ಮಹಿಳೆ ತನ್ನ ಕುಟುಂಬದಿಂದ ಆರಂಭವಾಗಿ ಎಲ್ಲ ಕ್ಷೇತ್ರದಲ್ಲಿಯೂ ತನ್ನ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬಂದಿದ್ದು ಸಶಕ್ತಳಾಗಿ ಬೆಳೆಯುತ್ತಿದ್ದಾಳೆ… ಇದೀಗ ನಾರಿಶಕ್ತಿ ವಂದನಾ ಮಸೂದೆ ಮಂಡನೆಯಾಗುತ್ತಿದ್ದು, ಅದರಂತೆ ಶೇ.33ರಷ್ಟು ಮೀಸಲಾತಿ ದೊರೆಯಲಿದೆ. ಇದರಿಂದ ದೇಶದ ಆಡಳಿತದಲ್ಲಿಯೂ ಆಕೆಯ ಜವಬ್ದಾರಿ ಇನ್ನಷ್ಟು ಹೆಚ್ಚಾಗಲಿದೆ… ಇದು ಸಂತಸದ ವಿಚಾರವಾಗಿದೆ… ಹೆಣ್ಣಿನ ಮಹತ್ವದ ಕುರಿತಂತೆ ಇಲ್ಲಿ ಬರಹಗಾರರಾದ ಮೈ.ನಾ.ಲೋಕೇಶ್ ಅವರು ಬರೆದಿದ್ದಾರೆ.
ತಾ ಮಾಡಿದ ಹೆಣ್ಣು ತನ್ನ ತಲೆಯನ್ನೇರಿತ್ತು.!
ತಾ ಮಾಡಿದ ಹೆಣ್ಣು ತನ್ನ ತೊಡೆಯನ್ನೇರಿತ್ತು!
ತಾ ಮಾಡಿದ ಹೆಣ್ಣು ಬ್ರಹ್ಮನ ನಾಲಿಗೆಯನ್ನೇರಿತ್ತು!
ತಾ ಮಾಡಿದ ಹೆಣ್ಣು, ನಾರಾಯಣನ ಎದೆಯನ್ನೇರಿತ್ತು.
–—ಬಸವಣ್ಣ
ಜಗಜ್ಯೋತಿ ಬಸವೇಶ್ವರರು ತಮ್ಮ ವಚನದಲ್ಲಿ, ಪುರಾಣದ ದೃಷ್ಟಾಂತದೊಂದಿಗೆ ಹೆಣ್ಣಿನ ಮಹತ್ವವನ್ನು ಜಗತ್ತಿಗೆ ಸಾರುತ್ತಾರೆ. ಸರಸ್ವತಿ ಬ್ರಹ್ಮನ ನಾಲಿಗೆಯಲ್ಲಿ.. ಲಕ್ಷ್ಮೀ ನಾರಾಯಣನ ವಕ್ಷಸ್ಥಳದಲ್ಲಿ ನೆಲೆಸಿ ಪರಮಾತ್ಮನಿಗೂ ಶಕ್ತಿ.. ಸ್ಪೂರ್ತಿ ತುಂಬುವಳು ಹೆಣ್ಣು ಎಂದು ಆಕೆಯ ಶ್ರೇಷ್ಠತೆಯ,, ಧರ್ಮದಲ್ಲಿ ಸಮಾಜದಲ್ಲಿ ಆಕೆ ಗಳಿಸಿರುವ ಸರ್ವೊಚ್ಚ ಸ್ಥಾನದ ಅರಿವಾಗುತ್ತದೆ.

ಕುಟುಂಬಕ್ಕೆ ಆಧಾರವಾಗಿ ದೇಶ ನಡೆಸುವ ತನಕ ಎಲ್ಲ ಕ್ಷೇತ್ರಗಳಲ್ಲಿ ಎಲ್ಲ ಜವಬ್ದಾರಿಯನ್ನು ಅಚ್ಚುಕಟ್ಟಾಗಿ ನಿರ್ವಹಿಸುತ್ತಾ ಬರುತ್ತಿರುವ ಹೆಣ್ಣು ರಾಜಕೀಯವಾಗಿ ಸಶಕ್ತಳಾಗುತ್ತಿದ್ದಾಳೆ. ಆಡಳಿತದಲ್ಲಿ ಇನ್ನಷ್ಟು ತೊಡಗಿಸಿಕೊಳ್ಳಬೇಕು ಎಂಬ ಕಾರಣಕ್ಕಾಗಿ ಇದೀಗ ನಾರಿಶಕ್ತಿ ವಂದನಾ ಮಸೂದೆ ಜಾರಿಯಾಗುತ್ತಿದ್ದು, ಇದರಿಂದ ರಾಜಕೀಯ ವಲಯದಲ್ಲಿ ಶೇ.33ರಷ್ಟು ಮೀಸಲಾತಿ ಸಿಗುವುದರೊಂದಿಗೆ ವಿಧಾನಸಭೆ, ಲೋಕಸಭೆಗಳಲ್ಲಿ ಪಾರುಪತ್ಯೆ ಸಾಧಿಸಲಿದ್ದಾಳೆ.. ಇದೊಂದು ಐತಿಹಾಸಿಕ ವಿಚಾರವಾಗಲಿದೆ.
