ಈದ್ ಮಿಲಾದ್ ಹಿನ್ನಲೆಯಲ್ಲಿ ಹುಣಸೂರಿನಲ್ಲಿ ಶಾಂತಿ ಸಭೆ.. ಅಹಿತಕರ ಘಟನೆಗಳಿಗೆ ಅವಕಾಶ ನೀಡಬೇಡಿ:ಎಸ್ಪಿ

ಹುಣಸೂರು (ನಂಜಾಪುರ ಮನುಕುಮಾರ್): ಇತ್ತೀಚೆಗೆ ಸೋಷಿಯಲ್ ಮೀಡಿಯಾದಲ್ಲಿ ಹರಡುವ ಸುದ್ದಿಗಳ ಬಗ್ಗೆ ಎಚ್ಚರಿಕೆ ವಹಿಸಬೇಕು. ಯಾವುದೇ ಗಾಳಿ ಸುದ್ದಿಗಳಿಗೆ ಅವಕಾಶ ನೀಡಬೇಡಿ ಎಂದು ಎಸ್ಪಿ ಮಲ್ಲಿಕಾರ್ಜುನ ಬಾಲದಂಡಿ ಮುಸ್ಲಿಂ ಸಮುದಾಯದ ಮುಖಂಡರಿಗೆ ಮನವಿ ಮಾಡಿದರು.
ನಗರ ಪೊಲೀಸ್ ಠಾಣೆ ಸಭಾಂಗಣದಲ್ಲಿ ಆಯೋಜಿಸಿದ್ದ ಶಾಂತಿ ಸಭೆ ಯಲ್ಲಿ ಮಾತನಾಡಿ, ಈದ್ ಮಿಲಾದ್ ಹಬ್ಬವನ್ನು ಯಾವುದೇ ಅಹಿತಕರ ಘಟನೆಗಳಿಗೆ ಅವಕಾಶ ನೀಡದಂತೆ ಶಾಂತಿಯುತವಾಗಿ ಆಚರಿಸುವಂತೆ ತಿಳಿಸಿದರು.
ಸರಿಯಾದ ಮಾಹಿತಿ ಇಲ್ಲದೆ ಸುದ್ದಿಗಳನ್ನು ಫಾರ್ವಡ್ ಮಾಡುವುದು ಸಹ ಅಪರಾಧ, ಕಿಡಿಗೇಡಿ ಗಳು ಹಾಕುವ ಗಾಳಿ ಸುದ್ದಿಗಳ ಬಗ್ಗೆ ಪೊಲೀಸರಿಗೆ ಮಾಹಿತಿ ನೀಡಿ. ಅಂದು ನಡೆಯುವ ಮೆರವಣಿಗೆ ಶಾಂತಿಯುತ ವಾಗಿರಲಿ, ಆದಷ್ಟು ಬಾವುಟಗಳನ್ನು ಕಡಿಮೆ ಮಾಡಬೇಕು. ನಿಮ್ಮ ಧರ್ಮಕ್ಕೆ ಸಂಬಂಧಿಸಿದ ಧ್ವಜಗಳನ್ನು ಮಾತ್ರ ಬಳಸಬೇಕು. ಪಾಕಿಸ್ತಾನದ ಫ್ಲಾಗ್ ರೀತಿ ಕಾಣುವ ಬಾವುಟಗಳನ್ನು ತರಬೇಡಿ, ಇದರಿಂದ ಗೊಂದಲ ಉಂಟಾಗಲಿದೆ. ಮೆರವಣಿಗೆಯಲ್ಲಿ ಅಲ್ಲಲ್ಲಿ ನಿಲ್ಲಲು ಅವಕಾಶ ನೀಡದೆ ನಿಗದಿತ ವೇಳೆಯೊಳಗೆ ಮುಗಿಸಬೇಕು ಎಂದು ಸೂಚಿಸಿದರು.

ಮಿಲಾದ್ ಕಮಿಟಿ ಅಧ್ಯಕ್ಷ ಸಾಬ್ ಬೈ ಮಾತನಾಡಿ, ಈದ್ ಮಿಲಾದ್ನ ಕಾರ್ಯಕ್ರಮಗಳ ಕುರಿತು ಮಾಹಿತಿ ನೀಡಿ, ಬೆಳಗ್ಗೆ 8ಕ್ಕೆ ದುವಾ ನಡೆಸ ಲಾಗುವುದು. ಬೆಳಗ್ಗೆ 10ಕ್ಕೆ ಆಸ್ಪತ್ರೆಯಲ್ಲಿ ರೋಗಿಗಳಿಗೆ ಹಣ್ಣು-ಹಂಪಲು ವಿತರಣೆ. ಮಧ್ಯಾಹ್ನ 3.30ಕ್ಕೆ ಶಬೀರ್ನಗರದಿಂದ ಹೊರಡುವ ಮೆರವಣಿಗೆಯು ಪ್ರಮುಖ ಬೀದಿಗಳ ಮೂಲಕ ಸಾಗಿ ಬಂದು ಸಂವಿಧಾನ ಸರ್ಕಲ್ ಬಳಿಯ ಈದ್ಗಾ ಮೈದಾನದಲ್ಲಿ ಸಮಾವೇಶಗೊಳ್ಳಲಿದೆ ಎಲ್ಲರೂ ಸಹಕಾರ ನೀಡಬೇಕೆಂದರು.
ಡಿವೈಎಸ್ಪಿ ರವಿ, ಜಿಪಂ ಮಾಜಿ ಸದಸ್ಯ ಫಜಲುಲ್ಲಾ, ಮಿಲಾದ್ ಕಮಿಟಿಯ ಉಪಾಧ್ಯಕ್ಷ ಸರದಾರ್ ಅಹಮದ್ ಇದ್ದರು.





