ಕೊಡಗಿನಲ್ಲಿ ಗಾಂಜಾ ಸದ್ದಿಲ್ಲದೆ ತನ್ನ ಕಬಂಧ ಬಾಹು ಚಾಚಿದ್ದು, ಪರಿಣಾಮ ಶ್ರೀಮಂತರಿಂದ ಆರಂಭವಾಗಿ ಬಡವರ ತನಕ ಎಲ್ಲರ ಮನೆಯ ದೀಪವನ್ನು ಆರಿಸಲಾರಂಭಿಸಿದೆ.. ಕೂಲಿ ಕಾರ್ಮಿಕರು, ವಿದ್ಯಾರ್ಥಿಗಳು, ಯುವಕರು ಇದರ ನಶೆಗೆ ಬೀಳುತ್ತಿದ್ದು, ಜಾಲವನ್ನು ಬೇರು ಸಹಿತ ಕೀಳದೆ ಹೋದರೆ ಕೊಡಗಿಗೆ ಅಪಾಯ ತಪ್ಪಿದಲ್ಲ… ಏಕೆಂದರೆ ಆಗಾಗ್ಗೆ ಬೆಳಕಿಗೆ ಬರುತ್ತಿರುವ ಪ್ರಕರಣಗಳು ಭಯ ಹುಟ್ಟಿಸಲಾರಂಭಿಸಿವೆ…
ಇದನ್ನೂ ಓದಿ: ಯುವಜನತೆ ಮೇಲೆ ಡ್ರಗ್ಸ್ ಅಸ್ತ್ರ… ಇದು ಭಯೋತ್ಪಾದನೆಯ ತಂತ್ರ… ಪೋಷಕರೇ ಹುಷಾರ್!
ಕೊಡಗು ಬದಲಾಗಿದೆ… ಕೃಷಿಗಷ್ಟೆ ಸೀಮಿತವಾಗಿದ್ದ ಜಿಲ್ಲೆ ಇದೀಗ ಪ್ರವಾಸೋದ್ಯಮದ ಕಾರಣಕ್ಕೆ ಅಭಿವೃದ್ಧಿ ಪಥದತ್ತ ಮುನ್ನಡೆಯುತ್ತಿದೆ. ಹೀಗಾಗಿ ರೆಸಾರ್ಟ್, ಹೋಂಸ್ಟೇ ಸೇರಿದಂತೆ ವಾಣಿಜೋದ್ಯಮ ಬೆಳೆಯುತ್ತಿದೆ. ದೇಶ, ವಿದೇಶದ ಜನರು ಇಲ್ಲಿ ಠಿಕಾಣಿ ಹೂಡಲಾರಂಭಿಸಿದ್ದಾರೆ. ಅಷ್ಟೇ ಅಲ್ಲದೆ ದೂರದಿಂದ ರೆಸಾರ್ಟ್, ಹೋಂಸ್ಟೇನಲ್ಲಿ ಒಂದಷ್ಟು ಸಮಯವನ್ನು ಕಳೆಯಲೆಂದು ಬರುವವರ ಸಂಖ್ಯೆ ಹೆಚ್ಚಾಗಿದೆ. ಹೀಗೆ ಬರುವವರಲ್ಲಿ ತರಾವರಿಯ ಜನರಿದ್ದು ಕೆಲವರು ಮಜಾ ಉಡಾಯಿಸಲೆಂದು ಬರುತ್ತಿದ್ದು ಅವರಿಂದಲೇ ಅಕ್ರಮ ಚಟುವಟಿಕೆಗೆ ಉತ್ತೇಜನ ಸಿಗುತ್ತಿದೆ.

