ArticlesLatest

ನೆನಪಿರಲಿ… ‘ಒಂದು ಊಟದ ಫಲ’ ಜೀವನದಲ್ಲಿ ದೊಡ್ಡ ಪ್ರತಿಫಲ ಕೊಡುತ್ತದೆ..   

ಇದು ಬರೀ ಮಕ್ಕಳ ಕಥೆಯಲ್ಲ… ಜೀವನದ ಪಾಠ!

ಒಂದು ಸಣ್ಣ ಹಳ್ಳಿಯಲ್ಲಿ ರಾಜು ಎಂಬ ಹುಡುಗ ತನ್ನ ತಾಯಿ ತಂದೆಯರ ಜೊತೆ ವಾಸಿಸುತ್ತಿದ್ದ. ಅವರದ್ದು ತುಂಬಾ ಬಡತನದ ಕುಟುಂಬವಾಗಿತ್ತು. ರಾಜುವಿನ ತಂದೆ ಕೂಲಿ ಕೆಲಸ ಮಾಡುತ್ತಿದ್ದರು. ಆದರೆ ಪ್ರತಿದಿನ ಅವರಿಗೆ ಕೆಲಸ ಸಿಗುತಿರಲಿಲ್ಲ. ಕೆಲವು ದಿನ ಮನೆ ಖರ್ಚಿಗೆ ಹಣವೇ ಸಿಗುತ್ತಿರಲಿಲ್ಲ. ಆ ದಿನಗಳಲ್ಲಿ ಮನೆಯಲ್ಲಿ ಒಂದು ಹೊತ್ತಿನ ಊಟಕ್ಕೂ ಕೂಡ ಕಷ್ಟ ಪಡಬೇಕಾಗಿತ್ತು ಕೆಲವೊಂದು ದಿನ ಹಸಿವಿನಿಂದಲೇ ಮಲಗಬೇಕಾಗುತ್ತಿತ್ತು.

ರಾಜು ಓದಲು ತುಂಬಾ ಆಸೆ ಪಟ್ಟು ಶಾಲೆಗೆ ಹೋಗುತ್ತಿದ್ದ. ಆದರೆ ಮನೆಯಲ್ಲಿನ ಬಡತನದಿಂದ ಓದುವುದು ಅವನಿಗೆ ಕಷ್ಟವಾಗುತ್ತಿತ್ತು. ಒಂದು ದಿನ ಬೆಳಗ್ಗೆ ಅವನು ಊಟ ಮಾಡದೆ ಶಾಲೆಗೆ ಹೋದ. ಮಧ್ಯಾಹ್ನಕ್ಕೆ ಅವನಿಗೆ ತುಂಬಾ ಹಸಿವು ಆಯಿತು. ಸ್ನೇಹಿತರು ತಮ್ಮ ತಮ್ಮ ಊಟ ತಿನ್ನುತ್ತಿದ್ದರು. ರಾಜು ಅವರ ಕಡೆ ನೋಡುತ್ತಿದ್ದ ಆದರೆ ಕೇಳಲು ಅವನಿಗೆ ನಾಚಿಕೆಯಾಯಿತು.

ಶಾಲೆ ಮುಗಿದು ಮನೆಗೆ ಬರುತ್ತಿದ್ದಾಗ ಅವನಿಗೆ ತಲೆ ಸುತ್ತುವಂತಾಯಿತು. ತುಂಬಾ ದುರ್ಬಲವಾಗಿ ನಡೆದುಕೊಂಡು ಬರುತ್ತಿದ್ದ. ಅಷ್ಟರಲ್ಲಿ ಅವನು ಒಂದು ದೊಡ್ಡ ಮನೆಯ ಮುಂದೆ ಬಂದ. ಆ ಮನೆಯೊಳಗಿಂದ ಬಿಸಿ ಬಿಸಿ ಅನ್ನದ ವಾಸನೆ ಬರುತ್ತಿತ್ತು. ಆ ವಾಸನೆ ಬಂದಾಗ ರಾಜುಗೆ ಇನ್ನು ಹೆಚ್ಚು ಹಸಿವು ಆಯಿತು. ಅವನು ಸ್ವಲ್ಪ ಹೊತ್ತು ಯೋಚಿಸಿದ ಊಟ ಕೇಳಬೇಕಾ? ಬೇಡವಾ? ಅವರು ಬೈದರೆ? ಆದರೂ ಹಸಿವು ತುಂಬಾ ಹೆಚ್ಚಾಗಿದ್ದರಿಂದ ಧೈರ್ಯ ಮಾಡಿ ಬಾಗಿಲು ತಟ್ಟಿದ.

