ಒಂದೆರಡು ದಶಕಗಳೀಚೆಗೆ ಕಾಂಗ್ರೆಸ್ ಎರಡು ಬಾರಿ ರಾಜ್ಯದಲ್ಲಿ ಅಧಿಕಾರಕ್ಕೆ ಬಂದಿದೆ.. ಎರಡು ಬಾರಿಯೂ ಬಿಜೆಪಿ ವಿರುದ್ಧವೇ ಹೋರಾಡಿ ಗೆಲುವು ಪಡೆದಿದೆ. ಆದರೆ ರಾಜ್ಯದ ರಾಜಕೀಯ ಇತಿಹಾಸದಲ್ಲಿ ಒಂದೇ ಪಕ್ಷ ಬಹುಮತದೊಂದಿಗೆ ಎರಡನೇ ಅವಧಿಗೆ ಅಧಿಕಾರಕ್ಕೆ ಬಂದಿಲ್ಲ. ಹೀಗಾಗಿ ಆ ದಾಖಲೆಯನ್ನು ಧೂಳಿಪಟ ಮಾಡಿ ಹೊಸ ದಾಖಲೆ ಬರೆಯಲು ಡಿ.ಕೆ.ಶಿವಕುಮಾರ್ ಹೊಸ ತಂತ್ರಗಳನ್ನು ಈಗಿನಿಂದಲೇ ಆರಂಭಿಸಿದ್ದಾರಾ? ಅವರ ನಡೆಯನ್ನು ಗಮನಿಸಿದರೆ ಅಂತಹದೊಂದು ಅನುಮಾನ ಮೂಡುವುದು ಸಹಜ..
ಕರ್ನಾಟಕದಲ್ಲಿ ವಿಧಾನಸಭಾ ಚುನಾವಣೆ ನಡೆಯಲು ಇನ್ನೂ ಒಂದೂವರೆ ವರ್ಷದಷ್ಟು ಬಾಕಿ ಇರುವುದರಿಂದ ಆಡಳಿತ ಮತ್ತು ವಿಪಕ್ಷಗಳು ಚುನಾವಣೆಗೆ ಈಗಿನಿಂದಲೇ ತಯಾರಿ ಮಾಡಿಕೊಳ್ಳುತ್ತಿವೆ. ಪ್ರತಿಹೆಜ್ಜೆ, ಹೆಜ್ಜೆಗೂ ರಾಜಕೀಯ ನಡೆಯುತ್ತಿದೆ.. ಇಷ್ಟಕ್ಕೂ ರಾಜ್ಯದಲ್ಲಿ ಏನಾಗುತ್ತಿದೆ? ಎಂಬ ಪ್ರಶ್ನೆಗೆ ‘ಪಾಲಿಟಿಕ್ಸ್’ ಹೊರತು ಪಡಿಸಿದರೆ ಮತ್ತೇನು ಕಾಣಿಸುತ್ತಿಲ್ಲ..

ಸಿದ್ದರಾಮಯ್ಯ ಅವರು ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ, ಡಿ.ಕೆ.ಶಿವಕುಮಾರ್ ಮುಖ್ಯಮಂತ್ರಿಯಾಗಿ ಅಧಿಕಾರ ವಹಿಸಿಕೊಂಡ ಬಳಿಕ ಆಮೂಲಾಗ್ರ ಬದಲಾವಣೆ ಆದಂತೆ ಕಾಣುತ್ತಿಲ್ಲ ಆದರೆ ಪಕ್ಷದೊಳಗೆ ಅಸಮಾಧಾನಗಳಂತು ಭುಗಿಲೆದ್ದಿವೆ. ಒಳಗಿರುವ ಅಸಮಾಧಾನದ ಕಿಡಿ ಆಗೊಮ್ಮೆ ಈಗೊಮ್ಮೆ ನಾಯಕರ ಹೇಳಿಕೆ, ವರ್ತನೆಗಳಿಂದ ಹೊರಬರುತ್ತಿವೆ..
ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ ತಮ್ಮ ಆಡಳಿತದ ಜೊತೆಗೆ ಮುಂದಿನ 2028 ಚುನಾವಣೆಯಲ್ಲಿ ಓಟ್ ಬ್ಯಾಂಕ್ ನ್ನು ಗಟ್ಟಿ ಮಾಡಿಕೊಳ್ಳುವ ಮೂಲಕ ಸಿಎಂ ಆಗಿ ಮುಂದುವರೆಯ ಬೇಕೆಂಬ ಹಠಕ್ಕೆ ಬಿದ್ದಂತೆ ಕಾಣಿಸುತ್ತಿದೆ. ಹೀಗಾಗಿಯೇ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ, ದಕ್ಷಿಣ ಕರ್ನಾಟಕದ ಕಡೆಗೆ ದಂಡೆತ್ತಿ ಹೋಗುತ್ತಿದ್ದಾರೆ. ಅಲ್ಲಿ ಯೋಜನೆಗಳನ್ನು ಪರಿಚಯಿಸುವ, ಸಚಿವ ಸಂಪುಟಗಳನ್ನು ನಡೆಸುವ ಮೂಲಕ ನಾವು ನಿಮ್ಮೊಂದಿಗಿದ್ದೇವೆ ಎಂಬುದನ್ನು ಮನದಟ್ಟು ಮಾಡುತ್ತಿದ್ದಾರೆ.

ರಾಜ್ಯದ ಮಟ್ಟಿಗೆ ಹೇಳುವುದಾದರೆ ಮುಖ್ಯಮಂತ್ರಿಯಾಗಿದ್ದವರು ಪಕ್ಷವನ್ನು ಗೆಲ್ಲಿಸಿ ತಾವು ತಮ್ಮ ಅಧಿಕಾರವನ್ನು ಮುಂದಿನ ಅವಧಿಗೂ ಕೊಂಡೊಯ್ದ ಉದಾಹರಣೆಗಳಿಲ್ಲ. ಹೀಗಾಗಿ ಅದನ್ನು ಮುರಿದು ಮತ್ತೆ ರಾಜ್ಯದಲ್ಲಿ ಕಾಂಗ್ರೆಸ್ ಆಡಳಿತವನ್ನು ಪ್ರತಿಷ್ಠಾಪಿಸಬೇಕೆಂಬ ಹಠಕ್ಕೆ ಬಿದ್ದಿರುವುದು ಸುಳ್ಳೇನಲ್ಲ. ತಾವು ಕೆಪಿಸಿಸಿ ಅಧ್ಯಕ್ಷರಾದ ಬಳಿಕ ಕಾಂಗ್ರೆಸ್ ನ್ನು 2023ರ ಚುನಾವಣೆಯಲ್ಲಿ ಅಧಿಕಾರಕ್ಕೆ ತಂದ ಕೀರ್ತಿಯಿದೆ. ಇದನ್ನು ಕಾಂಗ್ರೆಸ್ ನ ನಾಯಕರು ಸಾಮೂಹಿಕ ಹೋರಾಟದ ಫಲ ಎನ್ನಬಹುದು. ಆದರೆ ಅವತ್ತಿನ ದಿನಗಳಲ್ಲಿ ಅವರು ಪಾದಯಾತ್ರೆ ಮೂಲಕ ಹೋರಾಟದ ಕಿಚ್ಚು ಹಚ್ಚಿದರು. ಮೇಕೆದಾಟು ಹೋರಾಟ ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬರಲು ಮುನ್ನುಡಿ ಬರೆಯಿತು ಎನ್ನುವುದು ಅಷ್ಟೇ ಸತ್ಯ.
