ಕೆ.ಆರ್.ನಗರ(ಸಂಘಟನೆ ಮಂಜುನಾಥ್) : ಕೃಷಿ ಪಂಪ್ ಸೆಟ್ ಗಳಿಗೆ ಹಗಲು ವೇಳೆ ಕನಿಷ್ಠ 7 ಗಂಟೆಗಳ ಕಾಲ ನಿರಂತರವಾಗಿ ವಿದ್ಯುತ್ ಪೂರೈಕೆ ಮಾಡಬೇಕು, ಕೆಟ್ಟು ನಿಂತಿರುವ ಟ್ರಾನ್ಸ್ ಫಾರ್ಮರ್ ಗಳನ್ನು ಸರ್ಕಾರ ನಿಗದಿ ಮಾಡಿರುವಂತೆ 24 ಗಂಟೆಯೊಳಗೆ ದುರಸ್ಥಿ ಮಾಡಬೇಕು ಇದಕ್ಕೆ ರೈತರಿಂದ ಹಣ ಪಡೆಯಬಾರದು ಸೇರಿದಂತೆ ಹಲವು ಬೇಡಿಕೆಗಳನ್ನು ಈಡೇರಿಸಬೇಕೆಂದು ಒತ್ತಾಯಿಸಿ ಕರ್ನಾಟಕ ರಾಜ್ಯ ರೈತ ಸಂಘ ಕೆ.ಆರ್.ನಗರ ತಾಲೂಕು ಘಟಕದ ವತಿಯಿಂದ ಪ್ರತಿಭಟನೆ ನಡೆಸಲಾಯಿತು.
ಪಟ್ಟಣದ ಮೈಸೂರು- ಹಾಸನ ಮುಖ್ಯ ರಸ್ತೆಯಲ್ಲಿರುವ ಚಾಮುಂಡೇಶ್ವರಿ ವಿದ್ಯುತ್ ಸಬರಾಜು ನಿಗಮದ ಮುಖ್ಯ ಕಛೇರಿ ಮುಂದೆ ಕೆಲವೊತ್ತು ಪ್ರತಿಭಟನೆ ನಡೆಸಿದ ಸಂಘದ ಪದಾಧಿಕಾರಿಗಳು ಮತ್ತು ರೈತ ಮುಖಂಡರುಗಳು ನಂತರ ಚೆಸ್ಕಾಂನ ಕಾರ್ಯಪಾಲಕ ಅಭಿಯಂತರ ಶ್ರೀನಿವಾಸ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಈ ವೇಳೆ ಸಂಘದ ಅಧ್ಯಕ್ಷ ಎಂ.ಎಸ್.ನಟರಾಜು ಮಾತನಾಡಿ ಕಳೆದ 2 ತಿಂಗಳಿನಿಂದ ಕೃಷಿ ಪಂಪ್ ಸೆಟ್ ಗಳಿಗೆ ಸಮರ್ಪಕವಾದ ವಿದ್ಯುತ್ ದೊರೆಯದ ಕಾರಣ ರೈತರ ತೋಟಗಾರಿಕೆ ಬೆಳೆಗಳು ಒಣಗುತ್ತಿದ್ದು ಇದರ ಜತೆಗೆ ಹಣ್ಣು ತರಕಾರಿ ಬೆಳೆಗಳು ನೀರಿಲ್ಲದೆ ಹಾಳಾಗಿವೆ ಎಂದು ಹೇಳಿದ ಅವರು ಮುಂದೆ ಮಳೆ ಬೀಳುವವರೆಗೂ ರೈತರಿಗೆ ಅನುಕೂಲ ಕಲ್ಪಿಸಲು ವಿದ್ಯುತ್ ಸರಬರಾಜಿನ ವ್ಯತ್ಯಯಾಗದಂತೆ ಗಮನಹರಿಸಬೇಕೆಂದು ಆಗ್ರಹಿಸಿದರು.

ಕೃಷಿ ಪಂಪ್ ಸೆಟ್ ಗಳಿಗೆ ಸೋಲಾರ್ ಅಳವಡಿಸಲು ಆದ್ಯತೆ ನೀಡಬೇಕು ಈಗಾಗಲೇ ನೊಂದಾಯಿಸಿ ಕೊಂಡಿರುವ ರೈತರಿಗೆ ಹಣ ಕಟ್ಟಲು ಕಾಲಾವಕಾಶ ನೀಡಬೇಕು ಹಾಗೂ ಉಳಿದ ರೈತರು ನೊಂದಾಯಿಸಿ ಕೊಳ್ಳಲು ಅವಕಾಶ ಕಲ್ಪಿಸುವ ಮೂಲಕ ಎಲ್ಲರೂ ಸೋಲಾರ್ ಸೌಲಭ್ಯ ಪಡೆಯಲು ಅನುಕೂಲ ಮಾಡಿಕೊಡಬೇಕು ಎಂದು ಹೇಳಿದರು.
ವಿದ್ಯುತ್ ತಂತಿಗಳು ಜೋತು ಬಿದ್ದಿರುವುದು ಕೆಲವು ಕಡೆ ಕಂಡು ಬಂದಿದ್ದು ಹಲವು ಕಂಬಗಳು ಶಿಥಿಲ ಗೊಂಡಿವೆ. ಇದರಿಂದ ಸಾರ್ವಜನಿಕರಿಗೆ ಮತ್ತು ರೈತರಿಗೆ ತೊಂದರೆಯಾಗುತ್ತದೆ ಇದಕ್ಕೆ ಮಾರಗೌಡನಹಳ್ಳಿ ಗ್ರಾಮದಲ್ಲಿ ತಂತಿ ತುಳಿದು ರೈತನೋರ್ವ ಸಾವನ್ನಪ್ಪಿರುವುದೇ ಸಾಕ್ಷಿಯಾಗಿದ್ದು ಇಂತಹ ಅನಾಹುತಗಳು ನಡೆಯದಂತೆ ಎಚ್ಚರ ವಹಿಸಬೇಕೆಂದು ಹೇಳಿದರು.
ಸಂಘದ ಮಹಿಳಾ ರಾಜ್ಯ ಕಾರ್ಯದರ್ಶಿ ನೇತ್ರಾವತಿ, ತಾಲೂಕು ಗೌರವಾಧ್ಯಕ್ಷ ಸಿದ್ದೇಗೌಡ, ಮಾತನಾಡಿ ವಿದ್ಯುತ್ ಇಲಾಖೆಯನ್ನು ಯಾವುದೇ ಕಾರಣಕ್ಕೂ ಖಾಸಗೀಕರಣ ಮಾಡಬಾರದು ಸರ್ಕಾರದ ಅಧೀನದಲ್ಲಿ ನಡೆಯಬೇಕೆಂದು ಮನವಿ ಮಾಡಿದರು. ರೋಹಿತ್, ಕುಮಾರ್, ಜಿ.ಕೆ.ಹ-ರೀಶ್, ಸುಜಾತ, ಎ.ಬಿ.ಬಸಪ್ಪ, ಮಹದೇವ್, ಕಾಳೇಗೌಡ, ಕುಬೇರಪ್ಪ, ಬಸಪ್ಪ, ಚೆಸ್ಕಾಂ ಎಇಇ ಅರ್ಕೇಶರ್ ಮೂರ್ತಿ ಇದ್ದರು.








