ಕುಶಾಲನಗರ(ರಘು ಹೆಬ್ಬಾಲೆ) : ಆದಿವಾಸಿಗಳ ಹಕ್ಕು ಗಳಿಗಾಗಿ ಹಾಗೂ ಅವರ ಶ್ರೇಯೋಭಿವೃದ್ಧಿಗಾಗಿ ಕಾರ್ಡ್ ಸಂಸ್ಥೆಯ ಮೂಲಕ ನಾಲ್ಕು ದಶಕಗಳಿಗೂ ಹೆಚ್ಚು ಕಾಲ ನಿರಂತರ ಹೋರಾಟ ನಡೆಸಿದ ಗಿರಿಜನರ ಕಣ್ಮಣಿ ರಾಯ್ ಡೇವಿಡ್ ಬೆಂಗಳೂರಿನಲ್ಲಿ ಶನಿವಾರ ಬೆಳಿಗ್ಗೆ ಹೃದಯಾಘಾತದಿಂದ ನಿಧನರಾಗಿದ್ದಾರೆ.
ಕೊಡಗು ಜಿಲ್ಲೆಯಲ್ಲಿ ಕಾರ್ಡ್ ಸಂಸ್ಥೆ (ಗಿರಿಜನರ ಅಭಿವೃದ್ಧಿ ಸಂಸ್ಥೆ) ಸ್ಥಾಪಿಸಿ ಗಿರಿಜನರ ಹಕ್ಕು ಹಾಗೂ ಸೌಲಭ್ಯಗಳಿಗಾಗಿ ನಿರಂತರ ಹೋರಾಟ ನೆಡೆಸುವ ಮೂಲಕ ಸರ್ಕಾರದ ಗಮನ ಸೆಳೆದ ರಾಯ್ ಡೇವಿಡ್ ಅರಣ್ಯ ಹಕ್ಕು ಕಾಯ್ದೆ ಅನುಷ್ಠಾನಕ್ಕಾಗಿ ಹಾಗೂ ಗಿರಿಜನರಿಗೆ ಅರಣ್ಯ ಭೂಮಿಯ ಹಕ್ಕುಪತ್ರಕ್ಕಾಗಿ,ಅವರ ಕಲ್ಯಾಣಕ್ಕಾಗಿ ತಮ್ಮ ಜೀವನ ಮುಡಿಪಾಗಿಟ್ಟ ವ್ಯಕ್ತಿ. ಗಿರಿಜನರ ಶಿಕ್ಷಣ, ವಸತಿ, ಭೂಮಿ,ಗ್ರಾಮ ಅರಣ್ಯ ಸಮಿತಿ ರಚನೆ ಸೇರಿದಂತೆ ಇನ್ನಿತರ ಹಕ್ಕುಗಳಿಗಾಗಿ ಹೋರಾಟ ನಡೆಸಿ ಗಿರಿಜನರನ್ನು ಸಮಾಜದ ಮುಖ್ಯ ವಾಹಿನಿ ತರಲು ಅವಿರತವಾಗಿ ಶ್ರಮಿಸಿದ್ದರು.
ಕೊಡಗಿನ ಆದಿವಾಸಿಗಳ ಒಡನಾಡಿ, ಹಿತ ಚಿಂತಕ ಕಾರ್ಡ್ ಸಂಸ್ಥೆಯ ಸಂಸ್ಥಾಕ ವಿ ಎಸ್ ರಾಯ್ ಡೇವಿಡ್ ಪತ್ನಿ ಶಮಂತಕ, ಇಬ್ಬರು ಪುತ್ರರು ಸೊಸೆಯರು , ಮಗಳು ಅಳಿಯ, ಹಾಗು ಅಪಾರ ಅಭಿಮಾನಿಗಳು, ಬಂದು ಮಿತ್ರರನ್ನು ಅಗಲಿದ್ದಾರೆ. ಕೊಡಗಿನ ಪೊನ್ನಪೇಟೆ ಯಲ್ಲಿ ರಾಯ್ ತಾಯಿ ಶಿಕ್ಷಕರಾಗಿ ಅಪಾರ ಹೆಸರು ಮಾಡಿದವರು.ರಾಯ್ ಕಾಲೇಜು ಶಿಕ್ಷಣ ಮಾಡುವಾಗ ಎಡ ಪಂತೀಯ ದೋರಣೆ ಮೈಗೂಡಿಸಿಕೊಂಡು, ಸಮುದಾಯ ಸಂಘಟನೆಯಲ್ಲಿ ತರಬೇತಿ ಹೊಂದಿ ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಗೇಣಿದಾರರ ಭೂ ಹೋರಾಟಕ್ಕೆ ಬೆಂಬಲ ವಾಗಿ ನಿಂತು ದಣಿಗಳ ದೌರ್ಜನ್ಯ ದಿಂದ ತನ್ನ ಎಡಗೈ ಕಳೆದುಕೊಂಡರು.

