LatestNews

ದೇಶಭಕ್ತಿ, ನಾಯಕತ್ವ, ರೂಪಿಸುವಲ್ಲಿ ಸೈನಿಕ ಶಾಲೆ ಪಾತ್ರ ಮಹತ್ವದ್ದಾಗಿದೆ: ರಾಜೇಂದ್ರ ವಿಶ್ವನಾಥ ಅರ್ಲೇಕರ್

ಕುಶಾಲನಗರ (ರಘು ಹೆಬ್ಬಾಲೆ):  ದೇಶಭಕ್ತಿ, ಪ್ರಾಮಾಣಿಕತೆ, ನಾಯಕತ್ವ ಮತ್ತು ರಾಷ್ಟ್ರೀಯ ಸೇವೆಯ ಮೌಲ್ಯಗಳನ್ನು ಹೊಂದಿರುವ ಭವಿಷ್ಯದ ಯುವಕರನ್ನು ರೂಪಿಸುವಲ್ಲಿ ಸೈನಿಕ್ ಶಾಲೆಗಳ ಪಾತ್ರ ಮಹತ್ವದ್ದಾಗಿದೆ ಎಂದು ಕೇರಳ ಮತ್ತು ತಮಿಳುನಾಡು ರಾಜ್ಯದ ರಾಜ್ಯಪಾಲ ರಾಜೇಂದ್ರ ವಿಶ್ವನಾಥ ಅರ್ಲೇಕರ್ ಹೇಳಿದರು.

ಸಮೀಪದ ಕೂಡಿಗೆ ಕೃಷಿ ಫಾರಂ ಆವರಣದಲ್ಲಿರುವ ಕೊಡಗು ಸೈನಿಕ ಶಾಲಾ ಮೈದಾನದಲ್ಲಿ ಏಳು ದಿನಗಳು ಆಯೋಜಿಸಿದ್ದ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು ಫುಟ್ಬಾಲ್ ಪಂದ್ಯಾವಳಿ 2026 (ಪೂರ್ವ ಸುಬ್ರೊತೊ ಕಪ್ 2026) ಸಮಾರೋಪ ಸಮಾರಂಭದಲ್ಲಿ ಪಾಲ್ಗೊಂಡು ಕ್ರೀಡಾಕೂಟದಲ್ಲಿ ವಿಜೇತ ತಂಡಗಳಿಗೆ ಹಾಗೂ ಆಟಗಾರರಿಗೆ ಪಾರಿತೋಷಕ , ಪದಕ ಮತ್ತು ಪ್ರಮಾಣಪತ್ರಗಳನ್ನು ವಿತರಿಸಿ ಅವರು ಮಾತನಾಡಿದರು. ದೇಶದ ವಿವಿಧ ಭಾಗಗಳಿಂದ ಆಗಮಿಸಿದ ಯುವ ಫುಟ್‌ಬಾಲ್ ಆಟಗಾರರ ಶಿಸ್ತು, ಸಮರ್ಪಣೆ, ತಂಡದ ಮನೋಭಾವ ಮತ್ತು ಕ್ರೀಡಾ ಸ್ಫೂರ್ತಿಯನ್ನು ಪ್ರಶಂಸಿಸಿದ ರಾಜ್ಯಪಾಲರು

ಸೈನಿಕ ಶಾಲೆ ಕೊಡಗು ಪಂದ್ಯಾವಳಿಯನ್ನು ಯಶಸ್ವಿಯಾಗಿ ಆಯೋಜಿಸಿರುವುದಕ್ಕೆ ಅಭಿನಂದಿಸಿದರು.ಶಾಲೆಯ ಸಮಗ್ರ ಶಿಕ್ಷಣ, ಕ್ರೀಡಾ ಶ್ರೇಷ್ಠತೆ, ಸಾಂಸ್ಕೃತಿಕ ಏಕತೆ ಮತ್ತು ರಾಷ್ಟ್ರ ನಿರ್ಮಾಣದ ಕಾರ್ಯಗಳನ್ನು ಶ್ಲಾಘಿಸಿದರು. ಸಂಸದ  ಯದುವೀರ್ ಕೃಷ್ಣದತ್ತ ಚಾಮರಾಜ ಒಡೆಯರ್ ಮಾತನಾಡಿ,ದೇಶ ಸೇವೆ ಹಾಗೂ ನಾಯಕತ್ವಕ್ಕೆ ಬದ್ಧವಾದ ದೇಶಭಕ್ತ ಯುವಜನರನ್ನು ರೂಪಿಸುವಲ್ಲಿ ಸೈನಿಕ ಶಾಲೆಗಳ ಪಾತ್ರ ಮಹತ್ವದ್ದಾಗಿದೆ ಎಂದು  ಹೇಳಿದರು.

