LatestMysore

ಯುವಶಕ್ತಿಯ ಸಮಾಜಮುಖಿ ಹೆಜ್ಜೆ: ಮೈಸೂರಿನ ಕಾವೇರಿ ಕಾಲೇಜಿನಲ್ಲಿ ರಕ್ತದಾನ ಶಿಬಿರ

ಮೈಸೂರು: ಕುವೆಂಪುನಗರದಲ್ಲಿರುವ ಶ್ರೀ ಕಾವೇರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಯೂತ್ ರೆಡ್ ಕ್ರಾಸ್ ಸಂಸ್ಥೆ, ರಾಷ್ಟ್ರೀಯ ಸೇವಾ ಯೋಜನೆ (ಎನ್‌ಎಸ್‌ಎಸ್) ಹಾಗೂ ಜೀವದಾರ ರಕ್ತ ನಿಧಿ ಕೇಂದ್ರದ ಸಹಯೋಗದಲ್ಲಿ ಸ್ವಯಂ ಪ್ರೇರಿತ ರಕ್ತದಾನ ಶಿಬಿರವನ್ನು ಆಯೋಜಿಸಲಾಯಿತು.

ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದ ಕಾಲೇಜಿನ ಪ್ರಾಂಶುಪಾಲರಾದ ಪದ್ಮಾವತಿ ಕೆ.ಎಂ., ರಕ್ತದಾನವು ಮಾನವೀಯ ಸೇವೆಯ ಅತ್ಯುನ್ನತ ಕಾರ್ಯವಾಗಿದ್ದು, ಯುವಜನರು ಸಮಾಜಮುಖಿ ಚಟುವಟಿಕೆಗಳಲ್ಲಿ ಸಕ್ರಿಯವಾಗಿ ಭಾಗವಹಿಸುವ ಮೂಲಕ ಜೀವ ಉಳಿಸುವ ಮಹತ್ತರ ಕಾರ್ಯಕ್ಕೆ ಕೈಜೋಡಿಸಬೇಕು ಎಂದು ಹೇಳಿದರು.

ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್ ಮಾತನಾಡಿ, ರಕ್ತಕ್ಕೆ ಯಾವುದೇ ಕೃತಕ ಪರ್ಯಾಯವಿಲ್ಲ. ಅಪಘಾತಗಳು, ಶಸ್ತ್ರಚಿಕಿತ್ಸೆಗಳು ಹಾಗೂ ತುರ್ತು ಚಿಕಿತ್ಸೆಯ ಸಂದರ್ಭಗಳಲ್ಲಿ ರಕ್ತದ ಅವಶ್ಯಕತೆ ಹೆಚ್ಚಾಗಿರುವುದರಿಂದ ಆರೋಗ್ಯವಂತರು ನಿಯಮಿತವಾಗಿ ರಕ್ತದಾನ ಮಾಡುವ ಅಭ್ಯಾಸ ಬೆಳೆಸಿಕೊಳ್ಳಬೇಕು ಎಂದು ತಿಳಿಸಿದರು.

ಶಿಬಿರದಲ್ಲಿ 80ಕ್ಕೂ ಹೆಚ್ಚು ಕಾಲೇಜಿನ ವಿದ್ಯಾರ್ಥಿಗಳು ಉತ್ಸಾಹದಿಂದ ಭಾಗವಹಿಸಿ ಸ್ವಯಂ ಪ್ರೇರಿತ ರಕ್ತದಾನ ಮಾಡಿದರು. ರಕ್ತದಾನದ ಮಹತ್ವದ ಕುರಿತು ಜಾಗೃತಿ ಮೂಡಿಸುವ ಸಲುವಾಗಿ ಶಿಕ್ಷಕರು ಸಹ ಸ್ವಯಂ ಪ್ರೇರಿತ ರಕ್ತದಾನ ಮಾಡಿ ರಕ್ತದಾನದ ಜಾಗೃತಿ ಮೂಡಿಸುವ ಮೂಲಕ ಮಾಹಿತಿ ಕಾರ್ಯಕ್ರಮವೂ ನಡೆಯಿತು.

ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತಾಧಿಕಾರಿ ಡಾ. ಸುಬ್ರಹ್ಮಣ್ಯ ಸಿ.ಇ., ಪ್ರಾಂಶುಪಾಲರಾದ ಪದ್ಮಾವತಿ ಕೆ.ಎಂ., ಜೀವದಾರ ರಕ್ತ ನಿಧಿ ಕೇಂದ್ರದ ನಿರ್ದೇಶಕ ಗಿರೀಶ್, ಯೂತ್ ರೆಡ್ ಕ್ರಾಸ್‌ನ ಸಂತೋಷ್ ಆರಾಧ್ಯ, ಎನ್‌ಎಸ್‌ಎಸ್ ಅಧಿಕಾರಿ ಹರೀಶ್ ಕುಮಾರ್, ಶಿಕ್ಷಕ ವೃಂದ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

admin
the authoradmin

ನಿಮ್ಮದೊಂದು ಉತ್ತರ