ಆದರೂ ಅವರು ಛಲ ಬಿಡದ ತ್ರಿವಿಕ್ರಮ ನಂತೆ ಕೊಡಗಿನ ಹಾಗೂ ಪಿರಿಯಾಪಟ್ಟಣದ ರಾಣಿಗೇಟ್ ಆದಿವಾಸಿಗಳ ಭೂ ಹೋರಾಟಕ್ಕೆ ಆದಿವಾಸಿಗಳ ಜತೆ ನಿಂತು 600 ಎಕರೆ ಒಂದೇ ಹೋರಾಟದಲ್ಲಿ ಪಡೆದ ಯಶಸ್ಸು ಇವರದು. ನಾಗರಹೊಳೆ ತಾಜ್ ಹೋರಾಟ, ಅರಣ್ಯ ಹಕ್ಕು ಹೋರಾಟ,ದೇಶದಲ್ಲಿ ಇನ್ಸಾಫ್ ಜತೆ ಸಾಮಾಜಿಕ ನ್ಯಾಯಕ್ಕಾಗಿ ನಡೆಸಿದ ಹೋರಾಟದಲ್ಲಿ ಪಾಲ್ಗೊಂಡು,ಆದಿವಾಸಿ ಸ್ವಯಂ ಆಡಳಿತ ಹಕ್ಕಿಗೆ ಅರಣ್ಯ ಹಕ್ಕಿಗೆ, ಸಂಘಟನೆಗೆ ಬುಡಕಟ್ಟು ಕೃಷಿಕರ ಸಂಘದ ಜತೆ ಬೆಂಬಲವಾಗಿ ನಿಂತರು.
ಕೊಡಗಿನ ಎಲ್ಲಾ ಸಮುದಾಯಗಳೊಡನೆ ಸಾಮರಸ್ಯ ಸಾಧಿಸಿದ್ದ ರಾಯ್ ಆದಿ ವಾಸಿಗಳಲ್ಲಿ ಭರಸೆ ಮೂಡಿಸಿ ಸಾಕಷ್ಟು ಸ್ಥಳೀಯ ಆದಿವಾಸಿ ನಾಯಕರು ಬೆಳೆದರು. ಕಾಡಿನ ಕಿರು ಸಂಪನ್ಮೂಲ ಹಕ್ಕಿಗೆ ನಾಗರಹೊಳೆ ಹಕ್ಕು ಸ್ಥಾಪನಾ ಸಮಿತಿ ಜತೆಗೆ ಸೇರಿ ಸುಪ್ರೀಂ ಕೋರ್ಟ್ ನಲ್ಲಿ ಹೂಡಿದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ ಇನ್ನೂ ಇತ್ಯರ್ಥ ಆಗಬೇಕಿದೆ. 71 ವರ್ಷದ ರಾಯ್ ಮರಣ ಸಾಮಾಜಿಕ ಕ್ಷೇತ್ರಕ್ಕೆ ತುಂಬಲಾಗದ ನಷ್ಟ ಉಂಟಾಗಿದೆ.
ಸಂತಾಪ ಸೂಚನೆ : ರಾಯ್ ಡೇವಿಡ್ ಅವರ ಅಗಲಿಕೆ ಗಿರಿಜನರ ಪಾಲಿಗೆ ತುಂಬಲಾರದ ನಷ್ಟ ಎಂದು ಸಂತಾಪ ಸೂಚಿಸಿರುವ ಸೋಮವಾರಪೇಟೆ ತಾಲ್ಲೂಕಿನ ಬುಡಕಟ್ಟು ಕೃಷಿಕರ ಸಂಘದ ಅಧ್ಯಕ್ಷರಾದ ಆರ್.ಕೆ.ಚಂದ್ರು ಹಾಗೂ ಗಿರಿಜನ ಮುಖಂಡರಾದ ಜೆ.ಪಿ.ರಾಜು ಮೃತರ ಆತ್ಮಕ್ಕೆ ಶಾಂತಿ ಕೋರಿದ್ದಾರೆ.








