DasaraLatestMysore

ಮೈಸೂರು ದಸರಾಕ್ಕೆ ಕಂಬಳದ ಮೆರಗು… ಎರಡು ದಿನಗಳ ಕಾಲ ನಾನ್ ಸ್ಟಾಪ್ ಕಂಬಳ

ಅಕ್ಟೋಬರ್ 18 ಮತ್ತು 19ರಂದು ಕಂಬಳ

ಮೈಸೂರು: ವಿಶ್ವವಿಖ್ಯಾತ ಮೈಸೂರು ದಸರಾ ಮಹೋತ್ಸವದಲ್ಲಿ ಇದೇ ಮೊದಲ ಬಾರಿಗೆ ಕಂಬಳ ಸೇರ್ಪಡೆಯಾಗುತ್ತಿದೆ. ಇದಕ್ಕೆ ಬೇಕಾದ ಸಿದ್ಧತೆಗಳು ಈಗಿನಿಂದಲೇ ಆರಂಭವಾಗಿವೆ. ಹೀಗಾಗಿ ಬೆಂಗಳೂರು ಕಂಬಳ ಸಮಿತಿ ಅಧ್ಯಕ್ಷರೂ ಆಗಿರುವ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮೈಸೂರಿನ ವಿಜಯನಗರ 1ನೇ ಹಂತ ಹಾಗೂ ಸಾತಗಳ್ಳಿ ಸಮೀಪದ ಮೈದಾನಗಳನ್ನು ಅಧಿಕಾರಿಗಳೊಂದಿಗೆ ಪರಿಶೀಲಿಸಿ, ಸಾತಗಳ್ಳಿ ಬಳಿಯ ಜಾಗವನ್ನು ಅಂತಿಮಗೊಳಿಸಿದ್ದಾರೆ.

ಇದಾದ ನಂತರ ಮಾತನಾಡಿದ ಶಾಸಕ ಅಶೋಕ್ ರೈ, ಮೈಸೂರು ದಸರಾದಲ್ಲಿ ಕಂಬಳ ಮಾಡಲು ಸಿಎಂ ಡಿಕೆ ಶಿವಕುಮಾರ್ ಸೂಚನೆ ಕೊಟ್ಟಿದ್ದಾರೆ. ಈ ಬಾರಿ ವಿಜೃಂಭಣೆ ಕಂಬಳ ನಡೆಸುತ್ತೇವೆ. ಕಳೆದ ಬಾರಿಯೇ ಕಂಬಳ ಮಾಡಬೇಕಿತ್ತು. ಅಂತಿಮ ಕ್ಷಣದಲ್ಲಿ ಅದು ಸಾಧ್ಯವಾಗಲಿಲ್ಲ. ಹೀಗಾಗಿ ಈ ಬಾರಿ ಕಂಬಳಕ್ಕೆ ಸ್ಥಳ ಪರಿಶೀಲನೆ ನಡೆಸಿದ್ದೇವೆ. ಸಾತಗಳ್ಳಿ ಹಾಗೂ ವಿಜಯನಗರ ಬಳಿ ಸ್ಥಳ ಪರಿಶೀಲನೆ ನಡೆಸಿದ್ದು, ಇದರಲ್ಲಿ ಸಾತಗಳ್ಳಿ ಬಳಿ ವಿಶಾಲವಾದ ಜಾಗ ಇದೆ. ವಾಹನಗಳ ಪಾರ್ಕಿಂಗ್ ಗೂ ಕೂಡ ಸೂಕ್ತ ಸ್ಥಳವಾಗಿದೆ. ಈ ಬಗ್ಗೆ ಸಿಎಂ ಅವರಿಗೆ ಸ್ಥಳದ ಕುರಿತು ಮಾಹಿತಿ ನೀಡುತ್ತೇವೆ ಎಂದು ತಿಳಿಸಿದರು.

ದಸರಾ ಮಹೋತ್ಸವದಲ್ಲಿ ಹಮ್ಮಿಕೊಳ್ಳಲಾಗಿರುವ ಕಂಬಳವು ಈ ಬಾರಿ ಅಕ್ಟೋಬರ್ 18 ಮತ್ತು 19ರಂದು ಎರಡು ದಿನಗಳ ಕಾಲ ಹಗಲು ಮತ್ತು ರಾತ್ರಿ ನಡೆಯಲಿದ್ದು, ಸುಮಾರು 150 ರಿಂದ 200ಜೋಡಿ ಕಂಬಳ ಕೋಣಗಳು ಭಾಗವಹಿಸುವ ನಿರೀಕ್ಷೆಯಿದೆ. ಸುಮಾರು 8 ಸಾವಿರ ಮಂದಿ ಕುಳಿತು ವೀಕ್ಷಿಸಲು ಅವಕಾಶ ಕಲ್ಪಿಸಲಾಗುವುದು. ಸಾರ್ವಜನಿಕರಿಗೆ ಪ್ರವೇಶ ಸಂಪೂರ್ಣ ಉಚಿತವಾಗಿದ್ದು, ವಿಐಪಿ ಹಾಗೂ ವಿವಿಐಪಿ ಪಾಸ್ ವ್ಯವಸ್ಥೆಯೂ ಇರಲಿದೆ ಎಂದು ಹೇಳಿದರು.

