ಕೊಡಗಿಗೆ ಸಾಂಸ್ಕೃತಿಕ ಅಕಾಡೆಮಿ ಬೇಕೇ ಬೇಕು… ಕಲೆ ನಶಿಸಿದರೆ, ಹೃದಯಬಡಿತ ನಿಂತಂತೆ..
ಇದು ಸಾಮಾಜಿಕ ಕಳಕಳಿಯ ಲೇಖನಗಳ ಸರಮಾಲೆ-11

ಪಾಶ್ಚಿಮಾತ್ಯ ಸಂಸ್ಕೃತಿಯ ಸೆಳೆತ, ಆಧುನಿಕ ತಂತ್ರಜ್ಞಾನದ ಅನಿವಾರ್ಯತೆ. ಅಭಿವೃದ್ಧಿಯ ಭರದಲ್ಲಿ ನಾವು ನಮಗೆ ಗೊತ್ತಿಲ್ಲದಂತೆ ರೂಢಿಗತವಾಗಿ ಬಂದಿದ್ದ ಸಂಸ್ಕೃತಿ, ಸಂಪ್ರದಾಯಗಳನ್ನು ಮರೆಯುತ್ತಿದ್ದೇವೆ.. ಇದು ಮುಂದುವರೆದರೆ ಸಂಕಷ್ಟ ತಪ್ಪಿದಲ್ಲ… ಕೊಡಗಿನ ಸಂಸ್ಕೃತಿ ಉಳಿದು ಬೆಳೆಯಬೇಕಾದರೆ ಸಾಂಸ್ಕೃತಿಕ ಅಕಾಡೆಮಿ ಅಗತ್ಯ ಎನ್ನುತ್ತಾರೆ ಲೇಖಕ ಕಾಯಪಂಡ ವಿಷ್ಣು ನಾಚಪ್ಪ….
ನಾನು ಚಿಕ್ಕವನಿದ್ದಾಗ, ನನ್ನ ತಾತ ನಮ್ಮನ್ನು ತಮ್ಮ ಕಾಲಿನಲ್ಲಿ ಕೂರಿಸಿಕೊಳ್ಳುತ್ತಿದ್ದರು, ಅಜ್ಜಿ ತೊಡೆಯ ಮೇಲೆ ಮಲಗಿಸಿಕೊಂಡು ಲಾಲಿ ಹಾಡುತ್ತಿದ್ದಳು. ಚಳಿಗಾಲದ ಸಂಜೆ, ದೀಪದ ಮಂದ ಬೆಳಕಿನಲ್ಲಿ ತಾತನ ಕಥೆ, ಅಜ್ಜಿಯ ಹಾಡು. ಆ ಮಡಿಲು, ಆ ತೊಡೆ – ಅದೇ ನನ್ನ ಮೊದಲ ಪಾಠಶಾಲೆ. ಅವರ ನೆರಿಗೆಗಟ್ಟಿದ ಕೈ ನನ್ನ ತಲೆ ಸವರುತ್ತಿತ್ತು, ಅವರ ದನಿಯಲ್ಲಿ ನನ್ನ ಬಾಲ್ಯ ಅರಳುತ್ತಿತ್ತು. ಆ ಪ್ರೀತಿಯಲ್ಲಿ ನನ್ನ ಸಂಸ್ಕೃತಿ ಇತ್ತು.

