ಪರಿಸರ ರಕ್ಷಣೆಗೆ ನಮ್ಮ ಕೊಡುಗೆ ನೀಡೋಣ.. ಭೂಮಿ ರಕ್ಷಣೆ ನಮ್ಮಹೊಣೆ.. ಶಪಥ ಮಾಡೋಣ
ಜೂನ್ 5 ರಂದು ವಿಶ್ವ ಪರಿಸರ ದಿನ.... ಪರಿಸರ ರಕ್ಷಣೆ ಕರ್ತವ್ಯವಾಗಲಿ…

ಪರಿಸರ ರಕ್ಷಣೆಗಾಗಿ ಒಂದು ದಿನ ಕಾರ್ಯಕ್ರಮ ಮಾಡಿ ಢೋಂಗೀ ಪರಸರವಾದಿಗಳಾಗುವ ಬದಲು ನಮ್ಮ ಜೀವನ ಪರ್ಯಂತ ಒಂದಲ್ಲ ಒಂದು ಪರಿಸರ ಸ್ನೇಹಿ ಕೆಲಸ ಮಾಡಿದರೆ ಸಾಕು… ಅದು ಈ ಭೂಮಿಗೆ, ನಮ್ಮ ಪರಿಸರಕ್ಕೆ ನೀಡುವ ಕೊಡುಗೆಯಾಗುತ್ತದೆ.. ಪರಿಸರ ರಕ್ಷಣೆ ಕುರಿತಂತೆ ಹಿರಿಯ ಬರಹಗಾರರಾದ ಕುಮಾರಕವಿ ನಟರಾಜ್ ಇಲ್ಲಿ ಹಲವು ವಿಚಾರಗಳನ್ನು ನಮ್ಮ ಮುಂದಿಟ್ಟಿದ್ದಾರೆ.
“ಭೂಮಿಯ ರಕ್ಷಣೆ ನಮ್ಮೆಲ್ಲರ ಹೊಣೆ” ಎಂಬ ಪ್ರತಿಜ್ಞಾವಿಧಿಯೊಡನೆ ಈ ಲೇಖನವನ್ನು ಮನದಟ್ಟು ಮಾಡಿಕೊಳ್ಳೋಣ. ಅರಮನೆ ಗುರುಮನೆ ಗುಡಿಸಲು ಮಹಲು ಅಂತಸ್ತು ಆಸ್ತಿ ಅಧಿಕಾರ ಪದವಿ ಪ್ರಶಸ್ತಿ ಪದಕ ಬಿರುದು ಬಹುಮಾನ ಧನಕನಕ ಸಕಲ ಭೋಗಭಾಗ್ಯ ಎಲ್ಲವನ್ನು ಉಳಿಸಿಕೊಂಡು ತಲೆಮಾರುಗಳ ಪರ್ಯಂತ ಅನುಭವಿಸಬೇಕಾದರೆ ನಾವು ಮಾಡಬೇಕಾದ ಮೊಟ್ಟಮೊದಲ ಕರ್ತವ್ಯ ಎಂದರೆ “ಪರಿಸರ ಸಂರಕ್ಷಣೆ’.

ಇನ್ನು ಎರಡನೇದಾಗಿ ಸ್ವಯಂಘೋಷಿತ ಪ್ರಚಾರ ಪ್ರಿಯರಾದ ಢೋಂಗೀ ಪರಿಸರವಾದಿಗಳನ್ನು ಧಿಕ್ಕರಿಸಿ, ಶಿವರಾಮಕಾರಂತಜ್ಜ, ಸಾಲುಮರದತಿಮ್ಮಕ್ಕ, ವೃಕ್ಷಮಾತೆ ಹಾಲಕ್ಕಿತುಳಸೀಗೌಡ ಮುಂತಾದ ನಿತ್ಯಸತ್ಯ ಪರಿಸರವಾದಿಗಳನ್ನು ನೆನೆಸಿಕೊಂಡು ಇವರು ತೋರಿಸಿಕೊಟ್ಟ ಮಾರ್ಗ ಅನುಸರಿಸಿ ಹಸಿರಿನ ಬಸಿರನ್ನು ಉಳಿಸುವಂಥ ಶ್ರೇಷ್ಠ ಕಾರ್ಯಕ್ರಮಗಳನ್ನು ಕಾರ್ಯರೂಪಕ್ಕೆ ತರೋಣ.
