ArticlesLatest

ಮಳೆ ಕೈಕೊಟ್ಟಿದೆ, ನದಿ ಬತ್ತುವ ಮುನ್ನ ಎಚ್ಚೆತ್ತುಕೊಳ್ಳಿ.. ನೀರಿಗಾಗಿ ಹೊಡೆದಾಡುವ ದಿನ ದೂರವಿಲ್ಲ!

ಇದು ಸಾಮಾಜಿಕ ಕಾಳಜಿಯ ಲೇಖನಗಳ ಸರಮಾಲೆ-45

ಕೊಡಗಿನಲ್ಲಿ ಗದ್ದೆ ಬಯಲುಗಳು ಮಾಯವಾದ ನಂತರ  ಅಂತರ್ಜಲವನ್ನು ಹಿಡಿದಿಟ್ಟುಕೊಳ್ಳುವ ಸಾಮರ್ಥ್ಯ ಕಡಿಮೆಯಾಗಿದೆ. ಜತೆಗೆ ಎಷ್ಟೇ ಮಳೆ ಸುರಿದರೂ ನೀರು ಹರಿದು ಹೋಗುವಂತಾಗಿದೆ. ಅಂತರ್ಜಲ ಕಡಿಮೆಯಾಗುತ್ತಿರುವುದರ ಪರಿಣಾಮ ನಮ್ಮ ಬಾವಿ, ಕೆರೆ ಸೇರಿದಂತೆ ನೀರಿನಾಶ್ರಯದ ಪ್ರದೇಶಗಳು ಬತ್ತುತ್ತಿವೆ. ಇದರ ಪರಿಣಾಮಗಳನ್ನು ಮುಂದಿನ ದಿನಗಳಲ್ಲಿ ಎದುರಿಸಲೇ ಬೇಕಾಗಿದೆ… ನಾವೀಗ ಎಚ್ಚೆತ್ತುಕೊಳ್ಳುವ ಸಮಯ ಬಂದಿದೆ ಎಂಬುದನ್ನು ಲೇಖಕ ಕಾಯಪಂಡ ವಿಷ್ಣು ನಾಚಪ್ಪ ಇಲ್ಲಿ ಪ್ರಸ್ತಾಪಿಸಿದ್ದಾರೆ…

ಕೊಡಗಿನ ಹೊಳೆಗಳು ಸಂಪೂರ್ಣ ಬತ್ತಿ ಹೋಗಿಲ್ಲ. ತೋಡುಗಳಲ್ಲಿ ಇನ್ನೂ ಜೀವವಿದೆ, ನೀರು ಹರಿಯುತ್ತಿದೆ. ಆದರೆ ಈ ವರ್ಷ ಮಳೆ ಅತ್ಯಂತ ಕಡಿಮೆಯಾಗಿದೆ ಎಂಬ ಸತ್ಯವನ್ನು ನಾವು ಮರೆಯುವಂತಿಲ್ಲ. ಹೊಳೆಗಳಲ್ಲಿ ನೀರಿನ ಪ್ರಮಾಣ ಇಳಿದಿದೆ. ಇದು ಹೆದರಿಕೆಯ ಸುದ್ದಿಯಲ್ಲ, ಇದು ಎಚ್ಚರಿಕೆಯ ಗಂಟೆ. ಇಂದೇ ನಾವು ಮುಂಜಾಗ್ರತೆ ವಹಿಸಬೇಕು ಎಂಬ ಕರೆ. ಈ ಕರೆ ಕೇವಲ ಕೊಡಗಿಗೆ ಮಾತ್ರವಲ್ಲ, ಕಾವೇರಿ ಹರಿಯುವ ಇಡೀ ಕರ್ನಾಟಕಕ್ಕೆ.