ಇವತ್ತು ನನ್ನ ಮಕ್ಕಳಿಗೆ ಆ ಭಾಗ್ಯ ಇಲ್ಲ….
ಇವತ್ತು ಅಜ್ಜಿಯ ಲಾಲಿ ಮೊಬೈಲ್ ರಿಂಗ್‌ಟೋನ್‌ನಲ್ಲಿ ಕಳೆದುಹೋಗಿದೆ. ತಾತನ ಮಡಿಲು ಖಾಲಿ ಆಗಿದೆ. ಕಥೆ ಹೇಳುವ ದನಿ, ಹಾಡುವ ದನಿ ಟಿವಿ ಸೀರಿಯಲ್‌ನ ಸದ್ದಿನಲ್ಲಿ ಮುಳುಗಿ ಹೋಗಿದೆ. ನಾನು ತಾತನ ಕಾಲಲ್ಲಿ ಕೂತು, ಅಜ್ಜಿಯ ಪ್ರೀತಿ ತುಂಬಿದ ಮಡಿಲಿನಲ್ಲಿ ಮಲಗಿ ಕಲಿತದ್ದು ನನ್ನ ಮಗುವಿಗೆ ಗೊತ್ತಿಲ್ಲ. ಆ ಪ್ರೀತಿಯ ಪಾಠ ನನ್ನ ಮಕ್ಕಳಿಗೆ ಸಿಕ್ಕಿಲ್ಲ. ನಮ್ಮ ಕಣ್ಣೆದುರೇ ನಮ್ಮ ಸಂಸ್ಕೃತಿ ನಶಿಸುತ್ತಿದೆ. ನಮ್ಮ ಉಸಿರು ನಿಂತು ಹೋಗುತ್ತಿದೆ.
ಇದು ನನ್ನೊಬ್ಬನ ನೋವಲ್ಲ. ಇದು ಇಡೀ ಕೊಡಗಿನ ನೋವು. ಕೊಡಗು ಎಂದರೆ ಒಂದೇ ಬಣ್ಣ ಅಲ್ಲ, ಒಂದೇ ದನಿ ಅಲ್ಲ. ಇದು ಕೊಡವ ಹಾಗೂ ಇನ್ನಿತರ ಎಲ್ಲ ಸಮುದಾಯಗಳ ವಿಧವಿಧದ ಬುಡಕಟ್ಟು ಹಾಡು, ಕುಣಿತ, ಆಚರಣೆ, ನಂಬಿಕೆ, ಕಥೆಗಳಿಂದ ಕೂಡಿದ ಒಂದು ಸುಂದರ ಹೂಗುಚ್ಛ. ಕೊಡಗಿನ ಸಾಂಪ್ರದಾಯಿಕ “ವಾಲಗ” ಕೇಳಿದರೆ ಮೈ ರೋಮಾಂಚನವಾಗುತ್ತೆ. ಆದರೆ ಆ ವಾಲಗದಲ್ಲಿ ಬರುವ ಬಹುತೇಕ ಹಾಡುಗಳು ಎರವ ಜನಾಂಗದ ಕೊಡುಗೆ ಅಂತ ಎಷ್ಟು ಜನಕ್ಕೆ ಗೊತ್ತು?

ಎರವ ಜನಾಂಗದ “ದುಡಿ ಕುಣಿತ” ಎಷ್ಟು ವಿಶೇಷ ಗೊತ್ತಾ? ಆ ದುಡಿಯ ಸದ್ದಿಗೆ ಕಾಲು ತಾನಾಗೇ ಕುಣಿಯುತ್ತೆ, ಆ ಕುಣಿತದ ಗತ್ತಿಗೆ ಎದೆ ತುಂಬಿ ಬರುತ್ತೆ. ಇದೇ ರೀತಿ ಕೊಡವ ಹಾಗೂ ಇನ್ನಿತರ ಎಲ್ಲ ಸಮುದಾಯಗಳ ಕಲೆಯೂ ಒಂದು ಅನನ್ಯ ರತ್ನ. ಅದು ಬರೀ ಹಾಡು-ಕುಣಿತ ಅಲ್ಲ – ಅದು ನಮ್ಮ ನೆಲದ ಬಡಿತ, ನಮ್ಮ ಜನರ ಉಸಿರು, ನಮ್ಮ ಏಕತೆಯ ಸಂಕೇತ. ಆದರೆ ಇವತ್ತು ದುಡಿ ಬಾರಿಸುವ ಕೈಗಳು ನಡುಗುತ್ತಿವೆ, ವಾಲಗ ಹಾಡುವ ದನಿಗಳು ಕ್ಷೀಣಿಸುತ್ತಿವೆ, ಎಲ್ಲಾ ಸಮುದಾಯಗಳ ಕಲೆಗಳು ಕಣ್ಮರೆಯಾಗುತ್ತಿವೆ. ಒಂದು ಕಲೆ ನಶಿಸಿದರೆ, ಕೊಡಗಿನ ಒಂದು ಹೃದಯಬಡಿತವೇ ನಿಂತಂತೆ.
20 ವರ್ಷ ಕಳೆದರೆ ನಮ್ಮ ಮಗ/ಮಗಳು ಯಾರ ಕಾಲಿನಲ್ಲಿ ಕೂರುತ್ತಾನೆ? ಯಾರ ತೊಡೆಯಲ್ಲಿ ಮಲಗಿ ಲಾಲಿ ಕೇಳುತ್ತಾನೆ? ಗೂಗಲ್‌ನಲ್ಲಿ “ಕೊಡಗಿನ ವಾಲಗ”, “ದುಡಿ ಕುಣಿತ” ಅಂತ ಹುಡುಕಿದರೆ ಕೆಲವೊಂದು ಸಿಗಬಹುದಷ್ಟೇ? ಆಗ ಸಿಗೋದು ಕೇವಲ ನನ್ನ ಪಶ್ಚಾತ್ತಾಪ. ಯಾಕೆಂದರೆ ಆಗ ಕಥೆ ಹೇಳುವ ತಾತನೂ ಇಲ್ಲ, ಲಾಲಿ ಹಾಡುವ ಅಜ್ಜಿಯೂ ಇಲ್ಲ, ವಾಲಗ ಹಾಡುವ, ದುಡಿ ಕುಣಿಯುವ, ತಮ್ಮ ಸಮುದಾಯದ ಕಲೆ ಉಳಿಸಿದ ಒಬ್ಬ ಕಲಾವಿದನೂ ಇಲ್ಲ.