ಅಧಿಕಾರವಿಲ್ಲದ ಕಾರಣದಿಂದ ದೂರ, ದೂರವಾಗಿದ್ದ ಕಾಂಗ್ರೆಸ್ ನಾಯಕರನ್ನು ಒಂದೇ ವೇದಿಕೆಯಡಿ ತಂದು ಮೇಕೆದಾಟು ಪಾದಯಾತ್ರೆ ನಡೆಸಿದರು. ಆ ಮೂಲಕ ಪಕ್ಷದ ಎಲ್ಲ ಮುಖಂಡರನ್ನು ಒಂದೆಡೆ ಸೇರಿಸುವ ಪ್ರಯತ್ನ ಮಾಡಿದರು. ಅವತ್ತು ಅಧಿಕಾರದಲ್ಲಿದ್ದ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಕ್ಕೆ ಸಿಂಹಸ್ವಪ್ನರಾಗಿ ಕಾಡಿದ್ದರು. ಅವರು ಮಾಡಿದ ಹೋರಾಟ, ಗಿಮಿಕ್ ಗಳು ಪೇಸಿಎಂ, 40ಪರ್ಸೆಂಟ್ ಎಲ್ಲವೂ ಒಂದಷ್ಟು ಮತಗಳನ್ನು ಕೂಡಿ ಹಾಕುವಲ್ಲಿ ಕಾರಣವಾಯಿತು. ಹಾಗೆಂದು ಅವರಿಂದಲೇ ಅತ್ಯಧಿಕ ಸ್ಥಾನ ಬಂತು ಎಂಬುದನ್ನು ಒಪ್ಪಿಕೊಳ್ಳುವುದು ಕಷ್ಟವೇ..

ಕಾಂಗ್ರೆಸ್ ನಲ್ಲಿ ಹಲವು ನಾಯಕರು ಪ್ರಭಾವಿಗಳಿದ್ದಾರೆ. ಅದರಲ್ಲೂ ಸಿದ್ದರಾಮಯ್ಯ ಅವರ ಬಗ್ಗೆ ಹೆಚ್ಚು ಹೇಳಬೇಕಾಗಿಯೇ ಇಲ್ಲ. ಅಹಿಂದ ಓಟ್ ಬ್ಯಾಂಕ್ ಹೊಂದಿರುವ ಅವರು ತಮ್ಮದೇ ಆದ ಮತಬ್ಯಾಂಕ್ ಹೊಂದಿದ್ದಾರೆ. ಅವರು ಅಧಿಕಾರದಲ್ಲಿದ್ದಷ್ಟು ದಿನ ಎಲ್ಲವನ್ನೂ ಎದುರಿಸಿಕೊಂಡೇ ಮುನ್ನಡೆದಿದ್ದಾರೆ. ಆದರೀಗ ಅವರ ನಂತರ ಹೋರಾಟದ ಮೂಲಕ ಸಿಎಂ ಸ್ಥಾನ ಪಡೆದುಕೊಂಡಿರುವ ಡಿ.ಕೆ.ಶಿವಕುಮಾರ್ ಗೆ ಹೆಜ್ಜೆ ಹೆಜ್ಜೆಗೂ ಅಗ್ನಿಪರೀಕ್ಷೆ ಎದುರಾಗಿದೆ.
ಕಷ್ಟಪಟ್ಟು ಸಿಎಂ ಆಗಿ ಅಧಿಕಾರ ವಹಿಸಿಕೊಂಡಿದ್ದೇನೆ. ಹೀಗಾಗಿ ಏನಾದರೊಂದು ಮಾಡಬೇಕೆಂಬ ಛಲದಲ್ಲಿರುವ ಡಿ.ಕೆ.ಶಿವಕುಮಾರ್ ಗೆ ಮುಂದಿನ ದಿನಗಳು ಸವಾಲಿನ ದಿನಗಳಾಗಿವೆ. ಡಿ.ಕೆ.ಶಿವಕುಮಾರ್ ಅವರ ಅದೃಷ್ಟವೋ ದುರಾದೃಷ್ಟವೋ ಗೊತ್ತಿಲ್ಲ. ಅವರ ಕಾಲಾವಧಿಯಲ್ಲಿಯೇ ಬರ ಕಾಣಿಸಿಕೊಂಡಿದೆ. ಪರಿಣಾಮ ಕುಡಿಯುವ ನೀರಿಗೂ ಮುಂದಿನ ದಿನಗಳಲ್ಲಿ ಹಾಹಾಕಾರ ಎದುರಾಗುವ ಸಾಧ್ಯತೆ ಇಲ್ಲದಿಲ್ಲ. ಜತೆಗೆ ಕಾವೇರಿ ಜಲವಿವಾದ ಮುಂದಿನ ದಿನಗಳಲ್ಲಿ ಇನ್ನಷ್ಟು ಬಿಕ್ಕಟ್ಟುಗಳನ್ನು ಸೃಷ್ಟಿ ಮಾಡಿದರೂ ಅಚ್ಚರಿಯಿಲ್ಲ.

