ಮೈಸೂರು: ಪರಿಸರ ಹಬ್ಬದ ಅಂಗವಾಗಿ ಭಾನುವಾರ ಕುಕ್ಕರಹಳ್ಳಿ ಕೆರೆಯಲ್ಲಿ ಆಯೋಜಿಸಲಾದ ವಿಶೇಷ ಪ್ರಕೃತಿ ನಡಿಗೆಯಲ್ಲಿ ಸುಮಾರು 40 ಮಂದಿ ವಿವಿಧ ವಯೋಮಾನದ ನಾಗರಿಕರು ಭಾಗವಹಿಸಿ ಕೆರೆಯ ಪರಿಸರ , ಜೀವ ವೈವಿಧ್ಯತೆ, ಮರಗಳು ಹಾಗೂ ಪಕ್ಷಿಗಳ ಕುರಿತು ಮಾಹಿತಿ ಪಡೆದುಕೊಂಡರು.

ಬೆಳಿಗ್ಗೆ 7.30ಕ್ಕೆ ಆರಂಭವಾದ ನಡಿಗೆಯಲ್ಲಿ 95 ವರ್ಷದ ಹೆಚ್.ಆರ್. ಬಾಪು ಸತ್ಯನಾರಾಯಣ ಅವರಿಂದ ಹಿಡಿದು ನಾಲ್ಕು ವರ್ಷದ ಮಕ್ಕಳವರೆಗೆ ವಿವಿಧ ವಯೋಮಾನದವರು ಪಾಲ್ಗೊಂಡಿದ್ದರು . ಪರಿಸರ ಪ್ರೇಮಿ ಯು.ಎನ್. ರವಿಕುಮಾರ್ ಮಾರ್ಗದರ್ಶನದಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಭಾಗವಹಿಸಿದವರಿಗೆ ಕೆರೆಯ ಪರಿಸರ ವ್ಯವಸ್ಥೆ, ನೀರಿನ ಹರಿವಿನ ಮಾರ್ಗ, ಜಲಾಶಯದ ಸಂರಕ್ಷಣೆ ಹಾಗೂ ಮೈಸೂರಿನ ಇತಿಹಾಸದೊಂದಿಗೆ ಕುಕ್ಕರಹಳ್ಳಿ ಕೆರೆಯು ಹೊಂದಿರುವ ಸಂಬಂಧದ ಕುರಿತು ವಿವರಿಸಲಾಯಿತು.

ನಡಿಗೆಯ ವೇಳೆ ಹೆಜ್ಜಾರ್ಲೆ (ಪೆಲಿಕಾನ್), ಬೂದು ಬಕ (ಗ್ರೇಟ್ ಹೆರಾನ್), ಕೊಳದ ಬಕ ( ಪಾಂಡ್ ಹೆರಾನ್), ಉಂಡುಕೋಳಿ (ಪರ್ಪಲ್ ಸ್ವಾಂಪ್ ಹೆನ್), ದೊಡ್ಡ ನೀರುಕಾಗೆ (ಗ್ರೇಟ್ ಕಾರ್ಮೊರೆಂಟ್), ಸಣ್ಣ ನೀರುಕಾಗೆ (ಲಿಟಲ್ ಕಾರ್ಮೊರೆಂಟ್ ), ಕೃಷ್ಣ ಹದ್ದು (ಬ್ರಾಹ್ಮಿಣಿ ಕೈಟ್) ಹಾಗೂ ಬೂದು ಮಂಗಟ್ಟೆ (ಗ್ರೇ ಹಾರ್ನ್‌ಬಿಲ್) ಸೇರಿದಂತೆ 35 ಜಾತಿಯ ಪಕ್ಷಿಗಳನ್ನು ಗುರುತಿಸಿದರು. ಮಂಗಟ್ಟೆ ಪಕ್ಷಿಯ ಜೀವನ ಕ್ರಮ ಹಾಗೂ ತನ್ನ ಸಂಗಾತಿಯೊಂದಿಗೆ ಅದು ಹೊಂದಿರುವ ನಿಷ್ಠೆಯ ಕುರಿತು ಮಾಹಿತಿ ನೀಡಲಾಯಿತು.
ನಡಿಗೆಯ ಸಂದರ್ಭದಲ್ಲಿ ತಾರೆಮರ, ಆಲದಮರ, ನಾಗಲಿಂಗ ಪುಷ್ಪ, ಅರಳಿ, ನೇರಳೆ, ಈಚಲು, ಶ್ರೀಗಂಧ, ಹಲಸು , ಹೊಂಗೆ ಹಾಗೂ ಬುಗರಿ ಸೇರಿದಂತೆ ಹಲವು ಜಾತಿಯ ಮರಗಳ ಪರಿಸರ ಮಹತ್ವದ ಬಗ್ಗೆ ವಿವರಿಸಲಾಯಿತು. ಕೆರೆಯ ಅಂಚಿನಲ್ಲಿ ಬೆಳೆಯುವ ಈಚಲು, ನೇರಳೆ ಹಾಗೂ ಆಲದ ಮರಗಳು ಮಣ್ಣಿನ ಸವಕಳಿ ತಡೆಯುವುದರೊಂದಿಗೆ ನೀರಿನ ಸಂರಕ್ಷಣೆಗೆ ಸಹಕಾರಿಯಾಗುತ್ತವೆ. ನೇರಳೆ ಮರಗಳು ನೀರಿನ ಗುಣಮಟ್ಟ ಕಾಪಾಡುವಲ್ಲಿ ಪಾತ್ರವಹಿಸುತ್ತವೆ ಎಂದು ರವಿಕುಮಾರ್ ತಿಳಿಸಿದರು.