ಭೂಮಿತಾಯಿ ಉಳಿದಾಗ ಮಾತ್ರ ಇಡೀ ಜೀವಸಂಕುಲ ಉಸಿರಾಡುತ್ತ ಉಳಿದು,ಬದುಕಿ ಬೆಳೆದು ಬೆಳಗುತ್ತ ವಂಶವೂ ಸಾಗುತ್ತದೆ. ಪ್ರತಿಮನೆಗೆ ಒಬ್ಬರಂತೆ ಸ್ವಯಂಸೇವಕರಾಗಿ ದಿಟವಾದ ಪರಿಸರವಾದಿಯ ಹೆಗಲಿಗೆ ಹೆಗಲು ನೀಡಿ ಸಕಲ ಸಹಾಯ ಸಹಕಾರ ನೀಡುತ್ತ ಸಾರ್ಥಕ ಮಾನವರಾಗೋಣ. ದಾಕ್ಷಿಣ್ಯಕ್ಕೆ ಶರಣಾಗದೆ ಭೂಮಿ ವಂಚಕರನ್ನೂ ಪರಿಸರ ನಾಶಕರನ್ನೂ ಮುಲಾಜಿಲ್ಲದೆ ಶಿಕ್ಷಿಸಿ ನಿಸರ್ಗ ಸೇವಕರನ್ನು ರಕ್ಷಿಸೋಣ. ಈ ಕಾರಣಕ್ಕಾದ್ರೂ ಪ್ರತಿಯೊಬ್ಬರು ಪ್ರಾಮಾಣಿಕ ಪರಿಸರವಾದಿಯಾಗಿ ಭೂಮಿಯನ್ನು ರಕ್ಷಿಸುವ ಸೈನಿಕರಾಗೋಣ.

ಪ್ರತಿವರ್ಷ ಜೂನ್ 5 ರಂದು “ವಿಶ್ವ ಪರಿಸರ ದಿನ” ಆಚರಣೆಯಲ್ಲಿದೆ. ಇದಕ್ಕೆ ಪ್ರಮುಖ ಮತ್ತು ಪ್ರಬಲ ಕಾರಣವೆಂದರೆ: ಇತ್ತೀಚಿನ ವರ್ಷಗಳಲ್ಲಿ ಪ್ರಪಂಚದ ಪ್ರತಿಯೊಂದು ದೇಶದಲ್ಲು, ವಿಶೇಷವಾಗಿ ಏಷ್ಯಾ ಮತ್ತು ಯುರೋಪ್ ಖಂಡದ ರಾಷ್ಟ್ರಗಳಲ್ಲಿ ಜನಸಂಖ್ಯೆ ಹೆಚ್ಚುತ್ತಿರುವ ಅಪಾಯವಿದ್ದು ಅಡೆತಡೆ ಇಲ್ಲದೆ ನಿರಂತರ ಏರುತ್ತಿರುವ ಈ ಸಮಸ್ಯೆಯು ದಿನೇದಿನೇ ವೃಧ್ಧಿಸುತ್ತ ಶೀಘ್ರದಲ್ಲಿ ಭೂಮಿಯ ಮೇಲೆ ಪ್ರಜಾಸ್ಫೋಟ ಆಗಲಿದೆ.