ಹೀಗಿರುವಾಗಲೇ ಮುಂದಿನ ವರ್ಷ ಉತ್ತರ ಪ್ರದೇಶದ ಚುನಾವಣೆ ಬರುತ್ತಿದೆ. ಹೈಕಮಾಂಡ್ ಕರ್ನಾಟಕದ ಕಡೆಗೆ ಮುಖ ಮಾಡುತ್ತದೆ. ಜತೆಗೆ ಇಲ್ಲಿಂದಲೇ ಎಲ್ಲ ರೀತಿಯ ಸಹಕಾರಗಳನ್ನು ಬಯಸುತ್ತದೆ. ಅದಕ್ಕೆ ಸಿಎಂ ಡಿ.ಕೆ.ಶಿವಕುಮಾರ್ ಸಿದ್ದರಾಗಬೇಕಾಗಿದೆ. ಇದೆಲ್ಲದರ ನಡುವೆ ವಿಪಕ್ಷಗಳು ಅದರಲ್ಲೂ ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಅವರು ಮೇಲಿಂದ ಮೇಲೆ ಸರ್ಕಾರದ ವಿರುದ್ದ ಛಾಟಿ ಬೀಸುತ್ತಲೇ ಇದ್ದಾರೆ. ಹಲವು ಹಗರಣಗಳು ಮುನ್ನಲೆಗೆ ಬಂದಿದ್ದು ಅವುಗಳನ್ನು ಎದುರಿಸಿ ನಿಲ್ಲುವುದು ಕೂಡ ಒಂದು ದೊಡ್ಡ ಸವಾಲ್ ಆಗಿದೆ.
ಡಿ.ಕೆ.ಶಿವಕುಮಾರ್ ಅವರು ಸಿಎಂ ಆಗಿ ಅಧಿಕಾರ ವಹಿಸಿಕೊಂಡು ಶತದಿನವನ್ನು ಮುಗಿಸಿದ್ದಾರೆ. ಹಲವು ಯೋಜನೆಗಳನ್ನು ಪರಿಚಯಿಸುತ್ತಲೇ ಮುಂದಿನ ಚುನಾವಣೆಗೆ ಸಿದ್ಧತೆಗಳನ್ನು ಮಾಡಿಕೊಳ್ಳುತ್ತಿದ್ದಾರೆ. ವಿರೋಧ ಪಕ್ಷದಲ್ಲಿದ್ದುಕೊಂಡು ಆಡಳಿತ ಪಕ್ಷದ ವಿರುದ್ಧ ಹೋರಾಟ ಮಾಡುವುದು ಸುಲಭ. ಆದರೆ ಆಡಳಿತ ಪಕ್ಷದಲ್ಲಿದ್ದುಕೊಂಡು ಆಡಳಿತ ಮಾಡುತ್ತಾ ವಿಪಕ್ಷ ಮಾಡುವ ಆರೋಪವನ್ನು ಎದುರಿಸಿ ಚುನಾವಣೆಗೆ ತಯಾರಾಗುವುದು ಸುಲಭದ ಕೆಲಸವಲ್ಲ. ಆದರೆ ಡಿ.ಕೆ.ಶಿವಕುಮಾರ್ ಆ ನಿಟ್ಟಿನಲ್ಲಿ ತಯಾರಿ ನಡೆಸುತ್ತಿದ್ದಾರೆ. ಮುಂದಿನ ದಿನಗಳಲ್ಲಿ ಡಿಕೆಶಿ ತಂತ್ರ ಹೇಗಿರಲಿದೆ? ಎಂಬುದೇ ಕುತೂಹಲಕಾರಿಯಾಗಿದೆ.
B M Lavakumar