ಶಿಕ್ಷಣ, ಕ್ರೀಡೆ, ಮೂಲಸೌಕರ್ಯ, ಶಿಸ್ತು ಹಾಗೂ ವ್ಯಕ್ತಿತ್ವ ನಿರ್ಮಾಣ ಕ್ಷೇತ್ರಗಳಲ್ಲಿ ಶಾಲೆಯ ಸಾಧನೆಯನ್ನು ಶ್ಲಾಘಿಸಿದರು.  ರಾಷ್ಟ್ರೀಯ ಮಹತ್ವದ ಈ ಪಂದ್ಯಾವಳಿಯನ್ನು ಅತ್ಯುತ್ತಮವಾಗಿ ಆಯೋಜಿಸಿದ ಕೊಡಗು ಸೈನಿಕ ಶಾಲೆಗೆ ಅಭಿನಂದನೆ ಸಲ್ಲಿಸುವುದಾಗಿ ಹೇಳಿದರು. ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಮಾತನಾಡಿ,ಶಾಲೆಯ ಇತಿಹಾಸದಲ್ಲಿಯೇ ಅಖಿಲ ಭಾರತ ಸೈನಿಕ ಶಾಲೆಗಳ ಅಂತರ ಗುಂಪು ಫುಟ್ಬಾಲ್ ಪಂದ್ಯಾವಳಿ ಒಂದು ಸ್ಮರಣೀಯ ಹಾಗೂ ಐತಿಹಾಸಿಕ ಕ್ಷಣವಾಗಿತ್ತು ಎಂದು ಬಣ್ಣಿಸಿದರು. ಪಂದ್ಯಾವಳಿಯಲ್ಲಿ ಕ್ರೀಡಾಪಟುಗಳು ಪ್ರದರ್ಶಿಸಿದ ಕ್ರೀಡಾಸ್ಫೂರ್ತಿ, ಶಿಸ್ತು, ತಂಡದ ಮನೋಭಾವ ಹಾಗೂ ರಾಷ್ಟ್ರೀಯ ಏಕತೆಯ ಮೌಲ್ಯಗಳು ಶಾಲಾ ಆವರಣದಲ್ಲಿ  ಪ್ರತಿಬಿಂಬಿಸಿದವು ಎಂದು ಹೇಳಿದರು.

ಈ ಸಂದರ್ಭ ಉಪ ಪ್ರಾಂಶುಪಾಲ ವಿಂಗ್ ಕಮಾಂಡರ್ ಮೊಹಮ್ಮದ್ ಶಾಜಿ,ಹಿರಿಯ ಶಿಕ್ಷಕ ವಿಬಿನ್ ಕುಮಾರ್ ರಾಜ್ಯ ಕ್ರೀಡಾ ಪ್ರಾಧಿಕಾರದ ಉಪಾಧ್ಯಕ್ಷ ಅರುಣ್ ಮಾಚಯ್ಯ,ವಿವಿಧ ಇಲಾಖೆಯ ಅಧಿಕಾರಿಗಳು ಹಾಗೂ ಸೈನಿಕ ಶಾಲೆಯ ಶಿಕ್ಷಕರು ಹಾಗೂ ಸಿಬ್ಬಂದಿಗಳು ಪಾಲ್ಗೊಂಡಿದ್ದರು.