ಜನಸಂಖ್ಯಾ ಸ್ಫೋಟದಿಂದ ಆಮ್ಲಜನಕ ನೀರು ಆಹಾರ ವಸತಿ ಮುಂತಾದ ಅಗತ್ಯ ಮೂಲಸೌಕರ್ಯ ದೊರಕುವುದು ಅಸಾಧ್ಯವಾಗಬಹುದು?! ಇದೆಲ್ಲದರ ಜವಾಬ್ಧಾರಿ ಕೇವಲ ಸರ್ಕಾರಕ್ಕೆ ಮಾತ್ರ ಸಂಬಂಧಿಸಿರುತ್ತದೆ ಎನ್ನುವ ಉಡಾಫೆ ಮಾತುಗಳು ಮೂರ್ಖರ ಲಕ್ಷಣವಷ್ಟೆ. ಪ್ರಕೃತಿಯಿಲ್ಲದಿರೆ, ನಾವಿಲ್ಲ, ನಾವಿಲ್ಲದಿರೆ ಸರ್ಕಾರವಿಲ್ಲ, ಅಷ್ಟೇಏಕೆ ಇಡೀಜಗತ್ತೇ ಇರುವುದಿಲ್ಲ. ಹೀಗಾಗಿ ನಮ್ಮ ಭೂಮಿಯನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಮೊದಲ ಆದ್ಯತೆ ಆಗಬೇಕು. ಇದಾಗಬೇಕಾದರೆ ನಮ್ಮ ಪರಿಸರವನ್ನು ನಾವೇ ರಕ್ಷಿಸಿಕೊಳ್ಳಬೇಕು. ಇದು ನಮ್ಮೆಲ್ಲರ ಸಹಜ ಸ್ವಾಭಾವಿಕ ಜವಾಬ್ಧಾರಿಯ ಜತೆಗೆ ಆದ್ಯ ಕರ್ತವ್ಯವೂ ಹೌದು.

ಸಮಾಜ ಸೇವೆ ಹೆಸರಿನಲ್ಲಿ ಅಸ್ತಿತ್ವದಲ್ಲಿರುವ ರೆಕ್ರಿಯೇಶನ್ ಕ್ಲಬ್ ಮಹಿಳಾಸಮಾಜ ಗೆಳೆಯರಬಳಗ ಅಭಿಮಾನಿಸೇನೆ ರಕ್ಷಣಾವೇದಿಕೆ ಅಗ್ರ ವ್ಯಗ್ರಉಗ್ರ ಚಳುವಳಿಗಾರ ಮುಂತಾದ ಸಂಘಸಂಸ್ಥೆಗಳು ತಕ್ಷಣಕ್ಕೆ ಮಾಡಬೇಕಾದ ಕಾರ್ಯವೆಂದರೆ ಪ್ರತಿದಿನವೂ ಕನಿಷ್ಠ ಸಾವಿರ ಸಸಿಗಳನ್ನು ನೆಡುವ ಮತ್ತು ನೂರು ಮರಗಳಿಗೆ ನೀರುಣಿಸುವ ಪುಣ್ಯದ ಕೆಲಸ. ಇದನ್ನು ಮನಸ್ಸಾಕ್ಷಿ ಮೆಚ್ಚುವಂತೆ ಮಾಡಿದಾಗ ನೂರಕ್ಕೆ ನೂರು ಪ್ರತಿಫಲ ದೊರಕುತ್ತದೆ. ಇದರ ಸಂಪೂರ್ಣ ಲಾಭವೂ ಇವರ ಮಕ್ಕಳು ಮೊಮ್ಮಕ್ಕಳಿಗೇ ಹೊರತು ಬೇರಾರಿಗೂ ಅಲ್ಲ. ಈ ಕಟುಸತ್ಯವನ್ನರಿತು ನಡೆದಾಗ ಪರಿಸರ ದಿನಾಚರಣೆಗೆ ಅರ್ಥ ಬ(ಇ)ರುತ್ತದೆ, ಇಲ್ಲವಾದರೆ ಕೇವಲ ಮಾತಿನ ಮಲ್ಲರಾಗಿ ಜೀವ-ಜೀವನ ವ್ಯರ್ಥ ಆಗುತ್ತದೆ.
