LatestMysore

ಕೆ.ಆರ್.ನಗರ ಪಟ್ಟಣ ವ್ಯಾಪ್ತಿಯ ಅಭಿವೃದ್ಧಿ ಕಾಮಗಾರಿಗಳಿಗೆ 7.50ಕೋಟಿ ಬಿಡುಗಡೆ

ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಚಾಲನೆ

ಕೆ.ಆರ್.ನಗರ (ಜಿಟೆಕ್ ಶಂಕರ್): ಪಟ್ಟಣದ ವ್ಯಾಪ್ತಿಯ‌ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ 7.50 ಕೋಟಿ ರೂ ಬಿಡುಗಡೆಯಾಗಿದ್ದು ಕಾಮಗಾರಿ ಪ್ರಗತಿಯಲ್ಲಿವೆ ಎಂದು ಶಾಸಕ ಡಿ.ರವಿಶಂಕರ್ ಹೇಳಿದರು.

ಇಲ್ಲಿನ‌ ಕೆಎಸ್ ಆರ್ ಟಿ ಸಿ ಬಸ್ ನಿಲ್ದಾಣದ ಆವರಣದಲ್ಲಿ ರಸ್ತೆ ಮತ್ತು ಮೈಸೂರು ನಗರಕ್ಕೆ ಸಂಚಾರ ಮಾಡುವವರ ಅನುಕೂಲಕ್ಕಾಗಿ ನಿರ್ಮಾಣ ಮಾಡುತ್ತಿರುವ ಹೈಟೆಕ್ ಬಸ್ ನಿಲ್ದಾಣದ ಕಾಮಗಾರಿಗೆ ಚಾಲನೆ ನೀಡಿ ನಂತರ ನಡೆದ ಕಾರ್ಯಕ್ರಮದಲ್ಲಿ‌ ಮಾತನಾಡಿದರು.

ಬಸ್ ನಿಲ್ದಾಣಕ್ಕೆ ಹಾಸನ ಮತ್ತು ಮೈಸೂರು ಕಡೆಯಿಂದ ಆಗಮಿಸುವ ಬಸ್ಸುಗಳ ಸಂಚಾರಕ್ಕೆ ತೊಂದರೆಯಾಗಿರುವ ಹಿನ್ನಲೆಯಲ್ಲಿ ರಸ್ತೆ ಅಗಲೀಕರಣ ಮಾಡುವುದರೊಂದಿಗೆ ಇತರೆ ಅಗತ್ಯ ಕೆಲಸಗಳನ್ನು ಮಾಡಲಾಗುತ್ತದೆ ಎಂದು ಶಾಸಕರು ಮಾಹಿತಿ ನೀಡಿದರು.

ಕೆ.ಆರ್.ನಗರ ಪಟ್ಟಣವನ್ನು ಮಾದರಿಯನ್ನಾಗಿಸಲು ಕಾರ್ಯ ಯೋಜನೆ ರೂಪಿಸಲಾಗಿದ್ದು ಅದರಂತೆ ಈಗಾಗಲೇ ಸಾರ್ವಜನಿಕ ಆಸ್ಪತ್ರೆಯ ಆವರಣವನ್ನು ಕಾಂಕ್ರೀಟಿಕರಣ ಮಾಡಲಾಗಿದ್ದು ಜತೆಗೆ ಆಸ್ಪತ್ರೆಗೆ ಬರುವ ರೋಗಿಗಳ ಕಡೆಯವರಿಗೆ ವಿಶ್ರಾಂತಿಗಾಗಿ ವ್ಯವಸ್ಥಿತವಾದ ತೆರೆದ ಕೊಠಡಿಗಳನ್ನು ನಿರ್ಮಾಣ ಮಾಡಲಾಗಿದೆ ಎಂದರು.

ಗರುಡುಗಂಭ ವೃತ್ತದಿಂದ ಹುಣಸೂರು ರಸ್ತೆ ಅಗಲೀಕರಣ, ಕಂಠೇನಹಳ್ಳಿ-ಮೂಡಲಕೊಪ್ಪಲು ಸಂಪರ್ಕ ರಸ್ತೆಗೆ ತಲಾ 5 ಕೋಟಿ, ಪುರಸಭೆ ರಸ್ತೆಯಿಂದ ಮಧುವನಹಳ್ಳಿ ಸಂಪರ್ಕ ರಸ್ತೆಗೆ 10 ಕೋಟಿ, ಪಟ್ಟಣದ ಕೃಷ್ಣರಾಜೇಂದ್ರ ಕ್ರೀಡಾಂಗಣದ ಆವರಣದಲ್ಲಿ ಒಳಾಂಗಣ ಕ್ರೀಡಾಂಗಣಕ್ಕೆ 2 ಕೋಟಿ, ಮತ್ತು ಹೊರಾಂಗಣ ಕ್ರೀಡಾಂಗಣ ಸಮಗ್ರ ಅಭಿವೃದ್ದಿಗೆ 5 ಕೋಟಿ ರೂ ಬಿಡುಗಡೆ ಮಾಡಿಸಲಾಗಿದೆ ಎಂದು ನುಡಿದರು.