ಭಾರತದ ಸಂಸ್ಕೃತಿಯಲ್ಲಿ ಹೆಣ್ಣಿಗೆ ಪೂಜನೀಯ ಸ್ಥಾನವಿದೆ. ಆದರೂ ಆಕೆಯ ಮೇಲೆ ಅಲ್ಲಿಂದ ಇಲ್ಲಿವರೆಗೆ ಒಂದಲ್ಲ ಒಂದು ಕಾರಣಕ್ಕೆ ದೌರ್ಜನ್ಯಗಳು ನಡೆಯುತ್ತಲೇ ಬರುತ್ತಿವೆ. ಪುರುಷ ಪ್ರಧಾನ ಸಮಾಜದಲ್ಲಿ ಕೆಲವೊಂದು ವಿಚಾರಗಳಲ್ಲಿ ಆಕೆಯ ಸ್ವಾತಂತ್ರ್ಯವನ್ನು ಕಸಿಯಲಾಗಿದೆ ಎಂಬುದನ್ನು ಒಪ್ಪಿಕೊಳ್ಳಬೇಕಾಗಿದೆ. ಹೀಗಾಗಿಯೇ ಇವತ್ತಿನ ಕಾಲಘಟ್ಟದಲ್ಲಿಯೂ ಎಲ್ಲಾ ಮಹಿಳೆಯರಿಗೆ, ಹುಡುಗಿಯರಿಗೆ, ಹಕ್ಕು ಗಳು, ಸಮಾನತೆ, ಸಬಲೀಕರಣ ಎಂಬ ಧ್ಯೇಯವಾಕ್ಯದಡಿ ಹೋರಾಟ ಮಾಡುವಂತಾಗಿದೆ.

ಸದ್ಯ 2026ರ ವರ್ಷದ ಧ್ಯೇಯ ವಾಕ್ಯ, ‘GIVE TO GAIN” ‘ಪರಸ್ಪರ ಸಂಬಂಧದ ಶಕ್ತಿ ಯನ್ನು ಎತ್ತಿ ಹಿಡಿಯುವುದು’ ಎಂಬುದು ಸಮಾಧಾನ ತಂದಿದೆ. ಮಹಿಳೆಯ ಸಾಮಾಜಿಕ, ಆರ್ಥಿಕ, ಸಾಂಸ್ಕೃತಿಕ ಹಾಗೂ ರಾಜಕೀಯ ಸಾಧನೆ ಗಳನ್ನು ಗೌರವಿಸಲು ಹಾಗೂ ಲಿಂಗ ಸಮಾನತೆ ಗಾಗಿ ಜಾಗೃತಿ ಮೂಡಿಸುವುದು ಕೇವಲ ಮಹಿಳಾದಿನಾಚರಣೆಗೆ ಸೀಮಿತವಾಗದೆ ವರ್ಷಪೂರ್ತಿ ಕಾರ್ಯರೂಪದಲ್ಲಿರ ಬೇಕಾಗುತ್ತದೆ. ಮಹಿಳಾ ಸಬಲೀಕರಣ, ಹಕ್ಕುಗಳ ರಕ್ಷಣೆ, ದೌರ್ಜನ್ಯ ತಡೆ ಗಟ್ಟುವಿಕೆ ಮತ್ತು ಸಮಾನ ಅವಕಾಶಗಳನ್ನು ಉತ್ತೇಜಿಸುವ ಮೂಲಕ ಸಮಾಜದಲ್ಲಿ ಧನಾತ್ಮಕ ಬದಲಾವಣೆ ತರುವುದು ನಿತ್ಯದ ಕಾರ್ಯವಾಗಬೇಕಾಗಿದೆ.
ಮಹಿಳೆ ಕುಟುಂಬದ, ಸಮಾಜದ ಬೆನ್ನೆಲುಬಾಗಿ ಅಭಿವೃದ್ಧಿ, ಪೋಷಣೆ, ಸಂಸ್ಕೃತಿಯಲ್ಲಿ ಮಹತ್ವದ ಪಾತ್ರ ವಹಿಸುತ್ತಾಳೆ. ತಾಯಿಯಾಗಿ, ಪತ್ನಿಯಾಗಿ, ಸಹೋದರಿಯಾಗಿ, ಪುತ್ರಿ ಯಾಗಿ ಕುಟುಂಬದ ಬೆಸುಗೆಯನ್ನು, ಕಾಳಜಿಯನ್ನು, ಪೋಷಣೆಯನ್ನು ಒದಗಿಸುವಲ್ಲಿ ಮಹಿಳೆಯ ಪಾತ್ರ ಹಿರಿದಾಗಿದೆ. ಶೈಕ್ಷಣಿಕವಾಗಿ, ಔದ್ಯೋಗಿಕವಾಗಿ ಸ್ವಾವಲಂಬಿಗಳಾಗಿ ದೇಶದ ಆರ್ಥಿಕ.. ವಿಜ್ಞಾನ- ತಂತ್ರಜ್ಞಾನ, ರಕ್ಷಣಾ ಕ್ಷೇತ್ರದಲ್ಲಿ ಸಹ ಪಾರಮ್ಯ ಮೆರೆಯುವ ಮೂಲಕ ,ದೇಶದ ಪ್ರಗತಿಗೆ ಬಲ ತುಂಬುತ್ತಿರುವುದು ಆಶಾದಾಯಕ ಬೆಳವಣಿಗೆಯಾಗಿದೆ. ಇದೀಗ ರಾಜಕೀಯದಲ್ಲಿ ಆಕೆಗೆ ಶಕ್ತಿ ತುಂಬುವ ಸಲುವಾಗಿ ಕೇಂದ್ರ ಸರ್ಕಾರ ಶೇ.33ರಷ್ಟು ಮೀಸಲಾತಿ ನೀಡುತ್ತಿರುವುದು ಆಕೆಗೆ ಇನ್ನಷ್ಟು ಶಕ್ತಿ ತುಂಬುವಂತಾಗಿದೆ…