ನದಿಯ ದಡದಲ್ಲಿರುವ ತೋಟಗಳಿಗೆ ನದಿಯೇ ಆಧಾರ. ಆ ನೀರೇ ಕಾಫಿ ಬೆಳೆಗೆ, ಕುಟುಂಬದ ಬದುಕಿಗೆ ಜೀವಾಳ. ಕಾಫಿ ಬೆಳೆಗಾರರು ನದಿಯ ನೀರನ್ನು ಬಳಸಿಕೊಳ್ಳುವುದು ಅವರ ಹಕ್ಕು, ಅದರಲ್ಲೂ ಅವರ ಬದುಕು. ಅವರು ವರ್ಷಪೂರ್ತಿ ದುಡಿದು ಬೆಳೆದ ಬೆಳೆಗೆ ನೀರು ಹಾಯಿಸದಿದ್ದರೆ ಇಡೀ ವರ್ಷದ ಶ್ರಮ ನೀರಿನಲ್ಲಿ ಹೋಮವಾದಂತೆ. ಆದ್ದರಿಂದ ಅವರಿಗೆ ತೊಂದರೆ ಕೊಡುವ ಉದ್ದೇಶ ನಮ್ಮದಲ್ಲವೇ ಅಲ್ಲ. ಬದಲಿಗೆ ಅವರ ಅನುಭವ, ಅವರ ಜ್ಞಾನವೇ ನೀರನ್ನು ಉಳಿಸುವುದಕ್ಕೆ ದಾರಿದೀಪ ಆಗಬೇಕು.

ಆದರೆ ಈ ವರ್ಷ ಸ್ವಲ್ಪ ಹೆಚ್ಚು ಜಾಗೃತಿಯಿಂದ ಬಳಸಿದರೆ ಒಳ್ಳೆಯದು ಎಂಬುದೇ ನಮ್ಮೆಲ್ಲರ ಮನವಿ. ನಾನೊಬ್ಬನೇ ಬದುಕಿದರೆ ಸಾಕು ಎಂಬ ಯೋಚನೆ ಬಿಟ್ಟು, ನನ್ನೊಂದಿಗೆ ನನ್ನ ಊರು ಬದುಕಬೇಕು ಎಂಬ ವಿಶಾಲ ಹೃದಯ ಇದ್ದರೆ ಒಳ್ಳೆಯದು.

ಏಕೆಂದರೆ ನಮ್ಮ ನಡುವೆಯೇ ಸಾವಿರಾರು ಸಣ್ಣ ಬೆಳೆಗಾರರಿದ್ದಾರೆ. ಅವರಿಗೆ ನದಿ ದಡದಲ್ಲಿ ತೋಟವಿಲ್ಲ, ಕೆರೆಗಳಿಲ್ಲ, ಬೋರ್ ವೆಲ್ ಗಳಿಲ್ಲ. ಅವರು ಬರೀ ಮಳೆಯನ್ನೇ ನಂಬಿ ಬದುಕುವವರು. ಈ ವರ್ಷ ಮಳೆಯೂ ಕೈಕೊಟ್ಟಿದೆ. ಅವರ ಬೆಳೆಗಳಿಗೂ ನೀರು ಬೇಕು. ನಮ್ಮ ಊರಿನ ಕುಡಿಯುವ ನೀರಿನ ಬಾವಿಗಳಿಗೆ ನೀರು ಬರಬೇಕಾದರೆ ನದಿಯಲ್ಲಿ ನಿರಂತರ ಹರಿವು ಇರಬೇಕು. ನದಿ ಹರಿದರೆ ಮಾತ್ರ ಬಾವಿ ತುಂಬಿರುತ್ತದೆ.

