದು ಬಹುಮಾನ ಬಳುವಳಿ ತಾಮ್ರಪತ್ರ ಮುಂತಾದ್ದನ್ನು ಕೊಡಲಾಗುವುದು” ಎಂಬ ಢಂಗುರವನ್ನು
ಸಾರಿಸಲಾಯ್ತು. ಆದರೆ ಕೆಂಪೇಗೌಡರ ಮತ್ತು ಅವರ ಕುಟುಂಬದವರ ಅನುಮತಿ ಇಲ್ಲದೆ ಹಾಗೂ ಅವರ ಗಮನಕ್ಕೆ ಬಾರದಂತೆ ರಾಜ್ಯ ಮತ್ತು ರಾಜರ ಮೇಲಿನ ಗೌರವ ಮತ್ತು ಭಕ್ತಿಯಿಂದ ಮಂತ್ರಿಮಂಡಲವೂ ಆಡಳಿತಾಧಿಕಾರಿ ವರ್ಗದವರೂ ಈ ನಿರ್ಧಾರ ತೆಗೆದುಕೊಂಡು ಢಂಗುರ ಸಾರಿಸಿದ್ದು..?!

ಇದಾದ ಕೆಲವೆ ತಾಸುಗಳಲ್ಲಿ ನೂರಾರು ಗರ್ಭಿಣಿಯರು ಸ್ವಇಚ್ಚೆಯಿಂದ ಸಹಕರಿಸಲು ಸಾಲುಗಟ್ಟಿ ನಿಂತರು. ಈ ಅಪೂರ್ವ ದೃಶ್ಯವನ್ನು ಕಣ್ಣಾರೆ ಕಂಡ ಕೆಂಪೇಗೌಡರ ಕುಟುಂಬವು ಕೃತಜ್ಞತೆ ಭಾವದಿಂದ ಗದ್ಘದಿತರಾದರು. ಶೋಕಕ್ಕೆ ಶರಣಾಗಿ ಆನಂದಬಾಷ್ಪ ಸುರಿಸಿ ಬೇಡವೇಬೇಡ ಎಂದು ಪ್ರಜೆಗಳ ಮನವೊಲಿಸಲು ಪ್ರಯತ್ನಿಸಿದರು. ಆತ್ಮಾರ್ಪಣೆಗೆ ಸಿದ್ಧರಿದ್ದ ಗರ್ಭಿಣಿಯರನ್ನು ಸಂತೈಸುವಾಗ ಗೌಡರ ಕುಟುಂಬವು ಅತ್ಯಂತ ಜಾಗ್ರತೆ ವಹಿಸಿ ಜಗಜ್ಜಾಹೀರು ಪಡಿಸಿದ್ದು..:
“ಬೇರೆ ಕುಟುಂಬದವರು ಅನ್ಯಾಯವಾಗಿ ಬಲಿಪಶು ಆಗಬಾರದು ಅದೇನೆ ಇದ್ದರೂ ನಮ್ಮ ಕುಟುಂಬದವರೆ ಬಗೆಹರಿಸಿ ಕೊಳ್ಳುತ್ತೇವೆ. ನಾಡಿನ ಒಳಿತಿಗಾಗಿ ಮತ್ತು ಪ್ರಜಾಕ್ಷೇಮಕ್ಕಾಗಿ ನಾವೇ ಅಂತಿಮ ತೀರ್ಮಾನ ತೆಗೆದು ಕೊಳ್ಳುತ್ತೇವೆ. ಈ ಸಮಸ್ಯೆಯು ನಮ್ಮ ಜವಾಬ್ಧಾರಿ ಆಗಿರುವುದರಿಂದ ನೀವು ನೆಮ್ಮದಿಯಿಂದ ಹೊರಡಿ” ಎಂಬ ಮನವಿ ಆಲಿಸಿದ ಪ್ರಜೆಗಳು ವಿಧಿಇಲ್ಲದೆ ಕಣ್ಣಿರು ಸುರಿಸುತ್ತ ಹಿಂದಿರುಗಿದರು!
