ಕೆ.ಆರ್. ಪೇಟೆ(ಕಾಮನಹಳ್ಳಿ ಮಂಜುನಾಥ್): ಕ್ಷೇತ್ರದ ಶಾಸಕ ಹೆಚ್.ಟಿ. ಮಂಜು ಅವರು ತಾಲ್ಲೂಕಿನ ಕಿಕ್ಕೇರಿ,ಐಕನಹಳ್ಳಿ ತುಳಸಿ ಕೆರೆಯ ಬಳಿ ಭೇಟಿ ನೀಡಿ ಕೆರೆಯ ಸ್ಥಿತಿಗತಿ ಹಾಗೂ ನೀರಿನ ಸಂಗ್ರಹಣೆಯನ್ನು ಪರಿಶೀಲಿಸಿದರು.
ಕೆರೆಕಟ್ಟೆಗಳ ಸುರಕ್ಷತೆ, ನೀರಿನ ಹರಿವು ಹಾಗೂ ಕೆರೆಯ ಅಭಿವೃದ್ಧಿಗೆ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಅಧಿಕಾರಿಗಳೊಂದಿಗೆ ಚರ್ಚಿಸಿದರು. ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಶಾಸಕರಿಗೆ ಕೆರೆಯ ಪ್ರಸ್ತುತ ಸ್ಥಿತಿಗತಿ ಹಾಗೂ ಅಗತ್ಯ ಕಾಮಗಾರಿಗಳ ಕುರಿತು ಮಾಹಿತಿ ನೀಡಿದರು. ಕೆರೆಗಳ ಸಂರಕ್ಷಣೆ ಹಾಗೂ ನೀರಿನ ಸಮರ್ಪಕ ಬಳಕೆಗೆ ಹೆಚ್ಚಿನ ಆದ್ಯತೆ ನೀಡಲಾಗುವುದು ಎಂದು ಶಾಸಕ ಹೆಚ್.ಟಿ. ಮಂಜು ತಿಳಿಸಿದರು.
ಮಳೆಗಾಲದಲ್ಲಿ ಹೆಚ್ಚಿನ ಪ್ರಮಾಣದ ನೀರನ್ನು ಸಂಗ್ರಹಿಸಿಕೊಳ್ಳುವ ಮೂಲಕ ರೈತರಿಗೆ ಹಾಗೂ ಸಾರ್ವಜನಿಕರಿಗೆ ಅನುಕೂಲವಾಗುವಂತೆ ಕೆರೆಗಳ ಅಭಿವೃದ್ಧಿಗೆ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚಿಸಿದರು.

ತಾಲ್ಲೂಕಿನ ಸಂತೆಬಾಚಹಳ್ಳಿ ಹೋಬಳಿಯ ಕೊರಟೀಕೆರೆ ಸಮೀಪವಿರುವ ಕೆರೆಗೆ ಕೆ.ಆರ್. ಪೇಟೆ ಕ್ಷೇತ್ರದ ಶಾಸಕ ಹೆಚ್.ಟಿ. ಮಂಜು ಅವರು ಭೇಟಿ ನೀಡಿ, ಹೇಮಾವತಿ ನಾಲೆಯಿಂದ ಕೆರೆಗೆ ನೀರು ತುಂಬುತ್ತಿರುವುದನ್ನು ವೀಕ್ಷಿಸಿದರು. ಈ ಸಂದರ್ಭದಲ್ಲಿ ಕೆರೆಗೆ ಹರಿದುಬರುತ್ತಿರುವ ನೀರಿನ ಪ್ರಮಾಣ ಹಾಗೂ ನಾಲೆಯಲ್ಲಿನ ನೀರಿನ ಹರಿವಿನ ಸ್ಥಿತಿಗತಿಗಳ ಕುರಿತು ನೀರಾವರಿ ಇಲಾಖೆಯ ಅಧಿಕಾರಿಗಳಿಂದ ಮಾಹಿತಿ ಪಡೆದುಕೊಂಡರು.
ಹೇಮಾವತಿ ನಾಲೆಯಿಂದ ಕೆರೆಗಳಿಗೆ ಸಮರ್ಪಕವಾಗಿ ನೀರು ಹರಿದುಬಂದರೆ ರೈತರಿಗೆ ಕೃಷಿ ಚಟುವಟಿಕೆಗಳಿಗೆ ಅನುಕೂಲವಾಗುವುದರ ಜೊತೆಗೆ ಅಂತರ್ಜಲ ಮಟ್ಟವೂ ಹೆಚ್ಚಾಗಲಿದೆ ಎಂದು ಶಾಸಕ ಹೆಚ್.ಟಿ. ಮಂಜು ಹೇಳಿದರು. ನಾಲೆಗಳಲ್ಲಿ ಶಿಲ್ಟ್ ಹಾಗೂ ಜಂಗಲ್ ಬೆಳೆದಿರುವುದರಿಂದ ನೀರಿನ ಹರಿವಿಗೆ ತೊಂದರೆಯಾಗದಂತೆ ತಕ್ಷಣವೇ ಸ್ವಚ್ಛತಾ ಕಾರ್ಯ ಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಸೂಚಿಸಿದರು.

ರೈತರ ಹಿತದೃಷ್ಟಿಯಿಂದ ಯಾವುದೇ ನಿರ್ಲಕ್ಷ್ಯಕ್ಕೆ ಅವಕಾಶ ನೀಡದೆ, ನಾಲೆಗಳ ನಿರ್ವಹಣೆಗೆ ಅಗತ್ಯ ಕ್ರಮ ಕೈಗೊಂಡು ಕೆರೆಗಳಿಗೆ ಸಮರ್ಪಕವಾಗಿ ನೀರು ತಲುಪಿಸುವಂತೆ ಅವರು ಅಧಿಕಾರಿಗಳಿಗೆ ತಾಕೀತು ಮಾಡಿದರು. ಈ ಸಂದರ್ಭದಲ್ಲಿ ನೀರಾವರಿ ಇಲಾಖೆಯ ಅಧಿಕಾರಿಗಳು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಟಿಎಪಿಸಿಎಂಎಸ್ ನಿರ್ದೇಶಕ ಮಧು, ತಾ.ಪಂ.ಮಾಜಿ ಸದಸ್ಯ ಕೃಷ್ಣೇಗೌಡ,ಹುಬ್ಬನಹಳ್ಳಿ ಬಲರಾಮು ಸೊಸೈಟಿ ಮಾಜಿ ಅಧ್ಯಕ್ಷ ಶೇಖರ್,ಎಕ್ಸಿಕ್ಯೂಟಿವ್ ಇಂಜಿನಿಯರ್ ಮಂಜುನಾಥ್, ಐಕನಹಳ್ಳಿ ದೇವೇಗೌಡ, ಸ್ಥಳೀಯ ಮುಖಂಡರು ಹಾಗೂ ಅಧಿಕಾರಿಗಳು ಉಪಸ್ಥಿತರಿದ್ದರು.






