ಕನ್ನಡ ನಾಡಿನ ಇತಿಹಾಸದಲ್ಲಿ ನಾವು ಇಣುಕಿ ನೋಡುವುದಾದರೆ ನಾಡಪ್ರಭು ಕೆಂಪೇಗೌಡರ ಸಾಧನೆಯಲ್ಲಿ ಸಿಂಹಪಾಲಿದೆ. ಜಗತ್ಪ್ರಸಿದ್ಧ ಬೆಂಗಳೂರನ್ನು ಕಟ್ಟಿದ ನಾಡಪ್ರಭು ಕೆಂಪೇಗೌಡರ ಸಾಹಸದ ಚಿನ್ನದ ಹೆಜ್ಜೆಗಳನ್ನು ಸಾಹಿತಿ, ಪತ್ರಕರ್ತರಾದ ಬನ್ನೂರು ಕೆ ರಾಜು ಈ ಲೇಖನದಲ್ಲಿ ಪರಿಚಯಿಸಿದ್ದಾರೆ.
ಜಗತ್ತಿನಲ್ಲಿ ಬೇಕಾದಷ್ಟು ಮಂದಿ ರಾಜ ಮಹಾರಾಜರು, ಪ್ರಭುಗಳು, ಪಾಳೆಗಾರರು, ಸುಲ್ತಾನರು, ನವಾಬರು, ಚಕ್ರವರ್ತಿಗಳು, ಆಗಿ ಹೋಗಿದ್ದಾರೆ. ಆದರೆ ಅವರುಗಳಲ್ಲಿ ಕೆಲವರು ಮಾತ್ರ ತಮ್ಮ ಜನಪರ ಕಾರ್ಯಗಳಿಂದ ಅಪ್ರತಿಮ ಶೂರತನದಿಂದ, ವೀರತನದಿಂದ ಅಸಾಮಾನ್ಯ ಸಾಧನೆಯಿಂದ, ಜಗತ್ತಿನಲ್ಲಿ ಅಮರರಾಗಿ ಉಳಿದಿದ್ದಾರೆ. ಇವರು ಭೂಮ್ಯಾಕಾಶ ಇರುವತನಕವೂ ಜನಮಾನಸದ ಭಾವಕೋಶದಲ್ಲಿ ದೈವಾಂಶ ಸಂಭೂತರಾಗಿ ಇದ್ದೇ ಇರುತ್ತಾರೆ. ಇಂಥಾ ದೈವಾಂಶ ಸಂಭೂತರ ಸುವರ್ಣ ಸಾಲಿನಲ್ಲಿ ನಾಡಪ್ರಭು ಕೆಂಪೇಗೌಡರ ಹೆಸರು ಪ್ರಮುಖವಾದದ್ದು. ಅದರಲ್ಲೂ ವಿಶೇಷವಾಗಿ ಕರ್ನಾಟಕದ ಚರಿತ್ರೆಯಲ್ಲಿ ಕಳಶಪ್ರಾಯವಾಗಿದೆ.

ನಾಡಪ್ರಭು ಕೆಂಪೇಗೌಡರೆಂದರೆ
ಜಗದ್ವಿಖ್ಯಾತ ದಾಖಲೆಗಳ ಧೀರ
ಸಾವಿರ ಕೆರೆಗಳ ಸರದಾರ
ಬೆಂಗಳೂರು ಕಟ್ಟಿದ ಕನಸುಗಾರ
ಮಣ್ಣಿನ ಮಗನಿವ ರಣಧೀರ
ನಾಡು ಮರೆಯದ ಕನ್ನಡ ಕುವರ.
ಕೃಷಿತಜ್ಞ, ಶಿಕ್ಷಣತಜ್ಞ, ಆಡಳಿತಜ್ಞ, ಇಂಜಿನಿಯರ್, ವಾಣಿಜ್ಯೋದ್ಯಮಿ, ಕೈಗಾರಿಕೋದ್ಯಮಿ, ವಿಚಾರವಾದಿ, ವೈದ್ಯ, ಮನೋವೈದ್ಯ, ಜ್ಞಾನಿ, ವಿಜ್ಞಾನಿ, ಕಾಲಜ್ಞಾನಿ, ತಂತ್ರಜ್ಞ, ದಾರ್ಶನಿಕ, ಸಂತ, ಪವಾಡಪುರುಷ, ಯೋಜನಾನಿಪುಣ, ತತ್ವಜ್ಞಾನಿ, ಸಾರ್ವಭೌಮ…….. ಹೀಗೆ ಬಹುಪಾಲು ಎಲ್ಲವೂ, ಎಲ್ಲರೂ ಒಬ್ಬವ್ಯಕ್ತಿಯಲ್ಲಿ ಇರಲು ಸಾಧ್ಯವೇ? ಎಂಬ ಪ್ರಶ್ನೆಗೆ ಸಾಧ್ಯವೆಂದು ಉತ್ತರವಾಗಿ ನಾಡಪ್ರಭು ಕೆಂಪೇಗೌಡರು ಕಾಣುತ್ತಾರೆ. ಏಕೆಂದರೆ ಎಲ್ಲಾ ಕ್ಷೇತ್ರಗಳ ತಂತ್ರಜ್ಞತೆ, ನಿಪುಣತೆ ಕೆಂಪೇಗೌಡರೊಳಗಿತ್ತೆಂಬುದಕ್ಕೆ ಸುಮಾರು ಐನೂರು ವರ್ಷಗಳ ಹಿಂದೆಯೇ ಅವರು ಕಟ್ಟಿದ ಇಂದು ಸಿಲಿಕಾನ್ ಸಿಟಿಯಾಗಿ ವಿಶ್ವ ವಿಖ್ಯಾತಿ ಗಳಿಸಿರುವ ಬೆಂಗಳೂರನ್ನು ಒಮ್ಮೆ ಒಳಹೊಕ್ಕಿ ನೋಡಿದರೆ ಸಾಕು ಪವಾಡಸದೃಶರಾದ ಕೆಂಪೇಗೌಡರ ಶಕ್ತಿ, ಸಾಮರ್ಥ್ಯದ ಅರಿವಾಗುತ್ತದೆ.
ಕುಡಿಯುವ ನೀರಿಗಾಗಿ ಬೆಂಗಳೂರು ನಗರವೊಂದರಲ್ಲೇ ೨೫ಕ್ಕೂ ಹೆಚ್ಚು ಸರಣಿ ಕೆರೆಗಳನ್ನು ವೈಜ್ಞಾನಿಕವಾಗಿ ನಿರ್ಮಿಸಿ ಒಂದು ಕೆರೆಯಲ್ಲಿ ತುಂಬಿದ ನೀರು ಮತ್ತೊಂದು ಕೆರೆಗೆ ಹರಿದು ಹೋಗುವಂತೆ ಮಾಡಿದ್ದ ಕೆಂಪೇಗೌಡರ ವೈಜ್ಞಾನಿಕ ತಂತ್ರಜ್ಞತೆಗೆ ಎಲ್ಲಾ ಕ್ಷೇತ್ರಗಳ ತಜ್ಞರೂ ತಲೆಬಾಗಲೇಬೇಕು. ಹಾಗೆಯೇ ಇಡೀ ನಾಡು ಇವತ್ತಿಗೂ ಕೆಂಪೇಗೌಡರಿಗೆ ಶರಣು ಶರಣೆನ್ನಲೇಬೇಕು. ಸಾವಿರಾರು ಕೆರೆಗಳನ್ನು ನಿರ್ಮಿಸಿ ಸಾವಿರ ಕೆರೆಗಳ ಸರದಾರನೆಂದೇ ಹೆಸರಾಗಿದ್ದ ಮತ್ತೊಬ್ಬ ರಾಜ ಜಗತ್ತಿನಲ್ಲಿ ಸಿಗುವುದು ಬಹಳ ವಿರಳ. ಇಲ್ಲವೆಂದರೂ ಆದೀತು.
