ಪಿರಿಯಾಪಟ್ಟಣ(ರವಿಚಂದ್ರ ಬೂದಿತಿಟ್ಟು): ಶನಿವಾರ ಸುರಿದ ಭಾರಿ ಮಳೆಗೆ ಸಿಡಿಲು ಬಡಿದು ಎರಡು ಹಸುಗಳು ಸೇರಿದಂತೆ ಓರ್ವ ಮಹಿಳೆ ಸ್ಥಳದಲ್ಲೇ ಸಾವನ್ನಪ್ಪಿರುವ ಹೃದಯವಿದ್ರಾವಕ ಘಟನೆ ತಾಲೂಕಿನ ಸತ್ಯಗಾಲ ಗ್ರಾಮದಲ್ಲಿ ನಡೆದಿದೆ. ಈ ಘಟನೆಯಿಂದ ಇಡೀ ಗ್ರಾಮವೇ ಶೋಕದಲ್ಲಿ ಮುಳುಗುವಂತಾಗಿದೆ.

ಆಲನಹಳ್ಳಿ ಗ್ರಾಮದ ದೊಡ್ಡ ಸೋಮಾಚಾರ ಎಂಬುವವರ ಪುತ್ರಿ ವಿನೋದಾ (34) ಮೃತಪಟ್ಟ ದುರ್ದೈವಿ ಮಹಿಳೆ. ಇವರನ್ನು ಸತ್ಯಗಾಲ ಗ್ರಾಮದ ಚಿತ್ರಶೇಖರ್ ಅವರಿಗೆ ವಿವಾಹ ಮಾಡಿಕೊಡಲಾಗಿತ್ತು. ಈ ದಂಪತಿಗೆ ಇಬ್ಬರು ಹೆಣ್ಣು ಮಕ್ಕಳಿದ್ದಾರೆ. ಇದೀಗ ಅವರ ಸಾವಿನಿಂದಾಗಿ ಇಡೀ ಕುಟುಂಬ ಕಣ್ಣೀರಿನಲ್ಲಿ ಕೈತೊಳೆಯುವಂತಾಗಿದೆ.

ಇಷ್ಟಕ್ಕೂ ದುರಂತ ನಡೆದಿದ್ದು ಹೇಗೆ ಎಂಬುದನ್ನು ನೋಡಿದ್ದೇ ಆದರೆ ಶನಿವಾರ ತಾಲೂಕಿನಾದ್ಯಂತ ಗುಡುಗು ಸಹಿತ ಭಾರಿ ಮಳೆ ಸುರಿದಿದ್ದು. ಈ ವೇಳೆ ಸತ್ಯಗಾಲ ಗ್ರಾಮದ ತಮ್ಮ ಜಮೀನಿನಲ್ಲಿ ಕಟ್ಟಿ ಹಾಕಿದ್ದ ಎರಡು ಹಸುಗಳನ್ನು ಮನೆಗೆ ಕರೆತರಲು ವಿನೋದಾ ಅವರು ಹೋಗಿದ್ದರು. ಆಗ ದಿಢೀರನೆ ಸಿಡಿಲು ಬಡಿದ ಪರಿಣಾಮ ವಿನೋದಾ ಹಾಗೂ ಎರಡು ಹಸುಗಳು ಸ್ಥಳದಲ್ಲೇ ಜೀವ ಬಿಟ್ಟಿದ್ದಾರೆ.
ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಧಾವಿಸಿದ ಕುಟುಂಬಸ್ಥರು ಹಾಗೂ ಗ್ರಾಮಸ್ಥರ ಆಕ್ರಂದನ ಮುಗಿಲು ಮುಟ್ಟಿತ್ತು. ಈ ಸಂಬಂಧ ಮೃತರ ಪತಿ ಚಿತ್ರಶೇಖರ್ ಅವರು ಪಿರಿಯಾಪಟ್ಟಣ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.

ದೂರು ದಾಖಲಿಸಿಕೊಂಡಿರುವ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಸದ್ಯ ವಿನೋದಾ ಅವರ ಮೃತದೇಹವನ್ನು ಪಿರಿಯಾಪಟ್ಟಣ ಸಾರ್ವಜನಿಕ ಆಸ್ಪತ್ರೆಯ ಶವಗಾರದಲ್ಲಿ ಮರಣೋತ್ತರ ಪರೀಕ್ಷೆಗಾಗಿ ಇರಿಸಲಾಗಿದ್ದು, ಮುಂದಿನ ತನಿಖೆ ಕೈಗೊಳ್ಳಲಾಗಿದೆ. ಮುಂಗಾರು ಮುನ್ನ ಸುರಿಯುತ್ತಿರುವ ಮಳೆ ಇದೀಗ ಬಲಿ ಪಡೆದಿರುವುದು ಜನ ಹೊರಗೆ ಓಡಾಡಲು ಭಯಪಡುವಂತಾಗಿದೆ.








