CinemaLatest

“ನಗ್ನತೆಯು ಹೆಣ್ಣಿನ ಸಹಜ ಸೌಂದರ್ಯ” ಎಂದು ಪ್ರತಿಪಾದಿಸಿದ ರಸಿಕ ಚಕ್ರವರ್ತಿ ರಾಜ್ ಕಪೂರ್

ಬಾಲಿವುಡ್ ನ ಹಿರಿಯ ನಟ ರಾಜ್ ಕಪೂರ್ ಈಗ ಇಲ್ಲ.. ಆದರೆ ಅವರ ಸಿನಿಮಾ ಬದುಕಿನ ಕಥೆಗಳು ಬೇಕಾದಷ್ಟಿವೆ.. ಅವರ ಸಿನಿಮಾ ಮತ್ತು ಬದುಕಿನ ಬಗ್ಗೆ ಒಂದಷ್ಟು ಮಾಹಿತಿಯನ್ನು ಹಿರಿಯ ಬರಹಗಾರ ಕುಮಾರಕವಿ ನಟರಾಜ್ ಇಲ್ಲಿ ತೆರೆದಿಟ್ಟಿದ್ದಾರೆ.

ಹಿಂದಿ ಚಿತ್ರರಂಗದ ದಿಗ್ಗಜ ರಸಿಕ ಚಕ್ರವರ್ತಿ ರಾಜ್ ಕಪೂರ್” ನಗ್ನತೆಯನ್ನ ಸಹಜ ಸೌಂದರ್ಯ”ಎಂದು ತೋರಿಸಿ ಕೊಟ್ಟರು. ಅಶ್ಲೀಲ ಎಂದು ಮೂಗುಮುರಿದ ಅಥವ ವಾದ ಮಂಡಿಸಿದ ಎಲ್ಲರಿಗೂ ಸೆಕ್ಸ್ ಬಗ್ಗೆ ತನ್ನದೇಆದ ವಿಶಿಷ್ಟ ವಿಶೇಷ ಪ್ರತಿವಾದ ಮಂಡಿಸಿ ಭರ್ಜರಿಯಾಗಿ ಗೆದ್ದು ಬೀಗಿದ ಅತಿರಥ. ಸತತ 3 ದಶಕಗಳ ಕಾಲ ಭಾರತೀಯ ಚಿತ್ರರಂಗದಲ್ಲಿ ಅಮೋಘವಾಗಿ ಮೆರೆದ ಮಹಾರಥ.

ಅವತ್ತಿನ ಕಾಲಕ್ಕೆ ವಿಶ್ವದ ಜನಪ್ರಿಯ, ಶ್ರೇಷ್ಠ ಚಲನಚಿತ್ರೋದ್ಯಮಿಗಳ ಸಾಲಿನಲ್ಲಿ ಅಗ್ರಸ್ಥಾನ ಪಡೆದಿದ್ದ ಅಸಾಮಾನ್ಯ ಪ್ರತಿಭಾವಂತ. ತನ್ನ ಸಂಸ್ಥೆ RK ಬ್ಯಾನರ್ ಅಡಿ “ಆಗ್” ಚಿತ್ರದಿಂದ ಮೊದಲ್ಗೊಂಡು “ಬಾಬಿ” ಚಿತ್ರದವರೆಗೆ ಸುಮಾರು 35ಕ್ಕೂ ಹೆಚ್ಚು ಸಿನಿಮಾಗಳಲ್ಲಿ ಒಂದಿಲ್ಲೊಂದು ರೀತಿ ಹೀರೋಯಿನ್”ನಗ್ನಪ್ರದರ್ಶನ” ಕಡ್ಡಾಯ ಪ್ರಯತ್ನ ಮಾಡುತ್ತ ಅದನ್ನು “ಸತ್ಯದರ್ಶನ” ಎಂದು ಬ್ರಾಂಡ್ ಆಗಿಸಿ ಹಣ ಕೀರ್ತಿ ಪ್ರಶಸ್ತಿ ಜನಪ್ರಿಯತೆ ಎಲ್ಲವನ್ನು ಗಿಟ್ಟಿಸಿದ ಮಹಾನ್ ಕಿಲಾಡಿ.