ಈ ದೃಷ್ಟಿಯಲ್ಲಿ ಕೆಂಪೇಗೌಡರಿಗೆ ಸಮ ಇಡೀ ವಿಶ್ವದಲ್ಲಿ ಮತ್ತೊಬ್ಬರನ್ನು ಹೆಸರಿಸಲಾಗದು! ದುರಂತವೆಂದರೆ ಅವರು ಬಹಳ ಕಾಳಜಿಯಿಂದ ಬೆಂಗಳೂರು ನಗರದಲ್ಲಿ ನಿರ್ಮಿಸಿದ್ದ ಬಹುತೇಕ ಕೆರೆಗಳು ಇಂದು ಮುಚ್ಚಿ ಹೋಗಿವೆ. ಅವುಗಳ ಸಮಾಧಿಗಳ ಮೇಲೆ ಬೃಹತ್ ಬಡಾವಣೆಗಳು ತಲೆಯೆತ್ತಿ ನಿಂತಿವೆ.

ಕರ್ನಾಟಕದ ಇತಿಹಾಸದಲ್ಲಿ ಯಲಹಂಕನಾಡು ಬಹಳ ವಿಶಾಲವಾದದ್ದು, ಅಷ್ಟೇ ವೈಶಿಷ್ಟಪೂರ್ಣವಾದುದು. ಪ್ರಭಲವಾದುದು. ವಿಶೇಷವಾಗಿ ವಿಜಯನಗರ ಸಾಮ್ರಾಜ್ಯದ ಅಭಿವೃದ್ಧಿಯಲ್ಲಿ ಯಲಹಂಕನಾಡಿನ ಪ್ರಭುಗಳ ಪಾತ್ರ ಅತ್ಯಂತ ಮಹತ್ತರವಾದದ್ದು. ವಾಸ್ತವವಾಗಿ ಯಲಹಂಕ ಒಂದು ಸಾಮಾನ್ಯ ಸಾಮಂತರಾಜ್ಯ. ಆದರೆ ಇದು ಕನ್ನಡನಾಡಿಗೆ ನೀಡಿದ ಕೊಡುಗೆ ಅಸಾಮಾನ್ಯವಾದದ್ದು. ಯಾವ ಸಾಮ್ರಾಜ್ಯದ ಸಾಮ್ರಾಟರಿಗೂ ಕಮ್ಮಿಯಿಲ್ಲದ್ದು.
ಇತಿಹಾಸಕಾರರ ಪ್ರಕಾರ ಯಲಹಂಕ ಪ್ರಭುಗಳು ಅರ್ಥಾತ್ ರಾಜರು ಹತ್ತು ಮಂದಿ. ಇವರಲ್ಲಿ ಪ್ರಥಮರಾಜನಾದ ದೇವರಸಗೌಡನೇ ನಾಡ ಪ್ರಭು ಕೆಂಪೇಗೌಡರ ವಂಶಸ್ಥರ ಮೂಲ ಪುರುಷ. ಈತ ಹೊಯ್ಸಳರ ಸಾಮಂತನಾಗಿ `ಕುರುವಗೆರೆ’ ಎಂಬ ಪ್ರದೇಶದಿಂದ ರಾಜ್ಯಾಡಳಿತ ಮಾಡುತ್ತಿದ್ದ. ಕ್ರಿ.ಶ. 1200 ರ ಶಾಸನವೊಂದು ಈತನ ಬಗ್ಗೆ ಮಾಹಿತಿ ತಿಳಿಸುತ್ತದೆ.
ಹೊಯ್ಸಳರ ಸಾಮಂತನಾಗಿದ್ದ ದೇವರಸಗೌಡ ನಂತರದ ದಿನಗಳಲ್ಲಿ ತನ್ನ ರಾಜ್ಯವನ್ನು ವಿಸ್ತರಿಸಿ `ಆವತಿ’ ಎನ್ನುವ ಊರಿಗೆ ಬಂದು ಅದನ್ನು ರಾಜಧಾನಿಯನ್ನಾಗಿ ಮಾಡಿಕೊಂಡ. ಆವತಿ ಈಗಿನ ಚಿಕ್ಕಬಳ್ಳಾಪುರ ಜಿಲ್ಲೆಯಲ್ಲಿದೆ. ದೇವರಸಗೌಡ ಆವತಿಯನ್ನು ಕೇಂದ್ರಸ್ಥಾನ ಮಾಡಿಕೊಂಡು ಇಲ್ಲಿ ನೆಲೆನಿಂತ ಕಾರಣ ಈ ವಂಶಸ್ಥರನ್ನು `ಆವತಿ ನಾಡಗೌಡ ಪ್ರಭುಗಳು’ ಎಂದೂ ಕರೆಯಲಾಗಿದೆ. ಎರಡನೇ ರಾಜ ಜಯಗೌಡ ಈತ ದೇವರಸಗೌಡನ ಪುತ್ರ. ಇವನು ತನ್ನ ತಂದೆ ದೇವರಸಗೌಡನ ಹೆಸರಿನಲ್ಲಿ ನಿರ್ಮಿಸಿದ ಹಳ್ಳಿಯೇ `ದೇವನಹಳ್ಳಿ’. ಈತ ಆವತಿಯಿಂದ ತನ್ನ ರಾಜಧಾನಿಯನ್ನು ಯಲಹಂಕಕ್ಕೆ ಬದಲಾಯಿಸಿದ.
ಇವನು ನಿಧನವಾದ ನಂತರ ಒಂದನೇ ಭೈರೇಗೌಡ ಆಳ್ವಿಕೆಗೆ ಬಂದ. ಇವನು ಹೊಯ್ಸಳರೊಡನೆ ಒಳ್ಳೆಯ ಸಂಬಂಧ ಹೊಂದಿದ್ದ ಕಾರಣ ದೊಡ್ಡಬಳ್ಳಾಳನ ನೆನಪಿಗಾಗಿ ದೊಡ್ಡಬಳ್ಳಾಪುರ ಪಟ್ಟಣವನ್ನು ನಿರ್ಮಿಸಿದ. ಹೊಯ್ಸಳರ ಪಟ್ಟದರಸಿ ಶಾಂತಲಾದೇವಿಯ ಪುತ್ರ ಚಿಕ್ಕಬಳ್ಳಾಳ. ಇವನ ಗೌರವಾರ್ಥ ಒಂದನೇ ಭೈರೇಗೌಡ ಚಿಕ್ಕಬಳ್ಳಾಪುರವನ್ನೂ ನಿರ್ಮಿಸಿದ.
ಒಂದನೇ ಭೈರೇಗೌಡನ ಕಾಲಾನಂತರ ಇಮ್ಮಡಿ ಭೈರೇಗೌಡ ಅಧಿಕಾರದ ಚುಕ್ಕಾಣಿ ಹಿಡಿದ. ಈತನನ್ನು ರಣಭೈರೇಗೌಡ ಎಂದೂ ಕರೆಯಲಾಗುತ್ತಿತ್ತು. ವಿಜಯನಗರ ಸಾಮ್ರಾಜ್ಯ ಕಟ್ಟುವ ಕಾಲದಲ್ಲಿ ಅವರಿಗೆ ಸರ್ವ ರೀತಿಯಲ್ಲೂ ಸಹಕಾರ ನೀಡಿ ವಿಜಯನಗರ ಸಾಮ್ರಾಜ್ಯದ ಬೆಳವಣಿಗೆಯಲ್ಲಿ ಇವನು ಪ್ರಮುಖ ಪಾತ್ರವಹಿಸಿದ್ದ. ಇಮ್ಮಡಿ ಭೈರೇಗೌಡನ ನಂತರ ಈತನ ಪುತ್ರ ನಂಜಪ್ಪಗೌಡ ಪಟ್ಟಕ್ಕೆ ಬಂದ. ಇವನನ್ನು ಗಿಡ್ಡೇಗೌಡನೆಂದು ಕರೆಯಲಾಗಿದೆ. ನಂಜಪ್ಪಗೌಡನಿಗೆ ಬಹಳಕಾಲ ಮಕ್ಕಳಿರಲಿಲ್ಲ.