ಪರಿಸರವನ್ನು ಕಾಪಾಡಿದ್ದೇ ಆದರೆ.. ಪ್ರಪಂಚ ದೇಶ ಕೋಶ ಭಾಷೆ ಸಂಸ್ಕೃತಿ ನಾಗರಿಕತೆ ನಾಗರಿಕ ಇತಿಹಾಸ ರಾಜಕೀಯ ಆರ್ಥಿಕ ಸಾಮಾಜಿಕ ಶೈಕ್ಷಣಿಕ ಸಾಂಸಾರಿಕ ಮುಂತಾದ ಎಲ್ಲದರ ಸಧೃಢತೆ ಕಾಪಾಡಿದಂತೆ. ಸ್ವಾಸ್ಥ್ಯ ಸಮಾಜ ನಿರ್ಮಾಣಕ್ಕೆ ಬೇಕಾದ ಕರ್ತವ್ಯ ನಿರ್ವಹಣೆ ಏನೆಂದು ಅರಿತುಕೊಳ್ಳುವುದೇ ಪ್ರಾಮಾಣಿಕವಾದ ಸಮಾಜಸೇವೆ. ಏಕೆಂದರೆ ಸ್ವಾಸ್ಥ್ಯ ಸಮಾಜ ಇದ್ದೆಡೆ ಸ್ವಾಸ್ಥ್ಯ ಜೀವನವೂ ಇರುತ್ತದೆ. ಇವೆರಡು ಸರಿಯಾಗಿರಬೇಕಾದರೆ ಪರಿಸರ ಮತ್ತು ಭೂಮಿ ಪ್ರಬಲವಾಗಿರಬೇಕು, ಎಂಬ ಸಾಮಾನ್ಯ ತಿಳುವಳಿಕೆ ಮನಗಂಡರೆ ಸಾಕು ಎಲ್ಲರೂ ಪಾವನರಾಗುತ್ತಾರೆ, ಎಲ್ಲವೂ ಉದ್ಧಾರವಾಗುತ್ತದೆ, ದೇಶವೂ ಸಹ ಸರ್ವತೋಮುಖ ಅಭಿವೃದ್ಧಿ ಕಂಡು ಧೀರ್ಘಕಾಲ ಬಾಳಿಕೆ ಬರುತ್ತದೆ.

ನಾನು ನನ್ನ ಮನೆ ನನ್ನ ಮಡದಿ ನನ್ನ ಮಕ್ಕಳು ಮೊಮ್ಮಕ್ಕಳು ನೆಂಟರಿಷ್ಟರು ಮಿತ್ರರು ಬಂಧುಬಳಗ ದಾಯಾದಿಗಾಗಿ ತನುಮನ ಧನಕನಕ ಪ್ರಾಣ ಎಲ್ಲವನ್ನು ಧಾರೆ ಎರೆಯುವಂತೆ ನನ್ನ ಪರಿಸರ ನನ್ನ ಭೂಮಿ ನನ್ನ ದೇಶ ಹಾಗೂ ನನ್ನ ಕರ್ತವ್ಯ ಎಂದು ತಿಳಿಯುವುದು ಸಹ ಮುಖ್ಯವಾಗುತ್ತದೆ. ಬದುಕಿರುವಷ್ಟೂ ದಿನ ಅನಗತ್ಯ ಧೂಮಪಾನ ಪಟಾಕಿ ಸಿಡಿತ, ಕಾರ್ಖಾನೆಯ ಇಂಗಾಲಾಮ್ಲ, ಮೋಟಾರು ವಾಹನದ ಹೊಗೆ, ಕಾಡು ಸುಡುವುದು ಮರ ಕಡಿಯುವುದು ಬಾವಿ ಕೆರೆ ಕಟ್ಟೆ ನದಿ ನೀರನ್ನು ಕಲುಷಿತಗೊಳಿಸುವುದು ಔಷಧ ರಾಸಾಯನಿಕ ವಸ್ತುಗಳಿಂದ ಪರಿಸರವನ್ನು ವಿರೂಪಗೊಳಿಸುವುದು ತಪ್ಪಲೇಬೇಕು. ಕಾಡನ್ನೆಲ್ಲ ನಾಡನ್ನಾಗಿಸುವ ದುಷ್ಕೃತ್ಯವಂತೂ ತೊಲಗಬೇಕು ವಿಜ್ಞಾನ, ತಂತ್ರಜ್ಞಾನದ ಸೋಗಿನಲ್ಲಿ ಅವೈಜ್ಞಾನಿಕವಾದ ಅಕಾರ್ಯಗಳ ಯೋಜನೆ-ಯೋಚನೆಗಳನ್ನು ಸಂಪೂರ್ಣ ನಿಲ್ಲಿಸಬೇಕು.