ಈ ಎಲ್ಲ ಆಗುಹೋಗುಗಳನ್ನು ಸೂಕ್ಷ್ಮವಾಗಿ ಗಮನಿಸಿದ ಕೆಂಪೇಗೌಡರ ಸೊಸೆ ತುಂಬು ಗರ್ಭಿಣಿ ಲಕ್ಷ್ಮಿದೇವಿಯು ತಮ್ಮ ಮಾವನವರ ಕನಸಿನ ರಾಜಧಾನಿ ನಿರ್ಮಾಣ ಕಾಮಗಾರಿ ಶೇ.99ರಷ್ಟು ಮುಕ್ತಾಯವಾಗಿದ್ದರೂ ಈ ಒಂದೇಒಂದು ಅಡೆತಡೆ ಕೆಡಕುತೊಡಕು ಬಂದೊದಗಿತಲ್ಲ ಎಂಬುದನ್ನರಿತು ಅದನ್ನು ತೊಡೆದುಹಾಕಲು ನಿರ್ಧರಿಸಿದಳು. ಯಾರಿಗೂ ತಿಳಿಯದಂತೆ ಮತ್ತು ಮನೆಯವರಿಗೂ ತಿಳಿಸದೇ ಸ್ವಯಂ ನಿರ್ಧಾರ ತೆಗೆದುಕೊಂಡು ಆವೊತ್ತು ಮಧ್ಯರಾತ್ರಿ ಅರಮನೆ ತೊರೆದು ನಿಗಧಿತ ಸ್ಥಳಕ್ಕೆ ತಲುಪಿದಳು.

ಜನಹಿತಕ್ಕಾಗಿ ಮತ್ತು ಸಕಲ ಸಮಸ್ಯೆ ಪರಿಹಾರಕ್ಕಾಗಿ ಕೋಟೆಯ ಕಂಬವು ಸುಸ್ತಿರವಾಗಿ ಶಾಶ್ವತ ವಾಗಿ ನಿಲ್ಲುವಂತೆ ದೇವರನ್ನು ಪ್ರಾರ್ಥಿಸಿದಳು. ಬಳಿಕ ತಾನೇ ತೆಗೆದುಕೊಂಡು ಬಂದಿದ್ದ ಕುಡುಗೋಲಿಂದ ತನ್ನ ಕೈಯಾರೆ ಕತ್ತು ಕತ್ತರಿಸಿಕೊಂಡು ಪ್ರಾಣವನ್ನರ್ಪಿಸಿದಳು. ನಿಸ್ವಾರ್ಥ ನಿರ್ಮಲ ಚಿತ್ತದ ಕುಲವಧುವಾಗಿ ಹುಟ್ಟಿದ ಮನೆಗೂ ಮೆಟ್ಟಿದ ಮನೆಗೂ ಅಪಾರ ಕೀರ್ತಿಯನ್ನು ದೊರಕಿಸಿಕೊಟ್ಟು ತ್ಯಾಗಮಯಿ ಪಟ್ಟ ಗಿಟ್ಟಿಸಿದ ಲಕ್ಷ್ಮಿದೇವಿಯಂಥ ವಂಶೀಕ ಹೆಣ್ಣುಮಗಳ ಪವಿತ್ರ ಜೀವನವು ಅನುಕರಣೀಯ. ಈಕೆಯ ಸಾರ್ಥಕ ಜೀವನ ಶ್ರೇಷ್ಠತೆಯ ಜ್ವಲಂತ ನಿದರ್ಶನವಾಗುತ್ತದೆ!
ತಮ್ಮ ಬೀಗರ ಬಯಕೆಯಂತೆ ಲಕ್ಷ್ಮಿದೇವಿ ದೇಹವನ್ನು ಆಕೆಯ ತೌರೂರು ಕೋರಮಂಗಲದಲ್ಲೆ ಸಕಲ ವಿಧಿ, ವಿಧಾನದೊಂದಿಗೆ ಅಂತ್ಯ ಸಂಸ್ಕಾರ ಮಾಡಲಾಗುತ್ತದೆ. ಮಹಾರಾಣಿ ಆಗಬೇಕಿದ್ದ ಸೊಸೆಯ ಸ್ಮರಣಾರ್ಥ ಆಕೆಯ ಸಮಾಧಿ ಬಳಿಯಲ್ಲಿ ಲಕ್ಷ್ಮೀದೇವಿ ಗುಡಿಯನ್ನು ಕಟ್ಟಿಸಿ ಪ್ರತಿದಿನ ಪೂಜಾ ಕೈಂಕರ್ಯ ನಡೆಯಲು ಏರ್ಪಾಡು ಮಾಡುತ್ತಾರೆ. ಪುಣ್ಯವತಿ ಸತೀ ಲಕ್ಷ್ಮೀದೇವಿ ಸ್ಮರಣಾರ್ಥ ನಿತ್ಯಪೂಜಾ ಕಾರ್ಯಗಳು ಇವತ್ತಿಗೂ ಜರುಗುತ್ತಿವೆ.