ತಮ್ಮ ಕುಲದೇವತೆಯಾದ ಕುರುವಗೆರೆ ಕೆಂಪಮ್ಮನಿಗೆ ಹರಕೆ ಕಟ್ಟಿಕೊಂಡಿದ್ದರಿಂದ ದೇವಿಯ ಆಶೀರ್ವಾದದ ಫಲವಾಗಿ ಕೆಂಪನಂಜೇಗೌಡ ಜನಿಸಿದ. ಈತನನ್ನು ಕೆಂಪನಾಚೇಗೌಡ ಎನ್ನುವುದೂ ಉಂಟು. ಈತನೇ ನಾಡಪ್ರಭು ಕೆಂಪೇಗೌಡರ ತಂದೆ. ಕೆಂಪನಂಜೇಗೌಡ ಮತ್ತು ಲಿಂಗಮಾಂಬೆ ದಂಪತಿಗೆ ನಾಲ್ಕು ಮಂದಿ ಗಂಡು ಮಕ್ಕಳು. ಅವರಲ್ಲಿ ಹಿರಿಮಗನೇ ನಾಡಪ್ರಭುವಾದ ಕೆಂಪೇಗೌಡ. ಇವನನ್ನು ಹಿರಿಯ ಕೆಂಪೇಗೌಡ ಎಂದು ಕರೆಯಲಾಗುತ್ತದೆ. ಯಲಹಂಕದಲ್ಲಿ ಇವನು 1510 ರಲ್ಲಿ ಜನಿಸಿದ.
ಇವನೊಡನೆ ಒಡಹುಟ್ಟಿದ ಇನ್ನು ಮೂವರೆಂದರೆ ವೀರೇಗೌಡ, ಬಸವೇಗೌಡ ಹಾಗೂ ಕೆಂಪಸೋಮೇಗೌಡ. ಹಿರಿಯ ಕೆಂಪೇಗೌಡನ ಜನನ ಕಾಲದಲ್ಲಿ ಇಡೀ ಯಲಹಂಕನಾಡು ಒಂದು ಕ್ಷಣ ಹಾಲ್ಬೆಳಕಾಗಿ ಹೊಳೆದು ಪವಾಡಮಯವಾಗಿ ಆಗಸದಿಂದ ಹೂಮಳೆ ಸುರಿದು ಶುಭಸಕುನವಾಗಿತ್ತಂತೆ. ಇವರುಗಳ ತಂದೆ ಕೆಂಪನಂಜೇಗೌಡ ವಿಜಯನಗರ ಸಾಮ್ರಾಜ್ಯಕ್ಕೆ ಅತ್ಯಂತ ನಿಷ್ಠನಾಗಿದ್ದುದರಿಂದ ಕೃಷ್ಣದೇವರಾಯ ಇವನನ್ನು ಹಾಗೂ ಇವನ ಆಡಳಿತದ ಕಾರ್ಯ ಶೈಲಿಯನ್ನು ಬಹಳ ಮೆಚ್ಚಿಕೊಂಡಿದ್ದ. ಇದು ನಾಡಪ್ರಭು ಕೆಂಪೇಗೌಡರ ಕಾಲಕ್ಕೂ ಮುಂದುವರೆದು ಕೃಷ್ಣದೇವರಾಯನಿಗೆ ಕೆಂಪೇಗೌಡ ಅತ್ಯಂತ ಪ್ರೀತಿ ಪಾತ್ರನಾಗಿದ್ದ.
ಯಲಹಂಕ ಊರಿಗೆ ಅಂದಾಜು 1200 ವರ್ಷಗಳ ಇತಿಹಾಸವಿದೆ. ಗಂಗರ ಕಾಲದಲ್ಲಿ ಇದು ಹೆಚ್ಚಿನ ಮಹತ್ವ ಪಡೆದಿತ್ತು. ವಿಶೇಷ ಮಾನ್ಯತೆಗಳಿಸಿತ್ತು. ಬೆಂಗಳೂರು ಸಮೀಪದ ಚಿಕ್ಕಜಾಲದ ಚೆನ್ನಕೇಶವ ಯಲಹಂಕ ಪ್ರಭುಗಳ ಆರಾಧ್ಯದೈವ. ಕುರುವಗೆರೆ ಕೆಂಪಮ್ಮ ಆರಾಧ್ಯ ದೇವತೆ. ಕುಲದೈವ ಭೈರೆವೇಶ್ವರ. ನಾಡಪ್ರಭು ಕೆಂಪೇಗೌಡರ ವಂಶಸ್ಥರು ರಾಜ್ಯಭಾರ ಮಾಡಿದ ಮತ್ತೊಂದು ಪ್ರಮುಖ ಸ್ಥಳ `ಮಾಗಡಿ’. ಇದು 12ನೇ ಶತಮಾನದಲ್ಲಿ ಚೋಳರಾಜನೊಬ್ಬನಿಂದ ಸ್ಥಾಪಿತವಾಯಿತೆಂದು ಹೇಳಲಾಗುತ್ತದೆ. ಇದಕ್ಕೆ ಪೂರಕವಾದ ಐತಿಹ್ಯ ಕೂಡ ಇಲ್ಲುಂಟು. ನಂತರದ ದಿನಗಳಲ್ಲಿ `ಮಾಗಡಿ’ಯು ಹೊಯ್ಸಳರ ಕೈವಶವಾಗಿ ಬಳಿಕ ವಿಜಯನಗರದ ಅರಸರ ಕೈಸೇರಿತು.
ಅಂತಿಮವಾಗಿ ಕೆಂಪೇಗೌಡರ ವಂಶಸ್ಥರ ವಶಕ್ಕೆ ಬಂತು. ಇದನ್ನು ಬಹು ವೈಭವದಿಂದ ಆಳಿದ ನಾಡಪ್ರಭು ಕೆಂಪೇಗೌಡರ ಎರಡನೇ ಪುತ್ರ ಇಮ್ಮಡಿ ಕೆಂಪೇಗೌಡನು ಮಾಗಡಿ ಕೆಂಪೇಗೌಡರೆಂದೇ ಕರೆಸಿಕೊಂಡು ಹೆಸರುವಾಸಿಯಾದರು. ಮತ್ತೊಬ್ಬ ಮಗ ಗಿಡ್ಡೇಗೌಡ, ಮುಮ್ಮಡಿ ಕೆಂಪೇಗೌಡನಾಗಿ ಅಧಿಕಾರಕ್ಕೆ ಬಂದು ಕ್ರಿ.ಶ. 1638ರವರೆಗೆ ಆಳಿದನೆಂದು ಹೇಳಲಾಗುತ್ತದೆ. 18ನೇ ಶತಮಾನದ ಪ್ರಾರಂಭದ ತನಕವೂ ಕೆಂಪೇಗೌಡರ ವಂಶಸ್ಥರ ಆಳ್ವಿಕೆಯಲ್ಲಿದ್ದ ಮಾಗಡಿ ಆ ನಂತರ ಮೈಸೂರು ಅರಸರ ಪಾಲಾಯಿತು. ಕ್ರಿ.ಶ. 1791 ರಲ್ಲಿ ಇದನ್ನು ಬ್ರಿಟಿಷರು ಆಕ್ರಮಿಸಿಕೊಂಡರು.