ಎಣ್ಣೆ, ಹೆಣ್ಣು, ಅದರಾಚೆಗೆ ನಶೆ ಏರಿಸುವ ಡ್ರಗ್ಸ್, ಗಾಂಜಾ ಹೀಗೆ ಎಲ್ಲವೂ ಸದ್ದಿಲ್ಲದೆ ಸರಬರಾಜಾಗುತ್ತಿದ್ದು, ಇದರಿಂದ ಕೆಲವರ ಕಿಸೆ ತುಂಬುತ್ತಿದೆ. ಪರಿಣಾಮ ಎಲ್ಲವೂ ಗಪ್ ಚಿಪ್ ಆಗಿ ಮುಂದುವರೆಯುತ್ತಿದೆ. ಆಗೊಮ್ಮೆ ಈಗೊಮ್ಮೆ ಅನಿವಾರ್ಯ ಪರಿಸ್ಥಿತಿಯಲ್ಲಿ ಅಕ್ರಮಗಳು ಬೆಳಕಿಗೆ ಬರುತ್ತಿವೆ ಎನ್ನುವುದನ್ನು ಹೊರತುಪಡಿಸಿದರೆ ಉಳಿದಂತೆ ಯಾವುದೇ ಪ್ರಕರಣಗಳು ಹೊರ ಬರುತ್ತಿಲ್ಲ.
ಇದನ್ನೂ ಓದಿ: ಎಚ್ಚರ ತಪ್ಪಿದರೆ ಡಿಜಿಟಲ್ ಅರೆಸ್ಟ್ ಖಚಿತ… ನೀವು ಜಾಗೃತರಾಗಿ… ವಂಚನೆಯಿಂದ ಪಾರಾಗಿ!
ಬಹಳಷ್ಟು ಯುವಕರು ನಶೆಗೆ ದಾಸರಾಗಿದ್ದಾರೆ. ಅದರಲ್ಲೂ ತಳಮಟ್ಟದ ಯುವಕರು ಗಾಂಜಾ ವ್ಯಸವಿಗಳಾಗಿದ್ದಾರೆ. ಪರಿಣಾಮ ಬಹುತೇಕರು ಮೂರ್ಚೆ ರೋಗ ಸೇರಿದಂತೆ ಹಲವು ಆರೋಗ್ಯ ಸಮಸ್ಯೆಗಳಿಂದ ಬಳಲುತ್ತಿದ್ದು, ಬದುಕಿ ಬಾಳಬೇಕಾದ ವಯಸ್ಸಿನಲ್ಲಿ ಶಿವನ ಪಾದ ಸೇರುವ ಪರಿಸ್ಥಿತಿಗೆ ಬಂದು ನಿಂತಿದ್ದಾರೆ. ಇನ್ನು ಜಿಲ್ಲೆಯ ಕಾಫಿ ತೋಟದ ಮಾಲೀಕರು ಅನಿವಾರ್ಯವಾಗಿ ಅಸ್ಸಾಂ ಮೂಲದ ಕಾರ್ಮಿಕರನ್ನು ಆಶ್ರಯಿಸಿರುವುದರಿಂದ ಅವರು ಗಾಂಜಾ ವ್ಯಸನಿ ಮಾತ್ರವಾಗಿರದೆ ಈಗೀಗ ಗಾಂಜಾ ಫೆಡ್ಲರ್ ಗಳಾಗಿಯೂ ಕೆಲಸ ಮಾಡುತ್ತಿದ್ದಾರೆ.

ಹಾಗೆನೋಡಿದರೆ ಕೊಡಗಿನಲ್ಲಿ ಗಾಂಜಾದ ಕಮಟು ವಾಸನೆ ಬಡಿಯಲು ಆರಂಭವಾಗಿ ಎರಡರಿಂದ ಮೂರು ದಶಕಗಳೇ ಕಳೆದು ಹೋಗಿವೆ. ಗಾಂಜಾವನ್ನು ತೋಟದಲ್ಲಿ, ಹೊಲದಲ್ಲಿ ಹೀಗೆ ಭೂಮಿ ಮೇಲೆ ಕೆಲವರು ಬೆಳೆದು ಸಿಕ್ಕಿ ಬಿದ್ದ ಪ್ರಕರಣಗಳು ಬೇಕಾದಷ್ಟಿವೆ. ಕೊಡಗಿನಲ್ಲಿ ಗಾಂಜಾ ಪ್ರಕರಣಗಳನ್ನು ನೋಡಿದ್ದೇ ಆದರೆ ಅದಕ್ಕೆ ಮೂಲ ಕೇರಳಿಗರು ಎನ್ನುವುದನ್ನು ತಳ್ಳಿಹಾಕಲಾಗದು. 1990ರಿಂದ 2005ಇಸವಿಯ ಅವಧಿಯಲ್ಲಿ ಕೊಡಗಿಗೆ ಶುಂಠಿ ಕೃಷಿ ಮಾಡಲು ಬಂದ ಕೇರಳಿಗರು ಕಾಡು, ಗದ್ದೆ, ಹೀಗೆ ಎಲ್ಲವನ್ನು ಗುತ್ತಿಗೆಗೆ ಪಡೆದು ಅಲ್ಲಿ ಶುಂಠಿ ಬೆಳೆಸಲಾರಂಭಿಸಿದರು. ಈ ವೇಳೆ ಅವರ ಭದ್ರಕೋಟೆಯಲ್ಲಿದ್ದ ಆ ಸ್ಥಳಕ್ಕೆ ಯಾರೂ ಹೋಗುತ್ತಿರಲಿಲ್ಲ.