ಕಾರ್ಯಕ್ರಮದಲ್ಲಿ ಪರಿಸರಕ್ಕೆ ಸವಾಲಾಗಿರುವ ಕೆಲವು ಸಮಸ್ಯೆಗಳ ಬಗ್ಗೆಯೂ ಗಮನ ಸೆಳೆಯಲಾಯಿತು. ಸುಬಾಬುಲ್ ಹಾಗೂ ರಕ್ತಬೀಜಾಸುರ (ಸೆನ್ನಾ ಸೆಪ್ಟಾಬುಲಸ್ ) ಮರಗಳು ಸ್ಥಳೀಯ ಜಾತಿಯ ಸಸ್ಯಗಳ ಬೆಳವಣಿಗೆಗೆ ಅಡ್ಡಿಯಾಗುತ್ತಿದ್ದು, ಅವುಗಳ ನಿಯಂತ್ರಣ ಅಗತ್ಯವಾಗಿದೆ ಎಂದು ತಿಳಿಸಲಾಯಿತು.
ಪಡುವಾರಹಳ್ಳಿ ಹಾಗೂ ಸುತ್ತಮುತ್ತಲಿನ ಪ್ರದೇಶಗಳಿಂದ ಹರಿದುಬರುವ ಕೊಳಚೆ ನೀರು ಕೆರೆಯನ್ನು ಸೇರುತ್ತಿರುವುದರಿಂದ ನೀರು ಕಲುಷಿತಗೊಳ್ಳುತ್ತಿದ್ದು , ಇದರ ಪರಿಣಾಮವಾಗಿ ಮೀನು ಹಾಗೂ ಪಕ್ಷಿ ಸಂಕುಲಕ್ಕೆ ಅಪಾಯ ಉಂಟಾಗುತ್ತಿದೆ ಎಂದು ತಿಳಿಸಲಾಯಿತು. ಕೆರೆಯ ಮಧ್ಯಭಾಗದಲ್ಲಿರುವ ದ್ವೀಪ ನಿಧಾನವಾಗಿ ಮುಳುಗುತ್ತಿದ್ದು , ಅಲ್ಲಿ ಗೂಡು ಕಟ್ಟುವ ಸುಮಾರು ಆರೇಳು ಜಾತಿಯ ಪಕ್ಷಿಗಳ ಸಂರಕ್ಷಣೆಗಾಗಿ ಅಗತ್ಯ ಕ್ರಮ ಕೈಗೊಳ್ಳಬೇಕಿದೆ ಎಂದು ಅಭಿಪ್ರಾಯ ವ್ಯಕ್ತಪಡಿಸಲಾಯಿತು.

ಬೆಳಿಗ್ಗೆ 9 ಗಂಟೆಗೆ ಮುಕ್ತಾಯಗೊಂಡ ಈ ಪ್ರಕೃತಿ ನಡಿಗೆಯು ಭಾಗವಹಿಸಿದವರಿಗೆ ಕುಕ್ಕರಹಳ್ಳಿ ಕೆರೆಯ ಪರಿಸರ ಮಹತ್ವ, ಜೈವಿಕ ವೈವಿಧ್ಯತೆ ಹಾಗೂ ಸಂರಕ್ಷಣೆಯ ಅಗತ್ಯತೆಯ ಕುರಿತು ಅರಿವು ಮೂಡಿಸಿತು.