ಅಲ್ಲಿಗೆ ವೈಭವದ ಮಾಗಡಿಯ ಇತಿಹಾಸ ಮಣ್ಣುಗೂಡಿತು. ಇದು ನಾಡಪ್ರಭು ಕೆಂಪೇಗೌಡರ ವಂಶಸ್ಥರ ಇತಿಹಾಸ. ಸುಮಾರು ೫೦೦ ವರ್ಷಗಳ ಕಾಲ ವೈಭವ ಪೂರ್ಣವಾಗಿ ಆಡಳಿತ ನಡೆಸಿದ ಈ ವಂಶದ ಸಾಮ್ರಾಜ್ಯ ನಾಡಪ್ರಭು ಕೆಂಪೇಗೌಡರ ಕಾಲದಲ್ಲಿ ಮೈಸೂರು ಸಂಸ್ಥಾನಕ್ಕಿಂತ ವಿಶಾಲವಾಗಿತ್ತು. ವಿಶ್ವವಿಖ್ಯಾತಿಯಾಗಿ ಮೆರೆದಿತ್ತು.
ಇಂಥಾ ಕಿರೀಟ ಪ್ರಾಯ ವಂಶದಲ್ಲಿ ರತ್ನಪ್ರಾಯರಾಗಿ ಜನಿಸಿದ ನಾಡಪ್ರಭು ಕೆಂಪೇಗೌಡ ಪುಟ್ಟ ವಯಸ್ಸಿನಲ್ಲೇ ಪುಟಿದೇಳುವ ಪಾದರಸದಂತಹ ಚುರುಕು ಸ್ವಭಾವದ ಕ್ರಿಯಾಶೀಲತೆ ಹೊಂದಿದ್ದರು. ತನ್ನ ಜೀವಿತಾವಧಿಯಲ್ಲಿ ಏನಾದರೂ ಅದ್ಭುತವಾದುದನ್ನು ಸಾಧಿಸಿ ಸೈ ಎನಿಸಿಕೊಳ್ಳಬೇಕೆಂಬ ಮಹದಾಕಾಂಕ್ಷೆ ಬಾಲಕ ಕೆಂಪೇಗೌಡನ ಕಣ್ಣುಗಳಲ್ಲಿ ಆಗಲೇ ಕುಣಿಯುತ್ತಿತ್ತು. ಇವರ ಬಾಲ್ಯ ಅತ್ಯಂತ ರೋಚಕವಾದದ್ದು. ತಂದೆ ಕೆಂಪನಂಜೇಗೌಡನಿಗೆ ಮಗ ಕೆಂಪೇಗೌಡನ ಮೇಲೆ ಅಗಾಧ ಪ್ರೀತಿ, ಇವನನ್ನು ಸಕಲಕಲಾವಲ್ಲಭನನ್ನಾಗಿ ಮಾಡಬೇಕಂಬ ಅಧಮ್ಯ ಆಸೆ. ಅದಕ್ಕೆ ತಕ್ಕ ಹಾಗೆ ಬೆಳೆವಸಿರಿ ಮೊಳಕೆಯಲ್ಲಿ ನೋಡು ಎಂಬಂತೆ ಬಾಲಕ ಕೆಂಪೇಗೌಡ ಎಲ್ಲಕ್ಕೂ ಸಿದ್ಧನಿದ್ದ.

ಗುರುಗಳೆಂದರೆ ಹೀಗಿರಬೇಕೆನ್ನುವಂತಿದ್ದ ತಮ್ಮ ಪಾಂಡಿತ್ಯದಿಂದ ಹೆಸರುವಾಸಿಯಾಗಿದ್ದ ಐಗಂಡಪುರದ ಮಾಧವಭಟ್ಟರಲ್ಲಿ ಶಿಷ್ಯನೆಂದರೆ ಹೀಗಿರಬೇಕೆನ್ನುವಂತಿದ್ದ ಐದು ವರ್ಷದ ಬಾಲಕ ಕೆಂಪೇಗೌಡನನ್ನು ತಂದೆ ಕೆಂಪನಂಜೇಗೌಡ ವಿದ್ಯಾಭ್ಯಾಸಕ್ಕೆ ಸೇರಿಸಿದ್ದರು. ಅಲ್ಲಿ ಗುರುಗಳಿಂದ ಸಾಮಾನ್ಯ ಶಿಕ್ಷಣದಿಂದ ಹಿಡಿದು ವಿಶೇಷವಾದ ಆಡಳಿತ, ರಾಜನೀತಿ ಸೇರಿದಂತೆ ಪ್ರತಿಯೊಂದು ವಿಷಯಗಳಲ್ಲೂ ಪರಿಣಿತಿಗಳಿಸಿ ಕುದುರೆಸವಾರಿ, ಕತ್ತಿವರಸೆ, ಮಲ್ಲಯುದ್ಧ ಮುಂತಾದ ಓರ್ವ ರಾಜನಿಗಿರಬೇಕಾದ ಸರ್ವ ವಿದ್ಯೆಗಳಲ್ಲೂ ಸಮರ್ಥರಾದರು.
ಅಲ್ಲಿ ಗೆಳೆಯನಾಗಿ ದೊರೆತ ನಾರಾಯಣಭಟ್ಟ (ನಾಣಿ), ಕೆಂಪೇಗೌಡನ ಪ್ರತಿಯೊಂದು ಹೆಜ್ಜೆಯಲ್ಲೂ ಸಹಕಾರದ ಆತ್ಮೀಯನಾಗಿದ್ದ. ಇವರಿಬ್ಬರ ಸ್ನೇಹ ಕೃಷ್ಣ-ಕುಚೇಲ ಸಂಬಂಧವಾಗಿತ್ತು. ಮತ್ತೊರ್ವ ಸಹಪಾಟಿ ವೀರಣ್ಣನ ಗೆಳೆತನ ಕೂಡ ಕೆಂಪೇಗೌಡನಿಗೆ ಹೆಚ್ಚು ಪ್ರಿಯವಾಗಿತ್ತು. ಹಾಗೆಯೇ ಇವರಿಗೆ ಏಕಾಂಬರಶಾಸ್ತ್ರಿ, ಗುರುನಂಜೇಶ ಹೀಗೆ ಅನೇಕ ಪಂಡಿತರ ಆತ್ಮೀಯತೆಯೂ ಇತ್ತು. ಮಾಧವಭಟ್ಟರ ಗುರುಕುಲಾಶ್ರಮವನ್ನು ಬಿಟ್ಟ ನಂತರವೂ ಅಲ್ಲಿ ದೊರೆತ ಸ್ನೇಹಿತರ, ಆತ್ಮೀಯರ ಒಡನಾಟವನ್ನು ಕೆಂಪೇಗೌಡ ಕಾಪಾಡಿಕೊಂಡಿದ್ದ.
ಗುರು ಮಾಧವಭಟ್ಟರ ಅಣತಿಯಂತೆ ರಾಜ್ಯಾಡಳಿತ ರಥವೇರುವ ಮುನ್ನ ದೇಶನೋಡು ಕೋಶ ಓದು ಎಂಬಂತೆ ದೇಶ ಪರ್ಯಟನೆಗೆ ಹೊರಟ ಕೆಂಪೇಗೌಡ ಮೊದಲಿಗೆ ವಿಜಯನಗರಕ್ಕೆ ಭೇಟಿ ನೀಡುತ್ತಾನೆ. ಐದಾರು ವರ್ಷಗಳ ಬಾಲಕನಾಗಿದ್ದಾಗಲೇ ೧೫೧೫ರ ಆಸುಪಾಸಿನಲ್ಲಿ ಒಮ್ಮೆ ತಂದೆಯ ಹೆಗಲ ಮೇಲೆ ಕೂತು ರಾಜಧಾನಿ ಹಂಪಿಯಲ್ಲಿ ವಿಜಯನಗರದ ವೈಭವವನ್ನು ಕಂಡು ಬೆರಗಾಗಿದ್ದ ಕೆಂಪೇಗೌಡ ಈಗ ಮತ್ತಷ್ಟು ನಿಬ್ಬೆರಗುಗೊಂಡು ರೋಮಾಂಚಿತನಾಗುತ್ತಾನೆ.