ಈ ನೀರು ನಮಗೊಂದೇ ಅಲ್ಲ. ಈ ಕಾಡು, ಈ ನಾಡು ನಮ್ಮದೊಂದೇ ಅಲ್ಲ. ಕಾಡಿನ ಆನೆಗೆ, ಜಿಂಕೆಗೆ, ಹುಲಿಗೆ, ಹಕ್ಕಿಗೆ ಎಲ್ಲರಿಗೂ ನೀರು ಬೇಕು. ನದಿಯಲ್ಲಿ ನೀರು ಕಡಿಮೆಯಾದಾಗ ಅವು ನೀರಿಗಾಗಿ ನಾಡಿಗೆ ಬರುತ್ತವೆ. ಆಗ ಮನುಷ್ಯ-ಪ್ರಾಣಿ ಸಂಘರ್ಷ ಶುರುವಾಗುತ್ತದೆ. ಅವುಗಳ ಬಾಯಾರಿಕೆಯನ್ನು ಅರ್ಥಮಾಡಿಕೊಂಡರೆ ಒಳ್ಳೆಯದು.

ನಗರಗಳಲ್ಲಿ, ಪಟ್ಟಣಗಳಲ್ಲಿ ನಾವು ನೋಡುವ ಕೆಲವು ದೃಶ್ಯಗಳು ಇನ್ನೂ ನೋವು ತರಿಸುತ್ತವೆ. ಬೆಳಿಗ್ಗೆ ಎದ್ದು ಶುದ್ಧ ಕುಡಿಯುವ ನೀರಿನಿಂದ ರಸ್ತೆಗಳನ್ನು, ಅಂಗಳಗಳನ್ನು ಪೈಪ್ ಹಿಡಿದು ಗಂಟೆಗಟ್ಟಲೆ ತೊಳೆಯುವುದು. ಮನೆ ಮುಂದೆ ಶುದ್ಧವಾಗಿಡುವುದು ತಪ್ಪಲ್ಲ, ಅದು ನಮ್ಮ ಸಂಸ್ಕೃತಿ. ಆದರೆ ಕುಡಿಯುವ ನೀರನ್ನು ರಸ್ತೆಗೆ ಹರಿಸುವುದು ಪೋಲು ಮಾಡಿದಂತೆ.

ಇತಿಹಾಸ ನೋಡಿದರೆ ನೀರಿಗಾಗಿ ರಾಜ್ಯ ರಾಜ್ಯಗಳ ಮಧ್ಯೆಯೇ ಸಂಘರ್ಷ ನಡೆದಿದೆ. ಅಂತಹ ದೊಡ್ಡ ಸಂಘರ್ಷವೇ ನಡೆಯುವಾಗ, ಈ ವರ್ಷ ಮಳೆ ಅತಿ ಕಡಿಮೆಯಾಗಿರುವುದರಿಂದ ನಮ್ಮ ಸುಂದರ ಕೊಡಗಿನಂತಹ ನಾಡಿನಲ್ಲೂ ನೀರಿಗಾಗಿ ಮನಸ್ತಾಪ, ಅಹಂಕಾರ ಬರುವ ಸಾಧ್ಯತೆ ಇದೆ. ಒಂದು ಹಳ್ಳಿ ಇನ್ನೊಂದು ಹಳ್ಳಿಯೊಂದಿಗೆ ಮುನಿಸಿಕೊಳ್ಳುವ ಪರಿಸ್ಥಿತಿ ಬರಬಾರದು.

ನೀರು ಅನ್ನೋದು ಬರೀ ಎರಡು ಅಕ್ಷರವಲ್ಲ, ಅದು ನಮ್ಮ ಉಸಿರು. ನಮ್ಮ ದೇಹದಲ್ಲಿ ಹರಿಯುವ ರಕ್ತದಲ್ಲಿ ನೀರಿದೆ. ನಮ್ಮ ಕಣ್ಣಿನಲ್ಲಿ ಬರುವ ಕಣ್ಣೀರಿನಲ್ಲಿ ನೀರಿದೆ. ನೀರಿದ್ದರೆ ಕಣ್ಣಿನಲ್ಲಿ ಸಂತೋಷದ ಕಣ್ಣೀರು ಬರುತ್ತದೆ. ನೀರಿಲ್ಲದಿದ್ದರೆ ಅದೇ ಕಣ್ಣಿನಲ್ಲಿ ದುಃಖದ, ಬರಗಾಲದ ಕಣ್ಣೀರು ಗ್ಯಾರಂಟಿ.

