ಕುರ್ಚಿ ಕಿತ್ತಾಟದಲ್ಲಿ ನಾಯಕರು ಜನರ ಸಮಸ್ಯೆಗಳನ್ನು ಮರೆತಿದ್ದಾರೆ: ಯದುವೀರ್
ಚಿಕ್ಕತ್ತೂರಲ್ಲಿ ಬಿಜೆಪಿ ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮ

ಕುಶಾಲನಗರ(ರಘುಹೆಬ್ಬಾಲೆ): ರಾಜ್ಯದಲ್ಲಿ ಅಧಿಕಾರಕ್ಕಾಗಿ ಕುರ್ಚಿ ಕಿತ್ತಾಟದಲ್ಲಿ ನಾಯಕರು ನಿರತರಾಗಿದ್ದಾರೆ. ಸರ್ಕಾರ ಜನರ ಜ್ವಲಂತ ಸಮಸ್ಯೆಗಳನ್ನು ಮರೆತಿದೆ. ಈ ಸರ್ಕಾರಕ್ಕೆ ಪರ್ಯಾಯವಾಗಿ ಜನ ಸೇವೆಗೆ ಬಿಜೆಪಿ ಅನಿವಾರ್ಯವಾಗಿದೆ ಎಂದು ಮೈಸೂರು-ಕೊಡಗು ಲೋಕಸಭಾ ಸದಸ್ಯ ಯದುವೀರ್ ಕೃಷ್ಣದತ್ತ ಒಡೆಯರ್ ಹೇಳಿದರು.
ಸಮೀಪದ ಕೂಡುಮಂಗಳೂರು ಗ್ರಾಮ ಪಂಚಾಯತಿ ವ್ಯಾಪ್ತಿಯ ಚಿಕ್ಕತ್ತೂರಿನ ಕೂರ್ಗ್ ನೇಚರ್ ಬ್ಲಿಫ್ ರೆಸಾರ್ಟ್ ಸಭಾಂಗಣದಲ್ಲಿ ಪಂಡಿತ್ ದೀನದಯಾಳ್ ಉಪಾಧ್ಯಾಯ ಪ್ರಶಿಕ್ಷಣ ಮಹಾಭಿಯಾನ 2026 ರ ಅಂಗವಾಗಿ ಏರ್ಪಡಿಸಿದ್ದ ಕೊಡಗು ಜಿಲ್ಲಾ ಮಟ್ಟದ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
ಬಿಜೆಪಿ ಕಾರ್ಯಕರ್ತರು, ನಾವೆಲ್ಲರೂ ಶ್ರಮವಹಿಸಿ ಮುಂದಿನ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ತರಲು ಕಾರ್ಯನಿರ್ವಹಿಸೋಣ. ಕೊಡಗು ಜಿಲ್ಲೆಯಲ್ಲಿ ಕೂಡ ಮತ್ತೆ ಬಿಜೆಪಿ ವೈಭವ ಮರುಕಳಿಸುವಂತಾಗಬೇಕು. ಭಾರತೀಯ ಜನತಾ ಪಕ್ಷಕ್ಕೆ ಅಧಿಕಾರ ಗಳಿಸುವುದೇ ಮುಖ್ಯ ಉದ್ದೇಶವಲ್ಲ. ಉತ್ತಮ ಸೇವೆ ಸಲ್ಲಿಸಲು ಅಧಿಕಾರ ಎಂಬುದು ಒಂದು ಸಾಧನವಷ್ಟೆ ಎಂದು ಹೇಳಿದರು.
ಜಿಲ್ಲಾಮಟ್ಟದಿಂದ ಹಿಡಿದು ರಾಷ್ಟ್ರಮಟ್ಟದವರೆಗೆ ಪ್ರತಿ ಹಂತದಲ್ಲಿ ಪ್ರಶಿಕ್ಷಣ ವರ್ಗ ಕಾರ್ಯಕ್ರಮ ನಡೆಯಲಿದೆ. ಕಾರ್ಯಕರ್ತರ ವ್ಯಕ್ತಿತ್ವ ರೂಪಿಸಲು, ಶಿಸ್ತು ಮೂಡಿಸಲು ಜವಬ್ದಾರಿಯುತ ಸ್ಥಾನದಲ್ಲಿರುವವರ ಮೂಲಕ ಸಹಕಾರಿಯಾಗಲಿದೆ. ನಿರ್ದಿಷ್ಟ ಗುರಿ ಹೊಂದಿರುವ ನಮ್ಮ ಪಕ್ಷ ಇತರೆ ಪಕ್ಷಗಳಿಗಿಂತ ಭಿನ್ನವಾಗಿದೆ. ಕೇವಲ ಅಧಿಕಾರ ಗಳಿಸುವುದು ಮಾತ್ರ ನಮ್ಮ ಉದ್ದೇಶವಲ್ಲ. ಉತ್ತಮ ಸೇವೆ ಸಲ್ಲಿಸಲು ಅಧಿಕಾರ ನಮಗೆ ಒಂದು ಸಾಧನವಷ್ಟೆ.