ಅಷ್ಟೇ ಅಲ್ಲ, ಬಾಲಕನಾಗಿದ್ದಾಲೇ ಇಂತಹದೊಂದು ನಗರವನ್ನು ತಾನೂ ನಿರ್ಮಿಸಬೇಕೆಂಬ ಕನಸು ಕಂಡಿದ್ದ ಕನಸುಗಾರ ಕೆಂಪೇಗೌಡ ಈಗ ಅದನ್ನು ಸಾಕಾರಗೊಳಿಸುವತ್ತ ಮನಸ್ಸನ್ನು ದೃಢ ಮಾಡಿಕೊಂಡು ಒಟ್ಟಾರೆ ದೇಶ ಸಂಚಾರದ ಬಳಿಕ ಯಲಹಂಕಕ್ಕೆ ವಾಪಸ್ಸು ಬರುತ್ತಾರೆ. 1528ರಲ್ಲಿ ತಾಯಿಯ ಸೋದರನ ಮಗಳು ಅಂದರೆ ಸೋದರ ಮಾವನ ಪುತ್ರಿ ಚೆನ್ನಮಾಂಬೆಯೊಡನೆ ವಿವಾಹವಾಗಿ ಯುವರಾಜರಾಗಿ ಪಟ್ಟಾಭಿಷಕ್ತರಾಗುತ್ತಾರೆ. ಆ ನಂತರ ೧೫೩೧ರಲ್ಲಿ ಯಲಹಂಕ ಪ್ರಭುವಾಗಿ ಪಟ್ಟಾಭಿಷಕ್ತರಾಗಿ ರಾಜ್ಯಾಡಳಿತದ ಚುಕ್ಕಾಣಿ ಹಿಡಿಯುತ್ತಾರೆ. ಅಲ್ಲಿಂದ ಆರಂಭವಾಗುತ್ತದೆ ಕೆಂಪೇಗೌಡರ ಸುವರ್ಣಯುಗ. ಇದು ಅಂತಿಂಥಾ ಸುವರ್ಣ ಯುಗವಲ್ಲ. ಇಡೀ ಜಗತ್ತೇ ಕೆಂಪೇಗೌಡರತ್ತ ಹಾಗೂ ಇವರು ನಿರ್ಮಿಸಿದ ಬೆಂಗಳೂರಿನತ್ತ ತಿರುಗಿ ನೋಡುವಂಥಾ ಮಹದದ್ಭುತ…!
ರಾಜಧಾನಿ ಹಂಪೆಯ ಬೀದಿ ಬೀದಿಗಳಲ್ಲಿ ಮುತ್ತು ರತ್ನಗಳನ್ನು, ವಜ್ರ ವೈಢೂರ್ಯಗಳನ್ನು ಬಳ್ಳಗಳಲ್ಲಿ ಅಳೆದು ಸುರಿದು ಮಾರುತ್ತಿದ್ದ ಮಹಾ ಸಿರಿವಂತಿಕೆಯ ವಿಜಯನಗರ ಸಾಮ್ರಾಜ್ಯದ ಸಂಪದಭಿವೃದ್ಧಿಯ ವೈಭವದಲ್ಲಿ ಸಾಮಂತರಾಗಿದ್ದ ಕೆಂಪೇಗೌಡರ ವಂಶಸ್ಥರದ್ದೂ ಸಿಂಹಪಾಲಿತ್ತು. ಹಾಗಾಗಿ ವಿಜಯನಗರ ಅರಸರಿಗೆ ಅದರಲ್ಲೂ ವಿಶೇಷವಾಗಿ ಕೃಷ್ಣದೇವರಾಯನಿಗೆ ಇವರ ಮೇಲೆ ಹೆಚ್ಚಿನ ಒಲವಿತ್ತು. ಹಾಗೆಯೇ ಚಿಕ್ಕ ವಯಸ್ಸಿನಲ್ಲೇ ಕೆಂಪೇಗೌಡರಿಗೆ ಕೃಷ್ಣದೇವರಾಯರೊಡನಾಟ ಚೆನ್ನಾಗಿತ್ತು.
ತಂದೆ ಕೆಂಪನಂಜೇಗೌಡ ರಾಜಕಾರ್ಯದ ನಿಮಿತ್ತ ವಿಜಯನಗರ ಅರಸರನ್ನು ಕಾಣಲು ಹೋಗುವ ಸಂದರ್ಭಗಳಲ್ಲಿ ಆಗಾಗ್ಗೆ ಮಗ ಕೆಂಪೇಗೌಡನನ್ನೂ ಕರೆದು ಕೊಂಡು ಹೋಗುತ್ತಿದ್ದರು. ಹಾಗಾಗಿ ವಿಜಯನಗರಕ್ಕೆ ಮತ್ತು ಅಲ್ಲಿನ ಅರಸರಿಗೆ ಕೆಂಪೇಗೌಡ ಬಾಲ್ಯದಿಂದಲೂ ಬಲ್ಲವನಾಗಿದ್ದ. ಕೆಂಪೇಗೌಡನ ಹಾವ-ಭಾವ, ನಡೆ-ನುಡಿ, ಠಾಕು-ಠೀಕುಗಳನ್ನೆಲ್ಲಾ ಬಹಳ ಸೂಕ್ಷ್ಮವಾಗಿ ಗಮನಿಸಿದ್ದ ಸಾಮ್ರಾಟ್ ಕೃಷ್ಣದೇವರಾಯ, ಈ ಹುಡುಗನಿಗೆ ಉಜ್ವಲ ಭವಿಷ್ಯವಿದೆಯೆಂದು ಆಗಲೇ ಭವಿಷ್ಯ ನುಡಿದು ಬೆನ್ನು ತಟ್ಟಿದ್ದರು. ಎಲ್ಲರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು ನಾಯಕತ್ವವಹಿಸುವುದು ಕೆಂಪೇಗೌಡನಿಗೆ ಸಹಜ ಎಂಬಂತೆ ಬಂದಿತ್ತು. ಇದು ಕೃಷ್ಣದೇವರಾಯನಿಗೆ ಬಹಳ ಇಷ್ಟವಾಗಿತ್ತು.

ಕೃಷ್ಣದೇವರಾಯ 1529ರಲ್ಲಿ ನಿಧನರಾದಾಗ ಅವರ ಸಹೋದರ ಅಚ್ಚುತರಾಯ ಅಧಿಕಾರಕ್ಕೆ ಬರುತ್ತಾರೆ. ಕೆಂಪೇಗೌಡರ ಕನಸಿನ ಬೆಂಗಳೂರು ನಿರ್ಮಾಣಕ್ಕೆ 50 ಸಾವಿರ ಚಿನ್ನದ ವರಹಗಳನ್ನು ನೀಡುವುದರ ಜೊತೆಗೆ 30 ಸಾವಿರ ಪಗೋಡಗಳ ಉತ್ಪನ್ನ ಬರುವ ಹಳೆಬೆಂಗಳೂರು, ಬೇಗೂರು, ವರ್ತೂರು, ಹಲಸೂರು, ಜಿಗಣಿ, ತಲಘಟ್ಟಪುರ, ಕೆಂಗೇರಿ, ಕುಂಬಳಗೋಡು, ಹೆಸರಘಟ್ಟ, ಕಾವಳ್ಳಿ (ಈಗಿನ ಕನ್ನಲ್ಲಿ), ಚಿಕ್ಕಬಾಣವರ ಇತ್ಯಾದಿ 12 ಹೋಬಳಿಗಳನ್ನು ಕೆಂಪೇಗೌಡರಿಗೆ ದಾನವಾಗಿ ಬಿಟ್ಟುಕೊಡುತ್ತಾರೆ.