ಜೀವನಪೂರ್ತಿ ಎಲ್ಲದಕ್ಕೂ “ನಾನು” ಎನ್ನುವುದಕ್ಕಿಂತ “ನಾವು” ಎಂದರೆ ಶ್ರೇಯಸ್ಸು. ಒಬ್ಬನಿಗಾಗಿ ಎಲ್ಲರು ಮತ್ತು ಎಲ್ಲರಿಗಾಗಿ ಒಬ್ಬನು ಎನ್ನುವ ನಿಸ್ವಾರ್ಥ ಪ್ರೌಢ ಚಿಂತನೆ ಮಾಡಿದಾಗ ನಮ್ಮ ಭೂಮಿಯನ್ನು ನಾಶ ಪಡಿಸಲು ಹಾತೊರೆಯುವಂಥ ಒಳ-ಹೊರ ಶತ್ರುವನ್ನು ಮೆಟ್ಟಿನಿಂತು ಕಟ್ಟಿಹಾಕಬಹುದು, ಉಗ್ರಗಾಮಿ ಭಯೋತ್ಪಾದಕರನ್ನು ಮಟ್ಟಹಾಕಿ ಹುಟ್ಟಡಗಿಸಬಹುದು, ನಮ್ಮ ಪರಿಸರವನ್ನು ನಾವೇ ಕಾಪಾಡಬಹುದು. ಹೀಗಾದಾಗ ಮಾತ್ರ ವಿಶ್ವದಾದ್ಯಂತ ಶಾಂತಿ ನೆಮ್ಮದಿ ಸುಖ ಸಮೃಧ್ಧಿ ಕಾಣಬಹುದು. ರೈತ ಯೋಧ ಮಕ್ಕಳು ಮಹಿಳೆ ನಿರುದ್ಯೋಗಿ ಯುವಜನಾಂಗ ವಿಕಲಾಂಗ ಅಬಲ ಮುಗ್ಧಜನರ ಅಭಿವೃದ್ಧಿ ಅಥವ ಕಲ್ಯಾಣ ಕಾರ್ಯಕ್ರಮ ಮಾಡುತ್ತೇವೆ ಎಂಬ ಕುಂಟುನೆಪ ಒಡ್ಡುತ್ತ ಒಂದಾದರೂ ಒಳಿತು ಯೋಜನೆ ಅನುಷ್ಠಾನಗೊಳಿಸಲ್ಲ.