ಪಕ್ಷದ ಮೂಲ ತತ್ವ ಸಿದ್ದಾಂತ, ಪರಂಪರೆ ಯನ್ನು ಇಂದಿನ ಆಧುನಿಕ ಕಾಲಘಟ್ಟದ ಕಾರ್ಯಕರ್ತರಿಗೆ ಸ್ಮರಿಸಿ ಪಕ್ಷದೊಳಗೆ ಯಾವ ರೀತಿ ಕಾರ್ಯನಿರ್ವಹಿಸಬೇಕು, ಜನರಿಗೆ ಹೇಗೆ ಸೇವೆ ಸಲ್ಲಿಸಬೇಕು ಎಂಬುದನ್ನು ತಿಳಿಸಲು ಪ್ರಶಿಕ್ಷಣ ಕಾರ್ಯಕ್ರಮದ ಮೂಲಕ ಸಾಧ್ಯ ಎಂದರು.
ಪಂಡಿತ್ ದೀನ್ ದಯಾಳ್ ಉಪಾಧ್ಯಾಯರ ಸ್ಪೂರ್ತಿಯಿಂದ ಈ ರೀತಿಯ ಪ್ರಶಿಕ್ಷಣ ಶಿಬಿರಗಳು ನಡೆದು ಯಶಸ್ವಿಯಾದರೆ , ಕರ್ನಾಟಕದ ಮುಂಬರುವ ಚುನಾವಣೆಗಳಲ್ಲಿ ಭಾರತೀಯ ಜನತಾ ಪಕ್ಷ ಕೊಡಗು ಜಿಲ್ಲೆಯು ಸೇರಿದಂತೆ ರಾಜ್ಯದ ಎಲ್ಲಾ ಕಡೆ ಉತ್ತಮ ಫಲಿತಾಂಶವನ್ನು ಪಡೆಯಬಹುದು ಎಂದರು.
ಶಾಸಕ ಸಿ.ಟಿ.ರವಿ ಮಾತನಾಡಿ,ಭಾರತೀಯ ಜನತಾ ಪಕ್ಷ ಕಾರ್ಯಕರ್ತರ ಅಸ್ತಿತ್ವದ ಮೇಲೆ ಗಟ್ಟಿಯಾಗಿ ನಿಂತಿರುವ ಪಕ್ಷ. ಇಲ್ಲಿ ಕಾರ್ಯಕರ್ತರೇ ಪಕ್ಷದ ಮಾಲೀಕರು. ಬೇರೆ ಪಕ್ಷಗಳಂತೆ ಬಿಜೆಪಿ ಪಕ್ಷಕ್ಕೆ ಮಾಲೀಕರಿಲ್ಲ. ಬಿಜೆಪಿಯಲ್ಲಿ ಕಾರ್ಯಕರ್ತರೇ ಪಕ್ಷದ ಮಾಲೀಕರು. ಕಾರ್ಯಕರ್ತರನ್ನೇ ನಾಯಕನ್ನಾಗಿ ಬೆಳೆಸುವ ವ್ಯವಸ್ಥೆಯನ್ನು ನಂಬಿರುವ ರಾಜಕೀಯ ಪಕ್ಷ. ಕಾರ್ಯಕರ್ತರು ಎಷ್ಟೇ ಹಿರಿಯರಾದರೂ, ಅನುಭವಿಗಳಾದರೂ ಕೂಡ ಕಾಲಕಾಲಕ್ಕೆ ಅವರನ್ನು ಮತ್ತಷ್ಟು ಹುರಿಗೊಳಿಸುವ ಅಗತ್ಯವಿದೆ. ಅದರ ಅಂಗವಾಗಿ ಈ ಪ್ರಶಿಕ್ಷಣ ಕಾರ್ಯಕ್ರಮ ಗಳನ್ನು ಹಮ್ಮಿಕೊಳ್ಳಲಾಗುತ್ತಿದೆ.