ಅವತ್ತಿನ ಕಾಲದಲ್ಲೇ ವೈಜ್ಞಾನಿಕ ಪ್ರಜ್ಞೆಯ ಪ್ರಖರ ವಿಚಾರವಾದಿಯಾಗಿದ್ದ ಕೆಂಪೇಗೌಡರು ಯಾವುದೇ ಮೂಢನಂಬಿಕೆಗಳಿಗೆ ಒಳಗಾಗದೆ ಪುರೋಹಿತರ ಅಣತಿಯಂತೆ ಯಾವುದೇ ಶಾಸ್ತ್ರ, ಘಳಿಗೆ ನೋಡದೆ ರೈತರಿಂದ ನೇಗಿಲಿನಿಂದ ಗೆರೆ ಎಳೆಸುವ ಮೂಲಕ ತಮ್ಮ ಮಹದಾಕಾಂಕ್ಷೆಯ ಬೆಂಗಳೂರು ನಿರ್ಮಾಣವನ್ನು ಆರಂಭಿಸಿದ್ದರು. ಹಾಗೆಯೇ ರೈತ ಸಮುದಾಯದಿಂದ ಬಂದವರಾದ ಇವರು ಬಸವನನ್ನು ರಾಜಮುದ್ರೆಯಾಗಿ ಸ್ವೀಕರಿಸಿದ್ದರು. ಇದರ ದ್ಯೋತಕವಾಗಿ ಬೆಂಗಳೂರು ಕೋಟೆಯ ದಕ್ಷಿಣ ಭಾಗದ ಗುಡ್ಡವೊಂದರ ಮೇಲೆ ಬೃಹತ್ ಬಸವ ವಿಗ್ರಹವನ್ನು ನಿರ್ಮಿಸಿದ್ದರು.
ದೊಮ್ಮಲೂರು ಮತ್ತು ಯಲಹಂಕದ ನಡುವಿನ ಕಾಡಿನ ಮಧ್ಯೆ ಆಯ್ದ ಒಂದು ಸ್ಥಳದಲ್ಲಿ ಭೂಮಿಪುತ್ರ ಕೆಂಪೇಗೌಡನಿಂದ ಭೂಮಿ ಪೂಜೆ ಪ್ರಾರಂಭವಾಯಿತು. ಆಗ ಅಲ್ಲಿ ನೆರೆದಿದ್ದ ಮಣ್ಣಿನ ಮಕ್ಕಳ ಹರ್ಷೋದ್ಗಾರ ಮುಗಿಲು ಮುಟ್ಟಿತ್ತು. ನಾಲ್ವರು ರೈತರೊಳಗೊಂಡಂತೆ ನೇಗಿಲು ಹೊತ್ತ ನಾಲ್ಕು ಜೋಡಿ ಅಚ್ಚ ಬಿಳುಪಿನ ಎತ್ತುಗಳು ನಾಲ್ಕು ದಿಕ್ಕುಗಳಲ್ಲೂ ಗೆರೆ ಎಳೆಯುತ್ತಾ ನಡೆದವು. ಅವುಗಳ ನಡಿಗೆನಿಂತ ಸ್ಥಳಗಳೇ ನವ ಬೆಂಗಳೂರಿನ ಗಡಿಗಳೆಂದು ನಿರ್ಧರಿಸಲಾಗಿತ್ತು.
ಅದರಂತೆ ನೇಗಿಲಿನಿಂದ ಗೆರೆ ಎಳೆಯುತ್ತಾ ನಡೆದ ಎತ್ತುಗಳು ಪೂರ್ವಕ್ಕೆ ಹಲಸೂರು, ಪಶ್ಚಿಮಕ್ಕೆ ಅರಳೇಪೇಟೆ, ಉತ್ತರಕ್ಕೆ ಯಲಹಂಕ, ದಕ್ಷಿಣಕ್ಕೆ ಆನೆಕಲ್ (ಸಿಟಿ ಮಾರುಕಟ್ಟೆ) ತನಕ ಬಂದು ನಿಂತವು. ಹೀಗೆ ಆ ಎತ್ತುಗಳು ಬಂದು ನಿಂತ ನೆಲವೇ ಕೆಂಪೇಗೌಡ ನಿರ್ಮಿಸಿದ ಬೆಂಗಳೂರಿಗೆ ಎಲ್ಲೆಯಾಯಿತು. ಅಲ್ಲೆಲ್ಲಾ ಗುರುತಿಗಾಗಿ ಕಲ್ಲುಗಳನ್ನು ನೆಟ್ಟು ಪೂರ್ವ – ಪಶ್ಚಿಮದ ಭಾಗವನ್ನು ಚಿಕ್ಕಪೇಟೆಯಾಗಿ, ಉತ್ತರ-ದಕ್ಷಿಣದ ಭಾಗವನ್ನು ದೊಡ್ಡಪೇಟೆಯಾಗಿ (ಈಗಿನ ಅವೆನ್ಯೂರಸ್ತೆ) ನಿರ್ಮಿಸಲಾಯಿತು.

ಹೀಗೆ ನವಬೆಂಗಳೂರಿಗೆ 1537ರಲ್ಲಿ ಅಡಿಗಲ್ಲು ಹಾಕಿ ನಗರದ ನಾಲ್ಕು ದಿಕ್ಕುಗಳಿಗೂ ನಾಲ್ಕು ಧ್ವಾರಗಳನ್ನು ನಿರ್ಮಿಸಿ ಅವುಗಳನ್ನು ಹಲಸೂರು ಹೆಬ್ಬಾಗಿಲು, ಕೆಂಗೇರಿ ಹೆಬ್ಬಾಗಿಲು, ಯಶವಂತಪುರ ಹೆಬ್ಬಾಗಿಲು, ಯಲಹಂಕ ಹೆಬ್ಬಾಗಿಲುಗಳೆಂದು ಹೆಸರಿಸಿದ್ದರು. ಮುಖ್ಯದ್ವಾರದ ಬಾಗಿಲು ನಿಲ್ಲದೇ ಬೀಳುತ್ತಿರಲು ಕೆಂಪೇಗೌಡರ ಸೊಸೆ ಲಕ್ಷ್ಮೀದೇವಿ ಆತ್ಮಾರ್ಪಣೆ ಮಾಡಿಕೊಳ್ಳುತ್ತಾಳೆ. ನಾಡಪ್ರಭು ಕೆಂಪೇಗೌಡರ ಸೊಸೆ ನಾಡಿಗಾಗಿ ಬಲಿದಾನಗೈದ ಪರಿಣಾಮವಾಗಿ ಮುಖ್ಯದ್ವಾರದ ಬಾಗಿಲು ಭದ್ರವಾಗಿ ನಿಲ್ಲುತ್ತದೆ. ಈ ಮುಖೇನ ಲಕ್ಷ್ಮೀದೇವಿ ಬೆಂಗಳೂರು ಚರಿತ್ರೆಯ ಸುವರ್ಣ ಪುಟಗಳಲ್ಲಿ ತಾನೇ ಒಂದು ವಿಶೇಷ ಪುಟವಾಗಿ ಸೇರಿಹೋಗುತ್ತಾಳೆ.