ಬಾಗಿಲು ತೆರೆದಿದ್ದು ಒಂದು ವಯಸ್ಸಾದ ಅಜ್ಜಿ, ಅವಳು ಕೇಳಿದಳು ನೀನು ಯಾರು ಮಗನೇ? ಏನು ಬೇಕು? ರಾಜು ನಾಚಿಕೆಯಿಂದ ತಲೆತಗ್ಗಿಸಿ ಅಜ್ಜಿ ನನಗೆ ತುಂಬಾ ಹಸಿವು ಸ್ವಲ್ಪ ಊಟ ಕೊಡುತ್ತೀರಾ? ಎಂದು ನಿಧಾನವಾಗಿ ಕೇಳಿದ. ಅಜ್ಜಿ ಸ್ವಲ್ಪ ಹೊತ್ತು ಅವನ ಮುಖ ನೋಡಿದಳು. ಅವನ ಮುಖ ಕಣ್ಣುಗಳಲ್ಲಿ ಹಸಿವು ಮತ್ತು ಬೇಜಾರು ಕಂಡಿತು. ಅವಳು ತಕ್ಷಣ ಅವನನ್ನು ಒಳಗೆ ಕರೆದು ಕೂರಿಸಿದಳು.

ಬಿಸಿ ಬಿಸಿ ಅನ್ನ ಸಾರು ಪಲ್ಯ ಎಲ್ಲವನ್ನು ಹಾಕಿ ಕೊಟ್ಟಳು. ರಾಜು  ತುಂಬಾ ದಿನಗಳ ನಂತರ ಹೊಟ್ಟೆ ತುಂಬಾ ಊಟ ಮಾಡಿದ. ಊಟ ಮಾಡುತ್ತಿದ್ದಾಗ ಅವನ ಕಣ್ಣಲ್ಲಿ ನೀರು ಬಂತು. ಅಜ್ಜಿ ಕೇಳಿದಳು ಯಾಕೆ ಅಳುತ್ತಿದ್ದೀಯ ಮಗನೇ? ರಾಜು ಹೇಳಿದ ಅಜ್ಜಿ ನಾನು ನಿಮಗೆ ಏನು ಕೊಡಲಿ? ನನ್ನ ಬಳಿ ಏನೂ ಇಲ್ಲ ಆದರೆ ನೀವು ನನಗೆ ಊಟ ಕೊಟ್ಟಿದ್ದೀರಿ. ಅಜ್ಜಿ ಮೃದುವಾಗಿ ನಗುತ್ತಾ ಹೇಳಿದಳು ನನಗೆ ಏನು ಬೇಡ ಮಗನೇ, ನೀನು ಚೆನ್ನಾಗಿ ಓದಿ ಒಳ್ಳೆಯವನಾಗು ಅದೇ ನನಗೆ ದೊಡ್ಡ ಪ್ರತಿಫಲ.

ಆ ದಿನ ರಾಜು ಮನಸಿನಲ್ಲಿ ಒಂದು ಮಾತು ತೀರ್ಮಾನ ಮಾಡಿಕೊಂಡ. ನಾನು ದೊಡ್ಡವನಾದ ಮೇಲೆ ಈ ಉಪಕಾರ ಮರೆಯಲ್ಲ ಎಂದು. ಕಾಲ ಕಳೆಯಿತು. ರಾಜು ತುಂಬಾ ಕಷ್ಟಪಟ್ಟು ಓದಿದ. ಹಸಿವು ಬಡತನ ಎಲ್ಲವನ್ನು ಸಹಿಸಿಕೊಂಡು ಓದಿದನು. ಅವನಿಗೆ ಒಳ್ಳೆಯ ಕೆಲಸ ಸಿಕ್ಕಿ ದೊಡ್ಡ ಅಧಿಕಾರಿಯಾದ. ಎಲ್ಲರೂ ಅವನನ್ನು ಗೌರವದಿಂದ ನೋಡುತ್ತಿದ್ದರು.