ಅಂದಿನಿಂದ ಇಂದಿನವರೆಗೆ ಪ್ರಜೆಗಳಿಗಾಗಿ ತನ್ನ ಪ್ರಾಣಾರ್ಪಣೆ ಮಾಡಿದ ಪರೋಪಕಾರಿ ಮಹಾತಾಯಿ ಲಕ್ಷ್ಮಿದೇವಿಯು ನಾಡಪ್ರಭು ಕೆಂಪೇಗೌಡರ ಸೊಸೆಯಾಗಿ ಮಾತ್ರವಲ್ಲದೆ ಕನ್ನಡನಾಡಿನ ಮತ್ತು ಭಾರತದ ಕೋಟ್ಯಾಂತರ ಮನೆಯ ಮಗಳಾಗಿ ಮಮತೆ ವಾತ್ಸಲ್ಯದ ಶಿಖರವಾಗಿ ಹಾಗೂ ತ್ಯಾಗ ಬಲಿದಾನದ ಮೇರು ಪರ್ವತವಾಗಿ ಇಡೀ ಸ್ತ್ರೀಕುಲಕ್ಕೆ ಮಾದರಿಯಾಗಿ ಆಚಂದ್ರಾರ್ಕ ಅಜರಾಮರ!

1570ರಲ್ಲಿ ಕೆಂಪೇಗೌಡರು ಶತ್ರು ಪಾಳಯವನ್ನು ಸಂಹರಿಸಿ ಕುಣಿಗಲ್ನಿಂದ ಹಿಂದಿರುಗುವಾಗ ಕತ್ತಲೆಯ ಮೊತ್ತದೊಳು ಮರದ ಮೇಲೆ ಪೊಟರೆ ಸಂದುಗಳಲ್ಲಿ ಅವಿತುಕೊಂಡಿದ್ದ ಹೇಡಿಶತ್ರುಗಳ ಗುಂಪು ಇದ್ದಕ್ಕಿದ್ದಂತೆ ನಾಡಪ್ರಭುವಿನ ಮೇಲೆರಗಿ ಹಿಂದಿನಿಂದ ಧಾಳಿ ಮಾಡಿತು. ತಮ್ಮ 60ನೇ ವಯಸ್ಸಿನಲ್ಲು ಹುರುಪಿನಿಂದಲೇ ಧೀರ್ಘ ಹೋರಾಟ ಮಾಡುವಾಗ ಮಾಗಡಿ ಬಳಿಯ ಕೆಂಪಾಪುರ ಸಮೀಪ ನಿರ್ಜನ ಪ್ರದೇಶದಲ್ಲಿ ವೀರೋಚಿತ ಮರಣಕ್ಕೆ ಶರಣಾದರು!
ಆಗಿನ ಕಾಲಕ್ಕೆ ಬೆಂಗಳೂರು ನಗರದಲ್ಲಿ 750 ಕೆರೆಗಳನ್ನು 12000ಕ್ಕೂ ಹೆಚ್ಚು ಮರಗಳನ್ನು 50 ಅರವಟ್ಟಿಗೆ ಮತ್ತು ಧರ್ಮಛತ್ರಗಳನ್ನು 84 ಪೇಟೆಗಳನ್ನು ನೂರಾರು ಉದ್ಯಾನವನ ಹಾಗೂ ರಸ್ತೆಗಳನ್ನು ನಿರ್ಮಿಸುವ ಮೂಲಕ ವಿಶ್ವದಾಖಲೆ ಸೃಷ್ಟಿಸಿದ್ದರು. ಇಂದಿಗೂ ಸಹ ನಾಡಪ್ರಭು ಕೆಂಪೇಗೌಡರ ವಂಶಸ್ಥರು ಮತ್ತು ಆ ಪೀಳಿಗೆಯವರು ಮಾಗಡಿ ತಾಲ್ಲೂಕು ಹುಲಿಕಲ್ ಗ್ರಾಮದಲ್ಲಿರುವ ಅರಮನೆಯಲ್ಲಿ ವಾಸಿಸುತ್ತಿದ್ದಾರೆ.