ವಿಜೇತ ತಂಡಗಳ ವಿವರ: 15 ವರ್ಷದ ಒಳಗಿನ  ಬಾಲಕರ ವಿಭಾಗದಲ್ಲಿ ಸೈನಿಕ ಶಾಲೆ ಚಂದ್ರಪುರ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಸೈನಿಕ ಶಾಲೆ ಇಂಫಾಲ್ ರನ್ನರ್-ಅಪ್ ಸ್ಥಾನ ಪಡೆದುಕೊಂಡಿತು. 17 ವರ್ಷದ ಒಳಗಿನ ಬಾಲಕಿಯರ ವಿಭಾಗದಲ್ಲಿ ಸೈನಿಕ ಶಾಲೆ ಸುಜಾನ್ಪುರ್ ತಿರಾ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಸೈನಿಕ ಶಾಲೆ ಚಂದ್ರಪುರ ರನ್ನರ್-ಅಪ್ ಸ್ಥಾನ ಗಳಿಸಿತು. 17  ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಸೈನಿಕ ಶಾಲೆ ಇಂಫಾಲ್ ಚಾಂಪಿಯನ್ ಆಗಿ ಹೊರಹೊಮ್ಮಿದರೆ, ಆತಿಥೇಯ ಸೈನಿಕ ಶಾಲೆ ಕೊಡಗು ರನ್ನರ್-ಅಪ್ ಸ್ಥಾನ ಪಡೆಯಿತು.

ಅತ್ಯುತ್ತಮ ಆಟಗಾರ, ಅತ್ಯುತ್ತಮ ಗೋಲ್‌ಕೀಪರ್ ಹಾಗೂ ಗರಿಷ್ಠ ಗೋಲು ಗಳಿಸಿದ ಆಟಗಾರರಿಗೆ ವೈಯಕ್ತಿಕ ಪ್ರಶಸ್ತಿಗಳನ್ನು ನೀಡಲಾಯಿತು. ಪ್ರತಿಷ್ಠಿತ ರಾಷ್ಟ್ರೀಯ ಮಟ್ಟದ ಫುಟ್ಬಾಲ್ ಪಂದ್ಯಾವಳಿಯನ್ನು ಮೊದಲ ಬಾರಿಗೆ ಆತಿಥ್ಯ ವಹಿಸುವ ಮೂಲಕ ಸೈನಿಕ ಶಾಲೆ ಕೊಡಗು ಐತಿಹಾಸಿಕ ಮೈಲಿಗಲ್ಲನ್ನು ಸಾಧಿಸಿದೆ.

 ಅತಿಥಿಗಳಿಗೆ ಸ್ವಾಗತ: ಮುಖ್ಯ ಅತಿಥಿಗಳನ್ನು ಶಾಲೆಯ ಪ್ರಾಂಶುಪಾಲ ಕರ್ನಲ್ ಅಮರ್ ಜೀತ್ ಸಿಂಗ್ ಅವರು ಸಾಂಪ್ರದಾಯಿಕ  ಅಶ್ವದಳದ ಮೂಲಕ   ಆತ್ಮೀಯವಾಗಿ ಸ್ವಾಗತಿಸಿದರು. ನಂತರ ಮುಖ್ಯ ಅತಿಥಿಗಳು ಹಾಗೂ ಗೌರವ ಅತಿಥಿಗಳು ಶಾಲೆಯಲ್ಲಿರುವ ಯುದ್ಧ ಸ್ಮಾರಕಕ್ಕೆ ಪುಷ್ಪ ನಮನ ಸಲ್ಲಿಸಿ ವೀರ ಯೋಧರಿಗೆ ಗೌರವ ಸಮರ್ಪಿಸಿದರು. ಗೌರವಾನ್ವಿತ ರಾಜ್ಯಪಾಲರಿಗೆ ಶಾಲೆಯ ವಿದ್ಯಾರ್ಥಿಗಳಿಂದ ಗೌರವ ವಂದನೆ ಸಲ್ಲಿಸಲಾಯಿತು.

ರಾಜ್ಯಪಾಲರು ಪಥಸಂಚಲನದ ಗೌರವ ವಂದನೆಯನ್ನು ಸ್ವೀಕರಿಸಿದರು. ಬಳಿಕ  ಶಾಲಾ ವಿದ್ಯಾರ್ಥಿಗಳು ಪ್ರದರ್ಶಿಸಿದ ಡೊಳ್ಳು ಕುಣಿತ ಕರ್ನಾಟಕದ ಶ್ರೀಮಂತ ಸಾಂಸ್ಕೃತಿಕ ಪರಂಪರೆಯನ್ನು ಅನಾವರಣಗೊಳಿಸಿತು.

admin
the authoradmin

Leave a Reply

Translate to any language you want