ಮುನ್ನೋಟದ ಮುಕುಟ ಮಣಿಯಂತಿದ್ದ ಕೆಂಪೇಗೌಡ ತನ್ನ ರಾಜಧಾನಿ ಯಲಹಂಕವನ್ನು ಬೆಂಗಳೂರಿಗೆ ಬದಲಾಯಿಸಿಕೊಂಡು ಬೃಹತ್ ನಗರವನ್ನು ಕಟ್ಟುವ ಮಾರ್ಗದಲ್ಲಿ ಮೊದಲಿಗೆ ತಾನೇ ನೇಗಿಲನ್ನು ಹಿಡಿದು ತುಸು ದೂರ ಸಾಗಿದನು. ಇದರಿಂದ ಬೆಂಗಳೂರು ಕಟ್ಟುವ ಕಾರ್ಮಿಕರಲ್ಲಿ ಉತ್ಸಾಹ, ಉಲ್ಲಾಸ, ಸಂತಸ, ಸಂಭ್ರಮ ಇಮ್ಮಡಿಗೊಂಡು ತುಂಬಿತುಳುಕಿತ್ತು. ಕೆಂಪೇಗೌಡ ವಿಜಯನಗರ ಸಾಮ್ರಾಜ್ಯದ ಅರಸರಾದ ಕೃಷ್ಣದೇವರಾಯ, ಅಚ್ಚುತರಾಯ ಮತ್ತು ಸದಾಶಿವರಾಯ ಈ ಮೂವರ ಆಳ್ವಿಕೆಯಲ್ಲಿಯೂ ಇದ್ದು ಮೂವರಿಗೂ ಅಚ್ಚುಮೆಚ್ಚಿನವನಾಗಿದ್ದ. ಹಾಗಾಗಿ ಈ ಮೂವರು ರಾಯರುಗಳ ವಿಶ್ವಾಸದ ದ್ಯೋತಕವಾಗಿ ಹೊಸರಾಜಧಾನಿಗೆ “ದೇವರಾಯಪಟ್ಟಣ” ಎಂದು ನಾಮಕರಣ ಮಾಡಿದರೂ ಅದು ಜನರ ಬಾಯಲ್ಲಿ ಬೆಂಗಳೂರಾಗಿಯೇ ಉಳಿಯಿತು.
ನಾಡಪ್ರಭುವಿನ ಕಲ್ಪನೆಯಂತೆ 1538ರಲ್ಲಿ ಬೆಂಗಳೂರು ಕೋಟೆ ಮತ್ತು ಪೇಟೆಗಳು ಒಳಗೊಂಡಂತೆ ಸಂಪೂರ್ಣ ನಗರ ನಿರ್ಮಾಣ ಕಾರ್ಯ ಆರಂಭವಾಯಿತು. ಅದು ನಾಲ್ಕು ಮೈಲಿಯ ಸುತ್ತಳತೆಯ ನಾಲ್ಕು ಬೃಹತ್ ಗೋಪುರದ ಒಂಬತ್ತು ಬೃಹತ್ ದ್ವಾರಗಳ ಅಂಡಾಕಾರದ ಮಹಾ ಕೋಟೆ. ಕೋಟೆಗೆ ಸೇರಿದಂತೆ ಈಗಿನ ಚಿಕ್ಕಪೇಟೆಯಲ್ಲಿ ನಾಡಪ್ರಭುವಿನ ಅರಮನೆ ನಿರ್ಮಾಣಗೊಂಡಿತ್ತು. ಮುಂದೆ 1759ರಲ್ಲಿ ಟಿಪ್ಪು ಸುಲ್ತಾನನು ಈ ಕೋಟೆಯನ್ನು ಪುನರ್ ನಿರ್ಮಿಸಿದ ಇತಿಹಾಸವಿದೆ.

ಹೀಗೆ ನವನಗರವನ್ನು ಕಟ್ಟುವಾಗ ಜನರಿಗೆ ನೀರು-ನೆರಳು, ಜೀವ-ಜೀವನಕ್ಕೆ ಯಾವುದೇ ರೀತಿಯ ತೊಂದರೆಯಾಗಬಾರದೆಂದು ನಿರ್ಧರಿಸಿದ ನಿರ್ಮಾತೃ ಕೆಂಪೇಗೌಡ ಅದಕ್ಕೆ ತಕ್ಕಂತೆ ವ್ಯವಸ್ಥೆ ಮಾಡಿದ. ಕೆಂಪೇಗೌಡನ ದೂರ ದೃಷ್ಟಿ ಹಾಗೂ ಪರಿಶ್ರಮದ ಫಲವಾಗಿ ಬೆಂಗಳೂರಿನ ಹೃದಯ ಭಾಗದಲ್ಲಿ ಧರ್ಮಾಂಬುಧಿ ಮತ್ತು ಕೆಂಪಾಂಬುಧಿ ಎಂಬ ಸಮುದ್ರ ದೋಪಾದಿಯ ಎರಡು ಬೃಹತ್ ಕೆರೆಗಳು ಸೇರಿದಂತೆ ಬೆಂಗಳೂರಿನಲ್ಲಿ ಅಲ್ಲಲ್ಲಿ ಅನೇಕ ಕೆರೆಗಳು, ಕಟ್ಟೆಗಳು, ಕಲ್ಯಾಣಿಗಳು, ಪೇಟೆಗಳು, ಗುಡಿಗೋಪುರಗಳು ನಿರ್ಮಾಣಗೊಂಡವು.
ಈಗಿನ ಗಾಂಧೀನಗರದ ಮೆಜೆಸ್ಟಿಕ್ ಪ್ರದೇಶದಲ್ಲಿದ್ದ ಧರ್ಮಾಂಬುಧಿ ಕೆರೆ ಇಂದು ಕಣ್ಮರೆಯಾಗಿದ್ದರೂ ಇವತ್ತಿಗೂ ಇಲ್ಲಿನ ರಸ್ತೆಗೆ `ಧರ್ಮಾಂಬುಧಿ ರಸ್ತೆ’ ಎಂದೇ ಹೆಸರಿರುವುದನ್ನು ಕಾಣಬಹುದು. ಮತ್ತೊಂದು ಕೆಂಪೇಗೌಡರ ಹೆಸರನ್ನೇ ಸ್ತುತಿಸುವ ಕುಲದೇವತೆ ಸ್ಮರಣೆಯ ಕೆಂಪಾಂಬುಧಿ ಕೆರೆ ಈಗಲೂ ಚಾಮರಾಜ ಪೇಟೆಯ ಅಂಚಿನಲ್ಲಿದೆ. ಇವೆರಡೂ ಬಹಳ ವಿಶಾಲವಾದ ಕೆರೆಗಳಾಗಿದ್ದವು. ನೂರಾರು ಕೆರೆಗಳಂತೆಯೇ ನೂರಾರು ಕೇರಿಗಳನ್ನು ನಿರ್ಮಿಸಿದ ಕೆಂಪೇಗೌಡ ವಿಶೇಷವಾಗಿ ಆಯಾ ವೃತ್ತಿಗೆ ಸಂಬಂಧಿಸಿದಂತೆ ಬಳೇಪೇಟೆ, ಅಕ್ಕಿಪೇಟೆ, ಅರಳೇಪೇಟೆ, ರಾಗಿಪೇಟೆ, ಉಪ್ಪಾರಪೇಟೆ, ದೊಡ್ಡಪೇಟೆ, ಚಿಕ್ಕಪೇಟೆ, ಬನ್ನಿಪೇಟೆ… ಹೀಗೆ ಹಲವಾರು ಪೇಟೆಗಳನ್ನು ಸುವ್ಯವಸ್ಥಿತವಾಗಿ ನಿರ್ಮಿಸಿದ. ಇವುಗಳಲ್ಲಿ ಬಹಳಷ್ಟು ಪೇಟೆಗಳು ಈಗಲೂ ತಮ್ಮ ಹೆಸರಿನೊಡನೆ ಬೆಂಗಳೂರಿನಲ್ಲಿ ಅಸ್ಥಿತ್ವವನ್ನು ಉಳಿಸಿಕೊಂಡಿವೆ.