ಬೆಂಗಳೂರು ನಿರ್ಮಾಪಕ ನಾಡಪ್ರಭು ಯಲಹಂಕದೊರೆ ಧೀರ ಕೆಂಪೇಗೌಡರ ಲೇಖನವನ್ನು ಸಂಕ್ಷಿಪ್ತ ವಿವರದೊಡನೆ ಅಮೋಘವಾಗಿ ಬರೆದಿರುವ ಕವಿ ನಟರಾಜ ಅವರಿಗೆ ಧನ್ಯವಾದಗಳು.
ಬೆಂಗಳೂರು ನಿರ್ಮಾಪಕ ನಾಡಪ್ರಭು ಯಲಹಂಕದೊರೆ ಧೀರ ಕೆಂಪೇಗೌಡರ ಲೇಖನವನ್ನು ಸಂಕ್ಷಿಪ್ತ ವಿವರದೊಡನೆ ಅಮೋಘವಾಗಿ ಬರೆದಿರುವ ಕವಿ ನಟರಾಜ ಅವರಿಗೆ ಧನ್ಯವಾದಗಳು. ಜನಮನ ಪತ್ರಿಕೆಯ ಅಭಿಮಾನಿ ಮಲ್ಲಿಕಾರ್ಜುನ ಹಿರೇಮಠ, ಬೆಳಗಾವಿ.
ನಾಡಪ್ರಭು ಕೆಂಪೇಗೌಡರ ಕುರಿತಾದ ಲೇಖನ ಅದ್ಭುತ ಹಾಗೂ ಉಪಯುಕ್ತ. ಇಂತಹ ಸಂದರ್ಭೋಚಿತವಾದ ಲೇಖನ ಬರೆದ ಕುಮಾರಕವಿ ನಟರಾಜರು ಅಭಿನಂದನಾರ್ಹ ಲೇಖಕರು. ಧನ್ಯವಾದ ನಮಸ್ಕಾರ. ಸತ್ಯನಾರಾಯಣ, ಮೈಸೂರು
ನವ ಬೆಂಗಳೂರಿನ ನಿರ್ಮಾತೃ ವೀರ ಕೆಂಪೇಗೌಡರ ಜಯಂತ್ಯುತ್ಸವ ವಿಶೇಷ ಲೇಖನ ಬರೆದಿರುವ ಕುಮಾರಕವಿಯವರ ಬರವಣಿಗೆ ಶೈಲಿ ಓದಿಸಿಕೊಂಡು ಹೋಗುತ್ತದೆ. ಎಂದಿನಂತೆ ಇದೂಸಹ ಒಂದು ಉತ್ತಮ ಲೇಖನ. ನಿಮ್ಮ ಅಭಿಮಾನಿ ಓದುಗರಲ್ಲೊಬ್ಬ ಬಸವರಾಜ ಪಾಟೀಲ, ಅಥಣೀ, ಬೆಳಗಾವಿ ಜಿಲ್ಲೆ.
Excellent article about International famename historical engineer cum architect NADAPRABHU KEMPEGOWDA, on this occasion. Thanks to the author Natraj sir. 😀 -Narayan Gowda, Chikkaballapura.
ಕನ್ನಡ ಜನಮನ ಪತ್ರಿಕೆಯ ಲೇಖಕರಲ್ಲಿ ಒಬ್ಬರಾದ ಕುಮಾರಕವಿಯವರಿಅಂದ ಮತ್ತೊಂದು ಮಾಹಿತಿಪೂರ್ಣ ಲೇಖನ. ಇಂದು ನಾಡಪ್ರಭು ಕೆಂಪೇಗೌಡರ ಜಯಂತಿ ಪ್ರಯುಕ್ತ ಬರೆದ ಇದನ್ನು ನನ್ನ ಪರಿಚಯದ ಎಲ್ಲರಿಗೂ ಶೇರ್ ಮಾಡಿದ್ದೇನೆ. ಋಣದ ನಮಸ್ಕಾರ, ಯಜಮಾನ್ ದೇವರಸೇಗೌಡರು, ಮಾಜಿ ಪಟೇಲರು, ದೊಡ್ಡಬಳ್ಳಾಪುರ.