ಕಂಬಳದ ಜತೆಗೆ ದಕ್ಷಿಣ ಕನ್ನಡದ ಸಾಂಪ್ರದಾಯಿಕ ಆಹಾರ ಮೇಳವೂ ಆಯೋಜಿಸಲಾಗುವುದು. ವಿಜೇತ ಕೋಣಗಳಿಗೆ ಚಿನ್ನದ ಬಹುಮಾನ ನೀಡಲಾಗುತ್ತದೆ. ಕಾರ್ಯಕ್ರಮಕ್ಕೆ 5ರಿಂದ 8ಕೋಟಿ ರೂ. ವೆಚ್ಚವಾಗುವ ಸಾಧ್ಯತೆಯಿದ್ದು, ಪ್ರಾಯೋಜಕರ ಸಹಕಾರವನ್ನೂ ಪಡೆಯಲಾಗುತ್ತದೆ. ಕಾರ್ಯಕ್ರಮದ ವೇಳೆ ಯಾವುದೇ ಅವಘಡ ಸಂಭವಿಸದಂತೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಲಾಗುವುದು. ಕಂಬಳ ಕೋಣಗಳು ಹಾಗೂ ಸಾರ್ವಜನಿಕರಿಗೆ ಪ್ರತ್ಯೇಕ ಕುಡಿಯುವ ನೀರಿನ ವ್ಯವಸ್ಥೆಯನ್ನೂ ಕಲ್ಪಿಸಲಾಗುವುದು ಎಂದು ತಿಳಿಸಿದ್ದಾರೆ.

ಇನ್ನು ನಗರದ ಸಾತಗಳ್ಳಿ ವಿಟಿಯು ಕಾಲೇಜಿನ ಬಳಿಯ ಮೈಸೂರು ಅಭಿವೃದ್ಧಿ ಪ್ರಾಧಿಕಾರಕ್ಕೆ ಸೇರಿದ 23 ಎಕರೆ ವಿಶಾಲ ಜಾಗವನ್ನು ಕಂಬಳಕ್ಕೆ ಸೂಕ್ತ ಎಂದು ಪರಿಗಣಿಸಲಾಗಿದೆ. ದಸರಾ ಮಹೋತ್ಸವದಲ್ಲಿ ಈ ಬಾರಿ ಕಂಬಳ ಆಯೋಜಿಸುತ್ತಿರುವುದರಿಂದ ಪ್ರವಾಸಿಗರ ಸಂಖ್ಯೆ ದ್ವಿಗುಣಗೊಳ್ಳುವ ಸಾಧ್ಯತೆ ಇದ್ದು, ಇದರಿಂದ ನಗರದಲ್ಲಿ ಸಂಚಾರ ದಟ್ಟಣೆ ಏರ್ಪಟ್ಟು ಸಮಸ್ಯೆಯಾಗಲಿದೆ. ಈ ಹಿನ್ನೆಲೆ ನಗರದ ಮಧ್ಯದಲ್ಲಿರುವ ವಿಜಯನಗರದ ಬದಲಿಗೆ ರಿಂಗ್ ರಸ್ತೆಗೆ ಹೊಂದಿಕೊಂಡಂತಿರುವ ಸಾತಗಳ್ಳಿಯಲ್ಲಿನ ಎಂಡಿಎ ಜಾಗದಲ್ಲಿ ನಡೆಸಲು ಕಂಬಳ ಸಮಿತಿ ನಿರ್ಧರಿಸಿದೆ.