ಬದಲಿಗೆ ಪರಿಸರ ವಿನಾಶದ ಅಕ್ರಮ ಗಣಿಗಾರಿಕೆ, ಕೆರೆಕಟ್ಟೆ ರಾಜಕಾಲುವೆ ನುಂಗುವಿಕೆ, ರಸ್ತೆ ಅಗಲೀಕರಣ, ಟಾಪಿಂಗ್, ಅಂಡರ್ಪಾಸ್, ಫ್ಲೈಓವರ್ ಐಟಿ-ಬಿಟಿ ಸಿಲಿಕಾನ್ ಸಿಟಿ, ಹೆಲಿಪ್ಯಾಡ್, ವಿಮಾನ ನಿಲ್ದಾಣ, ಮೆಟ್ರೋರೈಲ್, ಅಪಾರ್ಟ್‍ಮೆಂಟ್, ರೆಸಾರ್ಟ್, ರಾಜ್ಯ-ರಾಷ್ಟ್ರೀಯ ಹೆದ್ದಾರಿ ನಿರ್ಮಾಣ, ಇತ್ಯಾದಿ ಕಾರಣಕ್ಕಾಗಿ ತೋಟ ಕೃಷಿಭೂಮಿ ಉದ್ಯಾನವನ ಬೆಟ್ಟಗುಡ್ಡದ ಮರಗಿಡ ಕಾಡುಮರಗಳ ಹನನದಂತಹ ಸಮಾಜಕಂಟಕ ಪ್ರಕೃತಿಮಾರಕ ಯೋಜನೆಗಳು ಕಾರ್ಯಗತ ಆಗದಂತೆ ನೋಡಿಕೊಳ್ಳಬೇಕು.
ನಮ್ಮ ಅವಿವೇಕದ ಅತಿಯಾಸೆಗೆ ಪವಿತ್ರವಾದ ಪರಿಸರವನ್ನು ದುರುಪಯೋಗ ಪಡಿಸಿಕೊಂಡಾಗ ದೈವಸ್ವರೂಪದ ಪ್ರಕೃತಿಯು ಮುನಿದು ಅತಿವೃಷ್ಟಿ ಅನಾವೃಷ್ಠಿ ಸೃಷ್ಟಿಯಾಗಲು ಕಾರಣವಾಗುತ್ತದೆ. ಇದಕ್ಕೆಲ್ಲ ಇನ್ನುಮುಂದೆ ಅವಕಾಶ ಆಗದಂತೆ ಎಚ್ಚರಿಕೆ ವಹಿಸೋಣ.
ಈ ಕ್ಷಣದಿಂದ ಭೂಮಿತಾಯಿಯ ಸರ್ವತೋಮುಖ ರಕ್ಷಣೆಗೆ ಕಂಕಣಬದ್ಧರಾಗಿ ಪ್ರತಿಯೊಂದು ಕೆಟ್ಟ ನಿರ್ಧಾರವನ್ನು ಕಿತ್ತೊಗೆದು ಪರಿಸರವನ್ನು ಅಭಿವೃದ್ಧಿ ಪಡಿಸೋಣ. ದೇವರು ಕೊಟ್ಟ ನಿಸರ್ಗ ಸಂಪತ್ತನ್ನು ಸದುಪಯೋಗಕ್ಕೆ ಮಾತ್ರ ಬಳಸೋಣ. ಹಾಗೊಂದುವೇಳೆ ಕೆಲವರ ಸ್ವಾರ್ಥಕ್ಕಾಗಿ ಕಾಡು-ನಾಡು ಸೇರಿದಂತೆ ಎಲ್ಲ ಕಡೆಯೂ ಇರಲೇಬೇಕಾದ ಹಸಿರು ಪರಿಸರ

ಏನಾದರು ನಾಶವಾದರೆ ಅತಿಶೀಘ್ರದಲ್ಲಿ ಮಳೆಯ ಕೊರತೆಯಿಂದ ಜಲಕ್ಷಾಮ ಉಂಟಾಗಿ ಭೂಮಿಯ ಅಂತರ್ಜಲ ಬರಿದಾಗುತ್ತದೆ. ಕೃಷಿಯ ಬೆಳೆಗೆ ಕುಡಿಯುವ ನೀರಿಗೆ ಕ್ಷಾಮಢಾಮರ ವಕ್ಕರಿಸಿ ಪ್ರಪಂಚವು ವಿನಾಶದೆಡೆಗೆ ಸಾಗುತ್ತದೆ, ಮನುಕುಲ ಸರ್ವನಾಶವಾಗುತ್ತದೆ, ಎಚ್ಚರಿಕೆ ಮಾನವ ಎಚ್ಚರಿಕೆ…!