“ಕೊಡಗು ಸಾಂಸ್ಕೃತಿಕ ಅಕಾಡೆಮಿ” ಏಕೆ ಬೇಕು?
ಈ ಅಕಾಡೆಮಿ ಬರೀ ಕಟ್ಟಡ ಅಲ್ಲ. ಇದು ನನ್ನ ತಾತ-ಅಜ್ಜಿಯಂತಹ ಸಾವಿರಾರು ಹಿರಿಯರ ಮಡಿಲಿನ ಬಿಸಿಯನ್ನು, ವಾಲಗದ ನಾದವನ್ನು, ದುಡಿ ಕುಣಿತದ ಗತ್ತನ್ನು, ಕೊಡವ ಹಾಗೂ ಇನ್ನಿತರ ಎಲ್ಲ ಸಮುದಾಯಗಳ ಬುಡಕಟ್ಟು ಕಲೆಗಳನ್ನು ಉಳಿಸುವ “ತುರ್ತು ನಿಗಾ ಘಟಕ”. ಇದು ಬಂದರೆ ಎಲ್ಲಾ ಸಮುದಾಯದ ಹಿರಿಯರ ಬಾಯಲ್ಲಿರುವ ಕಥೆ, ಲಾಲಿ, ವಾಲಗದ ಹಾಡು, ದುಡಿ ಕುಣಿತ, ಆಚರಣೆ – ಎಲ್ಲವನ್ನೂ ದಾಖಲಿಸಿ ಇಡಬಹುದು. ಅವರನ್ನೇ ಗುರುಗಳಾಗಿ ಮಾಡಿ ನಮ್ಮ ಮಕ್ಕಳಿಗೆ ಆ ಕಲೆ, ಆ ಪ್ರೀತಿಯನ್ನು ಹಂಚಬಹುದು.
ವರ್ಷಕ್ಕೊಮ್ಮೆ “ಕೊಡಗು ಸಾಂಸ್ಕೃತಿಕ ಹಬ್ಬ” (ಬೆಂಗಳೂರು ಕರಗ ಮಾಡಿದಂತೆ) ಮಾಡಿ ವಾಲಗಕ್ಕೆ, ದುಡಿ ಕುಣಿತಕ್ಕೆ, ಎಲ್ಲಾ ಸಮುದಾಯಗಳ ಕಲೆಗಳಿಗೆ ಸಮಾನ ವೇದಿಕೆ ಕೊಡಬಹುದು. ಹಸಿದ ಹೊಟ್ಟೆಯಲ್ಲಿ ಕಲೆ ಉಳಿಯಲ್ಲ, ಹಾಗಾಗಿ ಆ ಹಿರಿಯ ಕಲಾವಿದರಿಗೆ ಗೌರವಧನ ಕೊಡಿಸಬಹುದು. ತಾತನ ಕಥೆ, ಅಜ್ಜಿಯ ಲಾಲಿ, ವಾಲಗದ ಪದ, ದುಡಿ ಕುಣಿತದ ತಾಳ, ಎಲ್ಲಾ ಸಮುದಾಯಗಳ ಜಾನಪದ ನನ್ನ ಮಕ್ಕಳ ಪಠ್ಯಪುಸ್ತಕ ಸೇರಬೇಕು.