ಒಂದು ದಿನ ಕೆಲಸದ ನಿಮಿತ್ತ ಅವನು ತನ್ನ ಹಳೆಯ ಹಳ್ಳಿಗೆ ಬಂದ. ಕೂಡಲೇ ಉಪಕಾರ ಮಾಡಿದ ಅಜ್ಜಿಯ ಮನೆಗೆ ಹೋದ. ಮನೆಯ ಬಾಗಿಲು ಮುಚ್ಚಿತ್ತು. ಅಕ್ಕ ಪಕ್ಕದವರನ್ನು ವಿಚಾರಿಸಿದಾಗ ಅಜ್ಜಿ ತುಂಬಾ ಅಸ್ವಸ್ಥಳಾಗಿದ್ದಾಳೆ. ಅಜ್ಜಿಯನ್ನು ನೋಡಿಕೊಳ್ಳುವರು ಯಾರು ಇಲ್ಲ ಆದ್ದರಿಂದ ಅವಳು ಒಂದು ಆಶ್ರಮವನ್ನು ಸೇರಿಕೊಂಡಿದ್ದಾಳೆ ಎಂದು ತಿಳಿದು ಆಶ್ರಮಕ್ಕೆ ಹೋದಾಗ ಅವಳು ತುಂಬಾ ದುರ್ಬಲವಾಗಿ ಮಲಗಿದ್ದಳು. ಅಜ್ಜಿಯನ್ನು ನೋಡಿ ರಾಜುವಿನ ಕಣ್ಣಲ್ಲಿ ನೀರು ತುಂಬಿತ್ತು.

ಅವನು ತಕ್ಷಣ ಅಜ್ಜಿಯನ್ನು ಆಸ್ಪತ್ರೆಗೆ ಕರೆದೊಯ್ದು ಚಿಕಿತ್ಸೆ ಮಾಡಿಸಿದ. ಎಲ್ಲ ಖರ್ಚನ್ನು ಆತನೇ ಕೊಟ್ಟ ಚಿಕಿತ್ಸೆ ಆದ ನಂತರ ಅಜ್ಜಿ ಕೇಳಿದಳು ಮಗನೇ ನೀನು ಯಾರು? ನನಗಾಗಿ ಇಷ್ಟೆಲ್ಲ ಮಾಡುತ್ತಿದ್ದೀಯಲ್ಲ..

ರಾಜು ಕಣ್ಣೀರಿನಿಂದ ಹೇಳಿದ ಅಜ್ಜಿ ಒಂದು ದಿನ ನಾನು ಹಸಿವಿನಿಂದ ನಿಮ್ಮ ಮನೆಗೆ ಬಂದಿದ್ದೆ. ನೀವು ಕೊಟ್ಟ ಒಂದು ಊಟದ ಪ್ರತಿಫಲ ಇದು. ಅಜ್ಜಿಯ ಕಣ್ಣಲ್ಲೂ ಕಣ್ಣೀರು ತುಂಬಿತ್ತು ಆಶೀರ್ವಾದ ಮಾಡಿದಳು. “ಒಂದು ಊಟದ ಉಪಕಾರ ಜೀವನದಲ್ಲಿ ದೊಡ್ಡ ಪ್ರತಿಫಲ ಕೊಡುತ್ತದೆ”  ಎಂಬುದನ್ನು ಆ ದಿನ ಇಬ್ಬರೂ ಅರಿತುಕೊಂಡರು.

ಆಯ್ಕೆಯ ಫಲ.. ತಲೆಬಗ್ಗಿಸಿ ಓದಿದರೆ ತಲೆ ಎತ್ತಿ ಬದುಕಬಹುದು.. ಇದು ಮಕ್ಕಳ ಕಥೆ…

admin
the authoradmin

Leave a Reply