LatestMysore

ಹುಣಸೂರು ತಾಲೂಕಿನಲ್ಲಿ ಗಾಳಿ, ಮಳೆಗೆ ನೆಲಕ್ಕುರುಳಿದ ಮರ, ವಿದ್ಯುತ್ ಕಂಬಗಳು… ತಪ್ಪಿದ ಅನಾಹುತ

ಹುಣಸೂರು(ಹಿರೀಕ್ಯಾತನಹಳ್ಳಿ ಸ್ವಾಮಿಗೌಡ):  ಮುಂಗಾರು ಪೂರ್ವ ಮಳೆಗಾಗಿ ರೈತರು ಕಾಯುತ್ತಿರುವಾಗಲೇ ಶನಿವಾರ ಸಂಜೆ ಸುರಿದ ಹುಣಸೂರು ತಾಲೂಕಿನ ಗ್ರಾಮೀಣ ಪ್ರದೇಶಗಳಲ್ಲಿ ಗುಡುಗು, ಗಾಳಿ ಸಹಿತ ಸುರಿದ ಮಳೆ ಭಾರೀ ಹಾನಿಗೆ ಕಾರಣವಾಗಿದೆ. ಅದೃಷ್ಟ ವಶಾತ್ ಯಾವುದೇ ಪ್ರಾಣ ಹಾನಿ ಸಂಭವಿಸದಿರುವುದರಿಂದ ಜನ ನೆಮ್ಮದಿಯುಸಿರು ಬಿಡುವಂತಾಗಿದೆ.

ಈಗಾಗಲೇ ರೈತರು ಕೃಷಿ ಚಟುವಟಿಕೆಗಳನ್ನು ಆರಂಭಿಸಿದ್ದು, ಯಾವಾಗ ಮಳೆ ಸುರಿಯುತ್ತದೆ ಎಂದು ಮುಗಿಲತ್ತ ದೃಷ್ಟಿ ನೆಟ್ಟಿದ್ದರು. ತಂಬಾಕು ನಾಟಿ ಕಾರ್ಯ ಭರದಿಂದ ಸಾಗುತ್ತಿದ್ದರೆ, ಕೆಲವರು ಶುಂಠಿ ಕೃಷಿಯತ್ತ ಗಮನಹರಿಸಿದ್ದಾರೆ. ಉಳಿದಂತೆ ಹಲವು ರೈತರು ಹಲವು ಬೆಳೆಗಳನ್ನು ಬೆಳೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಹೀಗಾಗಿ ಮಳೆ ಬಿದ್ದರೆ ಭೂಮಿ ಹದಗೊಳಿಸಲು ಅನುಕೂಲವಾಗಲಿದೆ.

ಮಳೆ ಬೀಳುತ್ತಿದ್ದಂತೆಯೇ ಭೂಮಿ ತೇವಗೊಂಡು ಹುಲ್ಲು ಚಿಗುರುವುದರಿಂದ ಜಾನುವಾರುಗಳಿಗೆ ಹಸಿರು ಮೇವು ದೊರೆಯಲಿದೆ. ಆದರೆ ಕೇವಲ ಮಳೆಯಷ್ಟೆ ಸುರಿದಿದ್ದರೆ ರೈತರು ಖುಷಿಪಡುತ್ತಿದ್ದರು. ಆದರೀಗ ಮಳೆಯ ಜತೆಗೆ ಭಾರೀ ಗಾಳಿ ಬೀಸಿದ್ದರಿಂದ ಮರಗಳ ಕೊಂಬೆಗಳು ವಿದ್ಯುತ್ ತಂತಿ ಮೇಲೆ ಬಿದ್ದಿದ್ದರಿಂದ ವಿದ್ಯುತ್ ಕಂಬಗಳು ಧರೆಗುರುಳಿ ಹಲವು ಗ್ರಾಮಗಳು ವಿದ್ಯುತ್ ಇಲ್ಲದೆ ಕತ್ತಲೆಯಲ್ಲಿ ಕಾಲ ಕಳೆಯುವಂತಾಗಿದೆ.

ಶನಿವಾರ ಸುರಿದ ಮಳೆ ಗಾಳಿಗೆ  ಹುಣಸೂರು ತಾಲೂಕಿನ  ಗಾವಡಗೆರೆ ಹೋಬಳಿಯ ಕೆ ಆರ್ ನಗರ ಹುಣಸೂರು ಮುಖ್ಯ ರಸ್ತೆಯ ಬಿಳಿಗೆರೆ ಮಾರಗೌಡನ ಹಳ್ಳಿ ಸಮೀಪದಲ್ಲಿ ಸುಮಾರು 8ಕ್ಕೂ ಹೆಚ್ಚು ವಿದ್ಯುತ್ ಕಂಬಗಳು ಮುರಿದು ಬಿದ್ದಿವೆ. ರೈತರ ಜಮೀನುಗಳಲ್ಲಿರುವ ಮರಗಳು ಬುಡ ಸಮೇತ ವಿದ್ಯುತ್ ತಂತಿ ಮೇಲೆ ಬಿದ್ದು ಕಂಬಗಳು ಹಾನಿಗೊಳಗಾಗಿವೆ.ಇದರಿಂದ ಗಾವಡಗೆರೆ ಹೋಬಳಿಯ ಅಕ್ಕಪಕ್ಕದ ಗ್ರಾಮಗಳಿಗೆ ವಿದ್ಯುತ್ ಸಂಪರ್ಕ ಕಡಿತಗೊಂಡಿದ್ದು, ಚೆಸ್ಕಾಂ ಸಿಬ್ಬಂದಿ ದುರಸ್ತಿಗೊಳಿಸುವ ಕಾರ್ಯದಲ್ಲಿ ನಿರತರಾಗಿದ್ದಾರೆ.

ಗುಡುಗು ಮಿಂಚು ಗಾಳಿ ಪ್ರಾರಂಭವಾಗುತ್ತಿದ್ದಂತೆಯೇ ಜಮೀನಿನಲ್ಲಿದ್ದ  ರೈತರು ತಮ್ಮ ಜಾನುವಾರುಗಳೊಂದಿಗೆ ಮನೆಯನ್ನು ಸೇರಿಕೊಂಡಿದ್ದರಿಂದ ಯಾವುದೇ ರೀತಿಯ ಅನಾಹುತಗಳು ಸಂಭವಿಸಲಿಲ್ಲ.

admin
the authoradmin

Leave a Reply

Translate to any language you want