ಸಂಸ್ಕೃತಿ ಒಮ್ಮೆ ಸತ್ತರೆ, ಮತ್ತೆ ಹುಟ್ಟಿ ಬರಲ್ಲ. ತಾತನ ಮಡಿಲು, ಅಜ್ಜಿಯ ಪ್ರೀತಿ ತುಂಬಿದ ಮಡಿಲು ಖಾಲಿಯಾದರೆ, ವಾಲಗದ ದನಿ ನಿಂತರೆ, ದುಡಿಯ ಸದ್ದು ಅಡಗಿದರೆ, ಒಂದು ಸಮುದಾಯದ ಕಲೆ ಮರೆತರೆ, ಒಂದು ಯುಗವೇ ಮುಗಿದಂತೆ. ಬೇರು ಕತ್ತರಿಸಿದ ಮರ ಎಷ್ಟು ದಿನ ನಿಲ್ಲುತ್ತೆ? ಆದ್ದರಿಂದ ನಾನು, ಕೊಡಗಿನ ಒಬ್ಬ ಸಾಮಾನ್ಯ ಪ್ರಜೆಯಾಗಿ, ಒಬ್ಬ ತಂದೆ/ತಾಯಿಯಾಗಿ ಕಳಕಳಿಯಿಂದ ಕೇಳಿಕೊಳ್ಳುತ್ತೇನೆ.. ಪಕ್ಷ ಬೇಧ ಮರೆತು, ಜಾತಿ ಬೇಧ ಮರೆತು, ನಾವೆಲ್ಲರೂ ಒಕ್ಕೊರಲಿನಿಂದ ಸರ್ಕಾರವನ್ನು ಆಗ್ರಹಿಸೋಣ: “ನಮ್ಮ ಕೊಡಗಿಗೆ ಸ್ವಾಯತ್ತ ಸಾಂಸ್ಕೃತಿಕ ಅಕಾಡೆಮಿ ತಕ್ಷಣ ಮಂಜೂರು ಮಾಡಿ.”
ಇದು ಭಿಕ್ಷೆ ಅಲ್ಲ. ಇದು ನಮ್ಮ ತಾತ-ಅಜ್ಜಿ ನನಗೆ ಕೊಟ್ಟ ಪ್ರೀತಿಯ, ಕೊಡವ ಹಾಗೂ ಇನ್ನಿತರ ಎಲ್ಲ ಸಮುದಾಯಗಳು ನಮಗೆ ಕೊಟ್ಟ ಕಲೆಯ ಋಣ ತೀರಿಸುವ ನಮ್ಮ ಹಕ್ಕು.*ನಮ್ಮ ಮಕ್ಕಳಿಗೆ ಆ ಮಡಿಲಿನ ಬಿಸಿ, ಆ ಲಾಲಿಯ ನೆಮ್ಮದಿ, ಆ ವಾಲಗದ ನಾದ, ಆ ದುಡಿ ಕುಣಿತದ ಗತ್ತು, *ಎಲ್ಲಾ ಸಮುದಾಯಗಳ ಸಂಸ್ಕೃತಿಯ ಶ್ರೀಮಂತಿಕೆ ಕೊಡುವ ನಮ್ಮ ಜವಾಬ್ದಾರಿ.

ಕೊಡಗಿನ ಮಂಜು ಕರಗಬಹುದು, ಕಾಫಿ ಬೆಲೆ ಇಳಿಯಬಹುದು. ಆದರೆ ನನ್ನ ತಾತನ ಕಥೆ, ಅಜ್ಜಿಯ ಲಾಲಿ, ವಾಲಗದ ಹಾಡು, ಬಾಳೋ ಪಾಟ್, ದುಡಿ ಕುಣಿತದ ತಾಳ, ಯಾವುದೇ ಸಮುದಾಯದ ಕಲೆ ಕರಗಲು ಬಿಡಬಾರದು. ಉಸಿರು ಇರುವವರೆಗೆ ಹೋರಾಡೋಣ. ನಮ್ಮ ಗುರುತನ್ನು ಉಳಿಸಿಕೊಳ್ಳೋಣ. ಈಗ ಎಚ್ಚರಗೊಳ್ಳದಿದ್ದರೆ, ನಾಳೆ ನಮ್ಮದೇ ಮಕ್ಕಳಿಗೆ ನಾವೇ ಅಪರಿಚಿತರಾಗುತ್ತೇವೆ. ಕೊಡಗು ಸಾಂಸ್ಕೃತಿಕ ಅಕಾಡೆಮಿ – ಕೊಡಗು ಜಿಲ್ಲೆಗೆ ಬೇಕೇ ಬೇಕು. ‘ಕರಗ’ದಷ್ಟೇ ಸಂಭ್ರಮದಲ್ಲಿ ಕೊಡಗು ಸಾಂಸ್ಕೃತಿಕ ಹಬ್ಬ ಆಗಲಿ ಏನಂತಿರಾ?

ಕೊಡಗಿನ ಗುಂಡಿಬಿದ್ದ ರಸ್ತೆಗಳಲ್ಲಿ ಸಂಚರಿಸಿದ ಮೇಲೆ ‘ಅಯ್ಯೋ ನನ್ನ ಸೊಂಟ’ ಎನ್ನದೆ ಬೇರೆ ದಾರಿಯಿಲ್ಲ!