ಓರ್ವ ರಾಜನಿಗಿರಬೇಕದ ಸಕಲ ವಿಷಯಗಳ ಮುತ್ಸದ್ಧಿತನದ ಮೂಟೆಯಂತಿದ್ದ. ಸರ್ವ ವಿಚಾರಗಳ ಜ್ಞಾನದ ಕಣಜದಂತಿದ್ದ ಕೆಂಪೇಗೌಡ ಜಾರಿಗೆ ತಂದಿದ್ದ ಶಿಕ್ಷಣ, ಕೃಷಿ, ವಾಣಿಜ್ಯ, ಕೈಗಾರಿಕೆ, ಸಾಮಾಜಿಕ ಮತ್ತು ಆರ್ಥಿಕ ಸುಧಾರಣೆಗಳು ಒಟ್ಟಾರೆ ಅವನ ಅವತ್ತಿನ ಆಡಳಿತ ವ್ಯವಸ್ಥೆ ಇವತ್ತಿಗೂ ಮಾದರಿಯಾಗಿದೆ. ಕೆಂಪೇಗೌಡ ಒಬ್ಬ ಕನಸುಗಾರ, ವಾಸ್ತವವಾದಿ, ದೂರದೃಷ್ಟಿಯ ದ್ರಷ್ಟಾರ ಎಂಬುದನ್ನು ಅವನ ಕೆಲಸಗಳೇ ಸಾಕ್ಷೀಕರಿಸುತ್ತವೆ. ಒಳ್ಳೆ ಆರ್ಥಿಕ ತಜ್ಞನೂ ಆಗಿದ್ದ ಕೆಂಪೇಗೌಡ ಮನೆದೇವರ ಹೆಸರಿನಲ್ಲಿ ಭೈರವ ನಾಣ್ಯಗಳನ್ನು ಟಂಕಿಸಿ ಚಲಾವಣೆಗೆ ತಂದಿದ್ದನು. ಅವನ ಆರ್ಥಿಕ ಖಜಾನೆಯು ಶಿವಗಂಗೆಯಲ್ಲಿ ಇತ್ತು. ಅದು ಯಾವಾಗಲೂ ತುಂಬಿ ತುಳುಕುತ್ತಿತ್ತು. ಅಪಾರ ಸಿರಿ ಸಂಪತ್ತಿಗೆ ನಾಡಪ್ರಭು ಕೆಂಪೇಗೌಡ ಒಡೆಯನಾಗಿದ್ದುದರಿಂದ ನಾಡು ಸಂಪದ್ಭರಿತವಾಗಿ ಸುಭಿಕ್ಷವಾಗಿತ್ತು.

ನಾಡುಕಟ್ಟುವುದರಲ್ಲಿ ನಿಸ್ಸೀಮನಾಗಿದ್ದ ಕೆಂಪೇಗೌಡ ಮೈಸೂರಿನ ಪಿರಿಯಾಪಟ್ಟಣ, ಕಲ್ಲಹಳ್ಳಿ, ನಂಜರಾಯಪಟ್ಟಣ, ಕೊಡಗು ಮುಂತಾದ ಪ್ರಾಂತ್ಯಗಳು ಸೇರಿದಂತೆ ಉಮ್ಮತ್ತೂರಿನ ಆಡಳಿತಕ್ಕೆ ಒಳಪಟ್ಟಿದ್ದ ಶಿವನಸಮುದ್ರ ಸೀಮೆಯವರೆಗೂ ತನ್ನ ಆಳ್ವಿಕೆಯನ್ನು ವಿಸ್ತರಿಸಿದ್ದ. ಇದರಿಂದ ಯಲಹಂಕ ನಾಡು ದಕ್ಷಿಣದ ಗಡಿ ಕಾವೇರಿ ತೀರದವರೆಗೂ ವಿಸ್ತಾರಗೊಂಡಿತ್ತು. 1510ರಲ್ಲಿ ಜನಿಸಿ 1531ರಲ್ಲಿ ಪಟ್ಟಾಭಿಷಕ್ತರಾಗಿ ಅಧಿಕಾರಕ್ಕೆ ಬಂದ ನಾಡಪ್ರಭು ಕೆಂಪೇಗೌಡರು. 1569ರವರೆಗೆ ಸುಮಾರು 38 ವರ್ಷಗಳ ಕಾಲ ಆಳ್ವಿಕೆ ನಡೆಸಿದರೂ ಇವರು ಕುಣಿಗಲ್ಲಿನಿಂದ ಹಿಂತಿರುಗುವಾಗ ಮಾಗಡಿ ಬಳಿಯ ಕೆಂಪಾಪುರದಲ್ಲಿ 1569ರಲ್ಲಿ ಇಹಲೋಕ ತ್ಯಜಿಸಿದರು.
ಆದರೆ ತಮ್ಮ ಅಭೂತಪೂರ್ವ ಸಾಧನೆಗಳಿಂದ ಯಾವತ್ತೂ ಇವರು ಚಿರಂಜೀವಿಯಾಗಿರುತ್ತಾರೆ. ಇತ್ತೀಚೆಗೆ ಮಾಗಡಿ ಬಳಿಯ ತಿಪ್ಪಸಂದ್ರ ಹ್ಯಾಂಡ್‌ಪೊಸ್ಟ್ ಮತ್ತು ಕೆಂಚನಹಳ್ಳಿ ನಡುವೆ ಇರುವ ಕೆಂಪಾಪುರ ಗ್ರಾಮದಲ್ಲಿ ಕೆಂಪೇಗೌಡರ ಸಮಾಧಿ ದೊರೆತಿದ್ದು ಅದರ ಅಭಿವೃದ್ಧಿಯಾಗಬೇಕಾಗಿದೆ.
ಕೆಂಪೇಗೌಡರ ಕುರಿತು ಆಸ್ಥಾನಕವಿಯಾಗಿದ್ದ ಗುರುನಂಜೇಶ ಅವರು ರಚಿಸಿರುವ `ಕೆಂಪೇಗೌಡ ಜಯ ಪ್ರಶಸ್ತಿ’ ಕೃತಿಯಿಂದ ಹಿಡಿದು ಇಲ್ಲಿಯವರೆಗೆ ಅನೇಕ ಪುಸ್ತಕಗಳು ಪ್ರಕಟವಾಗಿವೆ. ಅದರಲ್ಲಿ ಅಧಿಕೃತವಾಗಿ ಅಂದಾಜು 85ಪುಸ್ತಕಗಳಿವೆ. ಅಚ್ಚರಿಯೆಂದರೆ ಕೆಂಪೇಗೌಡರ ಬಗ್ಗೆ ಲೆಕ್ಕವಿಲ್ಲದಷ್ಟು ದಂತಕಥೆಗಳಿವೆ. ಜನಪದಗಳಂತೂ ಅಸಂಖ್ಯಾತ. ಲಾವಣಿಗಳೂ ಉಂಟು, ಸಂಶೋಧಕರು, ಇತಿಹಾಸ ತಜ್ಞರು ಇವತ್ತಿಗೂ ಪ್ರಯತ್ನ ಪಡುತ್ತಿದ್ದರೂ ಯಾರಿಗೂ ಸಂಪೂರ್ಣವಾಗಿ ಕೆಂಪೇಗೌಡ ದೊರೆತಿಲ್ಲ. ಹಾಗಾಗಿ ಕೆಂಪೇಗೌಡರನ್ನು ಸಮಗ್ರವಾಗಿ ಸಮರ್ಥವಾಗಿ ಯಾರೂ ಕಟ್ಟಿಕೊಡಲಾಗಿಲ್ಲ.