ಇಲ್ಲಿ ಔಪಚಾರಿಕವಾಗಿ, ಅನೌಪಚಾರಿಕವಾಗಿ ಹಲವು ವಿಚಾರಗಳನ್ನು ತಿಳಿದುಕೊಳ್ಳಲು ಸಾಧ್ಯವಿದೆ. ವೈಯಕ್ತಿಕ ಅಭ್ಯಾಸಗಳನ್ನು, ವ್ಯಕ್ತಿಗತ ಸ್ವಭಾವಗಳನ್ನು ಪಕ್ಷದ ನೆಲೆಗಟ್ಟಿನಲ್ಲಿ ಹೊಂದಾಣಿಕೆ ಮಾಡಿಕೊಳ್ಳುವ ಅನಿವಾರ್ಯತೆ ಇದೆ ಎಂದರು.
ಕೊಡಗು ಜಿಲ್ಲಾ ಬಿಜೆಪಿ ಘಟಕದ ಅಧ್ಯಕ್ಷ ನಾಪಂಡ ರವಿ ಕಾಳಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ, ಪ್ರಶಿಕ್ಷಣ ಕಾರ್ಯಕ್ರಮದ ರೂಪುರೇಷೆ ಕುರಿತು ವಿವರಿಸಿದರು.
ಈ ಸಂದರ್ಭ ಮಾಜಿ ಶಾಸಕ ಎಂ.ಪಿ. ಅಪ್ಪಚ್ಚು ರಂಜನ್, ವಿಧಾನ ಪರಿಷತ್ ಮಾಜಿ ಸದಸ್ಯ ಎಂ.ಪಿ.ಸುನಿಲ್ ಸುಬ್ರಮಣಿ, ಕೊಡಗು ಬಿಜೆಪಿ ಮಾಜಿ ಜಿಲ್ಲಾಧ್ಯಕ್ಷ ರಾಬಿನ್ ದೇವಯ್ಯ, ದಕ್ಷಿಣ ಕನ್ನಡ ಜಿಲ್ಲೆಯ ಪ್ರಭಾರಿ ಬಿ.ಬಿ. ಭಾರತೀಶ್, ಕಾರ್ಯಕ್ರಮ ಸಂಯೋಜಕ ಮನು ಮುತ್ತಪ್ಪ, ಮೈಸೂರು ವಿಭಾಗದ ಸಂಯೋಜಕ ರಾಜೇಶ್, ಜಿಲ್ಲಾ ಉಪಾಧ್ಯಕ್ಷ ವಿ.ಕೆ. ಲೋಕೇಶ್, ಪ್ರಧಾನ ಕಾರ್ಯದರ್ಶಿ ಮಹೇಶ್ ಜೈನಿ, ಪ್ರಶಿಕ್ಷಣ ಶಿಬಿರದ ಜಿಲ್ಲಾ ಸಂಚಾಲಕಿ ರೂಪ ಸತೀಶ್,
ಮಹಿಳಾ ಮೋರ್ಚಾ ಅಧ್ಯಕ್ಷ ಅನಿತಾ ಪೂವಯ್ಯ,ದಕ್ಷಿಣ ಕನ್ನಡ ಜಿಲ್ಲಾ ಪ್ರಭಾರಿ ಬಿ.ಬಿ. ಭಾರತೀಶ್, ಜಿಲ್ಲಾ ಸಮಿತಿಯ ನಲ್ಲಿರ ಚಲನ್,ಅರುಣ್ ಕುಮಾರ್. ಬಿ.ಕೆ., ಲೋಕೇಶ್ವರಿ ಗೋಪಾಲ್, ಮೈಸೂರಿನ ಫನೀಶ್, ರಾಜೇಶ್, ಸ್ವಾಮಿ,ಫಣೀಶ್, ಕಾರ್ಯಾಗಾರದ ಪ್ರಬಂಧಕರಾದ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಕಾರ್ಯದರ್ಶಿ ರಕ್ಷಿತ್ ಮಾವಜಿ, ಸುಮನ್ ಗೌಡ,ಪ್ರವೀಣ್ ಮಲ್ಲಜಿರ, ನವನೀತ್ ಪೊನ್ನೆಟ್ಟಿ, ರಾಮನಾಥನ್ ಮತ್ತಿತರರು ಪಾಲ್ಗೊಂಡಿದ್ದರು.