ಇದು ಪರಿಸರದ ಕವನ…..
ಉಳಿಸಿ ಬೆಳೆಸಿ ಹಸಿರು-ಹೆಸರು
ಅವರಿವರ ಜಯಂತಿ ಕ್ಷಣ
ಅದರಿದರ ಜನುಮ ದಿನ
ಅದೆಂಥದೋ ಹುಟ್ಟು ಹಬ್ಬ
ಆಚರಣೆಗಳಿಂದ ಪರಿಸರ ಗಬ್ಬ
ಇನಿತು ಪ್ರಯೋಜನವಿಲ್ಲ ತಿಬ್ಬ
ಈಗಲಾದರೂ ಏರಿ ಸಾರ್ಥಕ ದಿಬ್ಬ
ಉಳಿಸಿ ಬೆಳೆಸಿ ಹಸಿರು-ಹೆಸರು
ಉಳಿಸೋಣ ಎಲ್ಲರ ಉಸಿರು-ಬಸಿರು
ಉಪಕಾರಿ ಪರಿಸರದ
ಉಪಯೋಗ ಸತ್ಕಾರ್ಯವನು
ತಿಳಿದು-ತಿಳಿಸೋಣ
ಊರುಕೇರಿ ಊರ್ಜಿತವಾಗುವಂತೆ!
ಋಷ್ಯಶೃಂಗ ತಪ್ಪಲಿನ ಘಟ್ಟ
ಎಲ್ಲ ನದಿಗಳ ನೀರಿನ ಮಟ್ಟ
ಏರಿಸಿ, ಸರಿನೀರಾವರಿ ತೋರಿಸಿ
ಐಸಿರಿ ಹೆಚ್ಚಿಸಿ ಧಾನ್ಯ ವರ್ಧಿಸಿ
ಒಮ್ಮತದಿಂದ ಒಗ್ಗೂಡಿ ಘರ್ಜಿಸಿ
ಓಡಿಸಿ ರೋಗ ರುಜಿನಾದಿ ಶತ್ರು
ಔದಾರ್ಯದೆ ವಿಜಯಾರ್ಜಿಸಿ
ಅಂಜದೆ ಅಳುಕದೆ ಅಬ್ಬರದೆ
ಆಹಾ! ಎಂದು ಹುಬ್ಬೇರಿಸುವಂತೆ
ಆಚರಿಸೋಣ ಪರಿಸರ ಮಾತೆ
ಜಯಂತಿಯನ್ನ ನಿತ್ಯೋತ್ಸವದಂತೆ!
ನಮದೇ ಭೂರಮೆಯ ಉಳಿಸಿಬೆಳೆಸಿ
ಜಗತ್ತಿನಾದ್ಯಂತ ಜಯಭೇರಿ ಬಾರಿಸಿ
ನಮ್ಮ ಮುಂದಿನ ಪೀಳಿಗೆಗೆ
ಉಚಿತ ಉನ್ನತ ಉತ್ತಮ
ಉಡುಗೊರೆ ನೀಡಲು
ಭೇದಭಾವ ಬದಿಗೊತ್ತಿರಿ
ಸದ್ಭಾವದಿಂದ ಬನ್ನಿರಿ
ಆಚರಿಸೋಣ ಸದಾಚರಣೆ
ವಿಶ್ವ ಪರಿಸರ ದಿನಾಚರಣೆ!
ಕುಮಾರಕವಿ ನಟರಾಜ್ ಅವರ ಇನ್ನಷ್ಟು ಲೇಖನಗಳು ಇಲ್ಲಿವೆ… ಇದರ ಮೇಲೆ ಕ್ಲಿಕ್ ಮಾಡಿ ಓದಿ…