ಇದನ್ನೂ ಓದಿ: ಅಕ್ರಮ ಸಂಬಂಧಕ್ಕೆ ಅಡ್ಡಿಯಾಗಿದ್ದ ಗಂಡನಿಗೆ ಚಟ್ಟ ಕಟ್ಟಲು ಪ್ರಿಯಕರನಿಗೆ ಹೆಂಡತಿ ಸಾಥ್!
ಇಂತಹ ಸಮಯದಲ್ಲಿ ಕೆಲವರು ಶುಂಠಿ ನಡುವೆ ಗಾಂಜಾ ಬೆಳೆದರು. ಅದಾದ ನಂತರ ಸ್ಥಳೀಯರ ಸಹಕಾರದಲ್ಲಿ ಕಾಡುಗಳಲ್ಲಿಯೂ ಗಾಂಜಾ ಬೆಳೆದಿದ್ದರು. ಕೆಲವು ಪ್ರಕರಣಗಳನ್ನು ಪೊಲೀಸರು ಪತ್ತೆ ಹಚ್ಚಿ ಕೋಟ್ಯಂತರ ರೂಪಾಯಿಯ ಗಾಂಜಾವನ್ನು ನಾಶ ಮಾಡಲಾಯಿತು. ಆದರೆ ಬೆಳಕಿಗೆ ಬಾರದೆ ಅದೆಷ್ಟು ಗಾಂಜಾ ಹೊರಗೆ ಹೋಯಿತೋ ಗೊತ್ತಿಲ್ಲ. ಆದರೂ ಆ ದಿನಗಳಲ್ಲಿ ಪೊಲೀಸರು ನೂರಾರು ಕೋಟಿ ಮೌಲ್ಯದ ಗಾಂಜಾವನ್ನು ಪತ್ತೆ ಹಚ್ಚಿ ನಾಶ ಮಾಡಿರುವುದು ತುಸು ನೆಮ್ಮದಿ ಪಡುವ ವಿಚಾರವಾಗಿದೆ.

ಇದಾದ ನಂತರ ಅದರಲ್ಲೂ ಮೊಬೈಲ್ ಗಳು ಸಕ್ರಿಯವಾಗಿರುವ ಈ ಸಮಯದಲ್ಲಿ ಯಾರೂ ಕೂಡ ಗಾಂಜಾ ಬೆಳೆಯುವ ಪ್ರಯತ್ನ ಮಾಡುತ್ತಿಲ್ಲ. ಎಷ್ಟೇ ಮುಚ್ಚಿಟ್ಟರೂ ಬಯಲಾಗುತ್ತದೆ. ಅಷ್ಟೇ ಅಲ್ಲದೆ ಪೊಲೀಸರಿಗೆ ಮಾಹಿತಿ ಹೋಗುತ್ತದೆ ಎಂಬ ಭಯವೂ ಇದೆ. ಹೀಗಾಗಿ ಗಾಂಜಾ ಬೆಳೆಯುವ ಗೋಜಿಗೆ ಹೋಗಲಿಲ್ಲ. ಬದಲಿಗೆ ಕೊಡಗನ್ನು ಗಾಂಜಾ ಮಾರಾಟ ಕೇಂದ್ರವಾಗಿ ಮಾರ್ಪಡಿಸಿದರು ಎನ್ನುವುದೇ ದುರಂತ.