ಪಟ್ಟಣದ ಯುಜಿಡಿಗೆ 20 ಕೋಟಿ, ಅಮೃತ್ ಯೋಜನೆಯಡಿ 30 ಕೋಟಿ, 15 ಕೋಟಿ ಅನುದಾನದಲ್ಲಿ ಪ್ರಥಮ ದರ್ಜೆ ಕಾಲೇಜಿಗೆ ಕೊಠಡಿ ನಿರ್ಮಾಣದ ಜತಗೆ  ಮಹಿಳಾ ಪ್ರಥಮ ದರ್ಜೆ ಕಾಲೇಜಿಗೆ ಅನುದಾನ ನೀಡಲಾಗಿದೆ ಎಂದು ಮಾಹಿತಿ ನೀಡಿದ ಅವರು‌ ಮಹಿಳಾ ಪಿಯು ಕಾಲೇಜಿನ ಕೊಠಡಿ ನಿರ್ಮಾಣಕ್ಕೆ ಹಣ ಬಿಡುಗಡೆ ಮಾಡಿಸಿ ವಿದ್ಯಾರ್ಥಿಗಳಿಗೆ ಅನುಕೂಲ ಕಲ್ಪಿಸಲಾಗಿದೆ ಎಂದರು.

ಕೆ.ಆರ್.ನಗರದಿಂದ ಮೈಸೂರಿಗೆ‌ ಸಂಚಾರ ಮಾಡುವ ಪ್ರಯಾಣಿಕರಿಗೆ ಸಮರ್ಪಕವಾದ ಬಸ್ ಸೇವೆ ದೊರೆಯದಿರುವ ಬಗ್ಗೆ ವ್ಯಾಪಕ ದೂರು ಬರುತ್ತಿದ್ದು ಆ‌ ಮಾರ್ಗಕ್ಕೆ ಕೂಡಲೇ ಹೆಚ್ಚುವರಿ ಬಸ್ ಸಂಚಾರ ಆರಂಭಿಸಬೇಕು ಎಂದು ಘಟಕ ವ್ಯವಸ್ಥಾಪಕ‌ಕುಮಾರ್ ಅವರಿಗೆ ಶಾಸಕರು ಸೂಚಿಸಿದರು.

ನಗರ ಯೋಜನಾ ಪ್ರಾಧಿಕಾರದ ಅಧ್ಯಕ್ಷ ಕೆ.ಎಸ್.ಮಹೇಶ್,  ಬ್ಲಾಕ್‌ ಕಾಂಗ್ರೆಸ್ ಅಧ್ಯಕ್ಷ ಎಂ.ಎಸ್.ಮಹದೇವ್, ನಗರಾಧ್ಯಕ್ಷ ಎಂ.ಜೆ.ರಮೇಶ್, ವಕ್ತಾರ ಸೈಯದ್ ಜಾಬೀರ್, ಪುರಸಭೆ ಮಾಜಿ ಅಧ್ಯಕ್ಷರಾದ ಶಿವುನಾಯಕ್, ಕೋಳಿಪ್ರಕಾಶ್, ಸುಬ್ರಮಣ್ಯ, ಸೈಯದ್ ಸಿದ್ದಿಕ್, ಮಾಜಿ ಸದಸ್ಯರಾದ ನಟರಾಜು, ಮಿಕ್ಸರ್ ಶಂಕರ್, ಕೆ.ವಿನಯ್, ತಾಲೂಕು ಕನ್ನಡ ಜಾನಪದ ಪರಿಷತ್ ಅಧ್ಯಕ್ಷ ತಿಮ್ಮಶೆಟ್ಟಿ, ಆರೋಗ್ಯ ರಕ್ಷಾ ಸಮಿತಿ ಸದಸ್ಯ ಹೆಚ್.ಹೆಚ್.ನಾಗೇಂದ್ರ,  ಮುಖಂಡರಾದ ಅಶ್ವಿನಿಪುಟ್ಟರಾಜು, ವ್ಯಾನ್ ಸುರೇಶ್, ಆದರ್ಶ, ಕಾಮಧೇನುಧರ್ಮ, ನವೀದ್,  ಎಂ.ಟಿ.ರಾಜೇಶ್, ದೆಗ್ಗನಹಳ್ಳಿ ಆನಂದ್, ಹೆಬ್ಬಾಳುವೇಣು,  ಪುರಸಭೆ ಮುಖ್ಯಾಧಿಕಾರಿ ಜಿ.ಎಸ್.ರಮೇಶ್ ಸೇರಿದಂತೆ ಇನ್ನಿತರರು ಹಾಜರಿದ್ದರು

admin
the authoradmin

Leave a Reply

Translate to any language you want