ನವದೆಹಲಿ: ನೀಟ್ ಪರೀಕ್ಷೆ ಬರೆದು ಬಂದ ವಿದ್ಯಾರ್ಥಿಗಳು ಮತ್ತೆ ಪರೀಕ್ಷೆ ಬರೆಯಬೇಕಾದ ಪ್ರಮೇಯ ಒದಗಿ ಬಂದಿದೆ. ಕಾರಣ ಮೇ.3ರಂದು ಬರೆದ ನೀಟ್ ಯುಜಿ ಪರೀಕ್ಷೆಯನ್ನು ರಾಷ್ಟ್ರೀಯ ಪರೀಕ್ಷಾ ಏಜೆನ್ಸಿ ರದ್ದುಗೊಳಿಸಿ ಆದೇಶ ಹೊರಡಿಸಿದೆ. ಇದಕ್ಕೆ ಪ್ರಶ್ನೆ ಪತ್ರಿಕೆ ಸೋರಿಕೆಯೇ ಕಾರಣ ಎಂದು ಹೇಳಲಾಗಿದೆ.
ಪರೀಕ್ಷೆ ಬರೆದು ಬಂದು ತಮಗೆಷ್ಟು ಅಂಕ ಬರುತ್ತದೆ? ಎಷ್ಟನೇ ಸ್ಥಾನ ಸಿಗುತ್ತದೆ ಎಂದೆಲ್ಲ ಕನಸು ಕಾಣುತ್ತಿದ್ದ ವಿದ್ಯಾರ್ಥಿಗಳಿಗೆ ಈ ಸುದ್ದಿ ಶಾಕ್ ನೀಡಿರುವುದಂತು ನಿಜ. ಆದರೆ ವಿದ್ಯಾರ್ಥಿಗಳು ಇದರಿಂದ ಧೈರ್ಯಗುಂದುವ ಅಗತ್ಯವಿಲ್ಲ. ಎನ್‌ಟಿಎ ಪರೀಕ್ಷೆಯನ್ನು ರದ್ದುಗೊಳಿಸಿದ್ದರೂ ಶೀಘ್ರವೇ ಬದಲಿ ದಿನಾಂಕವನ್ನು ತಿಳಿಸುವುದಾಗಿ ರಾಷ್ಟ್ರೀಯ ಪರೀಕ್ಷಾ ಮಂಡಳಿ ಹೇಳಿದೆ.
ಇಷ್ಟಕ್ಕೂ ಆಗಿದ್ದೇನು ಎಂಬುದನ್ನು ನೋಡಿದ್ದೇ ಆದರೆ, ರಾಜಸ್ಥಾನದ ಸಿಕಾರ್‌ನಲ್ಲಿ ಮೇ 1 ರಂದೇ ‘ಊಹೆ ಪತ್ರಿಕೆ’ ರೂಪದಲ್ಲಿ ಪ್ರಶ್ನೆಗಳು ಪ್ರಸಾರವಾಗಿದ್ದವು. ಈ ಊಹೆ ಪತ್ರಿಕೆಯಲ್ಲಿದ್ದ ಸುಮಾರು 100ಕ್ಕೂ ಹೆಚ್ಚು ಜೀವಶಾಸ್ತ್ರ ಮತ್ತು ರಸಾಯನಶಾಸ್ತ್ರದ ಪ್ರಶ್ನೆಗಳು ಅಸಲಿ ಪ್ರಶ್ನೆ ಪತ್ರಿಕೆಗೆ ಹೋಲಿಕೆಯಾಗಿದೆ ಎಂಬ ಆರೋಪ ಕೇಳಿ ಬಂದಿದ್ದರಿಂದ ಪರೀಕ್ಷೆಯನ್ನು ರದ್ದು ಮಾಡಿದ್ದಾರೆ.
ಈ ಕುರಿತಂತೆ ರಾಜಸ್ಥಾನದ ವಿಶೇಷ ಕಾರ್ಯಾಚರಣೆ ತಂಡವು (SOG) ಈ ಆಪಾದಿತ ಅವ್ಯವಹಾರಗಳ ಕುರಿತು ತನಿಖೆ ಆರಂಭಿಸಿದ್ದು, ಸೋರಿಕೆಯಾದ ಮಾಹಿತಿ ಸಿಕ್ಕಿದ ಕೂಡಲೇ NTA ಇದನ್ನು ಕೇಂದ್ರ ತನಿಖಾ ಸಂಸ್ಥೆಗಳಿಗೆ ವರ್ಗಾಯಿಸಿದೆ. ಪರೀಕ್ಷೆಯಲ್ಲಿ ಗೋಲ್ ಮಾಲ್ ಪ್ರಕರಣಗಳು ಹೊಸದೇನಲ್ಲ. 2024 ಮತ್ತು 2025 ರಲ್ಲೂ ಇಂತಹದೇ ಆರೋಪಗಳು ಕೇಳಿಬಂದಿದ್ದವು. 2024ರ ಪ್ರಕರಣದಲ್ಲಿ ಸಿಬಿಐ ಪಾಟ್ನಾ ಮತ್ತು ಹಜಾರಿಬಾಗ್‌ನಲ್ಲಿ ಕೆಲವು ಆರೋಪಿಗಳನ್ನು ಬಂಧಿಸಿದ್ದನ್ನು ನಾವು ಸ್ಮರಿಸಬಹುದಾಗಿದೆ.