ಯಾವುದೇ ಕಥೆಯ ಸಿನಿಮಾ ಇರಲಿ, ಅದರ ಚಿತ್ರಕಥೆಯಲ್ಲಿ ನಟಿಯರ ಅಂಗಾಂಗ ಪ್ರದರ್ಶನ ಇದ್ದೇ ಇರುವಂತೆ ನೋಡಿಕೊಳ್ವ ಚತುರತೆ ಇವರಿಗಿತ್ತು. ಒಂದುವೇಳೆ ಇದು ಅತಿಯಾದಾಗ ಇವರ ವಿತಂಡವಾದ ಹೀಗಿತ್ತು…

“ಹೆಣ್ಣಿನ ಸಹಜ ಸೌಂದರ್ಯದ ನಗ್ನಸತ್ಯ” ವನ್ನು ಮುಚ್ಚಿಡಬೇಕು ಏಕೆ? ಎಂಬ ಮರುಪ್ರಶ್ನೆ ಮೂಲಕ ಎಲ್ಲರ ಬಾಯಿ ಮುಚ್ಚಿಸುತ್ತಿದ್ದ ಭೂಪ. ಹೀಗೆ ಪ್ರತಿಪಾದಿಸುತ್ತ ಭಾರತದಂಥ ಭವ್ಯ ಪರಂಪರೆಯ ದೇಶದಲ್ಲು ಹಾಗೂ ಕೆಲವು ಸಂದರ್ಭದ ದೃಶ್ಯದರ್ಶನ ವಿರುದ್ಧ ದೇಶದ ಸುಪ್ರೀಂ ಕೋರ್ಟ್ ನಲ್ಲಿ ದಾಖಲಾದ ಫಿರ್ಯಾದು ದಾವೆಯನ್ನೂ ಗೆದ್ದ ಏಕೈಕ ನಟ- ನಿರ್ಮಾಪಕ-ನಿರ್ದೇಶಕ.

1945 ರಿಂದ 1975 ರವರೆಗೆ ನಮ್ಮ ದೇಶದಲ್ಲಿ ಸಿನಿಮ ನೋಡುತ್ತಿದ್ದ ಪ್ರೇಕ್ಷಕರು ಇವತ್ತಿನಂತೆ ಎಲ್ಲ ರೀತಿಯಲ್ಲು ಅಪ್ಡೇಟ್, ಹೈ ಮೆಚೂರ್ಡ್ ಅಥವ ಅಲ್ಟ್ರ ಮಾಡ್ರನ್ ಆಗಿರಲಿಲ್ಲ. ಅಮಾಯಕ ಅವಿದ್ಯಾವಂತ ಮುಗ್ಧರು ಬಹಳ ಸಂಖ್ಯೆಯಲ್ಲಿ ಇದ್ದರು. ದೇಶದ ಇತಿಹಾಸ ಸಂಸ್ಕೃತಿ ನಾಗರಿಕತೆ ಪರಂಪರೆ ಸಂಸ್ಕಾರ ಮುಂತಾದ ಸತ್ಸಂಪ್ರದಾಯ ಮತ್ತು ಕಟ್ಟುನಿಟ್ಟಿನ ಪದ್ಧತಿಗಳಿಗೆ ಪ್ರಾಧಾನ್ಯತೆ ನೀಡುತ್ತಿದ್ದರು. ಶೀಲಾಶ್ಲೀಲದ ಸಾಮಾನ್ಯ ಜ್ಞಾನವಿತ್ತು.

ಗೌರಮ್ಮ-ಬಿಚ್ಚೋಲೆಗೌರಮ್ಮ ನಡುವಿನ ವ್ಯತ್ಯಾಸ ಗೊತ್ತಿತ್ತು. ಪೌರಾಣಿಕ, ಐತಿಹಾಸಿಕ, ಸಾಂಸ್ಕೃತಿಕ, ಸಾಮಾಜಿಕ ಸಿನಿಮಾಗೆ ಅಧಿಕ ಮಾನ್ಯತೆ ನೀಡುತ್ತಿದ್ದ ಕಾಲವದು. ಸತ್ಯಧರ್ಮ ನ್ಯಾಯನೀತಿ ಪ್ರೀತಿರೀತಿ ಮಮತೆವಾತ್ಸಲ್ಯ ಇರುವಂಥ ಸಿನಿಮಾಗಳಿಗೆ ಆದ್ಯತೆ, ಮೆಚ್ಚುಗೆ ದೊರಕುತ್ತಿತ್ತು. ಸಮಾಜದ ವಾಸ್ತವತೆ ಹೀಗಿದ್ದಾಗಲೂ ರಾಜ್ಕಪೂರ್ ಮಾತ್ರ ಯಾರಿಗೂ ಯಾವುದಕ್ಕೂ  ಅಂಜದೆ ಅಳುಕದೆ ಮುನ್ನುಗ್ಗುತ್ತ “ಹೊಸತನ”ದ ಹೆಸರಲ್ಲಿ (ಸೋಗಿನಲ್ಲಿ) “ನಗ್ನಕ್ರಾಂತಿ” ಮಾಡಿದರು.