ಇದನ್ನೂ ಓದಿ: ಹನಿಟ್ರ್ಯಾಪ್… ಇದು ಮಾಯಾಂಗನೆಯರ ವಿಷವರ್ತುಲ…
ಇಲ್ಲಿಗೆ ದೂರದ ಥೈಲ್ಯಾಂಡ್, ಬ್ಯಾಂಕಾಕ್ ನಿಂದ ಹೈಡ್ರೋ ಗಾಂಜಾ ಸರಬರಾಜಾಗುತ್ತದೆ ಎನ್ನುವುದಾದರೆ ಇದರ ಹಿಂದಿನ ಜಾಲ ಹೇಗಿರಬಹುದು ಎಂಬುದನ್ನು ಊಹಿಸಿ. ಹವಾನಿಯಂತ್ರಿತ ಕೊಠಡಿಯಲ್ಲಿ ಕೃತಕ ಬೆಳಕಿನಲ್ಲಿ ಗಾಂಜಾವನ್ನು ಬೆಳೆಸುತ್ತಾರೆ. ಇದರ ಬೆಲೆ ಕೆಜಿಗೆ ಕೋಟ್ಯಂತರ ರೂಪಾಯಿ ಇದೆ. ಇದೇ ಗಾಂಜಾ ಕೊಡಗಿಗೂ ಬರುತ್ತಿದೆ ಎಂದರೆ ಅಚ್ಚರಿಯಾಗಬಹುದು ಆದರೆ ನಿಜ. 2024ರಲ್ಲಿ ಪೊಲೀಸರು ಈ ಪ್ರಕರಣವನ್ನು ಪತ್ತೆ ಹಚ್ಚಿದ್ದರು. ಆಗ ಕೊಡಗು ಬೆಚ್ಚಿ ಬಿದ್ದಿತು.

ಪೊಲೀಸರು ಪ್ರಕರಣವನ್ನು ಅವತ್ತು ಬೇಧಿಸಿದ ಸಂದರ್ಭದಲ್ಲಿ ಕೇರಳ ಮೂಲದ ಮಹಮ್ಮದ್ ಅನೂಫ್ ಎಂಬಾತ ಕೊಡಗು ಸೇರಿದಂತೆ ಕರ್ನಾಟಕದ ಹಲವು ಪ್ರದೇಶಗಳಿಗೆ ಹೈಡ್ರೋ ಗಾಂಜಾವನ್ನು ಸರಬರಾಜು ಮಾಡುತ್ತಿದ್ದದ್ದು ಬೆಳಕಿಗೆ ಬಂದಿತ್ತು. ಇದಾದ ನಂತರವೂ ಅಲ್ಲಲ್ಲಿ ಬೇರೆ, ಬೇರೆ ಪ್ರಕರಣಗಳಲ್ಲಿ ಗಾಂಜಾವನ್ನು ಪೊಲೀಸರು ವಶಪಡಿಸಿಕೊಂಡಿದ್ದಾರೆ.
ಇದನ್ನೂ ಓದಿ: ಭಾರತಕ್ಕೆ ಬಾಂಗ್ಲಾ-ನೇಪಾಳಿ ಹುಡ್ಗೀರ್ ಬರೋದ್ಯಾಕೆ?…
ಇನ್ನು ಕೊಡಗಿಗೊಂದು ಸುತ್ತು ಹೊಡೆದರೆ ಗಾಂಜಾದ ಕಮಟು ವಾಸನೆ ಕೆಲವು ಪ್ರದೇಶಗಳಲ್ಲಿ ಹೆಚ್ಚಾಗಿದೆ. ಕುಶಾಲನಗರ, ಗೋಣಿಕೊಪ್ಪ, ನಾಪೋಕ್ಲು ವ್ಯಾಪ್ತಿಯಲ್ಲಿ ಬಹುತೇಕ ಮದ್ಯ ವ್ಯಸನಿಗಳು ಅದರಲ್ಲೂ ಕೂಲಿ ಕಾರ್ಮಿಕರು ಗಾಂಜಾಕ್ಕೆ ಮಾರು ಹೋಗಿದ್ದಾರೆ. ದೂರದ ಅಸ್ಸಾಂನಿಂದ ಬಂದು ಇಲ್ಲಿನ ತೋಟದ ಲೈನ್ ಮನೆಗಳಲ್ಲಿ ವಾಸ್ತವ್ಯ ಹೂಡಿ ತೋಟಗಳಲ್ಲಿ ಕೆಲಸ ಮಾಡುವ ಕಾರ್ಮಿಕರು ಈಗ ಗಾಂಜಾದ ಗ್ರಾಹಕರು ಮತ್ತು ಮಾರಾಟಗಾರರಾಗಿರುವುದು ದುರಂತವೇ ಸರಿ..