ಈ ಪ್ರದೇಶದಲ್ಲಿ ವಾಹನಗಳ ನಿಲುಗಡೆ ಹಾಗೂ ಏಕಕಾಲದಲ್ಲಿ ಒಂದು ಲಕ್ಷಕ್ಕೂ ಹೆಚ್ಚು ಮಂದಿ ಕಂಬಳ ವೀಕ್ಷಣೆ ಮಾಡಬಹುದಾಗಿದೆ. ಜತೆಗೆ ನಗರದ ಹೊರವಲಯದಲ್ಲಿರುವುದರಿಂದ ವಾಹನಗಳ ಸಂಚಾರಕ್ಕೆ ಅಷ್ಟೇನು ತೊಡಕಾಗುವುದಿಲ್ಲ. ಕಂಬಳ ವೀಕ್ಷಣೆಗೆ ಹೊರ ಭಾಗದಿಂದ ಬರುವವರು ನಗರಕ್ಕೆ ಪ್ರವೇಶ ಪಡೆಯದೇ ರಿಂಗ್ ರಸ್ತೆಯಲ್ಲೇ ಈ ಪ್ರದೇಶದ ತಲುಪುವುದರಿಂದ ದಸರಾ ಸಂದರ್ಭ ವಾಹನಗ ಸಂಚಾರಕ್ಕೆ ಸಮಸ್ಯೆಯಾಗುವುದಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಕಂಬಳ ನಡೆಸಲು ಕನಿಷ್ಠ 20 ಎಕರೆ ವಿಶಾಲ ಜಾಗದ ಅಗತ್ಯತೆ ಹಾಗೂ ಕಂಬಳ ಟ್ರ್ಯಾಕ್ ನಿರ್ಮಾಣಕ್ಕೆ ಮೂರು ತಿಂಗಳು ಸಮಯಾವಕಾಶ ಬೇಕಾಗುರುವುದರಿಂದ ಸಾತಗಳ್ಳಿ ಬಳಿಯ ಎಂಡಿಎ ಜಾಗದಲ್ಲಿ ಈಗಾಗಲೇ ಜಾಗವನ್ನು ಸ್ವಚ್ಛಗೊಳಿಸುವ ಕೆಲಸ ನಡೆಯುತ್ತಿದೆ. ಶುಕ್ರವಾರ ಮೂರು ಜೆಸಿಬಿಗಳಿಂದ ಜಾಗದಲ್ಲಿ ಬೆಳೆದಿದ್ದ ಗಿಡಗಂಟಿಗಳನ್ನು ತೆರವುಗೊಳಿಸಲಾಗುತ್ತಿದ್ದು, ಜಾಗವನ್ನು ಸಮತಟ್ಟು ಮಾಡಲಾಗುತ್ತಿದೆ.

ಮೈಸೂರು ಕಂಬಳ ಉತ್ಸವದಲ್ಲಿ ರೋಮಾಂಚನಕಾರಿ ಕೋಣಗಳ ಓಟದ ಸ್ಪರ್ಧೆಗೆ ಎರಡು ಟ್ರ್ಯಾಕ್ ನಿರ್ಮಿಸಲಾಗುತ್ತದೆ. 250 ಮೀಟರ್ ಉದ್ದ, 50 ಅಡಿ ಅಗಲದ ಟ್ರ್ಯಾಕ್ ನಿರ್ಮಿಸಲಾಗುತ್ತದೆ. ಆದರೆ, ಓಟಕ್ಕೆ 140ಮೀಟರ್ ಅಂತರವನ್ನು ನಿಗದಿ ಮಾಡಲಾಗುತ್ತದೆ. ಅಕ್ಕ-ಪಕ್ಕ ಇರುವ ಎರಡೂ ಟ್ರ್ಯಾಕ್‌ನಲ್ಲಿ ಏಕಕಾಲಕ್ಕೆ ಎರಡು ಜೋಡಿ ಕೋಣಗಳು ಓಡಿ ಗೆದ್ದ ಜೋಡಿ ಮುಂದಿನ ಸುತ್ತಿಗೆ ಪ್ರವೇಶ ಪಡೆಯಲಿವೆ.

ದಕ್ಷಿಣ ಕನ್ನಡದಲ್ಲಿ ನಡೆಸುವ ಮಾದರಿ ಹಾಗೂ ನಿಯಮವನ್ನು ಮೈಸೂರು ಕಂಬಳ ಉತ್ಸವಕ್ಕೂ ಅನ್ವಯವಾಗಲಿದ್ದು, 48 ಗಂಟೆ ಸತತ ಕಂಬಳ ಉತ್ಸವ ನಡೆಯಲಿದೆ. ನಿಗಧಿತ ದಿನಾಂಕದಂದು ಬೆಳಗ್ಗೆ 9ಗಂಟೆಗೆ ಉದ್ಘಾಟನೆಗೊಳ್ಳುವ ಕಂಬಳ ಉತ್ಸವ ಎರಡು ರಾತ್ರಿ, ಎರಡು ಹಗಲು ನಿರಂತರವಾಗಿ ನಡೆಯಲಿದೆ. ಹೊನಲು ಬೆಳಕಿನ ವ್ಯವಸ್ಥೆಯಲ್ಲಿ ಕಂಬಳ ನಡೆಸಲು ಉದ್ದೇಶಿಸಲಾಗಿದೆ.

ಸ್ಥಳ ವೀಕ್ಷಣೆ ವೇಳೆ ರಾಜ್ಯ ಕಂಬಳ ಸಮಿತಿಯ ಕಾರ್ಯದರ್ಶಿ ವಿಜಯ್ ಕುಮಾರ್, ಡಿಸಿಪಿಗಳಾದ ಹರ್ಷಂ ಪ್ರಿಯಂವದಾ, ಸುಂದರರಾಜ್, ಕನ್ನಡ ಮತ್ತು ಸಂಸ್ಕೃತಿ ಇಲಾಖೆಯ ಅಧಿಕಾರಿ ಸುದರ್ಶನ್ ಸೇರಿದಂತೆ ಹಲವರು ಉಪಸ್ಥಿತರಿದ್ದರು.

 

 

 

admin
the authoradmin

Leave a Reply

Translate to any language you want