ಅದು ಹೇಗೋ ಗೊತ್ತಿಲ್ಲ ತಮ್ಮದೇ ಆದ ಹಠ-ಚಟ ಮೈಗೂಡಿಸಿ ಕೊಂಡಿದ್ದ ಅಥವ ಅದೇಕೋ ಕಾಣೆ ಛಲ-ಬಲ ಒಗ್ಗೂಡಿಸಿದ್ದ ಹಾಗೂ ಉದ್ರೇಕದ ಸಂದರ್ಭ ಸೃಷ್ಟಿಸುವ ಕೈಚಳಕವಿದ್ದ ರಾಜ್ಕಪೂರ್ ತನ್ನ ಪ್ರತಿಯೊಂದು ಚಿತ್ರದಲ್ಲು ಬೇಕೆಂತಲೇ ಸೆಕ್ಸ್/ಅಶ್ಲೀಲ ತುರುಕಿ, ಅದನ್ನ ಸಮರ್ಥಿಸಿಕೊಂಡು ಗೆಲ್ಲುತ್ತಿದ್ದ ಪ್ರಪಂಚದ ಪ್ರಥಮ ಚಿತ್ರೋದ್ಯಮಿ?!

ಆಗಿನ ಕಾಲದ ಕಟ್ಟುನಿಟ್ಟಿನ ಫಿಲಂ ಸೆನ್ಸಾರ್ ಬೋರ್ಡ್ ನವರಿಗಾಗಲೀ ಪ್ರಾಮಾಣಿಕ ಪತ್ರಕರ್ತರಿಗಾಗಲೀ ಸಮಾಜದ ಹಿತ-ಚಿಂತಕ, ಬುದ್ದಿಜೀವಿ, ಇನ್ಯಾರೇ ಇರಲಿ, ಸಾಮಾಜಿಕ ಕಳಕಳಿಯ ಸಂಘಸಂಸ್ಥೆ, ಮಹಿಳಾ ಸಮಾಜ ಯಾವುದೇ ಆಗಿರಲಿ ಚಿತ್ರದ ಅಶ್ಲೀಲತೆಯನ್ನು ಅಥವ ಅಶ್ಲೀಲ ಪಾತ್ರಕ್ಕೆ ಹೆಣ್ಣನ್ನು ದುರುಪಯೋಗ ಪಡಿಸಿಕೊಂಡ ಬಗ್ಗೆ ಪ್ರಶ್ನಿಸಿದಾಗ, ಪ್ರತಿಭಟನೆ ಮಾಡಿದಾಗ ಅವರನ್ನೆಲ್ಲ ಧೈರ್ಯದಿಂದ ಎದುರಿಸುತ್ತಿದ್ದರು.

ಅವರ ಪ್ರಶ್ನೆಗಳಿಗೆ ತಕ್ಕ ಉತ್ತರ, ಸಮಸ್ಯೆಗಳಿಗೆ ಸರಿಯಾದ ಸಮಜಾಯಿಷಿ ನೀಡುವ ಮೂಲಕ  ಮಹಿಳೆಯರ ಮನವೊಲಿಸುತ್ತ, ಮಡಿವಂತರಿಗೆ ಮನವರಿಕೆ ಮಾಡುತ್ತ ಅ-ಕಾರ್ಯವನ್ನು ತನ್ನ ಅಂತಿಮ ಕಾಲದವರೆಗೂ ಮಾಡುತ್ತಲೇ ಹೋದ (ಕು)ಯುಕ್ತಿವಂತ? ಅತಿ ಬುದ್ಧಿವಂತ! ರಾಜ್ ಕಪೂರ್.