ಹಾಗೆನೋಡಿದರೆ ಈ ವ್ಯಾಪ್ತಿಯಲ್ಲಿ ಈ ಹಿಂದಿನಿಂದಲೂ ಗಾಂಜಾದ ವಾಸನೆ ಮೂಗಿಗೆ ಬಡಿಯುತ್ತಲೇ ಇದೆ. ಕೆಲವು ಪುಂಡ ಹುಡುಗರು ಸಿಗರೇಟ್‌ನಲ್ಲಿ ಗಾಂಜಾ ಮಿಕ್ಸ್ ಮಾಡಿ ದಮ್ಮು ಹೊಡೆದು ಆ ಮತ್ತಿನಲ್ಲಿ ಹೆಣ್ಣು ಮಕ್ಕಳಿಗೆ ಕೀಟಲೆ ಮಾಡುತ್ತಾ ಪುಂಡಾಟಿಕೆ ನಡೆಸುವುದು ಹೊಸದೇನಲ್ಲ. ಗೋಣಿಕೊಪ್ಪಲು ಪಟ್ಟಣ ಶೀಘ್ರಗತಿಯಲ್ಲಿ ಬೆಳೆಯುತ್ತಿದ್ದು ವ್ಯಾಪಾರ, ವಹಿವಾಟು ಜೋರಾಗಿಯೇ ನಡೆಯುತ್ತಿದೆ. ಸುತ್ತಮುತ್ತ ಕಾಫಿ ಬೆಳೆಗಾರರೇ ತುಂಬಿರುವುದರಿಂದ ಹಣದ ಹರಿವೂ ಎಗ್ಗಿಲ್ಲದೆ ಹರಿದಾಡುತ್ತಿದೆ.
ಇದನ್ನೂ ಓದಿ: ಮಗಳು ಮನೆ ಬಿಟ್ಟಳು.. ಹೆತ್ತವರು ಹೆಣವಾದರು.. ಇದೆಂತಹ ದುರಂತ ಕಥೆ ಅಲ್ವಾ…!
ಕೂಲಿ ಕಾರ್ಮಿಕರು, ಗಾರೆ ಕೆಲಸಗಾರರು ಸೇರಿದಂತೆ ಎಲ್ಲರೂ ಕೈತುಂಬಾ ದುಡಿಯುತ್ತಿದ್ದಾರೆ. ಹೀಗಾಗಿ ಕಾರ್ಮಿಕರು, ಕಾಲೇಜು ಹುಡುಗರನ್ನು ಟಾರ್ಗೆಟ್ ಮಾಡಿಕೊಂಡು ಕೆಲವು ಖದೀಮರು ಗಾಂಜಾ ರುಚಿ ತೋರಿಸಿ ತಮ್ಮ ಜೇಬು ತುಂಬಿಸಿಕೊಳ್ಳುತ್ತಿದ್ದಾರೆ. ಕ್ವಾರ್ಟರ್ ಹೊಟ್ಟೆಗೆ ಇಳಿಸಿದರೂ ಕಿಕ್ ಆಗುತ್ತಿಲ್ಲ ಎನ್ನುವ ಕೂಲಿ ಕಾರ್ಮಿಕರನ್ನು ಗಾಂಜಾ ನೀಡಿ ಸುಲಭವಾಗಿ ತನ್ನ ಕೈವಶ ಮಾಡಿಕೊಳ್ಳುತ್ತಿದ್ದಾರೆ. ಇಲ್ಲಿಗೆ ಮೈಸೂರು, ಕೇರಳ ಕಡೆಯಿಂದ ಗಾಂಜಾ ಸುಲಭವಾಗಿ ಬರುತ್ತಿದೆ.