ಆದ್ದರಿಂದ ಈ ಬಾರಿ ಜಿಲ್ಲಾಡಳಿತ ಮಾರ್ಗಸೂಚಿ ಬಿಡುಗಡೆ ಮಾಡುವಾಗ ಒಂದು ವಿಶೇಷ ಕಾಳಜಿ ವಹಿಸಿದರೆ ಒಳ್ಳೆಯದು. ಕಾಫಿ ಬೆಳೆಗಾರರಿಗೆ ಯಾವುದೇ ತೊಂದರೆ, ಕಿರುಕುಳ ಆಗದ ರೀತಿಯಲ್ಲಿ, ಅವರ ಬೆಳೆಗೂ ಹಾನಿಯಾಗದ ರೀತಿಯಲ್ಲಿ, ಆದರೆ ಕುಡಿಯುವ ನೀರಿಗೂ ಮೊದಲ ಆದ್ಯತೆ ಸಿಗುವ ರೀತಿಯಲ್ಲಿ ಒಂದು ಸಮತೋಲನದ ಮಾರ್ಗಸೂಚಿ ಬಂದರೆ ಒಳ್ಳೆಯದು. ಬೆಳೆಗಾರರನ್ನೂ ವಿಶ್ವಾಸಕ್ಕೆ ತೆಗೆದುಕೊಂಡು, ಅವರೊಂದಿಗೆ ಚರ್ಚಿಸಿ ಮಾಡಿದ ಮಾರ್ಗಸೂಚಿ ಆದರೆ ಅದಕ್ಕೆ ಎಲ್ಲರೂ ಗೌರವ ಕೊಡುತ್ತಾರೆ.

ತೋಟದಲ್ಲಿ ಸಂಜೆ ಹೊತ್ತು ನೀರು ಹಾಯಿಸಿದರೆ ಒಳ್ಳೆಯದು, ಸಾಧ್ಯವಾದರೆ ಡ್ರಿಪ್, ಸ್ಪ್ರಿಂಕ್ಲರ್ ಅಳವಡಿಸಿಕೊಂಡರೆ ಒಳ್ಳೆಯದು. ಮನೆಯಲ್ಲಿ ನಲ್ಲಿಯನ್ನು ಸರಿಯಾಗಿ ಮುಚ್ಚಿದರೆ ಒಳ್ಳೆಯದು. ನದಿ ಯಾರೊಬ್ಬರ ಸ್ವತ್ತಲ್ಲ, ಅದು ನಮ್ಮೆಲ್ಲರ ತಾಯಿ. ನೀರಿಗಾಗಿ ಸಂಘರ್ಷ ಮಾಡಿದರೆ ಯಾರೂ ಗೆಲ್ಲುವುದಿಲ್ಲ, ನೀರನ್ನು ಹಂಚಿಕೊಂಡರೆ ಎಲ್ಲರೂ ಬದುಕುತ್ತಾರೆ. ನಾವು ಇಂದು ಉಳಿಸುವ ಪ್ರತಿ ಹನಿ ನೀರು, ನಾಳೆ ನಮ್ಮ ಮಕ್ಕಳ ಬದುಕು. ನೀರನ್ನು ಉಳಿಸಿ, ಪ್ರೀತಿಯನ್ನು ಉಳಿಸಿ, ನಾಡನ್ನು ಉಳಿಸಿ.

ಕಾಯಪಂಡ ವಿಷ್ಣು ನಾಚಪ್ಪ ಅವರು ಬರೆದಿರುವ ಸಾಮಾಜಿಕ ಕಳಕಳಿಯ ಲೇಖನಗಳನ್ನು ಓದಲು ಈ ಲಿಂಕ್ ಮೇಲೆ ಕ್ಲಿಕ್ ಮಾಡಿ…

admin
the authoradmin

ನಿಮ್ಮದೊಂದು ಉತ್ತರ