ಸ್ವಾಭಿಮಾನವೋ, ಹಠವೋ? ಎಂಬ ಘಟನೆ… ಡಿಂಪಲ್ ಕಪಾಡಿಯ ಜತೆಗೆ ರಾಜೇಶ್ ಖನ್ನ ಮದುವೆ ನಿಶ್ಚಯವಾದ ಸಂದರ್ಭದಲ್ಲಿ ಆಹೊತ್ತಿನ ಭಾರತದ ಚಿತ್ರರಂಗದ ಉತ್ತುಂಗ ದಲ್ಲಿದ್ದ, ದೇಶದ ಮೊಟ್ಟಮೊದಲ ಸೂಪರ್ ಸ್ಟಾರ್ ಎನಿಸಿದ್ದ ರಾಜೇಶ್ ಖನ್ನ ತನ್ನ ಮಡದಿ ಆಗುವ ಡಿಂಪಲ್ಲಳ ಅಶ್ಲೀಲ ದೃಶ್ಯ ವುಳ್ಳ”ಬಾಬಿ” ಫಿಲಂ ರಿಲೀಸ್ ಮಾಡಬಾರದೆಂದು ಕೋರಿ ರಾಜ್ ಕಪೂರ್ ಗೆ ಆ ಚಿತ್ರಕ್ಕೆ ಖರ್ಚಾಗಿದ್ದ 10 ಪಟ್ಟು ಹೆಚ್ಚಿನ ಹಣ ನೀಡುವುದಾಗಿ ಹೇಳಿದಾಗ: ನೀನು “ನೂರುಪಟ್ಟು ಹೆಚ್ಚುಹಣ ನೀಡಿದರೂ ಒಲ್ಲೆ”ಎಂದು ರಾಜೇಶ್ ಖನ್ನಾಗೆ ದಿಟ್ಟತನದೆ ಉತ್ತರಿಸಿ ಧೈರ್ಯದಿಂದ “ಬಾಬಿ” ಫಿಲಂ ಬಿಡುಗಡೆ ಮಾಡಿದರು.

ಆದರೆ ವಾಸ್ತವದಲ್ಲಿ ಆಗ ರಾಜ್ ಕಪೂರ್ ಗೆ ಆರ್ಥಿಕ ಬಿಕ್ಕಟ್ಟಿನ ದುರ್ದಿನ ಆವರಿಸಿತ್ತು. “ಮೇರಾ ನಾಮ್ ಜೋಕರ್” ಫಿಲಂ ಸೇರಿದಂತೆ ಐದಾರು ಸಿನಿಮಾ ಸೋತು ಅಪಾರ ನಷ್ಟಕಷ್ಟ ತಂದೊಡ್ಡಿದ್ದವು. ತನ್ನ ಆಸ್ತಿ ಮಾರಿಕೊಳ್ಳುವ ದುಸ್ಥಿತಿ ತಲುಪಿದ್ದರೂ ಸಹ ಅಷ್ಟುಸುಲಭವಾಗಿ ತನ್ನ(ತನವ)ನ್ನೂ ತಾನು ನಿರ್ಮಿಸಿದ ಚಿತ್ರವನ್ನೂ ಮಾರಿಕೊಳ್ಳಲು ಒಪ್ಪದ ಓರ್ವ ಧೀಮಂತ ನಟ, ಸ್ವಾಭಿಮಾನಿ ಚಿತ್ರೋದ್ಯಮಿ. ರಸಿಕ ಚಕ್ರವರ್ತಿ ರಾಜ್ ಕಪೂರ್ ಪ್ರಪಂಚ ಚಿತ್ರರಂಗದಲ್ಲಿ ಆಚಂದ್ರಾರ್ಕ ಅಜರಾಮರ!