ಮೈಸೂರಿನ ಕೆಲವರು ಗಾಂಜಾವನ್ನು ಕೊಡಗಿನತ್ತ ಸಾಗಿಸುವ ಜವಬ್ದಾರಿ ಹೊತ್ತುಕೊಂಡಿದ್ದಾರೆ. ಅಸ್ಸಾಂ ಕಾರ್ಮಿಕರ ಮೂಲಕ ಬಿಕರಿಯಾಗಲು ಆರಂಭಿಸಿದೆ. ಇದೀಗ ಗೋಣಿಕೊಪ್ಪದ ತೋಟವೊಂದರ ಲೈನ್ ಮನೆಯಲ್ಲಿ ಅಕ್ರಮವಾಗಿ ಗಾಂಜಾ ಮಾರಾಟ ಮಾಡುತ್ತಿದ್ದ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿದ ಗೋಣಿಕೊಪ್ಪಲು ವೃತ್ತ ನಿರೀಕ್ಷಕರಾದ ಶಿವರಾಜ್ ಆರ್. ಮುಧೋಳ್, ಪಿಎಸ್ ಐ ಕಾಳೇಗೌಡ, ಸಿಬ್ಬಂದಿಗಳಾದ ವೆಂಕಟೇಶ್, ಹೆಚ್.ಸಿ ಲೋಕೇಶ್, ಪಿಸಿ ಭರತ್, ಗಿರೀಶ್, ಮಹೇಂದ್ರ, ರಘು ಮೊದಲಾದವರಿದ್ದ ಪೊಲೀಸರ ತಂಡ ಅಸ್ಸಾಂ ಮೂಲದ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಇದನ್ನೂ ಓದಿ: ಪರಸ್ತ್ರೀ ವ್ಯಾಮೋಹಕ್ಕೆ ಬಿದ್ದು ಹೆಣವಾದ ಲಾರಿಡ್ರೈವರ್…
ಬಂಧಿತರಾದ ಮೂಲತಃ ಅಸ್ಸಾಂನವರು ಎನ್ನಲಾದ ಗೋಣಿಕೊಪ್ಪ ಸಮೀಪದ ಅತ್ತೂರು ತಿರುಮಲ ಕಾಫಿ ತೋಟದ ಲೈನ್ ಮನೆಯಲ್ಲಿ ಪ್ರಸ್ತುತ ವಾಸವಿರುವ ಅಜತ್ ಅಲಿ (25), ಆಸದೊಲ್ ಹಕ್ (34), ಪೊನ್ನಂಪೇಟೆ ಕೊಡವ ಸಮಾಜ ಹತ್ತಿರದ ತಿಮ್ಮಯ್ಯರವರ ಲೈನ್ ಮನೆಯಲ್ಲಿ ವಾಸವಿರುವ ಆಸಾತುಲ್ಲಾ ಹಕ್ (25), ಪೊನ್ನಂಪೇಟೆ ಹೆಚ್.ಪಿ. ಪೆಟ್ರೋಲ್ ಬಂಕ್ ನ ಕೆಲಸಗಾರ ನೂರ್ ಹಕ್ (23) ಮತ್ತು ಅಜಿತಾಲಿ ಎಂಬುವರನ್ನು ವಶಕ್ಕೆ ಪಡೆದು ಇವರಿಂದ 6.9 ಕೆ.ಜಿ. ಗಾಂಜಾವನ್ನು ವಶಪಡಿಸಿಕೊಳ್ಳಲಾಗಿದೆ ಇವರಿಗೆ ಎಲ್ಲಿಂದ ಗಾಂಜಾ ಬರುತ್ತಿತ್ತು? ಮತ್ತು ಈ ಜಾಲದ ಹಿಂದೆ ಇರುವವರನ್ನು ಪತ್ತೆ ಹಚ್ಚಿ ಬೇರು ಸಹಿತ ಕಿತ್ತು ಹಾಕಬೇಕಾಗಿದೆ. ಇಲ್ಲದೆ ಹೋದರೆ ಕೊಡಗಿಗೆ ಗಂಡಾಂತರ ತಪ್ಪಿದಲ್ಲ.
B M Lavakumar