ಇಂದು ಆಚರಿಸುವ ಯಲಹಂಕ ದೊರೆ ಬೆಂಗಳೂರಿನ ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವದ ವಿಶೇಷ ಲೇಖನ ಅಂದಿನ ಅದ್ಭುತ ಇತಿಹಾಸ ನೆನಪಿಸುವಂತಿದೆ. ಧನ್ಯವಾದಗಳು ಕುಮಾರಕವಿ ನಟರಾಜ.
ಕುಣಿಗಲ್ ಹುಲಿಯೂರುದುರ್ಗ ಮೂಲನಿವಾಸಿ ಶ್ರೀನಿವಾಸಗೌಡ.
NADAPRABHU KEMPEGOWDA Very nice article 👍 👌 👏 😀 C.Raju, Chamarajpete
ಈ ದಿನ ಕೆಂಪೇಗೌಡರ ಜಯಂತಿ. ನಟರಾಜರು ಬರೆದ ಲೇಖನ ಓದಿದೆ. ತುಂಬ ಚೆನ್ನಾಗಿದೆ. ನಮಸ್ಕಾರ
ಬೆಂಗಳೂರು ಕೆಂಪೇಗೌಡರ ಲೇಖನ ಸೂಫರ್….. ಧರಣೇಂದ್ರ ಕುಮಾರ್, ಮೈಸೂರು
ಬೆಂಗಳೂರು ನಿರ್ಮಾಪಕ ಕೆಂಪೇಗೌಡರ ಲೇಖನವನ್ನು ಚೆನ್ನಾಗಿ ಬರೆದಿದ್ದಾರೆ.
ಉತ್ತಮ ಲೇಖನ, ಧನ್ಯವಾದ. ಚಿದಾನಂದಮೂರ್ತಿ, ಮೈಸೂರು
ಕನ್ನಡನಾಡಿನ ಹಿರಿಯಬರಹಗಾರ ಕುಮಾರಕವಿಯವರು ರಚಿಸಿರುವ ಕೆಂಪೇಗೌಡರ ಲೇಖನ ಸೊಗಸಾಗಿದೆ, ಧನ್ಯವಾದಗಳು, ಫ್ಯಾನ್ಸಿ ಮುತ್ತಣ್ಣ, ಕುಶಾಲನಗರ, ಕೊಡಗು
ನಾಡಪ್ರಭು ಕೆಂಪೇಗೌಡರ ಜಯಂತ್ಯುತ್ಸವ ಪ್ರಯುಕ್ತ ಕುಮಾರಕವಿ ನಟರಾಜರು ಬರೆದ ವಿಶೇಷ ಲೇಖನ ಬಹಳ ಚೆನ್ನಾಗಿದೆ. ಅಭಿನಂದನೆಗಳು. ಗಂಗಾಧರನಾಯಕ್, ಬಸವನಗುಡಿ ಬೆಂಗಳೂರು
ಖ್ಯಾತ ಲೇಖಕ ನಟರಾಜ ಅವರಿಂದ ಮತ್ತೊಂದು ಚಿರಸ್ಮರಣೀಯ ಇತಿಹಾಸ ಪ್ರಸಿದ್ಧ ಮಹಾಪುರುಷ ಬೆಂಗಳೂರಿನ ನಿರ್ಮಾಪಕ ಮಹಾರಾಜ ಕೆಂಪೇಗೌಡರ ಬಗೆಗಿನ ಈಲೇಖನ ಓದಿಖುಷಿಯಾಯ್ತು, ನಮಸ್ಕಾರ, ಶ್ರೀಕಾಂತ್ ರಾಥೋಡ್, ಗವಿಪುರಂ, ಶ್ರೀನಗರ, ಬೆಂಗಳೂರು.
Extraordinary and historical informative articles 👏 👌 👍 😀 🙌. Manasakumari N, Vijayanagara, Bengaluru
ಬೆಂಗಳೂರಿನ ನಿರ್ಮಾಣ ಶಿಲ್ಪಿ ಕಲೆಗಾರ ವೀರ ಧೀರ ಶೂರ ಯಲಹಂಕ
ಮಾಗಡಿಯ ಪ್ರಭು ಕೆಂಪೇಗೌಡರ ಲೇಖನ ಬರೆದ ನಟರಾಜಣ್ಣ ನವರಿಗೆ ಕೋಟಿ ಕೋಟಿ ನಮಸ್ಕಾರ, ಅಮೃತಾಮಣಿ, ಕೆ.ಜಿ.ಎಫ್. ಕೋಲಾರ