“ಆಗ್, ಬರ್ಸಾತ್, ಸತ್ಯಂಶಿವಂಸುಂದರಂ” ಇತ್ಯಾದಿ ಹತ್ತಾರು ಚಿತ್ರಗಳಲ್ಲಿ ಮಳೆ-ನದಿ- ಸರೋವರ-ಜಲಪಾತ ನೀರಿನಲ್ಲಿ ನೆನೆದು ತೋಯ್ದ ಹೀರೋಯಿನ್ಸ್ ಹಾಡುವ ದೃಶ್ಯಗಳು “ಆವಾರ, ಸಂಗಂ, ಬಾಬಿ” ಮುಂತಾದ ಚಿತ್ರಗಳಲ್ಲಿ 2 ಪೀಸ್ ಈಜುಡುಗೆ ದೃಶ್ಯಗಳು,  “ಮೇರಾ ನಾಮ್ ಜೋಕರ್” ಹಾಗೂ “ರಾಮ್ ತೇರಿ ಗಂಗಾ ಮೈಲೀ” ಸೇರಿದಂತೆ ಮತ್ತಿತರ ಹಲವು ಸಿನಿಮಾಗಳಲ್ಲಿ ಹೆಚ್ಚಿನ ಸ್ತ್ರೀಅಂಗಾಂಗ ಪ್ರದರ್ಶನ ದೃಶ್ಯಗಳು ಮನೆಮಾಡಿವೆ.

ನಟಿಯರ ಇಚ್ಛೆ(ಯಂತೆ)ಯಿಲ್ಲದೇ ಅಥವ ಒತ್ತಾಯ ಪೂರ್ವಕ ಅಥವ ಅನಿವಾರ್ಯ ಅಥವ ಸಂದರ್ಭೋಚಿತ ಅಥವ ಸನ್ನಿವೇಶದ ಹಿತಾಸಕ್ತಿಯಿಂದ ಈ ಎಲ್ಲ ದೃಶ್ಯಗಳು ಚಿತ್ರೀಕರಣ ಆಗಿದ್ದವೋ ಇಲ್ಲವೋ ಎಂಬುದನ್ನು ಬಲ್ಲವರು ಕೇವಲ ಮೂರು ಮಂದಿ ಮಾತ್ರ.. (1)ದೇವರು (2)ಸಂಬಂಧಿಸಿದ ನಟಿ (3)ರಾಜ್ಕಪೂರ್. ಸತ್ಯ ಹೀಗಿರುವಾಗ, ಪ್ರೇಕ್ಷಕರು/ಓದುಗರು/ವಿಮರ್ಶಕರು/ಶ್ರೀಸಾಮಾನ್ಯರು ಒಂದು ನಿಖರವಾದ  ನಿರ್ಧಾರಕ್ಕೆ ಬರುವುದು ಸಾಧ್ಯವೇ?

ಕೇವಲ 63 ವರ್ಷ ಕಾಲ ಮಾತ್ರ ಬದುಕಿ ಬಿಂದಾಸ್ ಜೀವನ ನಡೆಸಿದರು. ರಾಜ್ ಕಪೂರ್ ನಿಧನದಿಂದ ಚಲನಚಿತ್ರ ರಸಿಕರಿಗೆ ಮತ್ತು ರಾಜ್ ಕಪೂರ್ ಅಭಿಮಾನಿಗಳಿಗೆ RK ಸಂಸ್ಥೆ ಅನಾಥವಾಯ್ತೇನೋ? ಹಾಗೂ ಬಾಲಿವುಡ್ ಚಿತ್ರರಂಗ ಬಡವಾಯಿತೇನೋ? ಎಂದನಿಸುವುದು ಸಹಜ!

ರಾಜ್ ಕಪೂರ್ ಸಿನಿಮಾಗಳಲ್ಲಿ ಅಂಗಾಂಗ ಪ್ರದರ್ಶನ ದೃಶ್ಯವುಳ್ಳ ನಟಿಯರ ಉದಾ… ನರ್ಗೀಸ್, ಪದ್ಮಿನಿ, ವೈಜಯಂತಿಮಾಲ, ಮಾಲಾಸಿನ್ಹ, ಆಶಾಪರೇಖ್, ಮಧುಬಾಲ, ಸಾಧನಾ, ಹೇಮಮಾಲಿನಿ, ರಾಖಿ, ರೇಖಾ, ಶ್ರೀದೇವಿ, ಜಯಪ್ರದ, ಮೀನಾಕ್ಷಿಶೇಷಾದ್ರಿ, ಝೀನತ್ತಮಾನ್, ಸಿಮಿಗೇರ್ವಾಲ್, ಡಿಂಪಲ್ ಕಪಾಡಿಯ, ಮಂದಾಕಿನಿ, ಮುಂತಾದವರು.

admin
the authoradmin

Leave a Reply